Vijayapura: ಆಧುನಿಕತೆ ಸ್ಪರ್ಶದಿಂದ ವಿಜಯಪುರದಲ್ಲಿ ನೇಪಥ್ಯಕ್ಕೆ ಸರಿಯುತ್ತಿದೆ ಟಾಂಗಾ;ಇನ್ನು ಜಟಕಾ ಕುದುರೆ ಹತ್ತಿ ಪ್ಯಾಟೆಗೆ ಹೋಗೋದು ಹೇಗೆ?
Jun 25, 2023 08:00 AM IST
ತೆರೆ ಮರೆಗೆ ಸರಿಯುತ್ತಿರುವ ಟಾಂಗಾವಾಲಾಗಳು
ನವರಸಪುರ ಉತ್ಸವದ ಸಂದರ್ಭದಲ್ಲಿ ಟಾಂಗಾ ಗಾಡಿಗಳಿಗೆ ಸ್ವಲ್ಪ ಮಟ್ಟಿಗೆ ಗೌರವ ಸಿಗುತ್ತಿತ್ತು. ಮೆರವಣಿಗೆಗಳಲ್ಲಿ ಕುದುರೆ ಕುಣಿತ, ಮತ್ತು ತಮ್ಮದೇ ಪೋಷಾಕು ಧರಿಸಿ ಮುನ್ನಡೆಯುತ್ತಿದ್ದರು. ಆದರೆ ಆಧುನಿಕ ವಾಹನಗಳ ಭರಾಟೆಯಿಂದ ಟಾಂಗಾ ಗಾಡಿಗಳಲ್ಲಿ ಸಂಚರಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ.
ವಿಜಯಪುರ: ನಗರಗಳಲ್ಲಿ ಆಟೋ, ಟ್ಯಾಕ್ಸಿ ದೊರೆಯದಿದ್ದಾಗ ಜನರು ಟಾಂಗಾಗಳ ಮೊರೆ ಹೋಗುತ್ತಿದ್ದರು. ಆಟೋ ಬಸ್‌ಗಳ ಅಬ್ಬರದ ಮಧ್ಯೆಯೂ ಟಾಂಗಾ ಕೆಲವೇ ಕೆಲವೆಡೆ ಮಾತ್ರ ಅಸ್ತಿತ್ವ ಕಾಯ್ದುಕೊಂಡಿದೆ. ಆದರೆ ಮೈಸೂರು, ವಿಜಯಪುರ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಟಾಂಗಾ ಸವಾರಿ ನೇಪಥ್ಯಕ್ಕೆ ಸರಿಯುತ್ತಾ ಬಂದಿದೆ. ವಿಜಯಪುರದಲ್ಲಿ ಟಾಂಗಾವಾಲಾಗಳು ಸಮಸ್ಯೆ ಅನುಭವಿಸುತ್ತಿದ್ದು ಸರ್ಕಾರ ನೆರವು ನೀಡದೆ ಹೋದಲ್ಲಿ ಇಲ್ಲಿ ಕೂಡಾ ಟಾಂಗಾ ಸವಾರಿ ಮರೆಯಾಗುವ ದಿನಗಳು ದೂರವಿಲ್ಲ.
ಮಾಯವಾಗುತ್ತಿರುವ ಟಾಂಗಾ ಅಬ್ಬರ
ಈ ಹಿಂದೆ ವಿಜಯಪುರಕ್ಕೆ ವಿದೇಶಿಗರು ಬಂದಾಗ ಟಾಂಗಾಗಳಲ್ಲೇ ಸಂಚರಿಸುತ್ತಿದ್ದರು. ಗಟ್ಟಿಮುಟ್ಟಾದ ಕುದುರೆ, ಅಲಂಕರಿಸಿದ ಗಾಡಿ, ಉತ್ಸಾಹದಿಂದ ಟಾಂಗಾವಾಲಾಗಳು ಛಾಬೂಕ್ ಮೂಲಕ ಕುದುರೆಗೆ ಬೆದರಿಸುತ್ತಾ ಟಾಂಗಾ ಚಲಾಯಿಸುತ್ತಿದ್ದರು. ಕುದುರೆಗಳು ಕೂಡಾ ಟಕ್ ಟಕ್ ಸದ್ದು ಮಾಡುತ್ತಾ, ಸುತ್ತಮುತ್ತಲಿನವವರ ಗಮನ ಸೆಳೆಯುತ್ತಾ ಪ್ರಯಾಣಿಕರನ್ನು ಹೊತ್ತು ರಸ್ತೆಯಲ್ಲಿ ವೈಭವದಿಂದ ಸಂಚರಿಸುತ್ತಿದ್ದವು. ವಿದೇಶಿಗರು ಹಾಗೂ ಹೊರ ರಾಜ್ಯದಿಂದ ಬರುವ ಪ್ರಯಾಣಿಕರು ಟಾಂಗಾದಲ್ಲಿ ಪ್ರಯಾಣಿಸುವ ಖುಷಿ ಅನುಭವಿಸುತ್ತಿದ್ದರು. ವಿಶೇಷವಾಗಿ ಟಾಂಗಾದಲ್ಲಿ ಸಂಚರಿಸಲೆಂದೇ ಅನೇಕ ಪ್ರವಾಸಿಗರು ಬರುತ್ತಿದ್ದರು. ಆದರೆ ಕಾಲ ಬದಲಾದಂತೆ ಆಧುನಿಕತೆಯ ಸ್ಪರ್ಶದಿಂದಾಗಿ ಟಾಂಗಾ ಅಬ್ಬರ ಮಾಯವಾಗುತ್ತಾ ಸಾಗಿದೆ. ವಿಜಯಪುರದಲ್ಲಿದ್ದ ಏಕೈಕ ಟಾಂಗಾ ಸ್ಟ್ಯಾಂಡ್ ಕೂಡಾ ನೇಪಥ್ಯಕ್ಕೆ ಸರಿಯುತ್ತಿದೆ.
ಟಾಂಗಾ ಸಂಸ್ಕೃತಿ ಉಳಿಸಲು ಮನವಿ
ಭವ್ಯ ಇತಿಹಾಸವನ್ನು ಹೊಂದಿರುವ ಈ ಟಾಂಗಾ ಸಂಸ್ಕೃತಿಯನ್ನು ಉಳಿಸಲು ಜಿಲ್ಲಾಡಳಿತ ಮುಂದಾಗಬೇಕಿದೆ. ಅವನತಿಯ ಅಂಚಿನಲ್ಲಿರುವ ಟಾಂಗಾ ಸಂಸ್ಕೃತಿಯ ಉಳಿವಿಗಾಗಿ ಜಿಲ್ಲಾಡಳಿತ ಹೊಸ ಯೋಜನೆ ಕೈಗೊಳ್ಳಬೇಕಿದೆ. ಈ ಹಿಂದೆ ವಿಜಯಪುರ ಜಿಲ್ಲಾಧಿಕಾರಿಯಾಗಿದ್ದ ಪಿ ಸುನಿಲ್ ಕುಮಾರ್, ಈ ಟಾಂಗಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಟಾಂಗಾ ಸವಾರಿಗೆ ವಿಶೇಷ ರೂಟ್ ಮ್ಯಾಪ್ ರಚಿಸಿ ಸಂಚಾರಕ್ಕೆ ಹೊಸ ಸ್ಪರ್ಶ ನೀಡಲು ಹೆಜ್ಜೆಯನ್ನಿರಿಸಿದ್ದರು. ಆದರೆ ಅವರು ವರ್ಗಾವಣೆಯಾದ ನಂತರ ಈ ಕಾರ್ಯ ಅಲ್ಲಿಗೆ ಸ್ಥಗಿತಗೊಂಡಿತು. ಒಂದು ಕಾಲದಲ್ಲಿ ವಿಜಯಪುರದ ಸಂಚಾರಿ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದ ಟಾಂಗಾ ಗಾಡಿಗಳು ದೂರದಿಂದ ಬರುವ ಪ್ರವಾಸಿಗರನ್ನು ಹೊತ್ತು ನಗರ ಮಾತ್ರವಲ್ಲದೆ, ದೂರದ ಊರುಗಳಿಗೂ ಸಾಗುತ್ತಿದ್ದವು. ವಾಹನಗಳ ಸೌಲಭ್ಯವಿಲ್ಲದ ಆ ದಿನಗಳಲ್ಲಿ ಟಾಂಗಾವೇ ಪ್ರಯಾಣಿಕರಿಗೆ ಆಪದ್ಭಾಂಧವನಂತೆ ಇತ್ತು.
ಆದಿಲ್ ಶಾಹಿ ರಾಜರ ಕಾಲದಲ್ಲಿ ಟಾಂಗಾ ಗಾಡಿಗಳು ಹೆಚ್ಚಿನ ಜನಪ್ರಿಯತೆ ಪಡೆದಿದ್ದವಲ್ಲದೆ, ಟಾಂಗಾ ಗಾಡಿಗಳಲ್ಲಿ ತೆರಳುವುದೆಂದರೆ ಅದೊಂದು ಪ್ರತಿಷ್ಠೆಯ ಸಂಕೇತವಾಗಿತ್ತು. ಕಾಲ ಕ್ರಮೇಣ ಬ್ರಿಟಿಷರ ಕಾಲದಲ್ಲಿ ಟಾಂಗಾಗಳ ಉಸ್ತುವಾರಿಯನ್ನು ಮುನ್ಸಿಪಾಲಿಟಿ ವಹಿಸಿಕೊಂಡಿತು. ದೂರದ ಊರುಗಳಿಗೆ ಹೋಗುವವರು ಮುನ್ಸಿಪಾಲಿಟಿಗೆ ಬಾಡಿಗೆ ನೀಡಿ ಟಾಂಗಾ ಗಾಡಿಯಲ್ಲಿ ಹೋಗಬೇಕಾಗಿತ್ತು. ಆಗ ವಿಜಯಪುರದಲ್ಲಿ ಸುಮಾರು 600 ಟಾಂಗಾ ಗಾಡಿಗಳು ಓಡಾಡುತ್ತಿದ್ದವಲ್ಲದೆ ಬಾಗಲಕೋಟೆ, ಬೆಳಗಾವಿ, ಸೋಲ್ಲಾಪುರ, ಕಲಬುರಗಿ ಅಂದಿನ ಗುಲ್ಬರ್ಗಾ ನಗರಗಳಲ್ಲಿಯೂ ಜನಪ್ರಿಯತೆಯನ್ನು ಗಳಿಸಿದ್ದವು, ಮುಂಬೈಯ ವಿಕ್ಟೋರಿಯಾ, ವಿಜಯಪುರದ ಆದಿಲ್ ಶಾಹಿ ರಾಜರ ಪಸಂದ್ ಟಾಂಗಾಗಳು ಎಂದು ಖ್ಯಾತಿ ಪಡೆದಿದ್ದವು.
ಬೇರೆ ಉದ್ಯೋಗದ ಮೊರೆ ಹೋದ ಟಾಂಗಾವಾಲಾಗಳು
ನವರಸಪುರ ಉತ್ಸವದ ಸಂದರ್ಭದಲ್ಲಿ ಟಾಂಗಾ ಗಾಡಿಗಳಿಗೆ ಸ್ವಲ್ಪ ಮಟ್ಟಿಗೆ ಗೌರವ ಸಿಗುತ್ತಿತ್ತು. ಮೆರವಣಿಗೆಗಳಲ್ಲಿ ಕುದುರೆ ಕುಣಿತ, ಮತ್ತು ತಮ್ಮದೇ ಪೋಷಾಕು ಧರಿಸಿ ಮುನ್ನಡೆಯುತ್ತಿದ್ದರು. ಆದರೆ ಆಧುನಿಕ ವಾಹನಗಳ ಭರಾಟೆಯಿಂದ ಟಾಂಗಾ ಗಾಡಿಗಳಲ್ಲಿ ಸಂಚರಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಟಾಂಗಾವಾಲಗಳು ಆ ಕೆಲಸ ಬಿಟ್ಟು ಆಟೋ ರಿಕ್ಷಾ ಸೇರಿದಂತೆ ಇತರೆ ವಾಹನಗಳ ಚಾಲಕರಾದರೆ ಮತ್ತೆ ಕೆಲವರು ಜೀವನೋಪಾಯಕ್ಕಾಗಿ ಬೇರೆ ಮಾರ್ಗ ಕಂಡುಕೊಂಡಿದ್ದಾರೆ. ಇದರಿಂದ ನಗರದಲ್ಲಿ 600 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಟಾಂಗಾಗಳ ಸಂಖ್ಯೆ ಗಣನೀಯವಾಗಿ ಇಳಿಯತೊಡಗಿದೆ. ಸರ್ಕಾರ ಈಗಲಾದರೂ ಇತ್ತ ಗಮನ ಹರಿಸಬೇಕಿದೆ.
ವರದಿ: ಸಮೀವುಲ್ಲಾ ಉಸ್ತಾದ್
ವಿಭಾಗ