logo
ಕನ್ನಡ ಸುದ್ದಿ  /  ಜೀವನಶೈಲಿ  /  Ayodhya Ram Mandir: ಕಣ್ಣು ಮಿಟುಕಿಸಿದ ಅಯೋಧ್ಯೆ ಬಾಲರಾಮ ; ಎಐ ಕರಾಮತ್ತು ಕಂಡು ಕೆಲವರಿಗೆ ಖುಷಿ, ಹಲವರಿಗೆ ಸಿಟ್ಟು

Ayodhya Ram Mandir: ಕಣ್ಣು ಮಿಟುಕಿಸಿದ ಅಯೋಧ್ಯೆ ಬಾಲರಾಮ ; ಎಐ ಕರಾಮತ್ತು ಕಂಡು ಕೆಲವರಿಗೆ ಖುಷಿ, ಹಲವರಿಗೆ ಸಿಟ್ಟು

Rakshitha Sowmya HT Kannada

Jan 24, 2024 12:17 PM IST

google News

ಎಐನಿಂದ ಸೃಷ್ಟಿಸಲಾದ ಅಯೋಧ್ಯೆ ಬಾಲರಾಮನ ವಿಡಿಯೋ ವೈರಲ್

  • Ayodhya Ram Mandir: ಅಯೋಧ್ಯೆ ಬಾಲ ರಾಮನ ಫೋಟೋ, ವಿಡಿಯೋಗಳು ವೈರಲ್‌ ಆಗುತ್ತಿದ್ದಂತೆ ಕೆಲವರು ಅದನ್ನು ಎಐ ಮೂಲಕ ಎಡಿಟ್‌ ಮಾಡುತ್ತಿದ್ದಾರೆ. ಬಾಲರಾಮ ಕಣ್ಣು ಮಿಟುಕಿಸುವಂತೆ ಎಡಿಟ್‌ ಮಾಡಲಾದ ಹೊಸ ವಿಡಿಯೋ ಬಹಳ ವೈರಲ್‌ ಆಗುತ್ತಿದೆ. 

ಎಐನಿಂದ ಸೃಷ್ಟಿಸಲಾದ ಅಯೋಧ್ಯೆ ಬಾಲರಾಮನ ವಿಡಿಯೋ ವೈರಲ್
ಎಐನಿಂದ ಸೃಷ್ಟಿಸಲಾದ ಅಯೋಧ್ಯೆ ಬಾಲರಾಮನ ವಿಡಿಯೋ ವೈರಲ್ (PC: @happymi_)

Ayodhya Ram Mandir: ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ, ಮುಂದೆ ನಿಂತು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ, ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯವನ್ನು ನೆರವೇರಿಸಿದ್ದಾರೆ. ವಿದೇಶಿ ಗಣ್ಯರು, ಬಾಲಿವುಡ್‌ ಸೆಲೆಬ್ರಿಟಿಗಳು, ಕ್ರೀಡೆ, ಉದ್ಯಮ, ಧಾರ್ಮಿಕ ಸೇರಿದಂತೆ ಎಲ್ಲಾ ಕ್ಷೇತ್ರದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಾಲರಾಮನನ್ನು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ.

ಬಾಲ ರಾಮನ ಹೊಸ ವಿಡಿಯೋ ವೈರಲ್

ಬಾಲರಾಮನ ಮೂರ್ತಿ ಅನಾವರಣಗೊಳ್ಳುತ್ತಿದ್ದಂತೆ ಯಾರ ಸೋಷಿಯಲ್‌ ಮೀಡಿಯಾದಲ್ಲಿ ನೋಡಿದರೂ ಬಾಲರಾಮನ ಫೋಟೋ, ಯಾರ ವಾಟ್ಸಾಪ್‌ ಸ್ಟೇಟಸ್‌ ನೋಡಿದರೂ ರಾಮಲಲ್ಲಾನ ಫೋಟೋ, ವಿಡಿಯೋಗಳೇ ಕಾಣಸಿಗುತ್ತಿದೆ. ಬಾಲರಾಮನ ಸುಂದರ ಮೊಗವನ್ನು ನೋಡಿ ಜನರು ಪುಳಕಿತರಾಗಿದ್ದಾರೆ. ಆ ನಗುಮೊಗ, ಆಕರ್ಷಕ ಕಣ್ಣುಗಳನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಾಲರಾಮನ ಸುಂದರ ವಿಗ್ರಹವನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ವೈರಲ್‌ ಆಗುತ್ತಿರುವ ಬಾಲರಾಮನ ವಿಡಿಯೋವೊಂದು ಭಾರೀ ಗಮನ ಸೆಳೆಯುತ್ತಿದೆ. ಈ ವಿಡಿಯೋ ನೋಡಿ ಕೆಲವರು ಸಂತೋಷ ವ್ಯಕಪಡಿಸಿದರೆ, ಇನ್ನೂ ಕೆಲವರು ಕೋಪಗೊಂಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂತದ್ದು ಏನಿದೆ ಅಂತೀರಾ? ಬಾಲ ರಾಮ ಕಣ್ಣು ಮಿಟುಕಿಸಿದ್ದಾನೆ.‌

ಕಣ್ಣು ಮಿಟುಕಿಸಿದ ಬಾಲ ರಾಮ

ಬಾಲರಾಮನ ವಿಗ್ರಹಕ್ಕೆ ಜೀವ ಬಂದುಬಿಟ್ಟಿತೇನೋ ಎನ್ನುವಷ್ಟರ ಮಟ್ಟಿಗೆ ಈ ವಿಡಿಯೋವನ್ನು ಸೃಷ್ಟಿಸಲಾಗಿದೆ. ಅಂದ ಹಾಗೆ ಇದು ಎಐ ಕರಾಮತ್ತು. ಕಳೆದ 2 ದಿನಗಳಿಂದ ಈ ವಿಡಿಯೋ ವೈರಲ್‌ ಆಗುತ್ತಿದೆ. ಇಂತದ್ದೇ ಅನೇಕ ವಿಡಿಯೋಗಳು ಮೊದಲು ವೈರಲ್‌ ಆಗಿವೆ. ಈಗ ಅಯೋಧ್ಯೆ ಬಾಲರಾಮನ ಸರದಿ. 51 ಇಂಚು ಎತ್ತರದ ಬಾಲರಾಮ ಎಐ ತಂತ್ರಜ್ಞಾನದ ಮೂಲಕ ಕಣ್ಣು ಮಿಟುಕಿಸುವಂತೆ, ಸ್ಮೈಲ್‌ ಮಾಡುವಂತೆ, ಆ ಕಡೆ ಈ ಕಡೆ ಕತ್ತು ತಿರುಗಿಸುವಂತೆ ವಿಡಿಯೋ ಸೃಷ್ಟಿಸಲಾಗಿದೆ. ಒಂದು ದಿನದಲ್ಲೇ ಈ ವಿಡಿಯೋ ಬಹಳ ವೈರಲ್‌ ಆಗಿದೆ. ಎಲ್ಲರೂ ತಮ್ಮ ತಮ್ಮ ಸೋಷಿಯಲ್‌ ಮೀಡಿಯಾ ಸ್ಟೇಟಸ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಕೆಲವರಿಗೆ ಖುಷಿ, ಹಲವರಿಗೆ ಸಿಟ್ಟು

ಈ ವಿಡಿಯೋ ನೋಡಿ ಕೆಲವರು ಸಂತೋಷಗೊಂಡರೆ, ಸಾಕ್ಷಾತ್‌ ರಾಮನನ್ನು ನೋಡಿದಂತೆ ಖುಷಿ ಪಟ್ಟರೆ ಇನ್ನೂ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಹೃದಯದ ಬಡಿತ ಜೋರಾಗುತ್ತಿದೆ. ಸಾಕ್ಷಾತ್‌ ಬಾಲರಾಮನೇ ಎದ್ದು ಬಂದು ನಿಂತಂತೆ ಇದೆ. ಈ ವಿಡಿಯೋ ಸೃಷ್ಟಿಸಿದವರಿಗೆ ಕೋಟಿ ವಂದನೆಗಳು ಎಂದು ಕೆಲವರು ಈ ವಿಡಿಯೋಗೆ ಕಾಮೆಂಟ್‌ ಮಾಡಿದರೆ, ಇನ್ನೂ ಕೆಲವರು ಕೋಟ್ಯಂತರ ಭಾರತೀಯರು ಆರಾಧಿಸುವ ಬಾಲರಾಮನ ಫೋಟೋವನ್ನಾಗಲೀ, ವಿಡಿಯೋವನ್ನಾಗಲೀ ಈ ರೀತಿ ಎಐ ಮೂಲಕ ಬದಲಿಸುವುದು ಸರಿಯಲ್ಲ. ಶ್ರೀರಾಮನಿಗೆ, ಆತನ ಭಕ್ತರ ಭಾವನೆಗಳಿಗೆ ಧಕ್ಕೆ ತರಬೇಡಿ ಎಂದು ಕೆಲವರು ಮನವಿ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ