Viral Video: ಕುದುರೆ ಬದಲು ಏಥರ್ ರಿಝ್ತಾ ಮೇಲೇರಿ ಬಂದ ಬೆಂಗಳೂರು ಮದುಮಗನ ವರಯಾತ್ರೆ ಸಂಭ್ರಮ, ಫೋಟೋ ವಿಡಿಯೋ ವೈರಲ್
May 15, 2024 07:36 AM IST
ಕುದುರೆ ಬದಲು ಏಥರ್ ರಿಝ್ತಾ ಮೇಲೇರಿ ಬಂದ ಬೆಂಗಳೂರು ಮದುಮಗನ ವರಯಾತ್ರೆ ಸಂಭ್ರಮ
ಕುದುರೆ ಬದಲು ಏಥರ್ ರಿಝ್ತಾ ಮೇಲೇರಿ ಬಂದ ಬೆಂಗಳೂರು ಮದುಮಗನ ವರಯಾತ್ರೆ ಸಂಭ್ರಮದ ಫೋಟೋ ವಿಡಿಯೋ ವೈರಲ್ ಆಗಿದೆ. ದರ್ಶನ ಪಟೇಲ್ ಎಂಬ ಬೆಂಗಳೂರು ನಿವಾಸಿ ತನ್ನ ಏಥರ್ ರಿಝ್ತಾ ಇವಿ ಪಕ್ಕ ಕುಣಿದು ಸಂಭ್ರಮಿಸಿದ್ದು ಯಾಕೆ ಎಂಬುದನ್ನು ಅವರ ಕಂಪನಿಯ ಸಿಇಒ ವಿಡಿಯೋ ಸಹಿತ ವಿವರಿಸಿದ್ದಾರೆ ನೋಡಿ.
ಬೆಂಗಳೂರು: ವಿವಿಧ ಸಂಸ್ಕೃತಿಗಳ ನೆಲೆಯಾಗಿರುವ ಬೆಂಗಳೂರು ಮಹಾನಗರದಲ್ಲಿ ನಿತ್ಯವೂ ಒಂದಿಲ್ಲೊಂದು ವಿರಳ, ವಿಲಕ್ಷಣ ವಿದ್ಯಮಾನಗಳು ನಡೆಯತ್ತಲೇ ಇರುತ್ತವೆ. ಅವುಗಳ ಪೈಕಿ ಕೆಲವು ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗುತ್ತವೆ. ಅಂತಹ ಒಂದು ಲೇಟೆಸ್ಟ್ ವೈರಲ್ ಪೋಸ್ಟ್ ಅದು. ಬೆಂಗಳೂರಿನ ಮದುಮಗನೊಬ್ಬ ತನ್ನ ವರಯಾತ್ರೆ ಸಮಾರಂಭಕ್ಕೆ ಕುದುರೆ ಮೇಲೇರಿ ಬಾರದೇ ಎಲೆಕ್ಟ್ರಿಕ್ ಸ್ಕೂಟರ್ ಏಥರ್ ರಿಝ್ತಾ (Ather Rizta) ಮೇಲೇರಿ ಬಂದು ಕುಣಿದು ಸಂಭ್ರಮಿಸಿದ ಫೋಟೋ ಅದರಲ್ಲಿದೆ.
ಕುದುರೆಯ ಬದಲು ಏಥರ್ ರಿಝ್ತಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಂದ ವರ ಬೇರಾರೂ ಅಲ್ಲ, ಏಥರ್ ಎನರ್ಜಿಯಲ್ಲಿ ಕೆಲಸ ಮಾಡುತ್ತಿರುವ ಇಂಡಸ್ಟ್ರಿಯಲ್ ಡಿಸೈನರ್ ದರ್ಶನ್ ಪಟೇಲ್. ಅವರ ವಿವಾಹ ಕಳೆದ ವಾರಾಂತ್ಯದಲ್ಲಿ ನಡೆಯಿತು. ದರ್ಶನ್ ಪಟೇಲ್ ಅವರ ವರಯಾತ್ರೆ ಸಂಭ್ರಮದ ಫೋಟೋ ಪೀಕ್ ಬೆಂಗಳೂರು ಎಂಬ ಎಕ್ಸ್ ಖಾತೆಯಲ್ಲಿ ಶೇರ್ ಆಗಿದೆ.
“ಬೆಂಗಳೂರಿನ ಮದುವೆಗಳಲ್ಲಿ ಕುದುರೆಗಳ ಜಾಗವನ್ನು ಏಥರ್ ಭರ್ತಿಮಾಡುವಂತಿದೆ” ಎಂದು ಪೀಕ್‌ಬೆಂಗಳೂರು ಟ್ವೀಟ್ ಮಾಡಿದೆ. ಪೀಕ್‌ಬೆಂಗಳೂರು ಎಂಬ ಖಾತೆಯು ಬೆಂಗಳೂರಿನ ವಿರಳ ವಿದ್ಯಮಾನಗಳನ್ನು ದಾಖಲಿಸುವ ಖಾತೆಯಾಗಿ ಗುರುತಿಸಿಕೊಂಡಿದೆ.
ಏಥರ್ ರಿಝ್ತಾ ವೈರಲ್ ಪೋಸ್ಟ್ ಇಲ್ಲಿದೆ ನೋಡಿ
ವೈರಲ್ ಎಕ್ಸ್‌ಪೋಸ್ಟ್‌ನಲ್ಲಿ ಏಥರ್ ರಿಝ್ತಾ ಇವಿ ಎದ್ದುಕಾಣಿಸುತ್ತಿದೆ. ಈ ಪೋಸ್ಟ್ ನೋಡಿದ ಒಬ್ಬ ವ್ಯಕ್ತಿ, “ನನ್ನ ರಿಷ್ತಾ ಸಂದರ್ಭದಲ್ಲಿ ಸಿಕ್ತು ರಿಝ್ತಾ” (Got the Rizta for my Rishta) ಎಂದು ಕಾಮೆಂಟ್ ಮಾಡಿದ್ದಾರೆ.
ಏಥರ್ ಎನರ್ಜಿ ಸಿಇಒ ತರುಣ್ ಮೆಹ್ತಾ ಟ್ವೀಟ್ ಹೀಗಿದೆ
ಏಥರ್ ಎನರ್ಜಿ ಸಿಇಒ ಮತ್ತು ಸಹಸಂಸ್ಥಾಪಕ ತರುಣ್ ಮೆಹ್ತಾ ಅವರು ಕೂಡ ಟ್ವೀಟ್ ಮಾಡಿದ್ದು, ಬರಾತ್ ಸಮಾರಂಭದಲ್ಲಿ ಕುದುರೆ ಮೇಲೇರಿ ಹೋಗುವ ಬದಲು ರಿಝ್ತಾ ಮೂಲಕ ಪಾಲ್ಗೊಳ್ಳುವುದಕ್ಕೆ ವರ ಬಯಸಿದ್ದ. ಅದನ್ನು ಕಂಪನಿಯು ಈಡೇರಿಸಿತು ಎಂದು ಬರೆದುಕೊಂಡು ವಿಡಿಯೋ ಮತ್ತು ಫೋಟೋವನ್ನು ಹಂಚಿಕೊಂಡಿದ್ದಾರೆ.
“ಈ ಮದುವೆ ಕಳೆದ ವಾರಾಂತ್ಯದಲ್ಲಿ ನಡೆಯಿತು. ದರ್ಶನ್ ಅವರು ರಿಝ್ತಾ ಮೇಲೇರಿ ಅವರ ಬರಾತ್ ಪ್ರವೇಶ ಮಾಡ ಬಯಸಿದ್ದರು. ಅವರ ಭವ್ಯ ಪ್ರವೇಶಕ್ಕಾಗಿ ನಾವು ಅದನ್ನು ಮಾಡಬೇಕಾಗಿತ್ತು. ಯಾಕಾಗಲ್ಲ. ರಿಝ್ತಾ ಇರುವುದೇ ಕುಟುಂಬಕ್ಕಾಗಿಯೆ ಅಲ್ವೆ?" ಎಂದು ತರುಣ್ ಮೆಹ್ತಾ ಟ್ವೀಟ್ ಮಾಡಿದ್ದಾರೆ.
ಏಥರ್ ರಿಝ್ತಾ ಮೇಲೇರಿ ಮದುಮಗನ ಎಂಟ್ರಿ; ವಿಡಿಯೋ
ಏಥರ್ ಎನರ್ಜಿ ಕೂಡ ತನ್ನ ಅಧಿಕೃತ ಖಾತೆಯ ಮೂಲಕ ಒಂದು ತಮಾಷೆಯ ಕಾಮೆಂಟ್ ಸೇರಿಸಿದೆ. “ಕುದುರೆಗಳು ಓಡುತ್ತವೆ. ಆದರೆ ನಾವು ವ್ಯಾಟ್‌ಗೆ ಆದ್ಯತೆ ನೀಡುತ್ತೇವೆ. ಮದುವೆ ಸಮಾರಂಭಕ್ಕೆ ನಿಜವಾಗಿಯೂ ಏಥರ್ ಉತ್ತಮ ಅನುಭವ ನೀಡುತ್ತದೆ. ಅದರ ಮೇಲೆ ಸವಾರಿ ಮಾಡಿ, ಅದನ್ನು ಸ್ವಚ್ಛವಾಗಿಡಿ" ಎಂದು ಏಥರ್ ಎನರ್ಜಿ ಹೇಳಿದೆ.
ಉದ್ಯಮಿ ಜೈದೇವ್ ಎಂಬುವವರು, ಬೆಂಗಳೂರು ಹುಡುಗ ಮಾತ್ರ ಇಂಥವನ್ನು ಮಾಡಬಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ದೀಪಕ್ ಗುಪ್ತಾ ಎಂಬುವವರು, ಶೂನ್ಯ ಮಾಲಿನ್ಯದ ಕುದುರೆ ಎಂಬ ಕಾಮೆಂಟ್ ಪಾಸ್ ಮಾಡಿದ್ದಾರೆ.
ಅಂದ ಹಾಗೆ, ಏಥರ್ ರಿಝ್ತಾ ಇವಿ ಕಳೆದ ತಿಂಗಳು ಮಾರುಕಟ್ಟೆಗೆ ಪ್ರವೇಶಿಸಿದೆ. ಬೆಂಗಳೂರಿನಲ್ಲಿ ಇದರ ಎಕ್ಸ್ ಷೋರೂಂ ದರ 1.10 ಲಕ್ಷ ರೂಪಾಯಿ. ಮುಂಗಡ ಬುಕ್ಕಿಂಗ್ 999 ರೂಪಾಯಿ ಪಾವತಿಸಿದರಾಯಿತು. ಈಗ ಇರುವ ಮುಂಗಡ ಕಾಯ್ದಿರಿಸುವಿಕೆ ಪ್ರಕಾರ, ಜುಲೈನಲ್ಲಿ ಮೊದಲ ಏಥರ್ ರಿಝ್ತಾ ಗ್ರಾಹಕರಿಗೆ ಸಿಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.