ಕರ್ನಾಟಕ ಹವಾಮಾನ ವರದಿ ಮೇ 3: ದಕ್ಷಿಣ, ಉತ್ತರ ಒಳನಾಡು, ಕರಾವಳಿಯಲ್ಲಿ ಇಂದು ಮಳೆ ಬರುತ್ತಾ? 6 ಜಿಲ್ಲೆಗಳಿಗೆ ಸಿಹಿಸುದ್ದಿ
May 03, 2024 06:27 AM IST
ಕರ್ನಾಟಕ ಹವಾಮಾನ ವರದಿ ಮೇ 3
- Karnataka Weather Today: ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧೆಡೆ ಬಿಸಿಲು ಹೆಚ್ಚಾಗಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಇಂದು (ಮೇ 3) ಕೂಡ ಶಾಖದ ಅಲೆ ಇರಲಿದೆ. ಮೇ 5ರಂದು ರಾಜ್ಯದ 6 ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರು: ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಶಾಖದ ಅಲೆ, ಬಿಸಿಲಿನ ಪ್ರತಾಪ ಮುಂದುವರೆದಿದೆ. ಕೃಷಿ ಚಟುವಟಿಕೆಯನ್ನೇ ನಂಬಿರುವ ರೈತರು ಆಕಾಶ ನೋಡುತ್ತಿದ್ದಾರೆ. ಮಳೆಯ ಸುಳಿವು ಕಾಣದೆ ನಿರಾಶೆ ಅನುಭವಿಸುತ್ತಿದ್ದಾರೆ. ಬಿಸಿಲಿನ ಪ್ರತಾಪಕ್ಕೆ ಮಕ್ಕಳು, ಹಿರಿಯರನ್ನು ಒಳಗೊಂಡಂತೆ ಎಲ್ಲರಲ್ಲೂ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಮಧ್ಯಾಹ್ನ 12ರಿಂದ 3 ಗಂಟೆಯ ಅವಧಿಯಲ್ಲಿ ಹೊರಗಡೆ ಹೋದರೆ ತಲೆನೋವು, ವಾಂತಿ, ಜ್ವರ ಸೇರಿದಂತೆ ಹೀಟ್‌ವೇವ್‌ನ ಕಾಯಿಲೆಗಳು ಕಾಡುವ ಆತಂಕವಿದೆ. ಇಂತಹ ಸಮಯದಲ್ಲಿ ಇಂದು ಮಳೆ ಬರುತ್ತಾ? ನಾಳೆ ಮಳೆ ಬರುತ್ತಾ? ಎಂದು ಜನರು ಕಾಯುತ್ತಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇಂದು ರಾಜ್ಯದ ಬಹುತೇಕ ಕಡೆ ಶಾಖದ ಅಲೆ ಮುಂದುವರೆಯಲಿದೆ. ಶುಭ ಸುದ್ದಿ ಏನೆಂದರೆ ಕರ್ನಾಟಕದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮೇ 5ರಂದು ಹಗುರ, ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಭಾರತದ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗ (Met Centre Bengaluru - IMD) ನೀಡಿದೆ.
ಕರ್ನಾಟಕದಲ್ಲಿ ಇಂದು ಮಳೆ ಬರುತ್ತಾ?
ಹವಾಮಾನ ಇಲಾಖೆಯ ಪ್ರಕಾರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಇಂದು ಒಣಹವೆ, ಶಾಖದ ಅಲೆ ಮುಂದುವರೆಯಲಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಿರಲಿದೆ.
ಕರಾವಳಿ ಹವಾಮಾನ ವರದಿ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಕೂಡ ಒಣಹವೆ ಮುಂದುವರೆಯಲಿದೆ. ಈ ಮೂರು ಜಿಲ್ಲೆಗಳಲ್ಲೂ ಮುಂದಿನ ಮೂರು ದಿನಗಳ ಕಾಲ ಒಣಹವೆ ಮುಂದುವರೆಯಲಿದೆ. ಮೇ 5ರವರೆಗೆ ಈ ಮೂರು ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆಯ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನಲ್ಲಿ ಶಾಖದ ಅಲೆ
ಬಾಗಲಕೋಟೆ, ಬೆಳಗಾವಿ, ಬೀದರ್‌ನಲ್ಲಿ ಒಣಹವೆ ಇರಲಿದೆ. ಈ ಮೂರು ಜಿಲ್ಲೆಗಳಲ್ಲಿ ಶಾಖದ ಅಲೆಯ ಎಚ್ಚರಿಕೆ ನೀಡಲಾಗಿದೆ. ಧಾರವಾಡದಲ್ಲಿ ಒಣಹವೆ ಇರಲಿದೆ. ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಗಳಲ್ಲೂ ಒಣಹವೆ/ ಶಾಖದ ಅಲೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಮೇ 3ರವರೆಗೆ ಬಾಗಲಕೋಟೆ, ಕಲಬುರಿಗ, ಬೆಳಗಾವಿ, ರಾಯಚೂರು ಜಿಲ್ಲೆಗಳಲ್ಲಿ ಬೆಚ್ಚಿನೆಯ ರಾತ್ರಿಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತನ್ನ ಹವಾಮಾನ ವರದಿಯಲ್ಲಿ ಟಿಪ್ಪಣಿ ಬರೆದಿದೆ.
ದಕ್ಷಿಣ ಒಳನಾಡಿನ ಹವಾಮಾನ ವರದಿ
ಬಳ್ಳಾರಿಯಲ್ಲಿ ಶಾಖದ ಅಲೆ ಇರಲಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರದಲ್ಲಿ ಒಣಹವೆ ಮುಂದುವರೆಯಲಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆಯಲ್ಲೂ ಶಾಖದ ಅಲೆ ಇರಲಿದೆ. ಚಿಕ್ಕಮಗಳೂರಿನಲ್ಲಿ ಒಣಹವೆ ಇರಲಿದೆ. ಹಾಸನ , ಕೊಡಗು, ಮೈಸೂರು, ರಾಮನಗರ, ಶಿವಮೊಗ್ಗದಲ್ಲೂ ಒಣಹವೆ ಮುಂದುವರೆಯಲಿದೆ ಕೋಲಾರ, ಮಂಡ್ಯದಲ್ಲಿ ಶಾಖದ ಅಲೆ ಇರಲಿದೆ. ತುಮಕೂರು, ವಿಜಯನಗರದಲ್ಲಿ ಶಾಖದ ಅಲೆ ಇರಲಿದೆ.
ಕರ್ನಾಟಕದಲ್ಲಿ ಮಳೆ ಯಾವಾಗ?
ಹವಾಮಾನ ಇಲಾಖೆಯ ವರದಿ ಪ್ರಕಾರ ಮೇ 5ರಂದು ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರಗಳಲ್ಲಿ ಹಗುರ/ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಸದ್ಯ ಈ ಆರು ಜಿಲ್ಲೆಗಳಿಗೆ ಮಾತ್ರ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ/ಶಾಖದ ಅಲೆ ಮುಂದುವರೆಯಲಿದೆ.