logo
ಕನ್ನಡ ಸುದ್ದಿ  /  ಕರ್ನಾಟಕ  /  Why Bjp Lost: ಉತ್ತಮ ಆಡಳಿತ ಕೊಡದೆ, ಪಕ್ಷ ಸಂಘಟಿಸದೆ ಮೋದಿ ಹವಾದಲ್ಲಿ ತೇಲಲು ಹೊರಟ ರಾಜ್ಯ ಬಿಜೆಪಿ ನಾಯಕರು; ಮತ್ತು ಅದರ ಫಲಿತಾಂಶ

Why BJP lost: ಉತ್ತಮ ಆಡಳಿತ ಕೊಡದೆ, ಪಕ್ಷ ಸಂಘಟಿಸದೆ ಮೋದಿ ಹವಾದಲ್ಲಿ ತೇಲಲು ಹೊರಟ ರಾಜ್ಯ ಬಿಜೆಪಿ ನಾಯಕರು; ಮತ್ತು ಅದರ ಫಲಿತಾಂಶ

Umesh Kumar S HT Kannada

May 14, 2023 08:33 PM IST

google News

ಬಿಜೆಪಿ ಸೋಲಿನ ಪರಾಮರ್ಶೆ ನಡೆಯುತ್ತಿದ್ದು, ಸಂಘಟನಾ ಹೊಣೆಗಾರಿಕೆ ಇರುವಂಥವರು ವಿವರಿಸಿದ ವಿಚಾರಗಳು ಪಕ್ಷ ಸಂಘಟನೆಯ ಹಿತದ ಕಾರಣ ಗಮನಸೆಳೆಯುವಂತಿದೆ.

  • Why BJP lost: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಯಲ್ಲಿ ಆಂತರಿಕ ವಿಮರ್ಶೆ ಜೋರಾಗಿ ನಡೆಯುತ್ತಿದೆ. ಅನೇಕ ನಾಯಕರು, ಕಾರ್ಯಕರ್ತರು ಪಕ್ಷದೊಳಗೆ ತಾವು ಗಮನಿಸಿದ ವಿಚಾರಗಳನ್ನು ಹೇಳತೊಡಗಿದ್ದಾರೆ. ಕಠಿಣ ಆತ್ಮಾವಲೋಕನ ನಡೆಸಿ ಪಕ್ಷವನ್ನು ಪುನರ್‌ಸಂಘಟಿಸಲು ಇದು ನಿಮಿತ್ತ ಮತ್ತು ಸಕಾಲ ಎಂಬ ಅಂಶದ ಕಡೆಗೆ ಗಮನಸೆಳೆಯುತ್ತಿದ್ದಾರೆ. ಅದರ ವಿವರ ಇಲ್ಲಿದೆ.

ಬಿಜೆಪಿ ಸೋಲಿನ ಪರಾಮರ್ಶೆ ನಡೆಯುತ್ತಿದ್ದು, ಸಂಘಟನಾ ಹೊಣೆಗಾರಿಕೆ ಇರುವಂಥವರು ವಿವರಿಸಿದ ವಿಚಾರಗಳು ಪಕ್ಷ ಸಂಘಟನೆಯ ಹಿತದ ಕಾರಣ ಗಮನಸೆಳೆಯುವಂತಿದೆ.
ಬಿಜೆಪಿ ಸೋಲಿನ ಪರಾಮರ್ಶೆ ನಡೆಯುತ್ತಿದ್ದು, ಸಂಘಟನಾ ಹೊಣೆಗಾರಿಕೆ ಇರುವಂಥವರು ವಿವರಿಸಿದ ವಿಚಾರಗಳು ಪಕ್ಷ ಸಂಘಟನೆಯ ಹಿತದ ಕಾರಣ ಗಮನಸೆಳೆಯುವಂತಿದೆ. (HT_PRINT (ಪ್ರಾತಿನಿಧಿಕ ಚಿತ್ರ))

ಕರ್ನಾಟಕದಲ್ಲಿ ಎಲ್ಲ ನಾಯಕರು ತಮ್ಮ ತಮ್ಮದೇ ಆದ ಬಣಗಳನ್ನು ರೂಪಿಸಿಕೊಂಡು ಆರಾಮ ಇದ್ದರು. ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡು, ಕೇಂದ್ರದ ನಾಯಕರನ್ನು ಕರೆಯಿಸಿ ಚುನಾವಣೆ ಗೆಲ್ಲಬಹುದು ಎಂಬ ಅತಿಯಾದ ಆತ್ಮವಿಶ್ವಾಸ ಪಕ್ಷದ ರಾಜ್ಯ ಅಧ್ಯಕ್ಷರಲ್ಲೂ ಇತ್ತು. ಉಳಿದ ನಾಯಕರಲ್ಲೂ ಇತ್ತು! ಎಂಬ ಅಂಶದ ಕಡೆಗೆ ಸಂಘಟನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡ ಒಂದಿಬ್ಬರು ಹಿಂದುಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಮಾತಿಗೆ ಸಿಕ್ಕಾಗ ವಿವರಿಸಿದ್ದಾರೆ. ಆದರೆ, ಗುರುತು ಬಹಿರಂಗಪಡಿಸದಂತೆ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಪಕ್ಷ ಸಂಘಟನೆ ಕೆಲಸ ಸರಿಯಾಗಿ ನಡೆದಿಲ್ಲ. ಚುನಾವಣೆಗೆ ಒಂದು ವರ್ಷ ಮೊದಲು ಪಕ್ಷ ಸಂಘಟನಾ ವಿಚಾರದಲ್ಲಿ ಇದ್ದ ಬಿಗಿ ಹಿಡಿತ ನಂತರ ತಪ್ಪಿಹೋಗಿದೆ. ಕೆಲಸ ಮಾಡುವವರ ಸಂಖ್ಯೆ ಕಡಿಮೆ ಇತ್ತು. ಕಾಂಗ್ರೆಸ್‌ ಮುಕ್ತ ಭಾರತ ಆಗಿದೆ. ಕಾಂಗ್ರೆಸ್‌ ನಾಯಕತ್ವಕ್ಕೆ ಜನ ಮನ್ನಣೆ ಕೊಡುವುದಿಲ್ಲ. ಇನ್ನೇನಿದ್ದರೂ ಮೋದಿ ಹವಾ. ರಾಷ್ಟ್ರದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು, ಹಿಂದುತ್ವದ ವಿಚಾರ ಮುಂದಿಟ್ಟುಕೊಂಡು ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದರು ರಾಜ್ಯ ಬಿಜೆಪಿ ನಾಯಕರು.

ಚುನಾವಣಾ ಪ್ರಚಾರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಕರೆಯಿಸಲಾಗಿತ್ತು. ಅವರು ಬೆಂಗಳೂರು ಕೇಂದ್ರಿತವಾಗಿ ಕುಳಿತುಬಿಟ್ಟರು. ಸುದ್ದಿಗೋಷ್ಠಿಗೆ ಸೀಮಿತವಾಗಿತ್ತು ಅವರ ಚುನಾವಣಾ ಕೆಲಸ. ಒಮ್ಮೆಯೂ ತಳಮಟ್ಟದ ಕಾರ್ಯಕರ್ತರ ಜತೆಗೆ ಬೆರೆಯುವ ಕೆಲಸ ಮಾಡಲಿಲ್ಲ. ಶೋಭಾ ಅವರ ಹೆಸರನ್ನು ಸಾಂದರ್ಭಿಕವಾಗಿ ಉಲ್ಲೇಖಿಸಲಾಗಿದೆಯೇ ಹೊರತು, ಬೇರೇನೂ ಅಲ್ಲ. ಬಹುತೇಕ ನಾಯಕರ ವರ್ತನೆಯೂ ಇದುವೇ ಆಗಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಸಂಘಟನಾ ಪದಾಧಿಕಾರಿ ವಿವರಿಸಿದರು.

ನಾಯಕರೆಲ್ಲರೂ ತಮ್ಮದೇ ಲೋಕದಲ್ಲಿ ಸಣ್ಣ ಸಣ್ಣ ದ್ವೀಪಗಳಂತೆ ಆಗಿದ್ದರು. ಕಾರ್ಯಕರ್ತರನ್ನು ಕೇಳುವವರೇ ಇರಲಿಲ್ಲ. ಕಾಂಗ್ರೆಸ್‌ ಪ್ರಣಾಳಿಕೆ ಬಂದ ಕೂಡಲೇ ಬಜರಂಗ ದಳ ನಿಷೇಧ ವಿಚಾರ ಮುಂದಿಟ್ಟು ದೊಡ್ಡ ಪ್ರಮಾಣದ ಪ್ರಚಾರ ಅಭಿಯಾನ ನಡೆಸಿದರು. ಯಾವುದೇ ವಿಷಯವನ್ನಾದರೂ ಬೊಂಬಾರ್ಡಿಂಗ್‌ ರೀತಿಯಲ್ಲಿ ಹೇಳಿದ ಕೂಡಲೇ ಜನ ನಂಬಿಬಿಡ್ತಾರೆ ಎಂಬ ಭಾವನೆ ಇದೆಯಲ್ಲ ಅದು ಸರಿಯಲ್ಲ. ನೇರ ಹೇಳಬೇಕು ಎಂದರೆ ಯೋಜನೆ, ಗ್ರೌಂಡ್‌ ವರ್ಕ್‌ ಎರಡಲ್ಲೂ ರಾಜ್ಯ ಬಿಜೆಪಿ ನಾಯಕರು ಎಡವಿದರು ಎಂದು ಅವರು ವಿವರಿಸಿದರು.

ಇನ್ನು, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ದೊಡ್ಡ ಪ್ರಮಾಣದ ಎಡವಟ್ಟು ಮಾಡಿಕೊಂಡರು. ಗೆಲ್ಲಬಹುದಾದ ಅಭ್ಯರ್ಥಿಗಳನ್ನು, ಹಿರಿಯರನ್ನು ನಡೆಸಿಕೊಂಡ ರೀತಿ ಸರಿ ಇರಲಿಲ್ಲ. ಹೀಗಾಗಿ ಬಿಜೆಪಿ ಹೇಳಬಹುದಾದ ಮತದಾರರ ಮೇಲೆ ಪ್ರಭಾವ ಬೀರಬಹುದಾದ ನಾಯಕರು ಸರಿಯಾಗಿ ಕೆಲಸ ಮಾಡಲಿಲ್ಲ. ಫಲಿತಾಂಶವನ್ನೇ ಗಮನಿಸಿ ನೋಡಿ. ಶ್ರೀರಾಮುಲು, ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ.ಸುಧಾಕರ್‌ ಮುಂತಾದವರೆಲ್ಲರ ಸೋಲು ಒಂದು ಪಾಠ.

ವಿಶ್ವೇಶ್ವರ ಹೆಗೆಡೆ ಕಾಗೇರಿ ಅವರ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಹಾಗಿದ್ದೂ ಅವರು ಯಾಕೆ ಸೋತರು? ಪಕ್ಷ ಸಂಘಟನೆಯಲ್ಲಿ, ಪಕ್ಷದೊಳಗೆ ಏನೋ ಸರಿ ಇಲ್ಲ ಎಂಬುದರ ಸಂಕೇತ ಅಲ್ಲವೇ ಇದು? ಅಭ್ಯರ್ಥಿಯ ಕೈಯಲ್ಲಿ ದುಡ್ಡು ಇದ್ದರೆ ಸಾಕು ಗೆದ್ದುಬಿಡಬಹುದು ಎಂಬ ಭಾವನೆ. ಡಾ.ಸುಧಾಕರ್‌ ಸೋಲು ಹೇಗಾಯಿತು? ಇಡೀ ಕ್ಷೇತ್ರದ ಮತದಾರರ ಮೇಲೆ ಪ್ರಭಾವ ಬೀರುವಷ್ಟು ಹಣ ಅವರ ಬಳಿ ಇರಲಿಲ್ಲವೇ? ಅವರೇಕೆ ಗೆಲ್ಲುವುದು ಸಾಧ್ಯವಾಗಲಿಲ್ಲ? ನಿಜ, ಪಕ್ಷದ ಕಾರ್ಯಕರ್ತರಷ್ಟೇ ಅಲ್ಲ, ಮತದಾರರು ಬಹಳ ಸೂಕ್ಷ್ಮ ಸಂವೇದನೆ ಇರುವಂಥವರು ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ನಾಯಕರು ವಿಫಲರಾಗಿದ್ದಾರೆ ಎಂದು ಬಿಜೆಪಿಯ ಸಂಘಟನಾ ಹೊಣೆಗಾರಿಕೆಯಲ್ಲಿರುವ ಮತ್ತೊಬ್ಬ ಪದಾಧಿಕಾರಿ ವಿವರಿಸಿದರು.

ನಳಿನ್‌ ಕುಮಾರ್‌ ಕಟೀಲ್‌ಗೆ ಅವಧಿ ವಿಸ್ತರಣೆ ಸಿಕ್ಕಿತ್ತು; ಆದರೆ ಅರುಣ್‌ ಕುಮಾರ್‌ಗೇಕೆ ಸಿಗಲಿಲ್ಲ?

ಪಕ್ಷ ಸಂಘಟನೆಯಲ್ಲಿ ರಾಜ್ಯ ಅಧ್ಯಕ್ಷರ ಹೊಣೆಗಾರಿಕೆ ಮಹತ್ವದ್ದು. ನಳಿನ್‌ ಕುಮಾರ್‌ ಕಟೀಲ್‌ ಪಕ್ಷದ ರಾಜ್ಯ ಅಧ್ಯಕ್ಷರಾದ ಬಳಿಕ ಪಕ್ಷ ಸಂಘಟನೆ ಹಳ್ಳ ಹಿಡಿದಿತ್ತು. ಅವರ ಚಟುವಟಿಕೆಗಳೆಲ್ಲವೂ ಕರಾವಳಿ ಕೇಂದ್ರಿತವಾಗಿತ್ತು. ಉತ್ತರ ಕರ್ನಾಟಕದ ಭಾಗದಲ್ಲಿ ಅವರಿಗೆ ಪಕ್ಷದ ಮೇಲೆ ನಿಯಂತ್ರಣವೇ ಇರಲಿಲ್ಲ.

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ನಡವಳಿಕೆ ಗಮನಿಸಿ. ಕಳೆದ ಕೆಲವು ವರ್ಷಗಳಿಂದ ಅವರು ಪದೇಪದೆ ಬಹಿರಂಗವಾಗಿ ಪಕ್ಷಕ್ಕೆ ಮುಜುಗರವಾಗುವ ಹೇಳಿಕೆ ನೀಡುತ್ತ ಬಂದರು. ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಈ ಕುರಿತು ಕ್ರಮ ಜರುಗಿಸುವುದಾಗಿ ಹೇಳಿದರು. ನಳಿನ್‌ ಕುಮಾರ್‌ ಕಟೀಲ್‌ ಕೂಡ ನೋಟಿಸ್‌ ಕಳುಹಿಸಿರುವುದಾಗಿ ಹೇಳಿದರು. ಯತ್ನಾಳ್‌ ನನ್ನ ಮೇಲೆ ಕ್ರಮವೂ ಇಲ್ಲ, ನೋಟೀಸೂ ಇಲ್ಲ ಎಂದು ಹೇಳಿದರು.

ಈ ರೀತಿ ನಡವಳಿಕೆಗಳು ಜನರ ನಡುವೆ, ಕಾರ್ಯಕರ್ತರಿಗೆ ಯಾವ ಸಂದೇಶ ರವಾನಿಸುತ್ತವೆ? ಪಕ್ಷ ಸಂಘಟನೆ ಎಂದರೆ ತಳಮಟ್ಟದಲ್ಲಿ ಪಕ್ಷದ ಕಾರ್ಯವನ್ನು ಗಟ್ಟಿ ಮಾಡಬೇಕು. ಅದಕ್ಕೆ ಪೂರಕವಾಗಿ ನಾಯಕರ ವರ್ತನೆ ಇರಬೇಕು. ಆದರೆ ಈ ಸನ್ನಿವೇಶದಲ್ಲಿ ಅದು ಪಾಲನೆ ಆಯಿತಾ? ಇಲ್ಲ. ಇಂತಹ ಹಲವು ಉದಾಹರಣೆಗಳನ್ನು ನೀಡಬಹುದು ಎಂದು ಮಾಹಿತಿ ನೀಡಿದ ಮೊದಲನೇ ವ್ಯಕ್ತಿ ವಿವರಿಸುತ್ತ ಹೋದರು.

ಇನ್ನು ಪಕ್ಷ ಸಂಘಟನೆ ವಿಚಾರಕ್ಕೆ ಬಂದರೆ, ರಾಜ್ಯ ಅಧ್ಯಕ್ಷ ಅವಧಿ ನಳಿನ್‌ ಕುಮಾರ್‌ ಕಟೀಲ್‌ ಅವರದ್ದು ಕಳೆದ ವರ್ಷ ಆಗಸ್ಟ್‌ ಆಸುಪಾಸಿನಲ್ಲೇ ಮುಕ್ತಾಯವಾಗಿದೆ. ಆದರೆ ಚುನಾವಣೆಯ ಕಾರಣ ಅವರಿಗೆ ಅಧಿಕಾರದ ಅವಧಿ ವಿಸ್ತರಣೆ ಆಗಿತ್ತು. ಇದೇ ರೀತಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಡೆಯಿಂದ ನಿಯುಕ್ತರಾಗಿ ಕಾರ್ಯಕರ್ತರು ಮತ್ತು ನಾಯಕರ ಕೊಂಡಿಯಾಗಿ ಕೆಲಸ ಮಾಡುವ ರಾಜ್ಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌ ಅವಧಿ ಮೂರು ವರ್ಷಕ್ಕೆ ಸೀಮಿತಗೊಳಿಸಿದ್ದು ಯಾಕೆ? ಅವರ ಬಗ್ಗೆ ಆಕ್ಷೇಪಗಳಿತ್ತು ಎಂಬುದೇನೋ ಸರಿ. ನಳಿನ್‌ ಕುಮಾರ್‌ ಬಗ್ಗೆ ಆಕ್ಷೇಪ, ವಿರೋಧ ಇರಲಿಲ್ಲವೇ? ಎಂದು ಪ್ರಶ್ನಿಸುತ್ತ ಇನ್ನಷ್ಟು ಒಳಸುಳಿ ನೀಡಿದವರು ಆ ವ್ಯಕ್ತಿ.

ಅರುಣ್‌ ಕುಮಾರ್‌ ಅವರಿಗೆ ಪಕ್ಷ ಸಂಘಟನೆಯ ಸಂಪೂರ್ಣ ಹಿಡಿತ ಇತ್ತು. ಪಕ್ಷದ ಕಚೇರಿಯಿಂದ ಹಿಡಿದು ಕಾರ್ಯಕರ್ತರ ತನಕ ಅವರಿಗೊಂದು ಗೌರವ ಇತ್ತು. ಸಂಘಟನೆಯ ಕೆಲಸದಲ್ಲಿ ಒಂದು ಶಿಸ್ತನ್ನು ಅವರು ರೂಢಿಸಿಕೊಟ್ಟಿದ್ದರು. ಪ್ರಚಾರ ವಿಷಯ ಏನು? ಯಾವುದನ್ನು ಫೋಕಸ್‌ ಮಾಡಬೇಕು ಎಂಬಿತ್ಯಾದಿ ಮೊದಲೇ ಟಿಪ್ಪಣಿ ಮಾಡುತ್ತಿದ್ದರು. ಹಿಜಾಬ್‌ ವಿಷಯದಲ್ಲಿ ಪಕ್ಷದ ನಿಲವುನ್ನು ಸ್ಪಷ್ಟವಾಗಿ ನಿರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಸುದ್ದಿಗೋಷ್ಠಿ ನಡೆಸುವವರು ಬಿಟ್ಟು ಉಳಿದವರು ಯಾರೂ ವೇದಿಕೆ ಮೇಲೆ ಇರಬಾರದು. ಪಕ್ಷ ಯಾರನ್ನು ಲೈಮ್‌ಲೈಟಿಗೆ ತರಬೇಕು ಎಂದು ನಿರ್ಧರಿಸುತ್ತದೋ ಅದುವೇ ಪಾಲನೆ ಆಗಬೇಕು ಎಂಬ ಶಿಸ್ತು ಇತ್ತು. ಆ ಸಂದರ್ಭದಲ್ಲಿ ಎಂದೂ ಈಗಿನ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಸಹ ಸಂಚಾಲಕ ರಾಘವೇಂದ್ರ ಇವರಾರೂ ವೇದಿಕೆ ಮೇಲೆ ಇರುತ್ತಿರಲಿಲ್ಲ. ಈಗ ಹಾಗಿಲ್ಲ ಪರಿಸ್ಥಿತಿ. ಎಲ್ಲ ಸುದ್ದಿಗೋಷ್ಠಿಗಳಲ್ಲೂ ವೇದಿಕೆ ಮೇಲೆ ರಾರಾಜಿಸುತ್ತಾರೆ ಇವರು ಎಂದು ವಿವರಿಸಿದರು.

ಅರುಣ್‌ ಕುಮಾರ್‌ ಅವರಿಗೆ ಬಿಜೆಪಿ ಅಷ್ಟೇ ಅಲ್ಲ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಒಳಹೊರಗು ಗೊತ್ತಿತ್ತು. ಪ್ರತಿಯೊಬ್ಬ ನಾಯಕರ ದೃಷ್ಟಿಕೋನ, ವಿಚಾರಧಾರೆ ಎಲ್ಲವೂ ಅರ್ಥವಾಗುತ್ತಿತ್ತು. ಅವರು ಅನುಭವಿ ಸಂಘಟಕರಾಗಿದ್ದರು. ಆದರೆ ಅರುಣ್‌ ಕುಮಾರ್‌ ಅವರ ಅವಧಿ ಮುಗಿದ ಕಾರಣ ಅವರು ಮತ್ತೆ ಸಂಘದ ಕೆಲಸಕ್ಕೆ ವಾಪಸ್‌ ಹೋದರು. ಅವರ ಜಾಗಕ್ಕೆ ಬಂದ ರಾಜೇಶ್‌ ಜಿವಿ ಇನ್ನೂ ಯುವಕ. ಅನುಭವ ಕಡಿಮೆ ಇದೆ. ಕಮಾಂಡರ್‌ ಜಾಗದಲ್ಲಿ ಇರಬೇಕಾದವರಂತೆ ಅವರು ಇಲ್ಲ. ಪ್ರತಿಯೊಂದು ಹುದ್ದೆಗೂ ಅದರದ್ದೇ ಆದ ಕೆಲವು ಅಗತ್ಯಗಳು ಇರುತ್ತವೆ. ಅದಕ್ಕೆ ತಕ್ಕಂತೆ ವರ್ತಿಸಬೇಕಾದ್ದು ಅಗತ್ಯ ಕೂಡ. ರಾಜೇಶ್‌ ಜಿವಿಗೆ ಪಕ್ಷ ಸಂಘಟನೆ ಮೇಲೆ ಇನ್ನೂ ಹಿಡಿತ ಇಲ್ಲ. ಇದು ಎತ್ತು ಏರಿಗೆ ಎಳೆದರೆ ಎಮ್ಮೆ ನೀರಿಗೆ ಎಳೆಯಿತು ಎನ್ನುವಂತೆ ಪಕ್ಷದ ರಾಜ್ಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಮಾತಿಗೆ ನಾಯಕರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅರುಣ್‌ ಕುಮಾರ್‌ ಅವರಿಗೂ ಒಂದು ವರ್ಷ ಅವಧಿ ವಿಸ್ತರಣೆ ಕೊಡಿ ಎಂದು ಬಿಜೆಪಿ ರಾಜ್ಯ ಅಧ್ಯಕ್ಷರು ಕೇಳಿಕೊಂಡಿದ್ದರೆ ಆರೆಸ್ಸೆಸ್‌ ಬೇಡ ಎಂದು ಹೇಳುತ್ತಿರಲಿಲ್ಲ. ಆದರೆ ಹಾಗಾಗಲಿಲ್ಲ. ಅದರ ಪರಿಣಾಮವೇ ಈ ಚುನಾವಣೆಯ ಫಲಿತಾಂಶ ಎಂದು ಅವರು ವಿವರಿಸಿದರು.

ಕೇಂದ್ರಕ್ಕೆ ತಪ್ಪು ಮಾಹಿತಿ ಕೊಡುತ್ತಿರುವ ರಾಜ್ಯ ನಾಯಕರು

ಮೊನ್ನೆ ಮೊನ್ನೆ ರಾಷ್ಟ್ರಮಟ್ಟದಲ್ಲಿ ಸಂಘಟನೆಯ ಪ್ರಮುಖ ಜವಾಬ್ದಾರಿಯಲ್ಲಿರುವ ಬಿಎಲ್‌ ಸಂತೋಷ್‌ ಅವರ ಹೇಳಿಕೆ ಗಮನಿಸಿರಬಹುದು. 31000 ಬೂತ್‌ಗಳಲ್ಲಿ ನಮಗೆ ಹಿಡಿತ ಇದೆ. ಪಕ್ಷ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು ಅವರು. ಈ ಮಾಹಿತಿ ಕೊಟ್ಟವರು ತಳಮಟ್ಟದ ಪರಿಸ್ಥಿತಿ ಅರ್ಥಮಾಡಿಕೊಂಡಿಲ್ಲ. ಅವರು ಕೇಳಿದ ಕೂಡಲೇ ಕೊಡದೇ ಇದ್ದರೆ ತಮ್ಮ ಸ್ಥಾನಕ್ಕೆ ಕುತ್ತು ಬರುವುದು ಎಂದು ಆ ರೀತಿ ಮಾಡಿದ್ದರು.
ಬಿಎಲ್‌ ಸಂತೋಷ್‌ ಅವರ ಹೇಳಿಕೆ ಇಂದು ಟ್ರೋಲ್‌ ಆಗುತ್ತಿದೆ. ಅವರು ಪುನಃ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದು 12 ತಿಂಗಳಲ್ಲಿ ಪಕ್ಷ ಮತ್ತೆ ಚೇತರಿಸಲಿದೆ ಎಂದು ಫೇಸ್‌ಬುಕ್‌ ಪೋಸ್ಟ್‌ ಮಾಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ರಿಪೇರಿ ಕೆಲಸ ಶುರುವಾಗಲಿದೆ ಎಂಬುದರ ಸುಳಿವು ಇದು ಎಂದು ಇನ್ನೊಬ್ಬ ವ್ಯಕ್ತಿ ವಿವರಿಸಿದರು.

ಈ ರೀತಿ ತಪ್ಪು ಮಾಹಿತಿ ಕೊಡುವ ಕೆಲಸ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಆಗಿದೆ. ಅತಿಯಾದ ಆತ್ಮವಿಶ್ವಾಸ, ತಾವೇನು ಮಾಡಿದರೂ ನಡೆಯುತ್ತದೆ. ಕೇಂದ್ರ ನಾಯಕರಿಗೆ ಬೇಕಾದ್ದು ಪಕ್ಷಕ್ಕೆ ರಾಜ್ಯದಲ್ಲಿ ಅಧಿಕಾರ. ಅದು ಬಿಟ್ಟರೆ ಉಳಿದ ಸಣ್ಣಪುಟ್ಟ ವಿಚಾರದಲ್ಲಿ ಅವರೇನೂ ತಲೆಕೆಡಿಸುವುದಿಲ್ಲ. ಪ್ರಚಾರಕ್ಕೆ ಕರೆದರೆ ಹೇಗಿದ್ದರೂ ಕೇಂದ್ರ ಸಚಿವರು, ಇತರೆ ರಾಜ್ಯಗಳ ನಾಯಕರು ಸ್ಟಾರ್‌ ಕ್ಯಾಂಪೇನರ್‌ ಆಗಿ ಬರುತ್ತಾರೆ. ಪಕ್ಷವನ್ನು ಗೆಲ್ಲಿಸುತ್ತಾರೆ ಎಂಬ ಉಡಾಫೆಯ ಭಾವ ರಾಜ್ಯ ನಾಯಕರಲ್ಲಿತ್ತು. ಇದೆಲ್ಲವೂ ಪಕ್ಷಕ್ಕೆ ಮುಳುವಾಯಿತು ಎಂದು ನಿಟ್ಟುಸಿರುಬಿಟ್ಟರು ಆ ಪದಾಧಿಕಾರಿ.

ಸೋಷಿಯಲ್‌ ಮೀಡಿಯಾ ಬಿಟ್ಟರೆ ಉಳಿದ ಪ್ರಚಾರ ಕಡಿಮೆ

ಪ್ರಚಾರ ತಂತ್ರಗಾರಿಕೆಯೂ ಸಮರ್ಪಕವಾಗಿ ನಡೆಯಲಿಲ್ಲ. ಹಿಂದಿನ ಚುನಾವಣೆಗಳಂತೆ ಈ ಬಾರಿಯೂ ಸೋಷಿಯಲ್‌ ಮೀಡಿಯಾ ಪ್ರಚಾರಕ್ಕೆ ಹೆಚ್ಚಿನ ಖರ್ಚು ಮಾಡಿದರು. ಅದು ಪ್ರತಿಯೊಬ್ಬರ ಮತದಾರನ ಮೊಬೈಲ್‌ಗೆ ತಲುಪುವುದೆಂಬ ಭ್ರಮೆಯಲ್ಲಿದ್ದರು ಬಿಜೆಪಿ ನಾಯಕರು. ಆದರೆ ವಾಸ್ತವ ಹಾಗಿಲ್ಲ. ನಗರ ಪ್ರದೇಶದಲ್ಲಿ ಮೊಬೈಲ್‌ಗಳಲ್ಲಿ ಸೋಷಿಯಲ್‌ ಮೀಡಿಯಾಗಳಲ್ಲಿ ಜನ ಸಕ್ರಿಯರು. ಗ್ರಾಮೀಣ ಭಾಗದಲ್ಲಿ ಇಂದಿಗೂ ಪತ್ರಿಕೆ ಓದುವವರ ಸಂಖ್ಯೆ ಇದೆ. ಅವರನ್ನು ತಲುಪುವುದಕ್ಕೆ ಪತ್ರಿಕಾ ಜಾಹೀರಾತು ಪ್ರಚಾರ ಕಡಿಮೆ ಆಯಿತು ಎಂಬುದರ ಕಡೆಗೆ ಪಕ್ಷದಲ್ಲಿ ಮಾಧ್ಯಮ ವಿಭಾಗದ ಸಂಘಟನಾ ಹೊಣೆಗಾರಿಕೆ ಇರುವಂಥವರು ಹೆಸರು ಬಹಿರಂಗಪಡಿಸದಂತೆ ಕೋರಿ ವಿವರ ನೀಡಿದರು.

ರಾಜ್ಯದಲ್ಲಿ ಪಕ್ಷದ ಹೊಣೆಗಾರಿಕೆ ಹೊತ್ತವರು ಕರವಾಳಿ ಭಾಗದಲ್ಲೇ ಕೇಂದ್ರಿತವಾಗಿ ಉಳಿದ ಕಾರಣ ಪ್ರಚಾರದ ಮೇಲೂ ಹೊಡೆತ ಬಿತ್ತು. ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷ ಸಂಘಟನೆ ಸರಿಯಾಗಿ ನಡೆಯಲಿಲ್ಲ. ಸುಳ್ಳು ಸುದ್ದಿ ಪ್ರಸಾರವಾದಾಗ ಅದನ್ನು ಕೂಡಲೇ ತಡೆಯುವ ಕೆಲಸ ಆಗಲಿಲ್ಲ. ಈ ರೀತಿಯ ಹಲವು ವಿಚಾರಗಳು ಗಮನಸೆಳೆಯುತ್ತವೆ ಎಂದು ವಿವರಿಸಿದರು.

ಏನೇ ಇದ್ದರೂ, ಈಗ ಆತ್ಮಾವಲೋಕನ ಪರಾಮರ್ಶೆಯನ್ನು ಕಾಟಾಚಾರಕ್ಕೆ ಮಾಡದೇ ಕಠಿಣವಾಗಿ ಮಾಡಿದರೆ ಉತ್ತಮ. ಎಲ್ಲೆಲ್ಲಿ ಲೋಪ ಆಗಿದೆ ಎಂಬುದನ್ನು ಹದಿನೈದು ದಿನದೊಳಗೆ ಗುರುತಿಸಿ, ಅನರ್ಹರನ್ನು ಪದಚ್ಯುತಗೊಳಿಸಿ ಹೊಸ ತಂಡ ಕಟ್ಟಿಕೊಂಡು ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸದೇ ಹೋದರೆ ಮತ್ತೆ ಕೊರಗಬೇಕಾದೀತು ಎಂಬುದನ್ನು ಈ ವಿವರ ನೀಡಿದ ಇಬ್ಬರೂ ಪದಾಧಕಾರಿಗಳು ಆದ್ಯತೆ ನೀಡಿ ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ