logo
ಕನ್ನಡ ಸುದ್ದಿ  /  ಕರ್ನಾಟಕ  /  Yadagiri News: ಯಾದಗಿರಿ ಜಿಲ್ಲೆಯ 20 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ; ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

Yadagiri News: ಯಾದಗಿರಿ ಜಿಲ್ಲೆಯ 20 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ; ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

HT Kannada Desk HT Kannada

Jun 24, 2023 06:00 AM IST

google News

ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್‌‌ ಆರ್‌ ನೇತೃತ್ವದಲ್ಲಿ ಸಭೆ

    • Yadagiri DC Snehal R: ನೀರು ಸರಬರಾಜಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆ ಉದ್ಭವಿಸಿದ್ದಲ್ಲಿ ತಕ್ಷಣ ಆದ್ಯತೆ ಮೇಲೆ ದುರಸ್ತಿ ಕಾರ್ಯ ಕೈಗೊಂಡು ನೀರು ಸರಬರಾಜಿನಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು ಎಂದು‌ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಸೂಚಿಸಿದ್ದಾರೆ.
ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್‌‌ ಆರ್‌ ನೇತೃತ್ವದಲ್ಲಿ ಸಭೆ
ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್‌‌ ಆರ್‌ ನೇತೃತ್ವದಲ್ಲಿ ಸಭೆ

ಯಾದಗಿರಿ: ಮುಂಗಾರು ಮಳೆ ವಿಳಂಬದಿಂದಾಗಿ ಜಿಲ್ಲೆಯ ಯಾದಗಿರಿಯ 10, ಗುರುಮಿಠಕಲ್ 05, ಸುರಪುರ 04, ಹುಣಸಗಿ ತಾಲೂಕಿನ 01 ಸೇರಿದಂತೆ ಒಟ್ಟು 20 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅದರಲ್ಲಿ 18 ಗ್ರಾಮಗಳಲ್ಲಿ ಬೋರವೆಲ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲಾಗುತ್ತಿದೆ. ಇನ್ನುಳಿದ 2 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದೆಡೆ ನೀರಿನ ಸಮಸ್ಯೆ ಬಂದರೆ ತಕ್ಷಣ ಗಮನಕ್ಕೆ ತಂದು ಅದನ್ನು ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್‌‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಮುಂಜಾಗ್ರತೆ ವಹಿಸುವ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬೇಸಿಗೆ ಕಾಲದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಅದರಲ್ಲಿ 179 ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ ಮೇ ತಿಂಗಳ 16ರಿಂದ ಇಲ್ಲಿಯವರೆಗೆ ಸದರಿ ಕಾಮಗಾರಿಗಳಲ್ಲಿ 53 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಯೋಜನೆಯಲ್ಲಿ ಬಹುತೇಕ ಕೊಳವೆ ಬಾವಿಗಳ ಕಾಮಗಾರಿಗಳಾದ ಹೊಸ ಬೋರ್‌ವೆಲ್ ಕೊರೆಯುವುದು, ಫ್ಲಶಿಂಗ್, ಡೀಪೆನಿಂಗ್, ರೀ -ಡ್ರಿಲ್ಲಿಂಗ್ ಹಾಗೂ ಹ್ಯಾಂಡ್ ಪಂಪ್‌ಗಳ ಅಳವಡಿಸುವ ಮತ್ತು ರಿಪೇರಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿರುತ್ತದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ನೀರು ಸರಬರಾಜಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆ ಉದ್ಭವಿಸಿದ್ದಲ್ಲಿ ತಕ್ಷಣ ಆದ್ಯತೆ ಮೇಲೆ ದುರಸ್ತಿ ಕಾರ್ಯ ಕೈಗೊಂಡು ನೀರು ಸರಬರಾಜಿನಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು. ನಿಯಮಿತವಾಗಿ ಟ್ಯಾಂಕ್ ಪರಿಶೀಲನೆ ನಡೆಸಿ ನೀರು ಪೂರೈಕೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಸೂಕ್ಷ್ಮ ವಿಷಯ. ಮಳೆ ಬಂದು ಕುಡಿಯುವ ನೀರಿನ ಸಮಸ್ಯೆ ಬಗೆಹರಿದರೆ ಒಳ್ಳೆಯದು. ಇಲ್ಲವಾದರೆ ಅಧಿಕಾರಿಗಳು ದಿನದ 24 ಗಂಟೆಯೂ ಜಾಗೃತರಾಗಿದ್ದು ನೀರಿನ ಸಮಸ್ಯೆ ಬಗೆಹರಿಸಬೇಕು. ಇದಕ್ಕಾಗಿ ನಿಮಗೆ ಒದಗಿಸಿದ ಸವಲತ್ತುಗಳನ್ನು ಬಳಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಆಸ್ಪತ್ರೆಗಳಲ್ಲಿ ಕುಡಿಯುವ ನೀರು ಸರಬರಾಜು ಆಗುತ್ತಿದೆಯೇ ಎಂಬುದರ ಕುರಿತು ಎಲ್ಲಾ ತಹಶೀಲ್ದಾರರು ಹಾಗೂ ಇಓಗಳು ಖುದ್ದಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿ ಎಂದು ಸೂಚಿಸಿದರು. ಹೆರಿಗೆ ಆಸ್ಪತ್ರೆಗಳಲ್ಲಿ ಬಿಸಿ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಂಡು ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನಿಗಾ ವಹಿಸಿ ಎಂದರು.

ಜಿಲ್ಲೆಯಲ್ಲಿ ಮುಂಗಾರು ಮಳೆ ವಿಳಂಬ ಕಾರಣದಿಂದ ಗ್ರಾಮೀಣ ಮತ್ತು ನಗರದ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ, ಕಾಲಕಾಲಕ್ಕೆ ನೀರಿನ ಟ್ಯಾಂಕರ್‌ಗಳನ್ನು ಸ್ವಚ್ಛಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸ್ಚಚ್ಛಗೊಳಿಸದೆ ಇರುವ ಟ್ಯಾಂಕ್‌ಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ಜಾನುವಾರು ತೊಟ್ಟಿಗಳನ್ನೂ ಸಹ ಸ್ವಚ್ಛಗೊಳಿಸಿ, ಕುಡಿಯುವ ನೀರಿನ ಸಮಸ್ಯೆ ಕುರಿತು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಮಸ್ಯೆ ಉದ್ಭವಿಸಿದರೆ ಕೂಡಲೇ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಜಲಜೀವನ್‌ ಮಿಷನ್‌ ಮೂಲಕ ನೀರು ಒದಗಿಸಿದ ಗ್ರಾಮಗಳಲ್ಲಿ ಇಓ, ಇಂಜಿನಿಯರ್‌ಗಳು ತಪಾಸಣೆ ನಡೆಸಿ, ಪೈಪ್‌ ಲೈನ್‌ಗಳನ್ನು ಪರಿಶೀಲಿಸಿ ಸಮಸ್ಯೆಗಳಿದ್ದಲ್ಲಿ ಸರಿ ಪಡಿಸಬೇಕು. ಕಲುಷಿತ ನೀರು ಸೇವನೆ ಪ್ರಕರಣಗಳು ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ವರದಿ: ಎಸ್‌ಬಿ ರೆಡ್ಡಿ, ಕಲಬುರಗಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ