Japanese Water Therapy: ನೈಸರ್ಗಿಕವಾಗಿ ತ್ವಚೆಯ ಅಂದ ಹೆಚ್ಚಿಸುವ ವಾಟರ್ ಥೆರಪಿ; ಜಪಾನಿಗರ ಸೌಂದರ್ಯ ರಹಸ್ಯದ ಮೂಲವಿದು
Dec 03, 2023 06:48 PM IST
ಜಪಾನೀಸ್ ವಾಟರ್ ಥೆರಪಿ
- ತ್ವಚೆಯ ಅಂದ ಸದಾ ಹೊಳೆಯುತ್ತಿರಬೇಕು ಅನ್ನೋ ಆಸೆ ಇದ್ರೆ ಜಪಾನಿಗರ ವಾಟರ್ ಥೆರಪಿ ಫಾಲೊ ಮಾಡಿ. ಇದು ಸೌಂದರ್ಯಕ್ಕಷ್ಟೇ ಅಲ್ಲ, ಒಟ್ಟಾರೆ ಯೋಗಕ್ಷೇಮಕ್ಕೂ ಉತ್ತಮ.
ಸದಾ ಕನ್ನಡಿಯಂತೆ ಹೊಳೆಯುವ, ಮಿರ ಮಿರ ಮಿಂಚುವ ತ್ವಚೆ ನಮ್ಮದಾಗಬೇಕು ಎಂಬ ಆಸೆ ಯಾರಿಗಿರುವುದಿಲ್ಲ ಹೇಳಿ. ಸೌಂದರ್ಯ ಕಾಳಜಿ ವಿಚಾರದಲ್ಲಿ ಎಲ್ಲರಿಗೂ ಆಸೆ ಇರುವುದು ಸಹಜ. ಹಾಗಂತ ಚರ್ಮದ ಅಂದಗೆಡಿವುದಿಲ್ಲ ಎಂದೇನಿಲ್ಲ. ಹಾಗಾಗಿ ಕಾಳಜಿ ಮಾಡುವುದು ಅತ್ಯಗತ್ಯ. ನಮ್ಮ ದೇಹವು ಶೇ 75 ಪ್ರತಿಶತದಷ್ಟು ನೀರಿನಿಂದ ಮಾಡಲ್ಪಟ್ಟಿದೆ. ಚರ್ಮಕ್ಕೆ ನೀರು ಬಹಳ ಅವಶ್ಯ. ದೇಹದಲ್ಲಿ ನೀರಿನ ಮಟ್ಟ ಇಳಿಕೆಯಾದರೆ ತ್ವಚೆಯು ಶುಷ್ಕವಾಗಿರುತ್ತದೆ. ಇದರಿಂದ ಚರ್ಮವು ನಿರ್ಜೀವ ಕಳೆಹೊಂದಿರುತ್ತದೆ. ಶುಷ್ಕ ಚರ್ಮದ ಮೇಲೆ ಸುಕ್ಕುಗಳು, ವಯಸ್ಸಾದಂತಹ ಲಕ್ಷಣಗಳು ಕಾಣಿಸಿಕೊಳ್ಳುವುದು ಸಹಜ. ನಿಮ್ಮ ತ್ವಚೆಯನ್ನು ಹೈಡ್ರೀಕರಿಸಲು ಪ್ರತಿದಿನ ಚರ್ಮವನ್ನು ಬೆವರು ಮುಕ್ತಗೊಳಿಸುವುದು ಮುಖ್ಯವಾಗುತ್ತದೆ. ಆದ್ದರಿಂದ ಚರ್ಮವನ್ನು ಆರೋಗ್ಯಕರವಾಗಿ ಇರಿಸಲು ಸಾಕಷ್ಟು ನೀರು ಸೇವಿಸುವುದು ಮುಖ್ಯವಾಗುತ್ತದೆ. ತ್ವಚೆಯ ಅಂದ ಸದಾ ಅಂದವಾಗಿರಲು ಜಪಾನೀಸ್ ವಾಟರ್ ಥೆರಪಿ ಪ್ರಯತ್ನಿಸಬಹುದು. ಇದು ಪ್ರತಿದಿನ ಹಲವಾರು ಗ್ಲಾಸ್ ಕೋಣೆಯ ಉಷ್ಣಾಂಶದ ನೀರನ್ನು ಕುಡಿಯುವುದು ಮುಖ್ಯವಾಗುತ್ತದೆ.
ಏನಿದು ಜಪಾನೀಸ್ ವಾಟರ್ ಥೆರಪಿ?
ಜಪಾನಿಸ್ ವಾಟರ್ ಥೆರಪಿಯು ಒಂದು ಕ್ಷೇಮ ಅಭ್ಯಾಸವಾಗಿದ್ದು, ಕೆಲವು ಸಂಭಾವ್ಯ ಪ್ರಯೋಜನಗಳಿಗಾಗಿ ನೀವು ಪ್ರತಿದಿನ ಬೆಳಿಗ್ಗೆ ಎದ್ದಾಗ ಕೋಣೆಯ ಉಷ್ಣಾಂಶದಲ್ಲಿ ಹಲವಾರು ಗ್ಲಾಸ್ ನೀರು ಕುಡಿಯುವುದನ್ನು ಒಳಗೊಂಡಿರುತ್ತದೆ.
ಬೆಳಿಗ್ಗೆ ಎದ್ದಾಕ್ಷಣ ಹಲ್ಲುಜ್ಜುವ ಮೊದಲು ಹಾಗೂ ಬೆಳಗಿನ ಉಪಾಹಾರಕ್ಕೆ 45 ನಿಮಿಷಕ್ಕೂ ಮೊದಲು ನಾಲ್ಕರಿಂದ 5 ಗ್ಲಾಸ್ ಕೋಣೆಯ ಉಷ್ಣಾಂಶದ ನೀರನ್ನು ಕುಡಿಯಬೇಕು. ಊಟವನ್ನು 15 ನಿಮಿಷಗಳ ಒಳಗೆ ಮುಗಿಸಬೇಕು. ಊಟದ ನಂತರ ಬೇರೆ ಆಹಾರ ಸೇವಿಸಲು ಕನಿಷ್ಠ 2 ಗಂಟೆಗಳ ಕಾಲ ಕಾಯಬೇಕು.
ಜಪಾನೀಸ್ ವಾಟರ್ ಥೆರಪಿಯು ಬಗ್ಗೆ ದೃಢವಾದ ವೈಜ್ಞಾನಿಕ ಬೆಂಬಲದ ಕೊರತೆ ಇದೆ. ಆದರೆ ಬೆಳಗಿನ ಉಪಾಹಾರಕ್ಕೂ ಮುನ್ನ ನೀರು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ ಎಂಬುದು ಸಾಬೀತಾದ ವಿಚಾರವಾಗಿದೆ. ಇದು ಬೆಳಿಗ್ಗೆ ಜಲಸಂಚಯನಕ್ಕೆ ಸಹಾಯ ಮಾಡುತ್ತದೆ. ದೈಹಿಕ ಕಾರ್ಯಗಳನ್ನು ಸಕ್ರಿಯಗೊಳಿಸುತ್ತದೆ. ಊಟ ಹಾಗೂ ನೀರು ಕುಡಿಯುವ ಸಮಯವನ್ನು ಸಿಂಕ್ ಮಾಡುವುದರಿಂದ ಕರುಳಿನ ಶುದ್ಧೀಕರಣವನ್ನು ಸುಗಮಗೊಳಿಸುತ್ತದೆ.
ವಾಟರ್ ಥೆರಪಿಯಿಂದಾಗುವ ಪ್ರಯೋಜನಗಳು
* ವಾಟರ್ ಥೆರಪಿ ಅನುಸರಿಸುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಬಹುದು. ಇದು ತೂಕ ನಿರ್ವಹಣೆಗೂ ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹದಲ್ಲಿನ ವಿಷಾಂಶವನ್ನು ಹೊರಹಾಕಬಹುದು. ಆ ಮೂಲಕ ನೈಸರ್ಗಿಕ ನಿರ್ವಿಶೀಕರಣ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.
* ಇದು ಆಹಾರ ಸೇವನೆಗೆ ಹೊಟ್ಟೆಯನ್ನು ಸಿದ್ಧಗೊಳಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜಲಸಂಚಯನ ಮತ್ತು ದೈಹಿಕ ಕಾರ್ಯಗಳನ್ನು ಪ್ರಾರಂಭಿಸುವ ಮೂಲಕ ಶಕ್ತಿಯ ಮಟ್ಟವನ್ನು ಸಮರ್ಥವಾಗಿ ಹೆಚ್ಚಿಸುತ್ತದೆ.
* ಜಪಾನೀಸ್ ವಾಟರ್ ಥೆರಪಿಯು ಚರ್ಮದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದು ಮೈ ಕಾಂತಿ ಹೆಚ್ಚಲು ನೆರವಾಗುತ್ತದೆ. ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ ಹಾಗೂ ದೇಹದಲ್ಲಿ pH ಮಟ್ಟವನ್ನು ಸಮರ್ಥವಾಗಿ ಸಮತೋಲನಗೊಳಿಸುತ್ತದೆ.
* ನಮ್ಮ ದೈನಂದಿನ ದಿನಚರಿಯಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ರೂಢಿಸಿಕೊಳ್ಳುವುದರಿಂದ ಮೆದುಳಿನ ಕಾರ್ಯ, ಶಕ್ತಿ ಮಟ್ಟ ಹಾಗೂ ರಕ್ತದೊತ್ತಡಕ್ಕೆ ಪ್ರಯೋಜನ ಸಿಗುತ್ತದೆ. ತಲೆನೋವು, ಮಲಬದ್ಧತೆ ಹಾಗೂ ಮೂತ್ರಪಿಂಡದ ಕಲ್ಲುಗಳು ಉಂಟಾಗದಂತೆ ತಡೆಯುತ್ತದೆ.
ಜಪಾನೀಸ್ ವಾಟರ್ ಥೆರಪಿ ಅಭ್ಯಾಸ ಮಾಡುವುದು ಹೇಗೆ?
* ಬೆಳಿಗ್ಗೆ ಎದ್ದ ತಕ್ಷಣ ಕನಿಷ್ಠ ನಾಲ್ಕರಿಂದ ಆರು ಲೋಟ ನೀರು ಕುಡಿಯಿರಿ.
* ಪ್ರತಿ ಗ್ಲಾಸ್ ನೀರು 160 ರಿಂದ 200 ಮಿಲಿಯಷ್ಟಿರಬೇಕು. ಖಾಲಿ ಹೊಟ್ಟೆಯಲ್ಲಿ ಇಷ್ಟೂ ನೀರು ಸೇವಿಸಬೇಕು.
* ನೀರು ಕೋಣೆಯ ಉಷ್ಣಾಂಶ ಅಥವಾ ಬೆಚ್ಚಗಿರಬೇಕು. ನೀರು ಕುಡಿದ ನಂತರ ಹಲ್ಲುಜ್ಜುವ ಅಭ್ಯಾಸ ರೂಢಿಸಿಕೊಳ್ಳಿ.
* ನೀರು ಕುಡಿದ 45 ನಿಮಿಷಗಳ ಕಾಲ ಏನನ್ನೂ ತಿನ್ನಬೇಡಿ.
* ನೀವು ದಿನದಲ್ಲಿ ಸೇವಿಸುವ ಪ್ರತಿ ಊಟದ ನಡುವೆ ಎರಡು ಗಂಟೆ ಅಂತರವಿರಲಿ. ಇದರ ನಡುವೆ ಏನನ್ನೂ ಕುಡಿಯುವುದು, ತಿನ್ನುವುದು ಮಾಡಬೇಡಿ.
* ಒಂದೇ ಸಲ ನಾಲ್ಕು ಅಥವಾ ಆರು ಗ್ಲಾಸ್ ನೀರು ಕುಡಿಯಲು ಸಾಧ್ಯವಾಗದೇ ಇದ್ದರೆ, ಒಂದೊಂದೇ ಗ್ಲಾಸ್‌ನಿಂದ ಅಭ್ಯಾಸ ಮಾಡಿಕೊಳ್ಳಿ.
ವಿಭಾಗ