logo
ಕನ್ನಡ ಸುದ್ದಿ  /  ಕರ್ನಾಟಕ  /  Puc Results2024: ವಿಜಯಪುರ ಮಕ್ಕಳ ಅನನ್ಯ ಸಾಧನೆ, ಕಲಾ ವಿಭಾಗದ ಟಾಪರ್‌ ವೇದಾಂತ್‌ ಓದಿಗೆ ನೆರವಾದ ಗ್ಯಾರಂಟಿ ಹಣ !

Puc Results2024: ವಿಜಯಪುರ ಮಕ್ಕಳ ಅನನ್ಯ ಸಾಧನೆ, ಕಲಾ ವಿಭಾಗದ ಟಾಪರ್‌ ವೇದಾಂತ್‌ ಓದಿಗೆ ನೆರವಾದ ಗ್ಯಾರಂಟಿ ಹಣ !

Umesha Bhatta P H HT Kannada

Apr 10, 2024 06:45 PM IST

google News

ಪಿಯುಸಿ ಕಲಾವಿಭಾಗದ ಟಾಪರ್‌ ವೇದಾಂತ್‌ ನಾವಿ

    • ಸಾಧನೆಗೆ ಅವಕಾಶಗಳು ನೂರಾರು. ವಿಜಯಪುರದಲ್ಲಿ ಓದಿದ ಜಮಖಂಡಿಯ ವೇದಾಂತ್‌ ನಾವಿ ಗ್ಯಾರಂಟಿ ಯೋಜನೆ ಹಣ ಸದುಪಯೋಗಪಡಿಸಿಕೊಂಡು ಪಿಯುಸಿ ಕಲಾ ವಿಭಾಗದಲ್ಲಿ ಟಾಪರ್‌ ಎನ್ನಿಸಿದ್ದಾನೆ.
    • ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ
ಪಿಯುಸಿ ಕಲಾವಿಭಾಗದ ಟಾಪರ್‌ ವೇದಾಂತ್‌ ನಾವಿ
ಪಿಯುಸಿ ಕಲಾವಿಭಾಗದ ಟಾಪರ್‌ ವೇದಾಂತ್‌ ನಾವಿ

ವಿಜಯಪುರ : ಆಡಳಿತ ಸೇವಾ ಪರೀಕ್ಷೆ, ವೃತ್ತಿಪರ ಶಿಕ್ಷಣ ಪರೀಕ್ಷೆ ಹೀಗೆ ವಿವಿಧ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ವಿಜಯಪುರ ಜಿಲ್ಲೆಯ ಹಲವಾರು ಪ್ರತಿಭಾನ್ವಿತರು ಜಿಲ್ಲೆಯ ಶ್ರೇಯಸ್ಸು ಹೆಚ್ಚಿಸಿದ್ದಾರೆ. ಈಗ ಈ ಸಾಧನೆಗೆ ವೇದಾಂತ ಹೆಸರು ಸೇರ್ಪಡೆಯಾಗಿದೆ.ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಜಯಪುರದ ವೇದಾಂತ ನಾವಿ ಉನ್ನತ ಸಾದನೆಗೆ ಭಾಜನರಾಗಿದ್ದಾರೆ. ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಎಸ್.ಎಸ್. ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿರುವ ವೇದಾಂತ ಮೂಲತಃ ಜಮಖಂಡಿ ತಾಲೂಕಿನ ಕಲ್ಲಬೀಳಗಿ ಗ್ರಾಮದವರು. ರಾಜ್ಯಕ್ಕೆ ಅಗ್ರಸ್ಥಾನ ಪಡೆಯುವ ಸುದ್ದಿ ತಿಳಿಯುತ್ತಿದ್ದಂತೆ ವೇದಾಂತ ಮನೆಯಲ್ಲಿ ಹಾಗೂ ಓದಿದ ಮಹಾವಿದ್ಯಾಲಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಜಿಲ್ಲಾಧಿಕಾರಿ ಟಿ. ಭೂಬಾಲನ್ ಸಹ ವಿದ್ಯಾರ್ಥಿಯನ್ನು ಆಹ್ವಾನಿಸಿ ಸಿಹಿ ತಿನಿಸಿ ಗೌರವ ಸನ್ಮಾನ ನೆರವೇರಿಸಿದರು.ತಂದೆ ಇಲ್ಲದ ತಬ್ಬಲಿ - ಬಡತನದಲ್ಲಿ ಅರಳಿದ ಪ್ರತಿಭೆ

ಗ್ಯಾರಂಟಿ ತುಂಬಿದ ಶಕ್ತಿ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನ ಪಡೆದುಕೊಂಡಿರುವ ವೇದಾಂತ ನಾವಿ ಅವರ ಬದುಕಿನಲ್ಲಿ ಅನೇಕ ಸಂಕಷ್ಟಗಳ ಸರಮಾಲೆ. ಕೋವಿಡ್ ಕಾಲಘಟ್ಟದಲ್ಲಿ ತಂದೆಯ ಅಗಲಿಕೆ, ಬಡತನದ ನೊಗ ಹೊರಬೇಕಾದ ಪರಿಸ್ಥಿತಿಯಿಂದಾಗಿ ಅನೇಕ ಕಷ್ಟಗಳನ್ನು ಎದುರಿಸಿದ ವೇದಾಂತ ಅವರು ರಾಜ್ಯಕ್ಕೆ ಟಾಪರ್ ಆಗುವ ಸುದ್ದಿ ತಿಳಿಯುತ್ತಿದ್ದಂತೆ ಅವರ ತಾಯಿಯ ಕಣ್ಣಲ್ಲಿ ಆನಂದಭಾಷ್ಪ. ಕಷ್ಟಗಳನ್ನೇ ನೋಡಿದ ಅವರಿಗೆ ಮಗ ಅದ್ವಿತೀಯ ಸಾಧನೆ ಭಾವುಕವನ್ನಾಗಿಸಿತು.

2020ರಲ್ಲಿ ಕೋವಿಡ್ ಕಾಲಘಟ್ಟದಲ್ಲಿ ವೇದಾಂತ ಅವರ ತಂದೆ ಅಸುನೀಗಿದರು. ಕುಟುಂಬಕ್ಕೆ ಆಧಾರವಾಗಿದ್ದ ಅವರ ಅಗಲಿಕೆ ಕುಟುಂಬಕ್ಕೆ ದೊಡ್ಡ ಆಘಾತ ಉಂಟು ಮಾಡಿತು. ಈ ಕಷ್ಟದ ನಡುವೆಯೂ ಸೋದರ ಮಾವ ಹಾಗೂ ತಾಯಿ, ಸಹೋದರರ ನೆರವಿನಿಂದ ವಿಜಯಪುರದ ಹಾಸ್ಟೇಲ್‌ನಲ್ಲಿ ಉಳಿದು ವ್ಯಾಸಾಂಗ ಮಾಡಿದ ವೇದಾಂತ ಅದ್ವಿತೀಯ ಸಾಧನೆಗೆ ಭಾಜನರಾಗಿದ್ದಾರೆ.

ಇದೇ ವೇಳೆ ಅವರ ಓದಿಗೆ ಗ್ಯಾರಂಟಿ ಯೋಜನೆಯಡಿ ನೀಡಿದ ನೆರವಾಯಿತು. ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕ ಸರ್ಕಾರ ನೀಡುವ ತಮ್ಮ ತಾಯಿಗೆ ನೀಡುವ ಎರಡು ಸಾವಿರ ರೂ. ಹಾಗೂ ಕೇಂದ್ರ ಸರ್ಕಾರ ರೈತರಿಗೆ ನೀಡುವ ನೆರವು ನನ್ನ ಓದಿಗೆ ಸಹಕಾರಿಯಾಯಿತು ಎಂದು ವೇದಾಂತ್‌ ನೆನಪಿಸಿಕೊಳ್ಳುತ್ತಾರೆ.

ಐಎಎಸ್ ಆಗುವ ಗುರಿ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ವೇದಾಂತ ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗಿ ಜನಸೇವೆಯ ಕನಸು ಕಂಡಿದ್ದಾರೆ. ದೊಡ್ಡ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಸದಾ ಪ್ರಯತ್ನಿಸುವುದಾಗಿ ತಮ್ಮ ಭವಿಷ್ಯದ ಕನಸುಗಳನ್ನು ವೇದಾಂತ ಹಂಚಿಕೊಂಡರು.

ದ್ವಿತೀಯ ಪಿಯುಸಿಯಲ್ಲಿ ಸ್ಮಾರ್ಟ್ ವರ್ಕ್ಗೆ ಆದ್ಯತೆ ನೀಡಿದೆ, ಮೊಬೈಲ್‌ನ್ನು ಕೇವಲ ಸ್ಟಡಿಗೆ ಮಾತ್ರ ಬಳಸಿದೆ, ಅಧ್ಯಯನಕ್ಕೆ ಸಂಬಂದಿಸಿದಂತೆ ಮಾತ್ರ ವಿಷಯಗಳನ್ನು ಚರ್ಚಿಸುತ್ತಿದ್ದೆವು, ಎಸ್.ಎಸ್. ಕಾಲೇಜ್ ಉಪನ್ಯಾಸಕರು ಸದಾ ಮಾರ್ಗದರ್ಶನ ನೀಡಿದರು. ಅದರ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ವಿವರಿಸಿದರು.

ಇತರರ ಸಾಧನೆ

ಅದೇ ತೆರನಾಗಿ ವಿಜಯಪುರದ ಅನೇಕ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸಾಧನೆ ತೋರಿದ್ದು, ವಿಜ್ಞಾನ ವಿಭಾಗದಲ್ಲಿ ಸ್ನೇಹಾ ಯಕ್ಕುಂಡಿ 591 ಅಂಕಗಳನ್ನು ಪಡೆದು ರಾಜ್ಯಕ್ಕೆ 8ನೇ ಸ್ಥಾನ, ಆರ್ಟ್ಸ್ ವಿಭಾಗದಲ್ಲಿ ಸೌಂದರ್ಯಾ ಹಚಡದ 9 ನೇ ಸ್ಥಾನ ಪಡೆದಿದ್ದು, ಸಿಂದಗಿ ತಾಲೂಕಿನ ದೇವರ ನಾವದಗಿ ಗ್ರಾಮದ ಗುಗ್ಗರಿ ಕಾಲೇಜಿನ ವಿದ್ಯಾರ್ಥಿನಿ ಸಂಗಮ್ಮ ಸಿನ್ನೂರ ರಾಜ್ಯಕ್ಕೆ 11 ಸ್ಥಾನ, ಇದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಬನಶಂಕರಿ ಹೂನಳ್ಳಿ 13 ನೇ ಸ್ಥಾನ ಪಡೆದಿದ್ದಾಳೆ. ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ಬ್ಯಾಕೋಡ ಪಿಯು ಕಾಲೇಜಿನ ವಿದ್ಯಾರ್ಥಿನಿ ಶ್ರೀಲತಾ ಲಿಂಗರೆಡ್ಡಿ ರಾಜ್ಯಕ್ಕೆ 17 ನೇ ಸ್ಥಾನ ಪಡೆದಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

(ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ