Car Care Tips: ಮಳೆ ಎದುರಿಸಲು ನಿಮ್ಮ ಕಾರ್ ಎಷ್ಟರಮಟ್ಟಿಗೆ ಸಜ್ಜಾಗಿದೆ? ಇನ್ನೂ ರೆಡಿ ಆಗಿಲ್ಲ ಅಂದ್ರೆ ಇನ್ನು ತಡಮಾಡಬೇಡಿ
Jul 23, 2024 04:25 PM IST
ಮಳೆ ಎದುರಿಸಲು ನಿಮ್ಮ ಕಾರನ್ನು ಹೀಗೆ ಸಜ್ಜುಗೊಳಿಸಿ
- ಮಳೆಗಾಲದಲ್ಲಿ ಡ್ರೈವ್ ಹೋಗೋದು ಏನೋ ಒಂಥರಾ ಮಜಾ ನೀಡುತ್ತೆ. ಕಾರ್‌ನಲ್ಲಿ ಲಾಂಗ್ ಡ್ರೈವ್ ಹೋಗ್ತಾ ಇದ್ರೆ ಅದರ ಖುಷಿನೇ ಬೇರೆ. ಆದರೆ ಮಾನ್ಸೂನ್‌ನಲ್ಲಿ ನಿಮ್ಮ ಕಾರನ್ನು ನಿರ್ವಹಣೆ ಮಾಡುವುದು ಬಹಳ ಮುಖ್ಯ. ಡ್ರೈವಿಂಗ್ ಮಾಡುವ ಕೆಲವು ಅಂಶಗಳನ್ನು ತಪ್ಪದೇ ಗಮನಿಸಬೇಕು. ಮಳೆಗಾಲದಲ್ಲಿ ಕಾರು ಸೇಫಾಗಿ ಆಗಿ ಇರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೇ ಪಾಲಿಸಬೇಕು.
ಮಳೆಗಾಲದಲ್ಲಿ ಡ್ರೈವ್ ಹೋಗುವ ಮಜಾ ಅನುಭವಿಸಿದವರಿಗಷ್ಟೇ ಗೊತ್ತು. ಮಳೆಯಲ್ಲಿ ಡ್ರೈವ್ ಮಾಡೋದು ನಮಗೆ ಖುಷಿ ನೀಡಿದ್ರೂ ನಮ್ಮ ಕಾರು ಮಳೆಗಾಲಕ್ಕೆ ಸಿದ್ಧವಾಗಿದ್ಯ ಅಂತ ನೋಡೋದು ಕೂಡ ಬಹಳ ಮುಖ್ಯವಾಗುತ್ತದೆ. ಯಾಕೆಂದರೆ ಮಳೆಗಾಲದಲ್ಲಿ ಒದ್ದೆ ರೋಡುಗಳು, ಮಣ್ಣಿನ ಹಾದಿಗಳು, ನಿರಂತರ ಟ್ರಾಫಿಕ್ ಜಾಮ್ ಇಂತಹವು ಎದುರಾಗುತ್ತಲೇ ಇರುತ್ತವೆ. ನೀವು ಬೇಡವೆಂದರೂ ದಾರಿಯಲ್ಲಿ ಹೋಗುವಾದ ಇವು ಸಿಗದೇ ಇರುವುದಿಲ್ಲ. ಇದರಿಂದ ಮಳೆಗಾಲದಲ್ಲಿ ಕಾರಿನ ಸಂದುಗೊಂದಿಯಲ್ಲಿ ಮಣ್ಣು, ಕೆಸರು, ನೀರು ಸೇರಿಕೊಳ್ಳುತ್ತದೆ. ಕೊನೆಯಲ್ಲಿ ಇದು ತುಕ್ಕು ಹಿಡಿಯಲು ಕಾರಣವಾಗುತ್ತದೆ.
ಹಾಗಾದ್ರೆ ಮಳೆಗಾಲದಲ್ಲಿ ಕಾರನ್ನು ಸುರಕ್ಷಿತವಾಗಿಟ್ಟುಕೊಂಡು ಮಳೆಗಾಲದ ರೈಡ್ ಅನ್ನು ಎಂಜಾಯ್ ಮಾಡುವುದು ಹೇಗೆ ಎಂಬ ಪ್ರಶ್ನೆ ಕೇಳಿದ್ರೆ ಅದಕ್ಕಾಗಿ ಇಲ್ಲಿದೆ ಒಂದಿಷ್ಟು ಸಿದ್ಧ ಉತ್ತರ.
ಸ್ಪಷ್ಟವಾಗಿ ಗೋಚರವಾಗುವುದು
ಮಳೆಗಾಲದಲ್ಲಿ ಮಂಜು ಮುಸುಕಿದೆ ವಾತಾವರಣ ಇರುವ ಕಾರಣ ಪದೇ ಪದೇ ಗ್ಲಾಸ್‌ಗಳ ಮೇಲೆ ಮಂಜು ಆವರಿಸುತ್ತದೆ. ಇದರಿಂದ ಹೊರಗಡೆ ಗೋಚರಿಸುವುದು ಕಡಿಮೆಯಾಗುತ್ತದೆ. ಎದುರುಗಡೆ ಅಥವಾ ಅತ್ತಿತ್ತ ಸರಿಯಾಗಿ ಕಾಣಿಸದೇ ಇದ್ದರೆ ಅಪಾಯಕ್ಕೆ ಕಾರಣವಾಗಬಹುದು. ಹಾಗಾಗಿ ಕಾರಿನ ಹೆಡ್‌ಲೈಟ್‌ಗಳು ಹಾಗೂ ಟೈಲ್ ಲೈಟ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಗಮನಿಸಿ. ಮಳೆಗಾಲದಲ್ಲಿ ಗಮನಿಸಬೇಕಾದ ಕಾರಿನ ಇನ್ನೊಂದು ಅಂಶ ಎಂದರೆ ವೈಫರ್ ಬ್ಲೇಡ್‌ಗಳು. ಇವು ಸರಿಯಾಗಿ ಕೆಲಸ ಮಾಡದೇ ಇದ್ದರೆ ಅಪಾಯವನ್ನು ನೀವೇ ಮೈ ಮೇಲೆ ಎಳೆದುಕೊಂಡಂತೆ. ಹಾಗಾಗಿ ವೈಪರ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಬ್ರೇಕ್ ಅನ್ನು ಪರಿಶೀಲಿಸಿ
ಮಳೆಗಾಲದಲ್ಲಿ ರಸ್ತೆಗಳು ತೇವದಿಂದ ಕೂಡಿರುತ್ತವೆ, ಈ ಸಮಯದಲ್ಲಿ ಸ್ಕಿಡ್ ಆಗುವ ಅಪಾಯ ಹೆಚ್ಚು. ಮಾನ್ಸೂನ್‌ನಲ್ಲಿ ಇತರ ಋತುಗಳಿಗಿಂತ ಪರ್ಫೆಕ್ಟ್ ಆಗಿ ಕೆಲಸ ನಿರ್ವಹಿಸುವಂತೆ ಬ್ರೇಕ್ ಕೆಲಸ ಮಾಡಬೇಕು. ಮಳೆಗಾಲದಲ್ಲಿ ಹೊರಗಡೆ ಹೋಗುವಾಗ ಅದರಲ್ಲೂ ಲಾಂಗ್ ಡ್ರೈವ್ ಹೋಗುವ ಮುನ್ನ ಬ್ರೇಕ್ ಪ್ಯಾಡ್ ಪರಿಶೀಲನೆಯನ್ನು ತಪ್ಪದೇ ಮಾಡಿ. ಬ್ರೇಕ್ ಫ್ಲೂಯಿಡ್ ಬದಲಿಸಬೇಕು ಎನ್ನಿಸಿದರೆ ಬದಲಿಸಿಕೊಳ್ಳಿ.
ತುಕ್ಕು ಮುಕ್ತಗೊಳಿಸಿ
ಈ ಋತುವಿನಲ್ಲಿ ಮಳೆ ಅಥವಾ ಮಳೆನೀರಿನಿಂದ ರಸ್ತೆಗಳಿಂದಾಗಿ ನಿಮ್ಮ ಕಾರಿನ ಒಳಭಾಗ ಹಾಗೂ ಅಡಿಭಾಗವು ನೀರಿಗೆ ತೆರೆದುಕೊಳ್ಳುತ್ತದೆ. ಇದು ತುಕ್ಕು ರಚನೆಗೆ ಕಾರಣವಾಗುತ್ತದೆ. ಕೊನೆಯಲ್ಲಿ ಇದು ಕಾರಿನ ಬಾಡಿಗೆ ತುಂಬಾನೇ ಹಾನಿಯುಂಟು ಮಾಡುತ್ತದೆ. ಇದಕ್ಕಾಗಿ ನೀವು ಆಂಟಿ ರಸ್ಟ್ ಕೋಟಿಂಗ್ ಮಾಡಿಸಬಹುದು.
ಡೋರ್ ವೈಸರ್‌ಗಳನ್ನು ಬಳಸಿ
ಮಳೆಯಲ್ಲಿ ಡ್ರೈವ್ ಮಾಡುವಾಗ ಒಮ್ಮೊಮ್ಮೆ ಮಳೆನೀರು ಕ್ಯಾಬಿನ್‌ಗೆ ನುಗ್ಗುತ್ತದೆ. ಡೋರ್ ವೈಸರ್‌ಗಳನ್ನು ಹಾಕಿಸಿಕೊಳ್ಳುವುದರಿಂದ ನೀರು ತಾಕದಂತೆ ಮಾಡಲು ಸಾಧ್ಯವಾಗುತ್ತದೆ.
ಸ್ವಚ್ಛವಾಗಿಡಿ
ಕಾರ್‌ನ ಒಳಭಾಗ ಹಾಗೂ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ಗುರುತಿಸುವುದು ಮಾತ್ರವಲ್ಲ, ನಿಮ್ಮ ಕಾರಿನ ಹೊರಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಅದನ್ನು ಸ್ವಚ್ಛಗೊಳಿಸಲು ಮತ್ತು ಮಾಲಿನ್ಯಕಾರಕಗಳು ಮತ್ತು ಕೊಳಕುಗಳನ್ನು ತೊಡೆದುಹಾಕಲು ನೀವು ಮೈಕ್ರೋ-ಫೈಬರ್ ಬಟ್ಟೆಯನ್ನು ಬಳಸಬಹುದು. ವಿಂಡ್ ಷೀಲ್ಡ್ ಅನ್ನು ಸ್ವಚ್ಛಗೊಳಿಸಲು, ನೀವು ಕಾರ್ ಶಾಂಪೂವನ್ನು ಬಳಸಬಹುದು.
ಕ್ಯಾಬಿನ್ ಏರ್ ಫಿಲ್ಟರ್
ನಿಮ್ಮ ಕಾರಿನ ಕ್ಯಾಬಿನ್ ಫಿಲ್ಟರ್ ಧೂಳು ಮತ್ತು ಮಾಲಿನ್ಯಕಾರಕಗಳನ್ನು ನಿರ್ಬಂಧಿಸುತ್ತದೆ ಮತ್ತು ಕಾರಿನೊಳಗೆ ಉಸಿರಾಡಲು ನೀವು ಶುದ್ಧ ಗಾಳಿಯನ್ನು ಪಡೆಯುತ್ತೀರಿ ಎಂದು ಖಚಿತಪಡಿಸುತ್ತದೆ. ಇದು ಧೂಳಿನ ಕಣಗಳನ್ನು ಹಿಡಿದಿಟ್ಟುಕೊಳ್ಳಲು ಫೈಬರ್‌ನಿಂದ ಕೂಡಿದೆ ಮತ್ತು ದೀರ್ಘಾವಧಿಯ ಬಳಕೆಯ ನಂತರ, ಈ ಫಿಲ್ಟರ್ ಮುಚ್ಚಿಹೋಗಬಹುದು, ಹಾಗಾಗಿ ಕ್ಯಾಬಿನ್ ಏರ್ ಫಿಲ್ಟರ್ ಪರಿಶೀಲಿಸುವುದು ಹಾಗೂ ಅದನ್ನು ಬದಲಿಸುವುದು ಮುಖ್ಯವಾಗುತ್ತದೆ.
ಕಾರ್ ಏಸಿಯನ್ನು ಸೋಂಕು ರಹಿತಗೊಳಿಸಿ
ನಿಮ್ಮ ಕಾರಿನ ಏಸಿಯು ಕ್ಯಾಬಿನ್ ಪ್ರದೇಶದೊಳಗಿನ ಆರ್ದ್ರತೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ವಿಂಡ್‌ಶೀಲ್ಡ್-ಕಿಟಕಿಗಳಿಗೆ ಮಂಜು ಆವರಿಸುವುದನ್ನು ತಡೆಯುತ್ತದೆ. ಮಳೆಗಾಲದಲ್ಲಿ ಅತಿಯಾದ ತೇವಾಂಶವು ಹವಾನಿಯಂತ್ರಣ ವ್ಯವಸ್ಥೆಯೊಳಗೆ ಶಿಲೀಂಧ್ರದ ಬೆಳವಣಿಗೆಗೆ ಕಾರಣವಾಗಬಹುದು. ಅದು ಸಂಭವಿಸದಂತೆ ತಡೆಯಲು, ಎಸಿ ಸೋಂಕುನಿವಾರಕವನ್ನು ಬಳಸುವುದು ಒಳ್ಳೆಯದು. ಏಸಿ ನಾಳದ ಗಾಳಿಯ ಮಾರ್ಗವನ್ನು ಸ್ವಚ್ಛಗೊಳಿಸಲು, ಏಸಿ ಇವಪರೇಟರ್ ಕ್ಲೀನರ್ ಅನ್ನು ಬಳಸಬಹುದು.
ಕಾರ್‌ಗೆ ಕವರ್ ತೊಡಿಸಿ
ಮಳೆಗಾಲದಲ್ಲಿ ಕಾರನ್ನು ಹೊರಗಡೆ ಮೈದಾನದಲ್ಲಿ ನಿಲ್ಲಿಸುವಂತಿದ್ದರೆ ತಪ್ಪದೇ ಕಾರ್ ಕವರ್ ಬಳಸಿ. ಇದರಿಂದ ಕಾರಿನ ಹೊರ ಭಾಗ ಸೇರಿದಂತೆ ಸಂಪೂರ್ಣ ಕಾರಿನ ಹಾನಿಯನ್ನು ತಪ್ಪಿಸಬಹುದು.
ಬಾನೆಟ್ ಮತ್ತು ಬೂಟ್ ಅಡಿಯಲ್ಲಿ ಸ್ವಚ್ಛಗೊಳಿಸಿ
ನಿಮ್ಮ ಕಾರಿನ ಬೂಟ್ಲಿಡ್ ಮತ್ತು ಬಾನೆಟ್ ಅಡಿಯಲ್ಲಿ ಯಾವಾಗಲೂ ಸ್ವಚ್ಛಗೊಳಿಸಲು ಮರೆಯದಿರಿ. ಆಗಾಗ್ಗೆ, ಎಲೆಗಳು ಅವುಗಳ ಅಡಿಯಲ್ಲಿ ಸಿಲುಕಿಕೊಳ್ಳುತ್ತವೆ, ಇದು ನೀರಿನ ಒಳಚರಂಡಿ ಗಟರ್‌ಗಳನ್ನು ಮುಚ್ಚಿಹಾಕುತ್ತದೆ. ಎಲೆಗಳು ಬಾಗಿಲಿನ ಜಾಮ್‌ಗಳ ಒಳಗೆ ಸಿಲುಕಿಕೊಳ್ಳಬಹುದು. ಇದರಿಂದ ನೀರು ಒಳ ಬರಬಹುದು. ಹಾಗಾಗಿ ಇದನ್ನು ಸ್ವಚ್ಛ ಮಾಡುವುದು ಬಹಳ ಅವಶ್ಯ.