Republic Day Speech: ಗಣರಾಜ್ಯೋತ್ಸವಕ್ಕೆ ಸಿದ್ಧರಾಗುತ್ತಿರುವ ಶಾಲಾ ಮಕ್ಕಳಿಗಾಗಿ ಇಲ್ಲಿದೆ ಭಾಷಣ
Jan 13, 2024 05:01 PM IST
ಗಣರಾಜ್ಯೋತ್ಸವ (ಪ್ರಾತಿನಿಧಿಕ ಚಿತ್ರ)
- Republic Day Speech in Kannada: 75ನೇ ಗಣರಾಜ್ಯೋತ್ಸವ ದಿನದ ಅಂಗವಾಗಿ ಶಾಲೆಗಳಲ್ಲಿ ಭಾಷಣ ಸೇರಿದಂತೆ ವಿವಿಧ ಸ್ಫರ್ಧೆ-ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಶಾಲಾ ಮಕ್ಕಳಿಗಾಗಿ ಇಲ್ಲಿದೆ ಗಣರಾಜ್ಯೋತ್ಸವದ ಭಾಷಣ.
75ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲು ಭಾರತ ಸಜ್ಜಾಗುತ್ತಿದೆ. ಶಾಲಾ-ಕಾಲೇಜು, ಸರ್ಕಾರಿ-ಖಾಸಗಿ ಕಚೇರಿಗಳು ಸೇರಿದಂತೆ ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಶಾಲೆಗಳಲ್ಲಿ ಗಣತಂತ್ರ ದಿನದ ಅಂಗವಾಗಿ ಭಾಷಣ ಮಾಡಲಿರುವ ಮಕ್ಕಳಿಗಾಗಿ ನಾವೊಂದು ಪುಟ್ಟ ಭಾಷಣ ಸಿದ್ಧಪಡಿಸಿದ್ದೇವೆ. ಇಲ್ಲಿದೆ ಭಾಷಣ..
"ವೇದಿಕೆ ಮೇಲಿರುವ ಗಣ್ಯರೇ, ನನ್ನ ನೆಚ್ಚಿನ ಶಿಕ್ಷಕರೇ ಹಾಗೂ ಸಹಪಾಠಿಗಳೇ..
ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಇಂದು ನಾವು 75ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಯಂತೇ ಗಣರಾಜ್ಯೋತ್ಸವ ಕೂಡ ಬಹಳ ಪ್ರಮುಖ ರಾಷ್ಟ್ರೀಯ ಹಬ್ಬವಾಗಿದೆ. ಪ್ರತಿವರ್ಷ ಜನವರಿ 26 ರಂದು ಗಣತಂತ್ರ ದಿನ ಅಥವಾ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. ದೇಶದ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನವಿದು.
ಭಾರತವು ವಿಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನ ಹೊಂದಿದ ದೇಶ. ಪ್ರಜಾಪ್ರಭುತ್ವಕ್ಕೆ ಮತ್ತೊಂದು ಹೆಸರೇ ಭಾರತ ಎಂದೆನ್ನಬಹುದು. ಪ್ರಜೆಗಳಿಂದಲೇ, ಪ್ರಜೆಗಳಿಗಾಗಿಯೇ ಪ್ರಜೆಗಳಿಗೊಸ್ಕರವೇ ನಡಸುವ ಆಡಳಿತವೇ ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವ ಮತ್ತು ಜಾತ್ಯತೀತಯೆನ್ನು ಎತ್ತಿ ಹಿಡಿಯುತ್ತದೆ ನಮ್ಮ ಸಂವಿಧಾನ. ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರ್ಕಾರದ ಮೂರು ಮುಖ್ಯ ಅಂಗಗಳಾಗಿ ವಿಭಜಿಸುತ್ತದೆ. ಸರ್ಕಾರ ಮಾಡುವ ಪ್ರತಿಯೊಂದು ಕಾನೂನೂ ಸಂವಿಧಾನಕ್ಕೆ ಅನುಗುಣವಾಗಿರಬೇಕು.
ನಮಗೆಲ್ಲಾ ತಿಳಿದಿರುವಂತೆ, 1950ರ ಜನವರಿ 26ರಂದು ಭಾರತದ ಸಂವಿಧಾನ ಜಾರಿಗೆ ಬಂತು. ಭಾರತದ ಸಂವಿಧಾನ ರಚನೆಗಾಗಿ ಸ್ಥಾಪಿಸಲಾದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಭಾರತ ಸಂವಿಧಾನದ ಪಿತಾಮಹ ಎಂದೇ ಕರೆಯುತ್ತೇವೆ. ಏಕೆಂದರೆ, ದೇಶಕ್ಕೆ ವ್ಯವಸ್ಥಿತ ಹಾಗೂ ಅರ್ಥಪೂರ್ಣ ಸಂವಿಧಾನವನ್ನು ರಚಿಸಿ ಜಾರಿಗೆ ತರುವಲ್ಲಿ ಇವರ ಶ್ರಮ ಅಪಾರ. ಡಾ.ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದರು.
ದೇಶಕ್ಕೆ ಸಂವಿಧಾನದ ಅಗತ್ಯವೇನು? ಸಂವಿಧಾನ ಏಕೆ ಬೇಕು ಎಂಬುದನ್ನು ನೋಡೋಣ. ನಾವಿಕನಿಲ್ಲದ ಹಡಗು ಹೆಂಗೆ ಬೇಕೋ ಹಂಗೆ ಸಾಗುತ್ತದೆ, ಅದು ಮುಳುಗಬಹುದು ಕೂಡ. ಪ್ರತಿಯೊಂದಕ್ಕೂ ಒಂದು ನೀತಿ-ನಿಯಮ ಹಾಗೂ ಕಾನೂನು ಎಂಬ ಚೌಕಟ್ಟು ಇದ್ದರೆ, ಶಿಸ್ತು ಎಂಬುದು ಬರುತ್ತದೆ. ನಮ್ಮ ದೇಶದ ಅತ್ಯುನ್ನತ ಕಾನೂನೇ ಈ ಸಂವಿಧಾನ. ಸರ್ಕಾರದವರೇ ಆಗಿರಲಿ, ಎಷ್ಟೇ ದೊಡ್ಡ ಶ್ರೀಮಂತನಾಗಿರಲಿ, ಸಾಮಾನ್ಯ ಪ್ರಜೆಯಾಗಿರಲಿ ಯಾರೂ ಕೂಡ ಈ ಸಂವಿಧಾನವನ್ನು ಮೀರಿ ನಡೆಯುವಂತಿಲ್ಲ. ಸಂವಿಧಾನಕ್ಕಿಂತ ದೊಡ್ಡದು ಯಾವುದೂ ಇಲ್ಲ.
ಭಾರತದ ಮೂಲ ಸಂವಿಧಾನವನ್ನು ಕೈಬರಹದಲ್ಲಿ ಬರೆಯಲಾಗಿದೆ. ಇದನ್ನು ಭಾರತದ ರಾಜಧಾನಿ ನವದೆಹಲಿಯಲ್ಲಿರುವ ಸಂಸತ್ ಭವನದಲ್ಲಿ ಜೋಪನವಾಗಿ ಇಡಲಾಗಿದೆ. ಆರಂಭದಲ್ಲಿ, ಅಂದರೆ ಸಂವಿಧಾನ ರಚನೆಯಾಗಿ ಜಾರಿಗೆ ಬಂದಾಗ ಅದರಲ್ಲಿ 8 ಅನುಚ್ಛೇದಗಳು ಹಾಗೂ 22 ಭಾಗಗಳು ಹಾಗೂ 395 ವಿಧಿಗಳು ಇದ್ದವು. ಆ ಬಳಿಕ ಇಲ್ಲಿಯವರೆಗೆ ಒಟ್ಟು 105 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ಈಗ ಭಾರತ ಸಂವಿಧಾನದಲ್ಲಿ 12 ಅನುಚ್ಛೇದಗಳು ಹಾಗೂ 25 ಭಾಗಗಳು ಹಾಗೂ 470 ವಿಧಿಗಳಿವೆ.
ಭಾರತ ಸ್ವಾತಂತ್ರ್ಯ ಪಡೆದ ದಿನದಂದು, ದೇಶದ ಪ್ರಧಾನಮಂತ್ರಿಯು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುತ್ತಾರೆ. ಆದರೆ, ಗಣಾರಾಜ್ಯೋತ್ಸವದಂದು, ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ದೆಹಲಿಯ ರಾಜಪಥದಲ್ಲಿ ಧ್ವಜಾರೋಹಣ ನೆರವೇರಿಸುತ್ತಾರೆ. ಅದಕ್ಕೂ ಒಂದು ದಿನ ಮುಂಚಿತವಾಗಿ, ಅಂದರೆ ಜನವರಿ 25ರಂದು ರಾಷ್ಟ್ರಪತಿ ಭಾಷಣ ಮಾಡುತ್ತಾರೆ.
ಭಾರತದಲ್ಲಿ ಎಲ್ಲ ವರ್ಗದ ಜನರು ಸಮಾನವಾಗಿ ಶಿಕ್ಷಣ ಕಲಿಯುತ್ತಿರುವುದೇ ಸಂವಿಧಾನದಿಂದಾಗಿ. ಸಂವಿಧಾನ ಜಾರಿಗೆ ಬಂದ ಮೇಲೆ ಭಾರತದ ಪ್ರತಿಯೊಬ್ಬ ನಾಗರಿಕರಿಕನಿಗೂ ಮೂಲಭೂತ ಹಕ್ಕುಗಳು ಸಿಕ್ಕಿವೆ. ಸಂವಿಧಾನ ನಮಗೆ ನೀಡಿರುವ ಮೂಲಭೂತ ಹಕ್ಕುಗಳಂತೆಯೇ, ನಾವುಗಳು ಈ ದೇಶದ ಪ್ರಜೆಗಳಾಗಿ ಕರ್ತವ್ಯಗಳನ್ನು ಕೂಡಾ ಪಾಲಿಸಬೇಕಿದೆ. ಸಂವಿಧಾನದ ನಿಯಮಗಳನ್ನು ಉಲ್ಲಂಘಿಸದೇ ದೇಶಸೇವೆಗೆ ಸದಾ ಸಿದ್ಧರಿರಬೇಕಿದೆ.
ಜೈ ಹಿಂದ್.. ಜೈ ಭಾರತ ಮಾತೆ