Viral: ಬೆಂಗಳೂರಿನ 200 ಮೀಟರ್ ರಸ್ತೆಯಲ್ಲಿ 40ಕ್ಕೂ ಹೆಚ್ಚು ಗುಂಡಿಗಳು, ಟ್ವಿಟ್ಟರ್‌ನಲ್ಲಿ ವೈರಲಾಯ್ತು ಮತ್ತೊಂದು ವಿಡಿಯೊ!
Jul 23, 2022 08:19 PM IST
ಬೆಂಗಳೂರಿನ 200 ಮೀಟರ್ ರಸ್ತೆಯಲ್ಲಿ 40 ಗುಂಡಿ, ವೈರಲಾಯ್ತು ಮತ್ತೊಂದು ವಿಡಿಯೋ!
- ಬೆಂಗಳೂರಿನ ರಸ್ತೆ ತುಂಬೆಲ್ಲ ಚಂದ್ರನ ಮೇಲಿರುವ ಕುಳಿಗಳಿಗಿಂತಲೂ ಹೆಚ್ಚು ಗುಂಡಿಗಳು ಕಾಣಿಸುತ್ತವೆ. ಆ ಬೈಕ್ ಸವಾರ ನಾಜೂಕಾಗಿ ಗುಂಡಿ ತಪ್ಪಿಸಿಕೊಂಡು ಹೋಗುತ್ತ ರೈಡ್ ಮಾಡುತ್ತಾನೆ. ಸುಮಾರು 200 ಮೀಟರ್ ರಸ್ತೆಯಲ್ಲಿ 40ಕ್ಕೂ ಹೆಚ್ಚು ಗುಂಡಿಗಳು ಇವೆ.
ಬೆಂಗಳೂರು: ರಸ್ತೆಯ ತುಂಬೆಲ್ಲ ಹೊಂಡಗಳು ತುಂಬಿಹೋಗಿ ವಾಹನ ಸಂಚಾರರು ಕಷ್ಟಪಡುತ್ತಿದ್ದ ಬೆಂಗಳೂರು-ಮೈಸೂರು ನೈಸ್ ಜಂಕ್ಷನ್ ರಸ್ತೆ ವಿಡಿಯೋ ಸುಮಾರು ಒಂದು ತಿಂಗಳ ಹಿಂದೆ ವೈರಲ್ ಆಗಿತ್ತು. ಇದೀಗ ಟ್ವೀಟರ್‌ನಲ್ಲಿ ಬಳಕೆದಾರರೊಬ್ಬರು ಅಂತಹದ್ದೇ ಒಂದು ವಿಡಿಯೋ ಮಾಡಿದ್ದು, ಬೈಕ್‌ನಲ್ಲಿ ಆಫ್‌ರೋಡಿಂಗ್ ಅನುಭವ ಪಡೆದ ಕುರಿತು ಪೋಸ್ಟ್ ಮಾಡಿದ್ದಾರೆ.
ಆ ವಿಡಿಯೋದಲ್ಲಿ ರಸ್ತೆ ತುಂಬೆಲ್ಲ ಚಂದ್ರನ ಮೇಲಿರುವ ಕುಳಿಗಳಿಗಿಂತಲೂ ಹೆಚ್ಚು ಗುಂಡಿಗಳು ಕಾಣಿಸುತ್ತವೆ. ಆ ಬೈಕ್ ಸವಾರ ನಾಜೂಕಾಗಿ ಗುಂಡಿ ತಪ್ಪಿಸಿಕೊಂಡು ಹೋಗುತ್ತ ರೈಡ್ ಮಾಡುತ್ತಾನೆ. ಸುಮಾರು 200 ಮೀಟರ್ ರಸ್ತೆಯಲ್ಲಿ 40ಕ್ಕೂ ಹೆಚ್ಚು ಗುಂಡಿಗಳು ಕಂಡಿದ್ದು, ಬಗೆಬಗೆಯ ಕಾಮೆಂಟ್‌ಗಳೂ ಬಂದಿವೆ. ಬಹುತೇಕರು ತಮ್ಮ ಕಾಮೆಂಟ್‌ಗಳಲ್ಲಿ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಿಡಿಯೋಗೆ ಮಹಾದೇವಪುರ ಟಾಸ್ಕ್ ಫೋರ್ಸ್ ಮೊಬಿಲಿಟಿ ಖಾತೆಯಿಂದ ಮಾರುತ್ತರ ನೀಡಲಾಗಿದೆ. "ಈ ವಿಷಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ಈ ರಸ್ತೆಯು ರಾಜಕಾಳುವೆ ಒತ್ತುವರಿಯಲ್ಲಿ ನಿರ್ಮಿಸಿದ ರಸ್ತೆಯಾಗಿದ್ದು, ಈ ಒತ್ತುವರಿ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಇದಕ್ಕೆ ಇನ್ನೊಬ್ಬರು ಪ್ರತಿಕ್ರಿಯಿಸಿದ್ದು, "ಒತ್ತುವರಿ ರಸ್ತೆಯನ್ನು ಹಿಂಪಡೆಯಬಹುದು. ಆದರೆ, ಆ ರಸ್ತೆಯ ಅಕ್ಕಪಕ್ಕದಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡುವಿರಾ?ʼʼ ಎಂದು ಕೇಳಿದ್ದಾರೆ.
ಅದಕ್ಕೆ ಮಹಾದೇವಪುರ ಟಾಸ್ಕ್‌ಫೋರ್ಸ್‌ನವರು "ಎಲ್ಲಾದರೂ ಕಟ್ಟಡಗಳು ರಾಜಕಾಳುವೆ ಅತಿಕ್ರಮಿಸಿ ನಿರ್ಮಿಸಿದ್ದರೆ ಖಂಡಿತವಾಗಿಯೂ ನೆಲಸಮ ಮಾಡಲಾಗುವುದುʼʼ ಎಂದು ಉತ್ತರ ನೀಡಿದ್ದಾರೆ. "ಓಹ್, ಹಾಗಾದರೆ ಇದು ಬಿಬಿಎಂಪಿ ರಸ್ತೆಯಲ್ಲವೇ? ಖಾಸಗಿ ರಸ್ತೆಯೇ? ಎಲ್ಲಾದರೂ ಬಿಬಿಎಂಪಿಯವರು ರಸ್ತೆ ನಿರ್ಮಿಸಿದ್ದೆಂದು ಗೊತ್ತಾದರೆ ಬಿಬಿಎಂಪಿ ಸರ್ವೇಯರ್‌ಗಳು ಮತ್ತು ಎಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಿರಾ?ʼʼ ಎಂದು ಟ್ವಿಟ್ಟರ್ ಬಳಕೆದಾರರು ಮಾರುತ್ತರ ನೀಡಿದ್ದಾರೆ. ಒಟ್ಟಾರೆ ಈ ಟ್ವಿಟ್ ಹಲವು ಬಗೆಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ದುರಸ್ಥಿ, ಗುಂಡಿ ಮುಚ್ಚುವುದು, ಸಂಚಾರ ದಟ್ಟಣೆ ಇರುವಲ್ಲಿ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಬೆಂಗಳೂರಿನ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತು ಪ್ರಮುಖವಾಗಿ ಚರ್ಚಿಸಲಾಗಿತ್ತು.