Womens day2024: ಮಗಳೆಂಬ ಮಹಾಲಕ್ಷ್ಮಿ,ಮನೆಗೆ ಬಂದ ಮೂರು ವರ್ಷದ ಹರುಷ
Mar 06, 2024 09:09 PM IST
ಮಗಳೆಂಬ ಪ್ರೀತಿಯ ಖನಿ
- My Daughter ಅಪ್ಪಯ್ಯ ಎಂದು ಮಗಳು ಕರೆದರೆ ಅದೇನೋ ಖುಷಿ.. ಡಾ.ರಾಜಕುಮಾರ್ ಸುಧಾರಾಣಿ ಅವರ ನಿನ್ನಂತ ಅಪ್ಪ ಇಲ್ಲ ಹಾಡು ನೆನಪಾಗುತ್ತದೆ.
ಅದು 2021 ಮೇ 9. ಕೋವಿಡ್ ಉತ್ತುಂಗದಲ್ಲಿದ್ದ ದಿನಗಳು. ಭಾನುವಾರ ಮಧ್ಯಾಹ್ನ 12. ಒಮ್ಮೆ ತಪಾಸಣೆಗೆ ನಿಮ್ಮ ಪತ್ನಿ ಕರೆದುಕೊಂಡು ಬನ್ನಿ ಎಂದಿದ್ದರು ವೈದ್ಯರು. ಹೋದರೆ ಇಂದೇ ಹೆರಿಗೆ ಮಾಡಬೇಕಾಗುತ್ತದೆ ಅನ್ನಬೇಕೇ. ಪತ್ನಿಗೆ ಭಯ ಶುರುವಾಯಿತು. ಕರೆದುಕೊಂಡು ನಡೆಯಿರಿ ಎಂದಾಗ ಏನು ಹೇಳಬೇಕೋ ತೋಚಲಿಲ್ಲ. ಅರ್ಧ ಗಂಟೆಯಲ್ಲಿಯೇ ಪತ್ರಗಳಿಗೆ ಸಹಿ ಪ್ರಕ್ರಿಯೆಗಳನ್ನು ಮುಗಿಸಿದರು. ಭಯ ಪಡಬೇಡ. ಒಳ್ಳೆಯದೇ ಆಗುತ್ತದೆ ಎಂದು ಹೇಳಿದೆ. ಏನಾಗುತ್ತದೋ ಎನ್ನುವ ಯೋಚನೆಯಲ್ಲೇ ಅಲ್ಲೇ ಕುಳಿತೆ ಒಳಗೆ ಹೋಗಿ ಒಂದು ಗಂಟೆಯಾಗಿರಲಿಲ್ಲ. ಆಗಲೇ ಮಗು ಹಿಡಿದುಕೊಂಡು ನರ್ಸ್‌ಗಳು ಕೂಗಿಕೊಂಡರು. ಉಮೇಶಭಟ್ ಯಾರು. ಬನ್ನಿ. ನಿಮಗೆ ಮಗಳು ಹುಟ್ಟಿದ್ದಾಳೆ.
ಹತ್ತಿರ ಹೋಗಿ ನೋಡಿದರೆ ಮಗಳು ಕಣ್ಣು ಮುಚ್ಚಿಕೊಂಡು ನರ್ಸ್ ಕೈಗಳಲ್ಲಿ ಗಟ್ಟಿಯಾಗಿ ಮಲಗಿದ್ದಳು. ಬೆರಳು ಹಿಡಿದ ತಕ್ಷಣವೇ ಆಕೆಯೂ ಗಟ್ಟಿಯಾಗಿಯೇ ಹಿಡಿದುಕೊಂಡಳು. ಕೈ ಹಿಡಿದು ಮುತ್ತಿಟ್ಟೆ. ಪತ್ನಿಯನ್ನೂ ಕರೆದುಕೊಂಡು ಬಂದರು. ಮಗಳು ಹುಟ್ಟಿದ್ಧಾಳೆ. ಮಗ ಬೇಕಿತ್ತಾ ಎಂದು ಪತ್ನಿ ಕೇಳಿದಳು. ಬೇಸರ ಇಲ್ಲ ತಾನೆ ಎಂದು ನನ್ನತ್ತ ನೋಡಿದಳು. ನಾನೇಕೆ ಬೇಸರಗೊಳ್ಳಲಿ. ಮಗಳು ಬಂದದ್ದು ನನಗಂತೂ ಖುಷಿಯಾಗಿದೆ ಎಂದೆ. ಇಬ್ಬರನ್ನು ಆಸ್ಪತ್ರೆಯೊಳಗೆ ಕರೆದೊಯ್ದರು.
ನಮ್ಮ ಮದುವೆಯಾಗಿ ಹದಿನಾಲ್ಕು ವರ್ಷವಾಗಿತ್ತು. ಎರಡು ಬಾರಿ ಸಮಸ್ಯೆಯಾಗಿ ಮಗುವಿನ ಆಸೆ ಮಾತ್ರ ಹಾಗೆಯೇ ಇತ್ತು. ಅದೇನೋ ಬಾಗಲಕೋಟೆ/ ವಿಜಯಪುರದಲ್ಲಿ ಕೆಲಸ ಮಾಡಿ ಮೈಸೂರಿಗೆ ಮರಳಿದ ತಿಂಗಳಾಗಿತ್ತು. ಅದೂ ಗೌರಿ ಹಬ್ಬದ ದಿನವೇ ಮನೆಯವರಿಗೆ ಎರಡು ತಿಂಗಳು ಎನ್ನುವಾಗ ಖುಷಿಯಾಗಿತ್ತು. ಹಬ್ಬದ ದಿನವೇ ಈ ಸುದ್ದಿ ತಿಳಿದಿದ್ದರಿಂದ ಮನೆಯಲ್ಲಿ ಗೌರಿ ಬರುವಳೋ, ಗಣೇಶ ಬರುವನೋ ಎಂದು ಸಂತಸದಿಂದಲೇ ಚರ್ಚೆಯಾಗಿತ್ತು. ಆದರೆ ಕೊನೆಗೆ ಗೌರಿಯೇ ಬಂದಿದ್ದಳು. ನಮ್ಮ ತಮ್ಮನಿಗೆ ಮಗ ಇರುವುದರಿಂದ ಮಗಳಾಗಿ ಬಂದಳು ಎಂದು ಹೇಳಿದವರು ಅದೆಷ್ಟೋ. ಸಂತಸಕ್ಕೆ ಪಾರವೇ ಇರಲಿಲ್ಲ.
ತಡವಾಗಿ ಮಗು ಹುಟ್ಟುತ್ತಿದ್ದುದರಿಂದ ಅದೆಷ್ಟೋ ಸ್ನೇಹಿತರು ಆತ್ಮವಿಶ್ವಾಸ ತುಂಬಿದ್ದರು. ಪ್ರಜಾವಾಣಿಯ ಮಿತ್ರ ಕೆ.ನರಸಿಂಹಮೂರ್ತಿ, ಅವರ ಪತ್ನಿ ಶಿಲ್ಪಾ ಅವರಂತೂ ಬಳ್ಳಾರಿಯಿಂದಲೇ ನಿತ್ಯ ಪತ್ನಿ ಆರೋಗ್ಯ ವಿಚಾರಿಸೋರು. ಐದಾರು ಪುಸ್ತಕಗಳನ್ನು ತಂದುಕೊಟ್ಟಿದ್ದರು. ನಿಮಗೆ ಮಗಳು ಹುಟ್ಟುತ್ತಾಳೆ ಅಂದೇ ಹೇಳಿದ್ದರು.
ವಿಜಯವಾಣಿ ಪತ್ರಿಕೆಯ ಗೆಳೆಯ ಎ.ಆರ್.ರಘುರಾಂ ಅವರ ಪತ್ನಿ ವಾರುಣಿ ಅವರಂತೂ ಮನೆಗೆ ಬಂದು ಪತ್ನಿ ಅರ್ಚನಾ ಜತೆಗೆ ಮಾತನಾಡೋರು. ಗರ್ಭದಲ್ಲಿಯೇ ಮಗುವಿನ ಬೆಳವಣಿಗೆಗಳನ್ನ ಗಮನಿಸಿ ಮಗಳು ಬರ್ತಾಳೆ ನಿಮಗೆ ಎಂದು ಭವಿಷ್ಯ ನುಡಿದಿದ್ದರು. ನನ್ನ ಸಹೋದರಿಯರು, ನಾದಿನಿಯರು, ಅಮ್ಮ, ಅತ್ತೆ ಎಲ್ಲರಿಗೂ ಮಗಳೇ ಬರಲಿ ಎನ್ನುವ ಹಂಬಲವೂ ಇತ್ತು. ಅದರಂತೆ ಮಗಳೂ ಬಂದಿದ್ದಳು. ಇದಕ್ಕೂ ಹದಿನೈದು ದಿನ ನನ್ನ ಅಕ್ಕನ ಮಗನಿಗೂ ಮಗಳೇ ಹುಟ್ಟಿದ್ದಳು. ನನ್ನ ಮಗಳು ಹುಟ್ಟಿದ್ದ ಮೂರು ತಿಂಗಳ ನಂತರ ಅಕ್ಕನ ಮಗಳಿಗೆ ಮಗಳು ಹುಟ್ಟಿದ್ದಳು. ಇದರಿಂದ ನಮ್ಮ ಮನೆಯಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿಯೇ ಮೂವರು ಮಹಾಲಕ್ಷ್ಮಿಯರು ಬಂದಿದ್ದರು.
ಕೋವಿಡ್ ಮಿತಿ ಮೀರಿದ್ದ ಕಾಲದಲ್ಲಿ ಮಗಳು ಹುಟ್ಟಿದ್ದಳು. ಮಗಳೊಂದಿಗೆ ಕಾಲ ಕಳೆಯುವುದೇ ಖುಷಿ ಕ್ಷಣಗಳಾಗಿ ಹೋದವು. ದಿನ ಹೋಗುವುದೇ ಗೊತ್ತಾಗದ ರೀತಿ. ಆಕೆಯ ಅಳು. ನಗು, ಏನನ್ನಾದರೂ ಹೇಳಿದರೂ ಪ್ರತಿಕ್ರಿಯಿಸುವ ರೀತಿ ನಿಜಕ್ಕೂ ಮಕ್ಕಳೆಂದರೆ ಮಕ್ಕಳೇ ಅನ್ನಿಸುತ್ತಿತ್ತು.ಆಕೆಗೆ ಬಟ್ಟೆ, ಆಟದ ಸಾಮಾನು ತಂದು ಕೊಟ್ಟಾಗ ಅದರೊಂದಿಗೆ ಖುಷಿ ಹಂಚಿಕೊಳ್ಳುತ್ತಿದ್ದ ಪರಿಯೂ ನಮ್ಮೆಲ್ಲರ ಸಂತಸದ ಭಾಗವೇ ಆಗಿ ಹೋಗಿತ್ತು.
ಮಗಳು ಹುಟ್ಟಿ ಮೂರು ವರ್ಷವಾಗುತ್ತಾ ಬಂತು. ಆಕೆಯೊಂದಿಗೆ ಕಳೆದ ಕ್ಷಣಗಳು ಅದೆಷ್ಟೋ ವರ್ಷದ ಅನುಭವಗಳನ್ನು ಕೊಟ್ಟಿವೆ. ಮೊಬೈಲ್ ಕೊಟ್ಟರೆ ಖುಷಿ. ಐಸ್‌ಕ್ರೀಂ. ಬಲೂನು, ಚಾಕೊಲೇಟ್ ಕೊಡಿಸಿದರೆ ಅದೇ ಸ್ವರ್ಗ. ಪಾರ್ಕ್‌ಗೆ ಕರೆದುಕೊಂಡು ಹೋದರೆ ಮುತ್ತಿನ ಸುರಿಮಳೆ.
ಏಯ್ ಅಪ್ಪಯ್ಯಾ ತಿನ್ನು ಎಂದು ಬಾಯಿಗೆ ಇಟ್ಟು ತಿಂಡಿ ತಿನ್ನಿಸುವುದು, ಜ್ಯೂಸ್ ಅಂಗಡಿಗೆ ಕರೆಯೊಯ್ದಾಗ ಮೊದಲು ನೀನು ಕುಡಿ ಎಂದು ಸ್ಟ್ರಾ ನನ್ನ ಬಾಯಿಗೆ ಹಿಡಿಯುವುದು, ನಿಂತಾಗ, ಕುಳಿತಾಗ ಹುಷಾರು ಎನ್ನುವ ಮಾತು ಅದೆಷ್ಟೋ ಮಾತು ಹೆಣ್ಣು ಮಕ್ಕಳೆಂದರೆ ಅದೆಷ್ಟು ಕಾಳಜಿ ಮಾಡುತ್ತವೆ. ಅಪ್ಪನನ್ನು ಅದೆಷ್ಟು ಪ್ರೀತಿಸುತ್ತವೆ ಎನ್ನಿಸುತ್ತದೆ. ಟೀವಿಯಲ್ಲಿ ನಿನ್ನಂತ ಅಪ್ಪ ಇಲ್ಲ ಎಂದು ಡಾ.ರಾಜ್ ಕುಮಾರ್ ಅವರೊಂದಿಗೆ ಸುಧಾರಾಣಿ ಹಾಡುವ ಹಾಡು ಬಂದಾಗ ಮಗಳು ಖುಷಿಯಿಂದಲೇ ನೋಡಿ ಮುತ್ತಿಕ್ಕುತ್ತಾಳೆ. ಅಪ್ಪ ಐ ಲವ್ ಯು ಅಪ್ಪಾ ಎನ್ನುವ ಹಾಡು ಕೇಳಿದಾಗ ಆ ಪ್ರೀತಿಯ ಮಧುರ ಕ್ಷಣಗಳು ನೆನಪಾಗುತ್ತವೆ.
ಮಗಳಲ್ಲಿ ನಮ್ಮನನ್ನು ಕಾಣುತ್ತೇನೆ. ಅಮ್ಮನ ಅದೆಷ್ಟೇ ಗುಣಗಳು ಮಗಳಲ್ಲಿವೆ. ಮಗಳೆಂದರೆ ಮಹಾಲಕ್ಷಿಯೇ. ಮಗಳೆಂದರೆ ಪ್ರೀತಿಯ ಖನಿಯೇ.
ವಿಭಾಗ