logo
ಕನ್ನಡ ಸುದ್ದಿ  /  ಜೀವನಶೈಲಿ  /  Beauty Tips: ಪಿಗ್ಮಂಟೇಷನ್‌ ನಿವಾರಣೆಯಿಂದ ತ್ವಚೆಯ ಕಾಂತಿ ಹೆಚ್ಚುವವರೆಗೆ; ಅಕ್ಕಿಹಿಟ್ಟಿನಲ್ಲಿದೆ ಸೌಂದರ್ಯದ ಗುಟ್ಟು

Beauty Tips: ಪಿಗ್ಮಂಟೇಷನ್‌ ನಿವಾರಣೆಯಿಂದ ತ್ವಚೆಯ ಕಾಂತಿ ಹೆಚ್ಚುವವರೆಗೆ; ಅಕ್ಕಿಹಿಟ್ಟಿನಲ್ಲಿದೆ ಸೌಂದರ್ಯದ ಗುಟ್ಟು

HT Kannada Desk HT Kannada

Jan 15, 2024 10:00 AM IST

google News

ಸಾಂಕೇತಿಕ ಚಿತ್ರ

    • Rice Flour For Skin: ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ಅಕ್ಕಿಹಿಟ್ಟು ಬಹಳ ಪ್ರಯೋಜನಕಾರಿ. ಅಂಗಡಿಯಲ್ಲಿ ಸಿಗುವ ರಾಸಾಯನಿಕಯುಕ್ತ ಕ್ರೀಮ್‌ಗಳನ್ನು ಬಳಸುವ ಬದಲು ಅಡುಗೆಮನೆಯಲ್ಲಿಯೇ ಸಿಗುವ ಈ ಮನೆಮದ್ದುಗಳನ್ನು ಪ್ರಯತ್ನಿಸಿ. ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಿ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (HT File Photo)

ಸುಂದರವಾಗಿ ಕಾಣಬೇಕೆಂಬುದು ಎಲ್ಲರ ಬಯಕೆ. ಅದರಲ್ಲೂ ಈ ಸೆಲ್ಫಿ ಯುಗದಲ್ಲಂತೂ ಸೌಂದರ್ಯದ ಕಡೆಗೆ ಗಮನ ಸ್ವಲ್ಪ ಹೆಚ್ಚೇ ಎನ್ನಬಹುದು. ನಮ್ಮಲ್ಲಿ ಹಲವರು ಸುಂದರವಾಗಿ ಕಾಣಲು ಅಂಗಡಿಗಳಲ್ಲಿ ಸಿಗುವ ಸಿಕ್ಕ ಸಿಕ್ಕ ಕ್ರೀಮ್‌ಗಳನ್ನು ತಂದು ಹಚ್ಚಿಕೊಳ್ಳುತ್ತಿದ್ದಾರೆ. ಅವುಗಳಲ್ಲಿ ರಾಸಾಯನಿಕಗಳಿವೆ ಎಂದು ತಿಳಿದ ಮೇಲೂ ಅದನ್ನೇ ಮುಂದುವರಿಸುತ್ತಿದ್ದಾರೆ. ನೀವೂ ಅದೇ ರೀತಿ ಮಾಡುತ್ತಿದ್ದರೆ ಇಂದೇ ಬಿಟ್ಟು ಬಿಡಿ. ಅದರ ಬದಲಿಗೆ ಅಡುಗೆ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಬಳಸಿ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು.

ಅಡುಗೆ ಮನೆಯಲ್ಲಿ ಇರುವ ಒಂದು ಅದ್ಭುತ ಪದಾರ್ಥವೆಂದರೆ ಅಕ್ಕಿ ಹಿಟ್ಟು. ಇದು ಆಂಟಿಆಕ್ಸಿಡೆಂಟ್‌ನಿಂದ ಸಮೃದ್ಧವಾಗಿದೆ. ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಿ, ಸುಕ್ಕುಗಳನ್ನು ನಿವಾರಿಸುತ್ತದೆ. ಅಕ್ಕಿ ಹಿಟ್ಟು ಎಣ್ಣೆ ಚರ್ಮ ನಿವಾರಣೆಗೂ ಇದು ಉತ್ತಮ ಚಿಕಿತ್ಸೆ ನೀಡುತ್ತದೆ. ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ತೊಡೆದು ಹಾಕುತ್ತದೆ. ಅಕ್ಕಿಹಿಟ್ಟಿನ ಪ್ಯಾಕ್ ಟ್ಯಾನ್ ಹೋಗಲಾಡಿಸುತ್ತದೆ. ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ ಮತ್ತು ಹೊಳೆಯುವ ಚರ್ಮ ನೀಡುತ್ತದೆ. ನಿಮ್ಮ ಸೌಂದರ್ಯದ ಆರೈಕೆಯಲ್ಲಿ ಅಕ್ಕಿಹಿಟ್ಟನ್ನು ಈ ರೀತಿಯಾಗಿ ಸೇರಿಸಿಕೊಳ್ಳಿ. ಅನಗತ್ಯ ಹಣ ಪೋಲಾಗುವುದನ್ನು ತಪ್ಪಿಸಿ.

ಇದನ್ನೂ ಓದಿ: Beauty Tips: ಕತ್ತಿನ ಸುಕ್ಕುಗಳು ಮುಖದ ಅಂದವನ್ನು ಕೆಡಿಸುತ್ತಿವೆಯೇ; ಇಲ್ಲಿವೆ 6 ಸರಳ ಪರಿಹಾರಗಳು

ಪಿಗ್ಮೆಂಟೇಶನ್‌ಗೆ ಬೆಸ್ಟ್‌ ಅಕ್ಕಿಹಿಟ್ಟಿನ ಫೇಸ್‌ ಪ್ಯಾಕ್‌

ಇತ್ತೀಚಿನ ದಿನಗಳಲ್ಲಿ ಪಿಗ್ಮೆಂಟೇಶನ್‌ ಎಂಬುದು ಬಹಳ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಅಕ್ಕಿಹಿಟ್ಟಿನ ಫೇಸ್ ಮಾಸ್ಕ್ ಪರಿಣಾಮಕಾರಿಯಾಗಿದೆ. ಕಳೆಗುಂದಿದ ಮತ್ತು ಒಣ ಚರ್ಮಕ್ಕೂ ಉತ್ತಮ ಪರಿಹಾರ. ನೀವು ಪಿಗ್ಮೆಂಟೇಶನ್‌ನಿಂದ ಬಳಲುತ್ತಿದ್ದರೆ, ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಮೊಸರು, ಚಿಟಿಕೆ ಅರಿಸಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಲೇಪಿಸಿ. 10 ರಿಂದ 15 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಪಿಗ್ಮೆಂಟೇಶನ್ ಸಮಸ್ಯೆ ದೂರವಾಗುತ್ತದೆ.

ಕಪ್ಪು ಕಲೆಗಳು ಮಾಯವಾಗುತ್ತವೆ

ಅಕ್ಕಿ ಹಿಟ್ಟಿನಲ್ಲಿರುವ ಆ್ಯಂಟಿಆಕ್ಸಿಡೆಂಟ್‌ ಚರ್ಮದಿಂದ ಕಪ್ಪು ಕಲೆಗಳು, ಮೊಡವೆಗಳು ಮತ್ತು ಕಲೆಗಳನ್ನು ಉಂಟು ಮಾಡುವ ಹಾನಿಕಾರಕ ಟಾಕ್ಸಿನ್‌ಗಳನ್ನು ತೆಗೆದುಹಾಕುತ್ತದೆ. ಕಪ್ಪು ಕಲೆಗಳನ್ನು ಹೋಗಲಾಡಿಸಿಕೊಳ್ಳಲು ಬಿಸಿ ನೀರಿಗೆ ಬ್ಲಾಕ್‌ ಟೀ ಬ್ಯಾಗ್ ಹಾಕಿ. 2-3 ನಿಮಿಷ ಇಡಿ. ಎರಡು ಚಮಚ ಅಕ್ಕಿ ಹಿಟ್ಟನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ, ಚಹಾದ ನೀರನ್ನು ಸೇರಿಸಿ ಮತ್ತು ಪೇಸ್ಟ್ ತಯಾರಿಸಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಒಣಗಲು ಬಿಡಿ. ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಆಗಾಗ್ಗೆ ಹೀಗೆ ಮಾಡಿದರೆ ಕಪ್ಪು ಕಲೆಗಳು ಮಾಯವಾಗುತ್ತವೆ.

ಟ್ಯಾನ್ ತೆಗೆಯಲು ಸಹಾಯ ಮಾಡುವ ಫೇಸ್‌ಪ್ಯಾಕ್‌

ಅಕ್ಕಿಹಿಟ್ಟಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಟ್ಯಾನ್ ಹೋಗಲಾಡಿಸಲು ಸಹಾಯ ಮಾಡುತ್ತದೆ. ಎರಡು ಚಮಚ ಅಕ್ಕಿ ಹಿಟ್ಟಿಗೆ, ಒಂದು ಚಮಚ ಜೇನುತುಪ್ಪ ಮತ್ತು 1 ಚಮಚ ರೋಸ್ ವಾಟರ್ ಸೇರಿಸಿ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಟ್ಯಾನ್ ಆದ ಜಾಗಕ್ಕೆ ಹಚ್ಚಿ. 10-15 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ ಎರಡು ಬಾರಿ ಪುನಾರವರ್ತಿಸಿ.

ಒಣ ಚರ್ಮಕ್ಕೆ ನೀಡುತ್ತೆ ಉತ್ತಮ ಪೋಷಣೆ

ಚಳಿಗಾಲದಲ್ಲಿ ಚರ್ಮ ಒಣಗುತ್ತದೆ. ಅಕ್ಕಿ ಹಿಟ್ಟು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಅಕ್ಕಿ ಹಿಟ್ಟು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ. ಒರಟುತನವನ್ನು ಕಡಿಮೆ ಮಾಡುತ್ತದೆ, ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ನಿಮ್ಮ ತ್ವಚೆಯನ್ನು ಮೃದುವಾಗಿಸಲು, 2 ಚಮಚ ಅಕ್ಕಿ ಹಿಟ್ಟು, ಎರಡು ಚಮಚ ಅಲೋವೆರಾ ಜೆಲ್‌ ಮತ್ತು ಒಂದು ಚಮಚ ಸವತೆಕಾಯಿಯ ರಸ ತೆಗೆದುಕೊಳ್ಳಿ. ಅವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ ಎರಡು ಬಾರಿ ಈ ಪ್ಯಾಕ್ಅನ್ನು ಹಾಕಿಕೊಳ್ಳಿ.

ಹೊಳೆಯುವ ತ್ವಚೆಗೆ

ಹೊಳೆಯುವ ತ್ವಚೆಗಾಗಿ, ಟೊಮೆಟೊ ಪೇಸ್ಟ್‌ಗೆ, ಒಂದು ಚಮಚ ಅಕ್ಕಿ ಹಿಟ್ಟು ಮತ್ತು 1 ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮುಖ, ಕುತ್ತಿಗೆ ಮತ್ತು ಕೈಗಳಿಗೆ ಅನ್ವಯಿಸಿ. ಇದನ್ನು 15-20 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ. ಎರಡು ದಿನಕ್ಕೊಮ್ಮೆ ಹೀಗೆ ಮಾಡಿದರೆ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.

ಅಕ್ಕಿಹಿಟ್ಟಿನಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಸಹ, ಅದನ್ನು ಬಳಸುವ ಮೊದಲು ನಿಮ್ಮ ತ್ವಚೆಯ ಬಗ್ಗೆ ತಿಳಿದುಕೊಳ್ಳಿ. ವ್ಯಕ್ತಿಯಿಂದ ವ್ಯಕ್ತಿಗೆ ತ್ವಚೆಯಲ್ಲಿ ಬದಲಾವಣೆಯಿರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ