Nail Health: ಪದೇ ಪದೇ ಉಗುರಿನ ಅಂದ, ಆರೋಗ್ಯ ಕೆಡ್ತಾ ಇದ್ಯಾ, ಹಾಗಿದ್ರೆ ನೀವು ಈ ವಿಚಾರಗಳತ್ತ ಗಮನ ಹರಿಸಲೇಬೇಕು
Feb 18, 2024 03:56 PM IST
ಪದೇ ಪದೇ ಉಗುರಿನ ಅಂದ, ಆರೋಗ್ಯ ಕೆಡ್ತಾ ಇದ್ಯಾ, ಹಾಗಿದ್ರೆ ನೀವು ಈ ವಿಚಾರಗಳತ್ತ ಗಮನ ಹರಿಸಲೇಬೇಕು
- ಉಗುರು ಚೆನ್ನಾಗಿದ್ರೆ ಕೈಗಳ ಅಂದವೂ ಹೆಚ್ಚುತ್ತದೆ. ಹಾಗಾಗಿ ನೀಳವಾದ, ಅಂದದ ಉಗುರನ್ನು ಎಲ್ಲವೂ ಬಯಸುವುದು ಸಹಜ. ಆದರೆ ಕೆಲವರಿಗೆ ಪದೇ ಪದೇ ಉಗುರಿನ ಅಂದ, ಆರೋಗ್ಯ ಕೆಡುತ್ತದೆ. ಇದಕ್ಕೆ ಈ ಕೆಲವು ಅಂಶಗಳೇ ಪ್ರಮುಖ ಕಾರಣ. ಇದರ ಮೇಲೆ ಗಮನ ಹರಿಸಲೇಬೇಕು.
ನೀಳವಾದ ಉಗುರು ತಮ್ಮದಾಗಿರಬೇಕು ಎಂದು ಎಲ್ಲವೂ ಬಯಸುತ್ತಾರೆ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ಸುಂದರ ಉಗುರುಗಳು ಬರುವುದಿಲ್ಲ. ಉಗುರು ಸ್ವಲ್ಪ ಉದ್ದವಾದ ತಕ್ಷಣ ತುಂಡಾಗುತ್ತದೆ. ಇದಕ್ಕೆ ಕಾರಣ ಉಗುರು ದುರ್ಬಲವಾಗಿರುವುದು. ಕೆಲವರಿಗೆ ಉಗುರು ಬೆಂಡಾಗಿರುತ್ತದೆ. ಇದರಿಂದೆಲ್ಲಾ ಒಂದು ರೀತಿಯ ಮುಜುಗರ ಉಂಟಾಗುವುದು ಸಹಜ. ಅದಕ್ಕಾಗಿ ಕೆಲವರು ಆರ್ಟಿಫಿಶಿಯಲ್ ಉಗುರಿನ ಮೊರೆ ಹೋಗುತ್ತಾರೆ. ಹಾಗಂತ ಇದು ಎಷ್ಟು ದಿನ ಹೀಗೆ ಇರಲು ಸಾಧ್ಯ. ನೈಸರ್ಗಿಕ ಉಗುರುಗಳು ಚೆನ್ನಾಗಿ ಬೆಳೆಯಲು ಜೀವನಶೈಲಿ ಕೂಡ ಬಹಳ ಮುಖ್ಯವಾಗುತ್ತದೆ. ಇದರೊಂದಿಗೆ ಮೆನಿಕ್ಯೂರ್ ಕೂಡ ಅವಶ್ಯ ಎನ್ನುತ್ತಾರೆ ತಜ್ಞರು.
ಉಗುರು ದುರ್ಬಲವಾಗಲು ಕಾರಣವೇನು?
ನಮ್ಮ ಉಗುರುಗಳು ಕೆರಾಟಿನ್ ಪದರಗಳಿಂದ ಮಾಡಲ್ಪಟ್ಟಿದೆ. ಇದು ನಮ್ಮ ಕೂದಲು ಹಾಗೂ ಚರ್ಮದಲ್ಲಿ ಕಂಡು ಬರುವ ಪ್ರೊಟೀನ್ ಅಂಶವಾಗಿದೆ. ವಯಸ್ಸಾದಂತೆ ನಮ್ಮ ದೇಹದಲ್ಲಿನ ಜೀವಕೋಶಗಳು ಕೆರಾಟಿನ್ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ. ಇದು ಉಗುರುಗಳು ದುರ್ಬಲವಾಗಲು ಹಾಗೂ ಶುಷ್ಕವಾಗಿ ಮಂದವಾಗಿ ಕಾಣುವಂತೆ ಮಾಡುತ್ತದೆ.
ಕೆಲವೊಮ್ಮೆ ಅತಿಯಾಗಿ ಕೈ ತೊಳೆಯುವುದು, ರಾಸಾಯನಿಕ ಉತ್ಪನ್ನಗಳ ಬಳಕೆಯೂ ಉಗುರು ಒಣಗಲು ಕಾರಣವಾಗಬಹುದು. ಉಗುರಿಗೆ ಬಳಸುವ ಜೆಲ್ ಕೂಡ ಕೆಲವೊಮ್ಮೆ ಗಂಭೀರ ಹಾನಿ ಉಂಟು ಮಾಡಬಹುದು. ಆದರೆ ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ತುಂಡಾಗುವ ಉಗುರುಗಳನ್ನು ಸದೃಢಗೊಳಿಸಬಹುದು.
ಉಗುರು ಹಾನಿಗೊಳಗಾಗುವ ಲಕ್ಷಣಗಳು
* ಬಣ್ಣ ಬದಲಾಗುವುದು (ಉಗುರು ಹಳದಿ ಬಣ್ಣಕ್ಕೆ ತಿರುಗುವುದು, ಬಿಳಿ ಹಾಗೂ ಕಪ್ಪು ಕಲೆ ಉಂಟಾಗುವುದು)
* ಉಗುರು ತೆಳುವಾಗುವುದು
* ಉಗುರಿನ ಆಕಾರದಲ್ಲಿ ಬದಲಾವಣೆ
* ಉಗುರಿನ ಸಿಪ್ಪೆ ಏಳುವುದು.
ಉಗುರುಗಳನ್ನು ಸದೃಢಗೊಳಿಸುವುದು ಹೇಗೆ?
ನಿಮ್ಮ ಉಗುರು ಹಾಗೂ ಕೈಗಳಿಗೆ ಮಾಯಿಶ್ಚರೈಸ್ ಮಾಡಿ: ಆಗಾಗ ನಿಮ್ಮ ಉಗುರು ಹಾಗೂ ಉಗುರಿನ ಸುತ್ತಲಿನ ಚರ್ಮಕ್ಕೆ ಮಾಯಿಶ್ಚರೈಸರ್ ಕ್ರೀಮ್ ಹಚ್ಚಿ. ಅಕ್ವಾಫೋರ್ ಹೀಲಿಂಗ್ ಆಯಿಂಟ್‌ಮೆಂಟ್‌ನಂತಹ ಮುಲಾಮುಗಳು ನಿಮ್ಮ ಉಗುರುಗಳನ್ನು ಪೋಷಿಸುತ್ತವೆ. ಕ್ಯೂಟಿಕಲ್ ಆಯಿಲ್ ದುರ್ಬಲ ಉಗುರುಗಳನ್ನು ಸರಿಪಡಿಸಲು, ಪೋಷಿಸಲು ಮತ್ತು ಆರ್ಧ್ರಕಗೊಳಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಶಿಯಾ ಬಟರ್ ಅನ್ನು ಕೂಡ ಉಗುರಿಗೆ ಹಚ್ಚಬಹುದು.
ಅತಿ ಉದ್ದ ಬೇಡ: ಕೆಲವರಿಗೆ ಅತಿ ಉದ್ದದ ಉಗುರು ಬೆಳೆಸುವ ಮೂಲಕ ಕೈಗಳ ಅಂದ ಹೆಚ್ಚಿಸಿಕೊಳ್ಳುವ ಬಯಕೆ. ಆದರೆ ಕೆಲವೊಮ್ಮೆ ಉಗುರು ಉದ್ದ ಬೆಳೆಸುವುದರಿಂದ ಪದೇ ಪದೇ ತುಂಡಾಗಬಹುದು. ನಿರ್ದಿಷ್ಟ ಉದ್ದಕ್ಕೆ ಬಂದ ನಂತರ ಉಗುರಿಗೆ ಶೇಪ್ ನೀಡಿ.
ಅಸಿಟೋನ್ ಅಂಶ ಇರುವ ನೇಲ್‌ಪಾಲಿಶ್ ರಿಮೂವರ್ ಬಳಕೆ ಸಲ್ಲ: ಅಸಿಟೋನ್ ಅಂಶ ಹೆಚ್ಚಿರುವ ನೇಲ್ ಪಾಲಿಶ್ ರಿಮೂವರ್ ಉಗುರುಗಳನ್ನು ದುರ್ಬಲಗೊಳಿಸಬಹುದು. ಇದು ಸಿಪ್ಪೆ ಏಳುವುದು, ಉಗುರಿನ ಮೇಲೆ ಬಿಳಿ ಮಚ್ಚೆಗೂ ಕಾರಣವಾಗಬಹುದು.
ಅತಿಯಾದ ಸ್ಯಾನಿಟೈಸರ್ ಬಳಕೆ ಬೇಡ: ಹ್ಯಾಂಡ್ ಸ್ಯಾನಿಟೈಜರ್‌ಗಳು ಆಲ್ಕೋಹಾಲ್ ಆಧಾರಿತವಾಗಿರುವುದರಿಂದ ಇದು ಉಗುರುಗಳನ್ನು ಒಣಗಿಸಬಹುದು. ಉಗುರು ಅತಿಯಾಗಿ ಒಣಗುವುದರಿಂದ ಇಲ್ಲದ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಸ್ಯಾನಿಟೈಸರ್ ಬಳಕೆಯ ಮಿತಿಗೂ ಗಮನ ನೀಡಬೇಕು.
ಆಹಾರ: ಉಗುರಿನ ಆರೋಗ್ಯಕ್ಕೆ ಮುಖ್ಯ ಎನ್ನಿಸುವ ಆಹಾರ ಪದಾರ್ಥಗಳ ಸೇವನೆಯೂ ಬಹಳ ಮುಖ್ಯವಾಗುತ್ತದೆ. ವಿಟಮಿನ್ ಕೊರತೆಯು ಉಗುರಿನ ತೊಂದರೆಗೆ ಪ್ರಮುಖ ಕಾರಣವಾಗಬಹುದು. ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೊಟೀನ್ ಹಾಗೂ ಕ್ಯಾಲ್ಸಿಯಂ ಅಂಶ ಇರುವುದನ್ನು ಖಚಿತ ಪಡಿಸಿಕೊಳ್ಳಿ. ತರಕಾರಿ, ಮೊಟ್ಟೆ, ಬೀಜಗಳಂತಹ ಬಯೋಟಿನ್ ಅಂಶ ಇರುವ ಆಹಾರಗಳ ಸೇವನೆ ಬಹಳ ಮುಖ್ಯ.
ಸಾಕಷ್ಟು ನೀರು ಕುಡಿಯಿರಿ: ಸಾಕಷ್ಟು ನೀರು ಕುಡಿಯವುದು ಕೂಡ ಉಗುರಿನ ಆರೋಗ್ಯಕ್ಕೆ ಬಹಳ ಮುಖ್ಯ. ಇದರಿಂದ ಉಗುರಿನ ಅಂದ ಹಾಗೂ ಆರೋಗ್ಯ ಎರಡನ್ನೂ ಸುಧಾರಿಸಿಕೊಳ್ಳಬಹುದು.
ಈ ಎಲ್ಲಾ ಮಾರ್ಗಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಉಗುರಿನ ಅಂದ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಜೊತೆಗೆ ಇದು ನಿಮ್ಮ ಕೈಗಳ ಅಂದ ಹೆಚ್ಚಲು ಕೂಡ ಸಹಕಾರಿ.
(This copy first appeared in Hindustan Times Kannada website. To read more like this please logon to kannada.hindustantimes.com )
ವಿಭಾಗ