Beauty Tips: ಮೂಡ್ ರಿಫ್ರೆಶ್ ಮಾಡೋದು ಮಾತ್ರವಲ್ಲ; ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತೆ ಕಾಫಿ ಪುಡಿ
Jan 24, 2024 07:15 AM IST
ಸೌಂದರ್ಯವರ್ಧಕವಾಗಿ ಕೆಲಸ ಮಾಡುವ ಕಾಫಿಪುಡಿ
Beauty Tips: ಕಾಫಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ಕಾಫಿ ಪುಡಿ ಕೇವಲ ಕುಡಿಯೋಕೆ ಮಾತ್ರವಲ್ಲ ನಿಮ್ಮ ತ್ವಚೆಯ ಆರೋಗ್ಯ ಕಾಪಾಡಲೂ ಸಹಕಾರಿಯಾಗಿದೆ. ಸುಮ್ಮನೆ ಮಾರುಕಟ್ಟೆಯಲ್ಲಿ ದುಬಾರಿ ಕ್ರೀಂಗಳನ್ನು ಖರೀದಿಸುವ ಬದಲು ಕಾಫಿ ಪುಡಿಯಿಂದಲೇ ಲಾಭ ಪಡೆದು ಆರೋಗ್ಯಕರ ತ್ವಚೆ ನಿಮ್ಮದಾಗಿಸಿಕೊಳ್ಳಿ.
Beauty Tips: ಹೊಳೆಯುವ, ಕಾಂತಿಯುತವಾದ, ಒಂದೂ ಕಲೆಗಳು ಇಲ್ಲದ ತ್ವಚೆಯನ್ನು ಬೇಡ ಎಂದು ಹೇಳುವವರು ಯಾರಾದರೂ ಇದ್ದಾರೆಯೇ ಹೇಳಿ. ಇದಕ್ಕಾಗಿ ಅನೇಕರು ಸೌಂದರ್ಯವರ್ಧಕಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವುದು ಸಹ ಉಂಟು. ಆದರೆ ನೀವು ಮನಸ್ಸು ಮಾಡಿದರೆ ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಇಂತಹ ತ್ವಚೆಯನ್ನು ಪಡೆಯಲು ಸಾಧ್ಯವಿದೆ.
ನೀವು ನಿತ್ಯ ಕುಡಿಯುವ ಕಾಫಿಯಿಂದಲೇ ನೀವು ಕೋಮಲವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಹಾಗಾದರೆ ಚರ್ಮಕ್ಕೆ ಯೋಗ್ಯವೆನಿಸುವ ರೀತಿಯಲ್ಲಿ ಹೇಗೆ ಕಾಫಿ ಪುಡಿಯನ್ನು ಬಳಕೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ .
- ಕಾಫಿ ಬೀಜದಿಂದ ತಯಾರಿಸಲಾದ ಪುಡಿಯು ನೈಸರ್ಗಿಕವಾಗಿ ಎಕ್ಸ್ಫೋಲಿಯೇಟರ್ ಕಾರ್ಯವನ್ನು ನಿರ್ವಹಿಸುತ್ತವೆ. ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುವ ಕೆಲಸ ಮಾಡುವ ಮೂಲಕ ಹೊಸ ಜೀವಕೋಶಗಳ ಕಾರ್ಯಕ್ಕೆ ಅನುವು ಮಾಡಿಕೊಡುತ್ತದೆ. ಇದರಿಂದ ಮೃದುವಾದ ಹಾಗೂ ಹೊಳಪಿನ ಚರ್ಮವನ್ನು ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ ಸೌಮ್ಯವಾದ ತ್ವಚೆಯನ್ನು ಹೊಂದಲು ಕಾಫಿ ಬೀಜಗಳು ಸಹಕಾರಿಯಾಗಿವೆ.
ಇದನ್ನೂ ಓದಿ: ಚರ್ಮ, ಕೂದಲ ಕಾಂತಿ ಹೆಚ್ಚಿಸಲು ಇಲ್ಲಿದೆ ಮನೆಮದ್ದು; ಬಳಸಿ ಅಂದ ಹೆಚ್ಚಿಸಿಕೊಳ್ಳಿ
- ವಯಸ್ಸಾಗುತ್ತಿದ್ದಂತೆ ಚರ್ಮ ಸುಕ್ಕುಗುಟ್ಟುವುದು ಸರ್ವೇ ಸಾಮಾನ್ಯ. ಆದರೆ ಇಳಿ ವಯಸ್ಸಿನಲ್ಲೂ ಚರ್ಮದ ಕಾಂತಿ ಕಳೆದುಕೊಳ್ಳಬಾರದು ಎಂದರೆ ನೀವು ಕಾಫಿ ಬಳಕೆ ಮಾಡಬೇಕು. ಇದರಲ್ಲಿ ಇರುವ ಕ್ಲೋರೋಜೆನಿಕ್ ಆಮ್ಲದಂತಹ ಅಂಶಗಳು ಚರ್ಮದ ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಕೆಫಿನ್ ಅಂಶವು ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ. ಅಲ್ಲದೆ ಚರ್ಮದ ಬಣ್ಣ ಪ್ರಕಾಶಮಾನಗಿಸಲು ಕಾಫಿ ಸಹಾಯ ಮಾಡುತ್ತದೆ.
- ಈಗ ಡಾರ್ಕ್ ಸರ್ಕಲ್ಗಳ ಸಮಸ್ಯೆ ಯುವ ಜನತೆಯನ್ನು ಹೆಚ್ಚಾಗಿ ಕಾಡುತ್ತಿದೆ. ದಿನವಿಡೀ ಕಂಪ್ಯೂಟರ್ಗಳ ಮುಂದೆ ಕಾಲ ಕಳೆಯುವ ಪರಿಣಾಮ ಡಾರ್ಕ್ ಸರ್ಕಲ್ ಎನ್ನುವುದು ಒಂದು ರೀತಿಯ ಸಾಮಾನ್ಯ ಸಮಸ್ಯೆಯಾಗಿ ಬದಲಾಗಿದೆ. ಆದರೆ ಕಾಫಿಯಲ್ಲಿರುವ ಕೆಫಿನ್ ಅಂಶವು ಕಣ್ಣಿನ ಸುತ್ತ ಉಂಟಾಗುವ ಕಪ್ಪು ವರ್ತುಲಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
- ಹದಿಹರೆಯದವರನ್ನು ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ಮೊಡವೆ. ಕಾಫಿ ಅಂಶವನ್ನು ಹೊಂದಿರುವ ಉತ್ಪನ್ನಗಳು ಅಥವಾ ಮನೆಯಲ್ಲೇ ಕಾಫಿ ಪುಡಿಯಿಂದ ತಯಾರಿಸಿದ ಮಾಸ್ಕ್ಗಳು ಚರ್ಮದ ಮೇಲಿರುವ ಮೊಡವೆಗೆ ಕಾರಣಾಗುವ ಜಿಡ್ಡಿನ ಅಂಶಗಳನ್ನು ನಾಶ ಮಾಡಲು ಸಹಕಾರಿಯಾಗಿದೆ. ಮೊಡವೆ ಒಡೆದಾಗ ಉಂಟಾಗುವ ಕೆಂಪು ಬಣ್ಣದ ಕಲೆಯನ್ನೂ ಇದು ನಾಶ ಮಾಡುತ್ತದೆ.
- ಅನೇಕರಿಗೆ ಕಣ್ಣು ಉಬ್ಬಿಕೊಳ್ಳುವ ಸಮಸ್ಯೆ ಇರುತ್ತದೆ. ಈ ಕಣ್ಣುಗಳ ಸಮಸ್ಯೆಯಿಂದ ಪಾರಾಗಲು ಕೂಡಾ ಕಾಫಿಯಲ್ಲಿರುವ ಕೆಫಿನ್ ಅಂಶ ಸಹಕಾರಿಯಾಗಿದೆ. ಕೆಫಿನ್ ಅಂಶವು ಕೇವಲ ಕಪ್ಪು ವರ್ತುಲದಿಂದ ನಿಮ್ಮನ್ನು ಕಾಪಾಡುವುದು ಮಾತ್ರವಲ್ಲದೇ ಕಣ್ಣು ಊದುವಿಕೆ ಸಮಸ್ಯೆಗೂ ಪರಿಹಾರ ನೀಡುತ್ತದೆ. ಇದರಿಂದ ನಿಮ್ಮ ತ್ವಚೆ ತಾಜಾತನದಿಂದ ಕೂಡಿರಲಿದೆ.
ಇದನ್ನೂ ಓದಿ: ಅಂದ ಕೆಡಿಸಿದ್ಯಾ ಕಪ್ಪಾದ ಕತ್ತು; ಕುತ್ತಿಗೆಯ ಚರ್ಮವನ್ನು ಬಿಳಿಯಾಗಿಸಲು ಇಲ್ಲಿದೆ ಸರಳ ಮನೆಮದ್ದು