logo
ಕನ್ನಡ ಸುದ್ದಿ  /  ಜೀವನಶೈಲಿ  /  ಅಕ್ಕಿನೀರಿನಲ್ಲಿ ಅಡಗಿದೆ ಕೊರಿಯನ್ನರ ಸೌಂದರ್ಯದ ಗುಟ್ಟು; ಚರ್ಮ, ಕೂದಲ ಅಂದ ಹೆಚ್ಚಿಸಿಕೊಳ್ಳಲು ಇದನ್ನು ಹೀಗೆ ಬಳಸಿ

ಅಕ್ಕಿನೀರಿನಲ್ಲಿ ಅಡಗಿದೆ ಕೊರಿಯನ್ನರ ಸೌಂದರ್ಯದ ಗುಟ್ಟು; ಚರ್ಮ, ಕೂದಲ ಅಂದ ಹೆಚ್ಚಿಸಿಕೊಳ್ಳಲು ಇದನ್ನು ಹೀಗೆ ಬಳಸಿ

Reshma HT Kannada

Sep 18, 2023 02:57 PM IST

google News

ಅಕ್ಕಿನೀರಿನಲ್ಲಿ ಅಡಗಿದೆ ಕೊರಿಯನ್ನರ ಸೌಂದರ್ಯದ ಗುಟ್ಟು

    • ಕೊರಿಯನ್ನರ ಗಾಜಿನಂತಹ ಹೊಳಪಿನ ಚರ್ಮದ ರಹಸ್ಯದ ಹಿಂದಿದೆ ಅಕ್ಕಿ ತೊಳೆದ ನೀರು. ಹಾಗಾದರೆ ಚರ್ಮ ಹಾಗೂ ಕೂದಲಿನ ಸೌಂದರ್ಯ ವರ್ಧನೆಯಲ್ಲಿ ಅಕ್ಕಿ ತೊಳೆದ ನೀರು ಯಾವೆಲ್ಲಾ ರೀತಿ ಪ್ರಯೋಜನಗಳನ್ನು ನೀಡಲಿವೆ ಎಂಬುದಕ್ಕೆ ತಜ್ಞರ ಉತ್ತರ ಇಲ್ಲಿದೆ.
ಅಕ್ಕಿನೀರಿನಲ್ಲಿ ಅಡಗಿದೆ ಕೊರಿಯನ್ನರ ಸೌಂದರ್ಯದ ಗುಟ್ಟು
ಅಕ್ಕಿನೀರಿನಲ್ಲಿ ಅಡಗಿದೆ ಕೊರಿಯನ್ನರ ಸೌಂದರ್ಯದ ಗುಟ್ಟು

ಫ್ಯಾಷನ್‌ ಜಗತ್ತಿನಂತೆ ಸೌಂದರ್ಯದ ಜಗತ್ತು ಕೂಡ ಸದಾ ಹರಿಯುತ್ತಿರುವ ನೀರಿನಂತೆ. ಇದು ನಿಂತಲ್ಲೇ ನಿಲ್ಲುವುದಿಲ್ಲ. ಈ ಕ್ಷೇತ್ರ ಸದಾ ವಿಕಸನಗೊಳ್ಳುತ್ತಲೇ ಇರುತ್ತದೆ. ಮಿಲೇನಿಯಲ್‌ ಜಮಾನದ ಮಂದಿ ತಮ್ಮ ಸೌಂದರ್ಯ ವರ್ಧನೆಗೆ ಪುರಾತನ ಪದ್ಧತಿಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಅಕ್ಕಿ ತೊಳೆದ ನೀರಿನ ಬಳಕೆ ಇತ್ತೀಚೆಗೆ ಹೆಚ್ಚುತ್ತಿದೆ. ಈ ಪದ್ಧತಿ ಬಹಳ ಹಿಂದಿನಿಂದಲೂ ಏಷ್ಯಾದಲ್ಲಿ ರೂಢಿಯಲ್ಲಿತ್ತು. ಇದೀಗ ಪ್ರಪಂಚದಾದ್ಯಂತ ವ್ಯಾಪಿಸಿದೆ.

ಕೊರಿಯನ್ನರ ಗಾಜಿನಂತಹ ಹೊಳಪಿನ ಚರ್ಮದ ರಹಸ್ಯದ ಹಿಂದಿದೆ ಅಕ್ಕಿ ತೊಳೆದ ನೀರು. ಹಾಗಾದರೆ ಚರ್ಮ ಹಾಗೂ ಕೂದಲಿನ ಸೌಂದರ್ಯ ವರ್ಧನೆಯಲ್ಲಿ ಅಕ್ಕಿ ತೊಳೆದ ನೀರು ಯಾವೆಲ್ಲಾ ರೀತಿ ಪ್ರಯೋಜನಗಳನ್ನು ನೀಡಲಿವೆ ಎಂಬುದಕ್ಕೆ ತಜ್ಞರ ಉತ್ತರ ಇಲ್ಲಿದೆ.

ಚರ್ಮರೋಗ ತಜ್ಞೆ ಡಾ. ಮಾನಸಿ ಶಿರೋಲಿಕರ್‌ ಅವರ ಪ್ರಕಾರ ಅಕ್ಕಿ ನೀರಿನಲ್ಲಿ ವಿಟಮಿನ್‌, ಖನಿಜಾಂಶ, ಅಮೈನೊ ಆಮ್ಲ ಸಮೃದ್ಧವಾಗಿರುತ್ತದೆ. ಇದು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಉತ್ತಮ. ಅಕ್ಕಿ ನೀರಿನಲ್ಲಿ ಇನೋಸಿಟಾಲ್ ಎಂಬ ಕಾರ್ಬೋಹೈಡ್ರೇಟ್ ಇದ್ದು ಅದು ಕೂದಲಿನ ಬೆಳವಣಿಗೆಯನ್ನು ವೃದ್ಧಿಸುತ್ತದೆ. ಅಕ್ಕಿ ನೀರಿನಲ್ಲಿರುವ ಅಮೈನೋ ಆಮ್ಲಗಳು ಕೂದಲನ್ನು ಬೇರಿನಿಂದಲೇ ಬಲ ಪಡಿಸುತ್ತದೆ. ಇದು ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ. ವಿಟಮಿನ್‌ ಎ, ಇ ಮತ್ತು ಖನಿಜಗಳು ಕೂದಲಿನ ಗುಣಮಟ್ಟದ ಸುಧಾರಣೆಗೆ ಸಹಾಯ ಮಾಡುತ್ತವೆ. ಇದು ಒಟ್ಟಾರೆ ಕೂದಲಿನ ಆರೋಗ್ಯ ವರ್ಧನೆಗೆ ನೆರವಾಗುತ್ತದೆ.

ಅಕ್ಕಿ ನೀರಿನಲ್ಲಿ ಫೆರುಲಿಕ್‌ ಮತ್ತು ಫೈಟಿಕ್‌ ಆಮ್ಲಗಳಿದ್ದು ಇದು ಉತ್ಕರ್ಷಣ ನಿರೋಧಕ ಗುಣವನ್ನು ಪ್ರದರ್ಶಿಸುತ್ತದೆ. 2018ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಇದು ವಯಸ್ಸಾದಂತೆ ಕಾಣುವ ಚಿಹ್ನೆಗಳ ನಿವಾರಣೆಗೆ ಸಹಕಾರಿಯಾಗಿದೆ. ಚರ್ಮದ ತೇವಾಂಶ ಹೆಚ್ಚಿಸುವುದು, ನೆರಿಗೆ, ಸುಕ್ಕು, ಹೈಪರ್‌ಪಿಂಗ್ಮಟೇಶನ್‌ನಂತಹ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ ಎಂಬುದು ಸಾಬೀತಾಗಿದೆ.

ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಅಕ್ಕಿನೀರನ್ನು ಚರ್ಮ ಹಾಗೂ ಕೂದಲಿಗೆ ಬಳಸುವುದು ಹೇಗೆ? ಈ ಬಗ್ಗೆ ಇಂಡಿಯಾ ಟುಡೆಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ ಡಾ. ಮಾನಸಿ. ಅವರು ನೀಡಿರುವ ಸಲಹೆಗಳು ಹೀಗಿವೆ.

ಚರ್ಮದ ಸೌಂದರ್ಯಕ್ಕೆ

ಅಕ್ಕಿನೀರಿನ ಟೋನರ್‌: ಹತ್ತಿಯ ಉಂಡೆಯನ್ನು ಅಕ್ಕಿಯ ನೀರಿನಲ್ಲಿ ಅದ್ದಿ ಆ ನೀರನ್ನು ಮುಖಕ್ಕೆ ಟೋನರ್‌ ರೀತಿ ಹಚ್ಚಿ. ಈ ರೀತಿ ಮಾಡುವ ಮೊದಲು ಮುಖವನ್ನು ಚೆನ್ನಾಗಿ ತೊಳೆಯಲು ಮರೆಯದಿರಿ.

ಅಕ್ಕಿ ನೀರಿನ ಫೇಸ್‌ಮಾಸ್ಕ್‌: ಅಕ್ಕಿ ನೀರಿಗೆ ಅಕ್ಕಿಹಿಟ್ಟು ಸೇರಿಸಿ ಪೇಸ್ಟ್‌ ತಯಾರಿಸಿ, ಅದನ್ನು ಮಾಸ್ಕ್‌ ರೀತಿ ಮುಖಕ್ಕೆ ಹಚ್ಚಿ, ಒಣಗಿದ ಮೇಲೆ ಮುಖ ತೊಳೆಯಿರಿ.

ಕ್ಲೇನ್ಸರ್‌: ಅಕ್ಕಿನೀರಿನಿಂದ ಮುಖವನ್ನು ಕ್ಲೇನ್ಸರ್‌ ರೀತಿ ಚೆನ್ನಾಗಿ ಮಸಾಜ್‌ ಮಾಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಕೂದಲಿನ ಆರೋಗ್ಯಕ್ಕೆ

ಅಕ್ಕಿ ನೀರಿನಿಂದ ತೊಳೆಯುವುದು: ಶಾಂಪೂ ಬಳಸಿ ತಲೆಸ್ನಾನ ಮಾಡಿದ ನಂತರ ಕೂದಲು ಹಾಗೂ ನೆತ್ತಿಯ ಮೇಲೆ ಅಕ್ಕಿನೀರು ಸುರಿದುಕೊಳ್ಳಿ. ಒಂದೈದು ನಿಮಿಷಗಳ ನಂತರ ಅದನ್ನು ಚೆನ್ನಾಗಿ ತೊಳೆಯಿರಿ.

ಹೇರ್‌ ಮಾಸ್ಕ್‌: ನೈಸರ್ಗಿಕ ಹೇರ್‌ ಕಂಡಿಷನರ್‌ ಅಥವಾ ಅಲೊವೆರಾ ಜೆಲ್‌ನೊಂದಿಗೆ ಅಕ್ಕಿನೀರನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ, ಇದು ಕೂದಲಿನ ಮಾಸ್ಕ್‌ ಹೊಳಪು ಹೆಚ್ಚಲು ಸಹಾಯ ಮಾಡುತ್ತದೆ.

ಆದರೆ ಕೂದಲು, ಚರ್ಮದ ಅಲರ್ಜಿಯಂತಹ ಸಮಸ್ಯೆ ಇರುವವರು ಇದರ ಬಳಕೆಗೂ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ

Beauty Tips: ಗಾಜಿನಂತೆ ಹೊಳೆಯುವ ಅಂದದ ತ್ವಚೆ ನಿಮ್ಮದಾಗಬೇಕೇ; ಇಲ್ಲಿದೆ ಕೊರಿಯನ್‌ ಬ್ಯೂಟಿ ಸೀಕ್ರೆಟ್‌; ಅನುಸರಿಸಿ, ಅಂದ ಹೆಚ್ಚಿಸಿಕೊಳ್ಳಿ

Korean Beauty Secrets: ಕೊರಿಯನ್ನರ ಅಂದವನ್ನು ನೋಡಿದಾಗ ವಾವ್‌, ನಮಗೂ ಇಂತಹ ಸೌಂದರ್ಯ, ಗಾಜಿನಂತೆ ಹೊಳೆಯುವ ತ್ವಚೆ ಯಾಕಿಲ್ಲ ಎಂದು ಅನ್ನಿಸುವುದು ಸಹಜ. ಕೊರಿಯನ್ನರಂತೆ ಹೊಳಪಿನ, ಅಂದದ ತ್ವಚೆ ನಿಮ್ಮದಾಗಬೇಕು ಎಂದರೆ ಈ ಸೌಂದರ್ಯ ಸಲಹೆಗಳನ್ನು ಪಾಲಿಸಿ, ಅಂದ ಹೆಚ್ಚಿಸಿಕೊಳ್ಳಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ