Ragi mudde GI Tag: ರಾಗಿ ಮುದ್ದೆಗೆ ಜಿಐ ಮಾನ್ಯತೆ: ಅರ್ಜಿ ಸಲ್ಲಿಸಲು ಮುಂದಾದ ಬೆಂಗಳೂರು ಸಂಘಟನೆ
Jan 17, 2024 02:53 PM IST
ರಾಗಿ ಮುದ್ದೆಗೆ ಜಿಐ ಟ್ಯಾಗ್ ಪಡೆಯುವ ಪ್ರಯತ್ನ ಶುರುವಾಗಿದೆ.
- Karnataka food ಕರ್ನಾಟಕದಲ್ಲಿ ಹೆಚ್ಚಿನ ಜನ ಬಳಸುವ ಮುದ್ದೆಗೆ ಭೌಗೋಳಿಕ ಸೂಚ್ಯಂಕ ಮಾನ್ಯತೆ( GI Tag) ಪಡೆಯುವ ಪ್ರಯತ್ನವನ್ನು ಬೆಂಗಳೂರಿನ ಸಂಘಟನೆಯನ್ನು ಆರಂಭಿಸಿದೆ.
ಬೆಂಗಳೂರು: ಕರ್ನಾಟಕದ ಪುರಾತನ ಹಾಗೂ ಹೆಮ್ಮೆಯ ಆಹಾರ ರಾಗಿಮುದ್ದೆಗೆ ಭೌಗೋಳಿಕ ಸೂಚ್ಯಂಕ ಮಾನ್ಯತೆ( GI Tag) ಪಡೆಯುವ ಪ್ರಕ್ರಿಯೆ ಶುರುವಾಗಿದೆ. ಹಲವಾರು ವರ್ಷಗಳಿಂದ ರಾಗಿಮುದ್ದೆ ಲಕ್ಷಾಂತರ ಕುಟುಂಬಗಳ ನಿತ್ಯದ ಆಹಾರವೂ ಹೌದು. ಪ್ರತಿನಿತ್ಯ ಮುದ್ದೆ ಇಲ್ಲದೇ ಊಟವೇ ಇಲ್ಲದ ಕುಟುಂಬಗಳೂ ಸಾಕಷ್ಟಿವೆ. ಅದರಲ್ಲೂ ಹಳೆ ಮೈಸೂರು ಭಾಗದ ಬಹುತೇಕ ಗ್ರಾಮಗಳಲ್ಲಿ ಮುದ್ದೆ ಬಳಕೆ ಕಡ್ಡಾಯ ಎನ್ನುವ ವಾತಾವರಣ ಈಗಲೂ ಇದೆ. ತಮಿಳುನಾಡಿನ ಕೆಲವು ಭಾಗದಲ್ಲಿ ಮುದ್ದೆ ಬಳಕೆಯಿದೆ. ಇಂತಹ ಮುದ್ದೆ ಜಾಗತಿಕ ಮಟ್ಟದಲ್ಲೂ ಮಾನ್ಯತೆ ಪಡೆದುಕೊಳ‍್ಳಬೇಕು ಎನ್ನುವ ಉದ್ದೇಶದಿಂದ ಬೆಂಗಳೂರಿನ ಸಂಸ್ಥೆ ಇದಕ್ಕೆ ಮುಂದಾಗಿದೆ.
ಒಕ್ಕಲಿಗರ ಸಂಘದ ಅಡಿಯಲ್ಲಿ ಕೆಲಸಮಾಡುತ್ತಿರುವ ಫಸ್ಟ್ ಸರ್ಕಲ್ ಸೊಸೈಟಿ( FCS) ಸಂಘಟನೆಯು ಈಗಾಗಲೇ ರಾಗಿ ಮುದ್ದೆ ಜಿಐ ಟ್ಯಾಗ್ ಪಡೆಯುವ ನಿಟ್ಟಿನಲ್ಲಿ ಅರ್ಜಿ ಸ್ವೀಕರಿಸಿ ಪ್ರಕ್ರಿಯೆ ಆರಂಭಿಸಿದೆ.
ಹೆಚ್ಚು ಜನರ ಬಳಕೆ
ಒಕ್ಕಲಿಗ ಸಮುದಾಯದ ವ್ಯಾಪಾರ ಸಂಘಟನೆಯಾದ ಎಫ್‌ಸಿಎಸ್ ರಾಗಿ ಜತೆಗೆ ಇತರೆ ಸಿರಿಧಾನ್ಯಗಳಿಗೂ ಜಿಐ ಟ್ಯಾಗ್ ಪಡೆಯುವ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಸಿರಿಧಾನ್ಯಗಳ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ರಾಗಿ ಹಾಗೂ ರಾಗಿ ಮುದ್ದೆಯನ್ನು ಹೆಚ್ಚು ಬಳಸುತ್ತಿವುದರಿಂದ ಇದರ ಜಿಐ ಟ್ಯಾಗ್ ಪಡೆಯುವುದು ರಾಗಿಮುದ್ದೆ ಇನ್ನಷ್ಟು ಜನ ಬಳಸಲು ಸಹಾಯಕವಾಗಲಿದೆ ಎನ್ನುವುದು ಸಂಘಟನೆ ವಿವರಣೆ.
ಈಗಾಗಲೇ ನಾವು ಅರ್ಜಿ ಪಡೆದಿದ್ದೇವೆ. ರಾಗಿ ಹಾಗೂ ರಾಗಿ ಮುದ್ದೆ ಮಹತ್ವ, ಅದರ ಇತಿಹಾಸ, ಬಳಸುವವರ ಪ್ರಮಾಣ, ಪ್ರದೇಶ, ರಾಗಿ ಮುದ್ದೆಗೆ ಇರುವ ಪೌಷ್ಠಿಕಾಂಶದ ಮಹತ್ವವನ್ನು ನಾವು ತಿಳಿಸುತ್ತೇವೆ. ಇದಕ್ಕಾಗಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ. ನಿಗದಿತ ಅರ್ಜಿ ನಮೂನೆಯನ್ನು ಸಲ್ಲಿಸುತ್ತೇವೆ ಎನ್ನುವುದು ಎಫ್‌ಸಿಎಸ್ ಅಧ್ಯಕ್ಷ ನಂದೀಶ್ ರಾಜೇಗೌಡ ಅಭಿಪ್ರಾಯ.
ಜಿಐ ಮಾನ್ಯತೆಯನ್ನು ಜಿಯಾಗ್ರಾಫಿಕಲ್ ಇಂಡಿಕೇಷನ್ಸ್ ರಿಜಿಸ್ಟ್ರಿ ನೀಡಲಿದೆ. ಇದಕ್ಕೆ ಬೇಕಾದ ಸೂಕ್ತ ಮಾಹಿತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಜನರ ಅಭಿಪ್ರಾಯ ಪಡೆದು ಮಾನ್ಯತೆ ನೀಡಲಿದೆ.
ಎಚ್.ಡಿ.ದೇವೇಗೌಡ ಅವರು ಭಾರತದ ಪ್ರಧಾನಿಯಾಗಿದ್ದಾಗ ಅವರು ನಿತ್ಯ ರಾಗಿಮುದ್ದೆ ಬಳಸುತ್ತಿದ್ದರು. ಬೆಂಗಳೂರಿನಿಂದಲೇ ಮುದ್ದೆ ಹೋಗುತಿತ್ತು. ಅವರ ಕಾರಣದಿಂದಲೂ ರಾಗಿಮುದ್ದೆ ಹೆಚ್ಚು ಜನಪ್ರಿಯವೂ ಆಗಿದೆ.
ಒಕ್ಕಲಿಗ ಸಮುದಾಯದ ಯುವಕರು ಈಗ ರಾಗಿಮುದ್ದೆ ಬದಲು ಪಿಜ್ಜಾ, ಬರ್ಗರ್‌ಗಳು, ವಿದೇಶಿ ಆಹಾರಕ್ಕೆ ಆಕರ್ಷಣೆಯಾಗುತ್ತಿದ್ದಾರೆ. ಇದನ್ನು ತಡೆದು ಅವರೂ ರಾಗಿಮುದ್ದೆ ಬಳಸುವಂತೆ ಮಾಡುವುದು ನಮ್ಮ ಉದ್ದೇಶ. ಉದ್ಯಮಿ ಒಕ್ಕಲಿಗ ಅಡಿ ಬೆಂಗಳೂರಿನಲ್ಲಿ ಜನವರಿ 19 ಮೂರು ದಿನ ಉದ್ಯಮದ ಪ್ರದರ್ಶನ ಆಯೋಜಿಸಲಾಗುತ್ತಿದೆ ಎನ್ನುತ್ತಾರೆ ಸಂಘಟನೆಯ ಭಾರತಿ ಶಂಕರ್ .
ಜಿಐ ಟ್ಯಾಗ್ ಆಯ್ಕೆ ಹೇಗೆ
ಆಯಾ ಪ್ರದೇಶದಲ್ಲಿ ಇರುವ ವಿಶೇಷ ಆಹಾರ, ಕೃಷಿ ಉತ್ಪನ್ನ, ಕರಕುಶಲ ವಸ್ತುಗಳನ್ನು ಗುರುತಿಸಿ ಅದಕ್ಕೆ ಜಿಐ ಮಾನ್ಯತೆಯನ್ನು ನೀಡಲಾಗುತ್ತದೆ. ಆ ವಸ್ತುವಿನ ಹೆಸರು ಕೇಳಿದರೆ ಎಂತವರು ಅದರ ಭೌಗೋಳಿಕ ಪ್ರದೇಶವನ್ನು ಗುರುತಿಸುವಂತಿರಬೇಕು. ಅಂತವುಗಳನ್ನ ಮಾತ್ರ ಜಿಐ ಟ್ಯಾಗ್ ನೀಡಲು ಪರಿಗಣಿಸಲಾಗುತ್ತದೆ. ಹೀಗೆ ಒಂದು ಉತ್ಪನ್ನದ ಮೂಲ ತಯಾರಿಕಾ ಪ್ರದೇಶವನ್ನು ಜಿಐ ಟ್ಯಾಗ್ ಸೂಚಿಸುತ್ತದೆ.
ಭಾರತದಲ್ಲಿ 400ಕ್ಕೂ ಹೆಚ್ಚು ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಲಾಗಿದೆ.ಅದರಲ್ಲೂ ಭಾರತದಲ್ಲಿ ಅತಿ ಹೆಚ್ಚು ಜಿಐ ಟ್ಯಾಗ್‌ಗಳನ್ನ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಪಡೆದಿಕೊಂಡಿರುವುದು ವಿಶೇಷ.
ಕರ್ನಾಟಕದ 45 ವಸ್ತುಗಳಿಗೆ ಮಾನ್ಯತೆ
ಬ್ಯಾಡಗಿ ಮೆಣಸಿನಕಾಯಿ, ಕಿನ್ನಾಳ ಆಟಿಕೆಗಳು, ಮೈಸೂರು ಅಗರಬತ್ತಿ, ಬೆಂಗಳೂರು ನೀಲಿ ದ್ರಾಕ್ಷಿಗಳು, ಮೈಸೂರು ಪಾಕ್, ಬೆಂಗಳೂರು ಗುಲಾಬಿ ಈರುಳ್ಳಿ, ಕೂರ್ಗ್ ಕಿತ್ತಳೆ, ಮೈಸೂರು ರೇಷ್ಮೆ, ಬಿದ್ರಿವೇರ್, ಚನ್ನಪಟ್ಟಣ ಆಟಿಕೆಗಳು ಮತ್ತು ಗೊಂಬೆಗಳು, ಮೈಸೂರು ರೋಸ್ ವುಡ್ ಕೆತ್ತನೆ, ಮೈಸೂರು ಶ್ರೀಗಂಧದ ಎಣ್ಣೆ, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಾಂಪ್ರದಾಯಿಕ ಚಿತ್ರಕಲೆಗಳು, ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಉಡುಪಿ ಮಲ್ಲಿಗೆ, ಹಡಗಲಿ ಮಲ್ಲಿಗೆ, ಇಳಕಲ್ ಸೀರೆ, ನವಲಗುಂದ ದುರ್ರೀಸ್, ಕರ್ನಾಟಕ ಕಂಚಿನ ಸಾಮಾನು, ಮೊಳಕಾಲ್ಮುರು ಸೀರೆಗಳು,ಮಾನ್ಸೂನ್ಡ್ ಮಲಬಾರ್ ಅರೇಬಿಕಾ ಕಾಫಿ, ಮಾನ್ಸೂನ್ಡ್ ಮಲಬಾರ್ ರೋಬಸ್ಟಾ ಕಾಫಿ, ಕೂರ್ಗ್ ಹಸಿರು ಏಲಕ್ಕಿ, ಧಾರವಾಡ ಪೇಡಾ, ಕೂರ್ಗ್ ಕಿತ್ತಳೆ, ಮಲಬಾರ್ ಮೆಣಸು, ಮೈಸೂರಿನ ಗಂಜಿಫಾ ಕಾರ್ಡ್ಸ್. ದೇವನಹಳ್ಳಿ ದಾಳಿಂಬೆ, ಅಪ್ಪೆಮಿಡಿ ಮಾವು, ಕಮಲಾಪುರ ಕೆಂಪು ಬಾಳೆ, ಸಂಡೂರ್ ಲಂಬಾಣಿ ಕಸೂತಿ, ಉಡುಪಿ ಮಟ್ಟು ಗುಳ್ಳ ಬದನೆ=, ಗುಳೇದಗುಡ್ಡ ಖಣ, ಉಡುಪಿ ಸೀರೆಗಳು, ಕೊಲ್ಹಾಪುರಿ ಚಪ್ಪಲಿ, ಕೂರ್ಗ್ ಅರೇಬಿಕಾ ಕಾಫಿ, ಚಿಕ್ಕಮಗಳೂರು ಅರೇಬಿಕಾ ಕಾಫಿ, ಬಾಬಾಬುಡನ್‌ಗಿರಿಸ್ ಅರೇಬಿಕಾ ಕಾಫಿ, ಶಿರಸಿ ಅಡಿಕೆ ಕಲಬುರಗಿ ತೊಗರಿ ಬೇಳೆ, ಇಂಡಿ ಲಿಂಬೆಗೆ ಜಿಐ ಮಾನ್ಯತೆ ದೊರೆತಿದೆ.
ವಿಭಾಗ