logo
ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ಕಾರ್ಯಕರ್ತರ ಸಮಾವೇಶದಲ್ಲಿ ಗದ್ದಲ ಹಿನ್ನೆಲೆ; ಶಾಸಕ ಯತ್ನಾಳ್ ವಿರುದ್ಧ ಮಾಜಿ ಸಚಿವ ನಿರಾಣಿ ವಾಗ್ದಾಳಿ

Vijayapura News: ಕಾರ್ಯಕರ್ತರ ಸಮಾವೇಶದಲ್ಲಿ ಗದ್ದಲ ಹಿನ್ನೆಲೆ; ಶಾಸಕ ಯತ್ನಾಳ್ ವಿರುದ್ಧ ಮಾಜಿ ಸಚಿವ ನಿರಾಣಿ ವಾಗ್ದಾಳಿ

HT Kannada Desk HT Kannada

Jun 26, 2023 10:15 PM IST

google News

ಮುರುಗೇಶ್ ನಿರಾಣಿ

    • Murugesh Nirani: ವಿಜಯಪುರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕ ಯತ್ನಾಳ್ ಬೆಂಬಲಿಗರು ಸಮಾವೇಶಕ್ಕೆ ಅಡ್ಡಿಪಡಿಸಿದ ಘಟನೆಯಿಂದಾಗಿ ಮಾಜಿ ಸಚಿವ ಮುರುಗೇಶ್‌ ನಿರಾಣಿ ಆಕ್ರೋಶಗೊಂಡಿದ್ದಾರೆ.
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಬೆಂಬಲಿಗರು ಬಿಜೆಪಿ ಸಮಾವೇಶಕ್ಕೆ ಅಡ್ಡಿಪಡಿಸಿದ ಘಟನೆಯಿಂದಾಗಿ ಆಕ್ರೋಶದಿಂದ ಹೊರ ನಡೆದ ಮಾಜಿ ಸಚಿವ ಮುರುಗೇಶ್‌ ನಿರಾಣಿ, ಯತ್ನಾಳ್‌ ವಿರುದ್ಧ ಪರೋಕ್ಷವಾಗಿ ಟೀಕಾಪ್ರಹಾರ ನಡೆಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುರುಗೇಶ್‌ ನಿರಾಣಿ, ನನ್ನನ್ನು ಸೋಲಿಸಲು ದುಡ್ಡು ಕೊಟ್ಟು ಕಳುಹಿಸಿದ್ದಾರೆ ಎಂದು ಪದೇ ಪದೇ ವ್ಯಂಗ್ಯವಾಡುವ ನಗರ ಶಾಸಕರು ತಾಕತ್ತಿದ್ದರೆ ಬಹಿರಂಗವಾಗಿ ಇಲ್ಲಿ ಬಂದು ಮಾತನಾಡಲಿ. ನಾನೇ ಸಿಎಂ, ವಿಧಾನಸೌಧದ ಮೂರನೇ ಮಹಡಿಯಲ್ಲಿ ನಾನೇ ಕೂರುವೆ ಎಂದು ಅಹಂನಿಂದ ಹೇಳುವ ಅವರು, ಮೊದಲು ಈ ಬಗ್ಗೆ ಉತ್ತರಿಸಲಿ ಎಂದು ಸವಾಲು ಹಾಕಿದರು.

ದುಡ್ಡು ಕೊಟ್ಟಿದ್ದಾರೆ, ದುಡ್ಡು ಕೊಟ್ಟಿದ್ದಾರೆ ಎಂದು ನಾಲಿಗೆ ಹರಿಬಿಡುವ ಮೂಲಕ ಮನಬಂದಂತೆ ಮಾತನಾಡುತ್ತಾರೆ. ಅವರ ನಾಲಿಗೆಗೆ ಲಗಾಮು ಇಲ್ಲ. ನಾನು ಹಣ ಕಳಿಸಿದ್ದು ನಮ್ಮ ಪಕ್ಷದವರಿಗೆ ಗೊತ್ತಿದೆ ಎಂದರು.

ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕರಿರುವ ಸಭೆಯಲ್ಲಿ ಈ ರೀತಿಯ ಆಕ್ಷೇಪ ವ್ಯಕ್ತವಾಗುವಂತೆ ಮಾಡಿದ್ದು ಸರಿಯೇ? ಈ ರೀತಿ ಢೋಂಗಿ ರಾಜಕಾರಣ ನಮ್ಮ ಪಕ್ಷದಲ್ಲಿ ನಡೆಯಲ್ಲ. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಈ ಅಶಿಸ್ತಿನ ನಡವಳಿಕೆಗೆ ಬಿಜೆಪಿ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಿದೆ ಎಂದು ನಿರಾಣಿ ಹೇಳಿದರು.

2018ರಲ್ಲಿ ಕಾರಜೋಳ ಅವರ ಪುತ್ರ ಡಾ.ಗೋಪಾಲ ಕಾರಜೋಳ ಅವರು ಸ್ಪರ್ಧೆ ಮಾಡಿದ್ದರು. ಅವರನ್ನು ಸೋಲಿಸಿದ್ದು ಯಾರು? ಬಬಲೇಶ್ವರದಿಂದ ಸ್ಪರ್ಧೆ ಮಾಡಿದ ವಿಜುಗೌಡ ಪಾಟೀಲರನ್ನು ಸೋಲಿಸಿದ್ದು ಯಾರು? ನಾನೇ ಹಿಂದೂ ಹುಲಿ ಎಂದು ಜಂಭ ಕೊಚ್ಚಿಕೊಳ್ಳುವ ನಾಯಕರು ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ಹೋಗಿ ಟೋಪಿ ಧರಿಸಿ ನಮಾಜ್‌ಗೆ ಹೋಗಿದ್ದು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದರು.

ಇಂದು ನಾವು ಸೋತಿರಬಹುದು, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ದೇವೇಗೌಡ ಹೀಗೆ ಅನೇಕ ದಿಗ್ಗಜರು ಸೋತಿದ್ದಾರೆ. ಸೋಲು-ಗೆಲುವು ಸಾಮಾನ್ಯ. ಆದರೆ ನಾನೇ ಗೆದ್ದಿರುವೆ, ನಾನೇ ಹಿರೋ ಎಂದು ಬಿಂಬಿಸಿಕೊಂಡು ತಮ್ಮ ಬೆನ್ನು ಚಪ್ಪರಿಸಿಕೊಂಡು ಧಿಮಾಕಿನ ಮಾತು ಹೇಳುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಪೇಡ ಹಂಚಿದವರು ಯಾರು ಎಂಬುದು ಗೊತ್ತಿದೆ

ಬೇರೆಯವರನ್ನು ಸೋಲಿಸಲು ಹೋಗಿ ಡುಮ್ಕಿ ಹೊಡೆದಿದ್ದಾರೆ ಎಂದು ಹೇಳುವ ಇವರು ಎಷ್ಟು ಸಲ ಡುಮ್ಕಿ ಹೊಡೆದಿದ್ದಾರೆ. ಇವರೇನು ಸೋಲಿಲ್ಲದ ಸರದಾರರೇ ಎಂದು ನಿರಾಣಿ ವ್ಯಂಗ್ಯವಾಡಿದರು. ಈ ಹಿಂದೆ ಬಿಎಲ್ ಪಾಟೀಲರನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಿ ಪೇಡ ಹಂಚಿದವರು ಯಾರು ಎಂಬುದು ಅವಳಿ ಜಿಲ್ಲೆ ಜನತೆಗೆ ಗೊತ್ತಿದೆ ಎಂದರು.

ಬಾಗಲಕೋಟೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಅಸಮಾಧಾನ ಸ್ಪೋಟಗೊಂಡ ಬೆನ್ನಲ್ಲೇ ವಿಜಯಪುರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲೂ ವಿಜಯಪುರ ನಗರ ಶಾಸಕ ಯತ್ನಾಳ್ ಅವರ ಬೆಂಬಲಿಗರು ಸಮಾವೇಶಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಆಗಮಿಸುವವರೆಗೂ ಸಮಾವೇಶ ಆರಂಭಿಸಬಾರದು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬೆಂಬಲಿಗರು ಪಟ್ಟು ಹಿಡಿದು ವೇದಿಕೆಗೆ ನುಗ್ಗಿದರು. ವೇದಿಕೆ ಮೇಲೆ ಉಪಸ್ಥಿತರಿದ್ದ ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ದ ಧಿಕ್ಕಾರ ಹಾಕಿದರು. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ವರದಿ: ಸಮಿ ಉಸ್ತಾದ್‌, ವಿಜಯಪುರ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ