ಲಕ್ಸುರಿ ಕಾರು ಖರೀದಿಸುವ ಪ್ಲಾನ್ ಇದ್ಯಾ? ಜುಲೈನಲ್ಲಿ ಬಿಡುಗಡೆ ಆಗಲಿವೆ ಒಂದಲ್ಲ ಎರಡಲ್ಲ ಮೂರು ಹೊಸ ಕಾರುಗಳು
Jul 01, 2024 02:51 PM IST
ಲಕ್ಸುರಿ ಕಾರು ಖರೀದಿಸುವ ಪ್ಲಾನ್ ಇದ್ಯಾ? ಜುಲೈನಲ್ಲಿ ಬಿಡುಗಡೆ ಆಗಲಿವೆ ಒಂದಲ್ಲ ಎರಡಲ್ಲ ಮೂರು ಹೊಸ ಕಾರುಗಳು
- ಭಾರತದಲ್ಲಿ ಕಾರುಗಳ ಬಿಡುಗಡೆ ಟ್ರೆಂಡ್ ಮತ್ತೆ ಶುರುವಾಗಿದೆ. ಯಾವುದೇ ಹಬ್ಬಗಳು ಇರದಿದ್ದರೂ ಈ ಜುಲೈ ತಿಂಗಳಲ್ಲಿ ಬರೋಬ್ಬರಿ ಮೂರು ಐಷಾರಾಮಿ ಕಾರುಗಳು ಅನಾವರಣಗೊಳ್ಳಲಿದೆ. ಮರ್ಸಿಡಿಸ್, ಬಿಎಂಡಬ್ಲ್ಯು ಮತ್ತು ನಿಸ್ಸಾನ್ ಕಂಪನಿಗಳ ಕಾರುಗಳ ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ. (ಬರಹ: ವಿನಯ್ ಭಟ್)
ಹಬ್ಬದ ಸೀಸನ್ ಪ್ರಾರಂಭವಾಗಲು ಇನ್ನೂ ಸಮಯವಿದೆ, ಆದರೆ ಐಷಾರಾಮಿ ಕಾರು ತಯಾರಿಕಾ ಕಂಪನಿಗಳು ಜುಲೈನಿಂದಲೇ ಹಬ್ಬದ ಸೀಸನ್‌ಗಾಗಿ ತಯಾರಿ ಆರಂಭಿಸಿದಂತಿದೆ. ಈ ಅನುಕ್ರಮದಲ್ಲಿ ಮರ್ಸಿಡಿಸ್, ಬಿಎಂಡಬ್ಲ್ಯು ಮತ್ತು ನಿಸ್ಸಾನ್‌ನಂತಹ ಪ್ರಸಿದ್ಧ ಕಂಪನಿಗಳು ತಮ್ಮ ಹೊಸ ಐಷಾರಾಮಿ ವಾಹನಗಳನ್ನು ಜುಲೈನಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.
ಈ ಮೂರು ಕಂಪನಿಯ ದುಬಾರಿ ವಾಹನಗಳಲ್ಲಿ ಎರಡು ಸೆಡಾನ್ ಮತ್ತು ಒಂದು ಎಸ್‌ಯುವಿ ಇದೇ ಜುಲೈನಲ್ಲಿ ಅನಾವರಣಗೊಳ್ಳಲಿದೆ. ನೀವು ಐಷಾರಾಮಿ ಕಾರುಗಳನ್ನು ಇಷ್ಟಪಡುತ್ತಿದ್ದರೆ ಮತ್ತು ಹಬ್ಬದ ಸಮಯದಲ್ಲಿ ಅಥವಾ ಅದಕ್ಕಿಂತ ಮೊದಲು ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದರೆ ಈ ಮೂರು ಕಾರುಗಳ ವಿವರಗಳನ್ನು ಓದಲೇಬೇಕು.
ಮರ್ಸಿಡಿಸ್-Benz EV 'EQA'
ಇದೇ ಜುಲೈ 8 ರಂದು, ಮರ್ಸಿಡಿಸ್-Benz ತನ್ನ ಪ್ರವೇಶ ಮಟ್ಟದ EV 'EQA' ಅನ್ನು ಭಾರತಕ್ಕೆ ತರುತ್ತಿದೆ. ಇದು ಕಳೆದ ಆಗಸ್ಟ್‌ನಲ್ಲಿ ಜಾಗತಿಕವಾಗಿ ಬಿಡುಗಡೆಯಾದ EQA ಯ ಫೇಸ್‌ಲಿಫ್ಟ್ ಆಗಿದೆ. ಈ ಎಸ್‌ಯುವಿ ಭಾರತಕ್ಕೆ ಸಿಬಿಯು ಆಗಿ ಬರಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ EQA ಯ ನಾಲ್ಕು ರೂಪಾಂತರಗಳಿವೆ - EQA250, EQA 250+, EQA3004 ಮ್ಯಾಟಿಕ್ ಮತ್ತು EQA 3504 ಮ್ಯಾಟಿಕ್. 385 Nm ಟಾರ್ಕ್‌ನಲ್ಲಿ 188 bhp ಶಕ್ತಿಯು 250 ಮತ್ತು 250+ ನಲ್ಲಿ ಇದು ಲಭ್ಯವಿರುತ್ತದೆ. 390 Nm ನಲ್ಲಿ 225 bhp ಥ್ರಸ್ಟ್ ಅನ್ನು EQA 300 ರಲ್ಲಿ ನೀಡಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 560 ಕಿ.ಮೀ ಓಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಬಿಎಂಡಬ್ಲ್ಯು 5 ಸರಣಿ
ಉದ್ದವಾದ ವೀಲ್‌ಬೇಸ್‌ನೊಂದಿಗೆ ಬಿಎಂಡಬ್ಲ್ಯು 5 ಸಿರೀಸ್ ಬಿಡುಗಡೆ ಆಗಲಿದೆ. ಇದು ಜುಲೈ 24 ರಂದು ಭಾರತಕ್ಕೆ ಬರಲಿದೆ. ಈ ಹೊಸ ತಲೆಮಾರಿನ ವಾಹನವು ಭಾರತದಲ್ಲಿನ ಹಳೆಯ 5 ಸರಣಿಗೆ ಸೆಡ್ಡು ಹೊಡೆಯುವುದು ಮಾತ್ರವಲ್ಲದೆ 6ನೇ ಸರಣಿಯ GT ಗೆ ಸಹ ಸವಾಲೊಡ್ಡಲಿದೆ. 5157 ಎಂಎಂ ಉದ್ದ, 1900 ಎಂಎಂ ಅಗಲ ಮತ್ತು 1520 ಎಂಎಂ ಎತ್ತರದೊಂದಿಗೆ, ಇದು ಈ ವಿಭಾಗದಲ್ಲಿ ಅತಿದೊಡ್ಡ ಕಾರು ಆಗಿದೆ. ಈ ವರ್ಷ ಬರಲಿರುವ ಇ-ಕ್ಲಾಸ್ ಎಲ್‌ಡಬ್ಲ್ಯೂಬಿಗಿಂತಲೂ ದೊಡ್ಡದಾಗಿದೆ. ಭಾರತದಲ್ಲಿ ಇದರ ಬೆಲೆ 80 ಲಕ್ಷ ರೂ. ಗಿಂತ ಹೆಚ್ಚಾಗಿರುತ್ತದೆ. ಅದೇ ದಿನ BMW ಮಿನಿ ಕೂಪರ್ ಎಸ್ ಮತ್ತು ಮಿನಿ ಕಂಟ್ರಿಮ್ಯಾನ್ ಎಲೆಕ್ಟ್ರಿಕ್ ಕೂಡ ಬಿಡುಗಡೆ ಆಡಲಿದೆ.
ನಿಸ್ಸಾನ್ ಎಕ್ಸ್ ಟ್ರಯಲ್
ಅಪರೂಪಕ್ಕೆ ಒಂದೊಳ್ಳೆ ಕಾರನ್ನು ಅನಾವರಣ ಮಾಡುವ ನಿಸ್ಸಾನ್ ಕಂಪನಿ ಇದೀಗ ತನ್ನ ಎಕ್ಸ್ ಟ್ರಯಲ್ ಎಸ್‌ಯುವಿಯನ್ನು ಜುಲೈ 17 ರಂದು ಭಾರತಕ್ಕೆ ತರುತ್ತಿದೆ. CBU ಆಗಿ ಭಾರತಕ್ಕೆ ಬರಲಿರುವ ಈ ವಾಹನವು ಟೊಯೊಟಾ ಫಾರ್ಚುನರ್, ಸ್ಕೋಡಾ ಕೊಡಿಯಾಕ್ ಮತ್ತು ಜೀಪ್ ಮೆರಿಡಿಯನ್‌ಗಳೊಂದಿಗೆ ಸ್ಪರ್ಧಿಸಲಿದೆ. ಈ ಎಸ್‌ಯುವಿ 4680 mm ಉದ್ದ ಮತ್ತು 1725 mm ಎತ್ತರವನ್ನು ಹೊಂದಿರುತ್ತದೆ. 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ಇದರಲ್ಲಿ ಕಂಪನಿಯು ಹೈಬ್ರಿಡ್ ಆಯ್ಕೆಯನ್ನು ಸಹ ನೀಡಿದೆಯಂತೆ. ಇದಕ್ಕೆ 'ಇ ಪವರ್' ಎಂದು ಹೆಸರಿಸಲಾಗಿದೆ. 4-ವೀಲ್ ಡ್ರೈವ್ ಸೆಟಪ್ ಅನ್ನು ಇದರಲ್ಲಿ ನಿರೀಕ್ಷಿಸಬಹುದು. ಇದು ಬೋಸ್ ಸೌಂಡ್ ಸಿಸ್ಟಮ್ ಮತ್ತು ಅಡಾಸ್‌ನಂತಹ ತಂತ್ರಜ್ಞಾನವನ್ನು ಹೊಂದಿರುತ್ತದೆ. ನಿಸ್ಸಾನ್ ಭಾರತದಲ್ಲಿ ಇದರ ಬೆಲೆಯನ್ನು 40 ಲಕ್ಷದಿಂದ ಪ್ರಾರಂಭಿಸಬಹುದು.