ಬೈಕ್ ಕ್ರೇಜ್ ಇರೋರಿಗೆ ಇಲ್ಲಿದೆ ಖುಷಿ ಸುದ್ದಿ, 100 ರೂ. ನಲ್ಲಿ 100 ಕಿಮೀ ಓಡುತ್ತೆ ವಿಶ್ವದ ಮೊದಲ ಸಿಎನ್‌ಜಿ ಬೈಕ್, ಬೆಲೆ ಎಷ್ಟು?
Jul 02, 2024 05:51 PM IST
ಬೈಕ್ ಕ್ರೇಜ್ ಇರೋರಿಗೆ ಇಲ್ಲಿದೆ ಖುಷಿ ಸುದ್ದಿ, 100 ರೂ. ನಲ್ಲಿ 100 ಕಿ.ಮೀ ಓಡುತ್ತೆ ವಿಶ್ವದ ಮೊದಲ ಸಿಎನ್‌ಜಿ ಬೈಕ್, ಬೆಲೆ ಎಷ್ಟು?
- ವಿಶ್ವದ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ. ಬಜಾಜ್ ಸಿಎನ್‌ಜಿ ಬೈಕ್‌ನ ಹೊರತಾಗಿ, ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್ ಕೂಡ ಜುಲೈನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ಬಜಾಜ್ CNG ಬೈಕ್ ಮತ್ತು BMW ನ ಎಲೆಕ್ಟ್ರಿಕ್ ಸ್ಕೂಟರ್‌ಗೆ ಸಂಬಂಧಿಸಿದ ವಿವರವಾದ ಮಾಹಿತಿ ಇಲ್ಲಿದೆ. (ಬರಹ: ವಿನಯ್ ಭಟ್)
ನೀವು ಹೊಸ ಬೈಕ್ ಅಥವಾ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕು ಎಂದು ಯೋಚಿಸ್ತಿದ್ದರೆ , ಸ್ವಲ್ಪ ಸಮಯ ಕಾಯಿರಿ. ಏಕೆಂದರೆ ಕೆಲವೇ ದಿನಗಳಲ್ಲಿ ನಿಮಗಾಗಿ ಹೊಸ ಬೈಕ್ ಮತ್ತು ಹೊಸ ಎಲೆಕ್ಟ್ರಿಕ್ ಸ್ಕೂಟರ್ಗಳು ಬಿಡುಗಡೆಯಾಗಲಿವೆ. ಇಲ್ಲಿಯವರೆಗೆ ನೀವು ಸಿಎನ್‌ಜಿ ಪಂಪ್‌ನಲ್ಲಿ ಸಿಎನ್‌ಜಿಗಾಗಿ ಕಾರುಗಳು ಸರದಿ ಸಾಲಿನಲ್ಲಿ ನಿಂತಿರುವುದನ್ನು ನೋಡಿರಬಹುದು, ಆದರೆ ಈಗ ಆ ಸಮಯ ಬದಲಾಗಿದೆ.
ಸಿಎನ್‌ಜಿ ಪಂಪ್‌ನಲ್ಲಿ ಇತರೆ ವಾಹನಗಳ ಜೊತೆಗೆ ಸಿಎನ್‌ಜಿ ಬೈಕ್‌ಗಳು ಕೂಡ ಶೀಘ್ರದಲ್ಲಿ ನಿಂತಿರುವುದನ್ನು ನೀವು ನೋಡುತ್ತೀರಿ. ಬಜಾಜ್ ಸಿಎನ್‌ಜಿ ಬೈಕ್‌ನ ಹೊರತಾಗಿ, ಬಿಎಂಡಬ್ಲ್ಯುನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಭಾರತೀಯ ಮಾರುಕಟ್ಟೆಗೆ ಇದೇ ತಿಂಗಳು ಗ್ರ್ಯಾಂಡ್ ಎಂಟ್ರಿ ನೀಡಲಿದೆ.
ಬಜಾಜ್ CNG ಮೋಟಾರ್ ಸೈಕಲ್
ಬಜಾಜ್ ಇದೇ ತಿಂಗಳು ಜುಲೈ 5 ರಂದು ವಿಶ್ವದ ಮೊದಲ CNG ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆದಾಗ್ಯೂ, ಕಂಪನಿಯು ಈ ಬೈಕಿನ ಹೆಸರನ್ನು ಇನ್ನೂ ದೃಢಪಡಿಸಿಲ್ಲ. ಆದರೆ, ಕಂಪನಿಯು 100-150 ಸಿಸಿ ವಿಭಾಗದಲ್ಲಿ ಗ್ರಾಹಕರಿಗಾಗಿ ಈ ಬೈಕ್ ಅನ್ನು ಅನಾವರಣ ಮಾಡುವ ನಿರೀಕ್ಷೆಯಿದೆ. ಬಜಾಜ್ ಕಂಪನಿಯು ತನ್ನ CNG ಬೈಕ್‌ನಲ್ಲಿ ಡ್ಯುಯಲ್ ಇಂಧನ ಟ್ಯಾಂಕ್ (ಪೆಟ್ರೋಲ್ ಮತ್ತು CNG) ನೀಡುತ್ತಿದೆ. ಬೈಕ್‌ಗೆ ಒಂದೇ ಫ್ಲಾಟ್ ಸೀಟ್ ಅನ್ನು ಒದಗಿಸಿರುವುದು ಟೀಸರ್‌ಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ.
ಇದರ ಹೊರತಾಗಿ, ಬೈಕ್ ಚಾಲನೆಯ ವೆಚ್ಚವನ್ನು 50 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ, ನಿಮ್ಮ ಬೈಕ್ ಪ್ರಸ್ತುತ ಒಂದು ಲೀಟರ್ ಇಂಧನದಲ್ಲಿ 50 ಕಿಲೋಮೀಟರ್ ಮೈಲೇಜ್ ನೀಡುತ್ತಿದ್ದರೆ, 100 ಕಿಲೋಮೀಟರ್ ಓಡಲು 2 ಲೀಟರ್ ಪೆಟ್ರೋಲ್ ಬೇಕಾಗುತ್ತದೆ. ಇದೀಗ ಕಂಪನಿ ಹೇಳಿರುವ ಪ್ರಕಾರ, ಬಜಾಜ್ ಸಿಎನ್‌ಜಿ ಬೈಕ್ ಚಾಲನೆಯ ವೆಚ್ಚವು ಶೇಕಡಾ 50 ರಷ್ಟು ಕಡಿಮೆ ಮಾಡಲಿದೆ. ಅಂದರೆ ಈ ಬೈಕ್ ಅನ್ನು 100 ಕಿಲೋಮೀಟರ್ ಓಡಿಸಲು ನಿಮಗೆ ಕೇವಲ 100 ರೂ. ವೆಚ್ಚವಾಗುತ್ತದಷ್ಟೆ. ಇದರ ಬೆಲೆ 1 ಲಕ್ಷ ಎಂದು ಅಂದಾಜಿಸಲಾಗಿದೆ.
BMW CE 04 ಎಲೆಕ್ಟ್ರಿಕ್ ಸ್ಕೂಟರ್
ಬಿಎಮ್ಡಬ್ಲ್ಯೂ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಇದೇ ತಿಂಗಳು ಜುಲೈ 24 ರಂದು ಬಿಡುಗಡೆಯಾಗಲಿದೆ. ಇದೀಗ ಈ ಸ್ಕೂಟರ್‌ಗೆ ಸಂಬಂಧಿಸಿದ ಕೆಲವು ವಿವರಗಳನ್ನು ಬಹಿರಂಗಪಡಿಸಲಾಗಿದೆ.. ಈ ಸ್ಕೂಟರ್‌ನ ಗರಿಷ್ಠ ವೇಗವು 120kmph ಆಗಿರುತ್ತದೆ ಮತ್ತು 2.6 ಸೆಕೆಂಡುಗಳಲ್ಲಿ 0 ರಿಂದ 50 ಕಿ. ಮೀ ವೇಗದಲ್ಲಿ ಚಲಿಸುತ್ತದೆ.
ಅಷ್ಟೇ ಅಲ್ಲ, ಈ ಸ್ಕೂಟರ್ ಸಂಪೂರ್ಣ ಚಾರ್ಜ್ ಮಾಡಿದರೆ 129 ಕಿಲೋಮೀಟರ್‌ವರೆಗಿನ ಚಾಲನಾ ವ್ಯಾಪ್ತಿಯನ್ನು ಸಹ ನೀಡುತ್ತದೆ. ಚಾರ್ಜಿಂಗ್ ಸಮಯದ ಕುರಿತು ಮಾತನಾಡುತ್ತಾ, ಈ ಸ್ಕೂಟರ್‌ನ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಲು ಸರಿಸುಮಾರು 4 ಗಂಟೆ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ವೇಗದ ಚಾರ್ಜರ್ ಸಹಾಯದಿಂದ, 1 ಗಂಟೆ 40 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಇದರ ಬೆಲೆ ಅಂದಾಜು 10-13 ಲಕ್ಷ ಇರಬಹುದು.