logo
ಕನ್ನಡ ಸುದ್ದಿ  /  ಕರ್ನಾಟಕ  /  Will Yediyurappa Return: ಲೋಕಸಭೆ ಚುನಾವಣೆ 2024; ಮೋದಿ ಗೆಲ್ಲಿಸಲು ಬಿಎಸ್‌ ಯಡಿಯೂರಪ್ಪ ಕಣಕ್ಕೆ ಇಳೀತಾರಾ, ಏನಿದೆ ಪರಿಣತರ ಲೆಕ್ಕಾಚಾರ

Will Yediyurappa return: ಲೋಕಸಭೆ ಚುನಾವಣೆ 2024; ಮೋದಿ ಗೆಲ್ಲಿಸಲು ಬಿಎಸ್‌ ಯಡಿಯೂರಪ್ಪ ಕಣಕ್ಕೆ ಇಳೀತಾರಾ, ಏನಿದೆ ಪರಿಣತರ ಲೆಕ್ಕಾಚಾರ

HT Kannada Desk HT Kannada

May 16, 2023 07:30 AM IST

google News

ಬಿಎಸ್‌ ಯಡಿಯೂರಪ್ಪ (ಕಡತ ಚಿತ್ರ)

  • Will Yediyurappa return: ಲೋಕಸಭೆ ಚುನಾವಣೆ 2024 ಸಮೀಪದಲ್ಲಿದೆ. ಕೆಲವೇ ತಿಂಗಳಲ್ಲಿ ಈ ಚುನಾವಣೆ ಎದುರಾಗಲಿದ್ದು, ಬಿಜೆಪಿಯನ್ನು ಗೆಲ್ಲಿಸಲು, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ರಾಜ್ಯದಲ್ಲಿ ಬಿಎಸ್‌ ಯಡಿಯೂರಪ್ಪ ಕಣಕ್ಕೆ ಇಳಿಯಲೇ ಬೇಕು. ಅವರನ್ನು ಬಿಟ್ಟರೆ ಬಿಜೆಪಿಗೆ ಮತ್ತೊಂದು ಮುಖ ಇಲ್ಲ ಎಂಬುದು ಪರಿಣತರ ವಿಶ್ಲೇಷಣೆ.

ಬಿಎಸ್‌ ಯಡಿಯೂರಪ್ಪ (ಕಡತ ಚಿತ್ರ)
ಬಿಎಸ್‌ ಯಡಿಯೂರಪ್ಪ (ಕಡತ ಚಿತ್ರ) (ANI)

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಮುಗಿದಿದೆ. ಕಾಂಗ್ರೆಸ್‌ (Congress) ಪಕ್ಷಕ್ಕೆ ಭರ್ಜರಿ ಬಹುಮತವೂ ಸಿಕ್ಕಾಗಿದೆ. ಸರ್ಕಾರ ರಚನೆಯ ಕಸರತ್ತು ಈಗ ನಡೆಯುತ್ತಿದೆ. ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ, ಬಿಜೆಪಿ (BJP) ಯ ಪ್ರಭಾವಿ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ (BS Yediyurappa) ಅವರು ಹೇಳಿದ್ದು ಇಷ್ಟು - “ಬಿಜೆಪಿಗೆ ಗೆಲುವು ಮತ್ತು ಸೋಲು ಹೊಸದಲ್ಲ. ಈ ಹಿನ್ನಡೆಯಿಂದ ಅದು ಚೇತರಿಸಿಕೊಳ್ಳಲಿದೆ” ಎಂಬ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯೇ ಈಗ ರಾಜಕೀಯ ಚಾವಡಿಯಲ್ಲಿ ಬಹುಚರ್ಚಿತ ವಿಚಾರ.

ಬಿಎಸ್‌ ಯಡಿಯೂರಪ್ಪ ಅವರನ್ನು ಪಕ್ಷ ಮೂಲೆಗುಂಪು ಮಾಡಿರುವುದರ ಪರಿಣಾಮವೂ ಪಕ್ಷದ ಈ ಫಲಿತಾಂಶ ಇರಬಹುದು ಎಂದೂ ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಕೆಲವು ಮಠಾದೀಶರು ಈ ಕುರಿತು ಹೇಳಿಕೆಯನ್ನೂ ಕೊಟ್ಟಿರುವುದನ್ನು ಗಮನಿಸಿರಬಹುದು.

ಈಗಾಗಲೇ 80 ವರ್ಷ ಪೂರೈಸಿರುವ ಹಿರಿಯ ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಬೇಕು. ಅವರನ್ನು ಬಿಟ್ಟರೆ ಅಂತಹ ಪ್ರಭಾವಿ ವರ್ಚಸ್ಸುಇರುವಂತಹ ಬೇರಾವ ನಾಯಕರೂ ರಾಜ್ಯದಲ್ಲಿ ಬಿಜೆಪಿಯ ಮುಖವಾಗಿ ಕಾಣಿಸುತ್ತಿಲ್ಲ.

ಕಳೆದ ವರ್ಷ, ಯಡಿಯೂರಪ್ಪ ಅವರು ತಮ್ಮ ಕಿರಿಯ ಮಗ ಬಿ ವೈ ವಿಜಯೇಂದ್ರ (ಅವರು ಶಿಕಾರಿಪುರದಿಂದ ಗೆದ್ದಿದ್ದಾರೆ) ಗಾಗಿ ತಮ್ಮ ಕ್ಷೇತ್ರವಾದ ಶಿಕಾರಿಪುರವನ್ನು ಬಿಟ್ಟುಕೊಡುವುದಾಗಿ ಘೋಷಿಸಿದರು. ಚುನಾವಣೆಗೆ ಮುಂಚಿತವಾಗಿ, ಬಿಜೆಪಿಯು ತಮ್ಮ ತಪ್ಪನ್ನು ಅರಿತುಕೊಂಡಂತೆ ತೋರಿತ್ತು. ಪ್ರಚಾರದಲ್ಲಿ ಯಡಿಯೂರಪ್ಪನವರನ್ನು ತೊಡಗಿಸಲು ಪ್ರಯತ್ನಿಸಿತು. ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು.

ಪರಿಣತರು ಹೇಳುವುದೇನು?

“ಯಡಿಯೂರಪ್ಪ ತಮ್ಮ ವಯಸ್ಸಿನ ಕಾರಣ ಪ್ರಚಾರದಲ್ಲಿ ಹೆಚ್ಚು ಸಕ್ರಿಯರಾಗಿರಲಿಲ್ಲ. ಮಧ್ಯ ಕರ್ನಾಟಕ ಮತ್ತು ಹುಬ್ಬಳ್ಳಿ ಪ್ರದೇಶಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡರು. ಲಿಂಗಾಯತರು ಬೊಮ್ಮಾಯಿ ಅವರನ್ನು ಯಡಿಯೂರಪ್ಪ ಅವರಿಗೆ ಬದಲಿಯಾಗಿ ಕಾಣಲಿಲ್ಲ. ಇದಲ್ಲದೆ, ಬೊಮ್ಮಾಯಿ ಅವರು ಯಡಿಯೂರಪ್ಪ ಅವರಂತೆ ಲಿಂಗಾಯತರನ್ನು ಮೀರಿದ ಇಮೇಜ್‌ ಅನ್ನು ಹೊಂದಿರಲಿಲ್ಲ ”ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಎ ನಾರಾಯಣ ಅವರು ಹಿಂದುಸ್ತಾನ್ ಟೈಮ್ಸ್‌ಗೆ ತಿಳಿಸಿದರು.

ರಾಜಕೀಯ ವಿಶ್ಲೇಷಕ ಚಂಬಿ ಪುರಾಣಿಕ್ ಅವರು ಹೇಳುವ ಪ್ರಕಾರ, 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಬೇಕು ಎಂದಾದರೆ, ಯಡಿಯೂರಪ್ಪ ಅವರೇ ಇರಬೇಕು.

"ಅವರು ಬಿಜೆಪಿಗೆ ನಿಷ್ಠರು. ಏಕೆಂದರೆ ಅವರ ಇಬ್ಬರು ಪುತ್ರರಾದ ಬಿವೈ ವಿಜಯೇಂದ್ರ ಮತ್ತು ಬಿವೈ ರಾಘವೇಂದ್ರ ಅವರ ರಾಜಕೀಯ ಭವಿಷ್ಯವು ಪಕ್ಷದ ಹೈಕಮಾಂಡ್ ಕೈಯಲ್ಲಿದೆ" ಎಂದು ಪುರಾಣಿಕ್ ವಿವರಿಸಿದರು.

ಈ ಇಬ್ಬರ ವಿಶ್ಲೇಷಣೆ ಗಮನಿಸುವುದಾದರೆ, ಬಿಜೆಪಿ ನಾಯಕರು ಲೋಕಸಭೆ ಚುನಾವಣೆಯ ಗೆಲುವಿಗಾಗಿ ಬಿಎಸ್‌ ಯಡಿಯೂರಪ್ಪ ಅವರನ್ನು ಮತ್ತೆ ರಾಜ್ಯ ಪ್ರವಾಸಕ್ಕೆ ಒತ್ತಾಯಿಸಬಹುದಾ? ಅವರು ಅದಕ್ಕೆ ಒಪ್ಪಿಗೆ ಸೂಚಿಸಿ, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಕೆಲಸ ಮಾಡುವರೇ? ಎಂಬುದು ಸದ್ಯದ ಕುತೂಹಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ