Bengaluru News: ಬೆಂಗಳೂರಿನಲ್ಲಿ ಶೇ 20ರಷ್ಟು ಹೆಚ್ಚಿದ ಡೆಂಗಿ ಪ್ರಕರಣಗಳು; ಜುಲೈ, ಆಗಸ್ಟ್‌ನಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ
Jul 06, 2023 07:14 PM IST
ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಡೆಂಗಿ ಪ್ರಕರಣ
- Dengue Cases In Bangalore: ಬೆಂಗಳೂರಿನಲ್ಲಿ ಡೆಂಗಿ ಪ್ರಕರಣಗಳಲ್ಲಿ ಗಣನೀಯವಾಗಿ ಏರಿಕೆ ಕಾಡುತ್ತಿದೆ. ಈಗಾಗಲೇ ಶೇ 20ರಷ್ಟು ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಗಂಭೀರ ಪ್ರಕರಣಗಳು ದಾಖಲಾಗದ ಕಾರಣ ಹೆದರುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕೆ ವಹಿಸಬೇಕು ಎನ್ನುತ್ತಾರೆ ವೈದ್ಯರು.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ದಿನಕ್ಕೆ 20ಕ್ಕಿಂತ ಕಡಿಮೆ ಡೆಂಗಿ ಪ್ರಕರಣಗಳು ವರದಿಯಾಗಿದ್ದರೆ ಜೂನ್ ತಿಂಗಳಲ್ಲಿ ಈ ಸಂಖ್ಯೆ 100ಕ್ಕೆ ಏರಿದೆ. ಮೇ ಅಂತ್ಯಕ್ಕೆ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಜೂನ್‌ನಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಸಮಗ್ರ ಆರೋಗ್ಯ ಮಾಹಿತಿ ವೇದಿಕೆ(ಐಎಚ್‌ಐಪಿ) ತಿಳಿಸಿದೆ.
ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್‌ಫಾರ್ಮ್ ಬೆಂಗಳೂರಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮಾಹಿತಿಗಳನ್ನು ಕ್ರೋಡೀಕರಿಸಿ ತನ್ನ ಪೋರ್ಟಲ್‌ನಲ್ಲಿ ಪ್ರಕಟಿಸುತ್ತದೆ.
ಮೇ ಅಂತ್ಯಕ್ಕೆ ಡೆಂಗಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಆರಂಭವಾಗಿ ಜೂನ್‌ನಲ್ಲಿ ಹೆಚ್ಚಳವಾಗುತ್ತದೆ. ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಳವಾಗುತ್ತವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳು ವರದಿಯಾಗಬಹುದು. ಗಂಭೀರವಾದ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ರೋಗಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಡೆಂಗಿಯಿಂದ ದಾಖಲಾಗುವವರ ಸಂಖ್ಯೆ ಏಪ್ರಿಲ್, ಮೇಗೆ ಹೋಲಿಸಿದರೆ ಜೂನ್ ತಿಂಗಳಲ್ಲಿ ಶೇ 10 ರಿಂದ 20ರಷ್ಟು ಹೆಚ್ಚಳ ಕಂಡಿದೆ ಎಂದು ವೈದ್ಯರು ಹೇಳುತ್ತಾರೆ.
ಮಕ್ಕಳಲ್ಲಿ ಹೆಚ್ಚುತ್ತಿದೆ ಪ್ರಕರಣ
ʼಈ ಬಾರಿ ಆಸ್ಪತ್ರೆಗೆ ಡೆಂಗಿ ಪರೀಕ್ಷೆಗೆ ಮಕ್ಕಳು ಹೆಚ್ಚು ಬರುತ್ತಿರುವುದು ಆತಂಕ ಮೂಡಿಸಿದೆ. ಈ ಜ್ವರ ಸಾಮಾನ್ಯವಾಗಿ ಮೂರರಿಂದ ನಾಲ್ಕು ದಿನಗಳವರೆಗೆ ಇರುತ್ತದೆ. ಆದರೆ, ಈ ಬಾರಿ ಏಳರಿಂದ ಹತ್ತು ದಿನಗಳವರೆಗೆ ಜ್ವರ ಮುಂದುವರಿದಿದೆ. ಇದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲೂ ವ್ಯತ್ಯಯ ಉಂಟಾಗುತ್ತದೆʼ ಎಂದು ವೈದ್ಯರು ಹೇಳುತ್ತಾರೆ.
ಡೆಂಗಿ ರೋಗಿಗಳ ಪೈಕಿ ಶೇ 10 ರಷ್ಟು ಮಕ್ಕಳೇ ಕಂಡು ಬರುತ್ತಿದ್ದಾರೆ. ಆಗಸ್ಟ್‌ವರೆಗೆ ಮಕ್ಕಳು ಡೆಂಗಿ ಸೋಂಕಿಗೆ ಒಳಗಾಗುವ ಸಂಖ್ಯೆ ಹೆಚ್ಚಾಗಬಹುದು ಎನ್ನುತ್ತಾರೆ.
ಶೇಕಡಾ ಒಂದರಿಂದ ಎರಡರಷ್ಟು ರೋಗಿಗಳು ಮಾತ್ರ ಐಸಿಯುಗೆ ದಾಖಲಾಗುತ್ತಿದ್ದಾರೆ. ಇದು ಡೆಂಗಿ ಪ್ರಭಾವ ಗಂಭೀರವಾಗಿಲ್ಲ ಎನ್ನುವುದನ್ನು ತೋರಿಸುತ್ತದೆ.
ಮಳೆಗಾಲ ಆರಂಭವಾಗಿದ್ದು, ಹವಾಮಾನ ಬದಲಾವಣೆಯಿಂದ ಇಂತಹ ಪ್ರಕರಣಗಳು ಹೆಚ್ಚಾಗುವುದು ಸಾಮಾನ್ಯ. ಹಾಗೆಂದು ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಏಪ್ರಿಲ್-ಮೇಗೆ ಹೋಲಿಸಿದರೆ ಕೆಮ್ಮು, ಶೀತ, ಅಸ್ತಮಾದಂತಹ ರೋಗಲಕ್ಷಣಗಳನ್ನು ಹೊಂದಿರುವವರ ಸಂಖ್ಯೆ ಶೇ 20 ರಿಂದ 30 ರಷ್ಟು ಹೆಚ್ಚಾಗಿದೆ. ಆದರೆ, ಸಂಖ್ಯೆ ಅಥವಾ ತೀವ್ರತೆಯ ವಿಷಯದಲ್ಲಿ ಪರಿಸ್ಥಿತಿಯು ಆತಂಕಕಾರಿಯಾಗಿಲ್ಲ ಎನ್ನುವುದು ಸಮಾಧಾನಕರ ಅಂಶವಾಗಿದೆ.
ಬೆಂಗಳೂರಿನಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿವೆ. ಜೂನ್ 28ರವರೆಗೆ ರಾಜ್ಯದಲ್ಲಿ 2024 ಪ್ರಕರಣಗಳು ದಾಟಿವೆ. ಕಳೆದ ವರ್ಷವೂ ಇಷ್ಟೇ ಪ್ರಕರಣಗಳು ಅಂದರೆ 2014 ದಾಖಲಾಗಿದ್ದವು. ಬೆಂಗಳೂರಿನಲ್ಲಿ 732 ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ ದಾಖಲಾದ ಪ್ರಕರಣಗಳು 2022ರ ಮೊದಲ ಆರು ತಿಂಗಳಲ್ಲಿ ದಾಖಲಾದ ಪ್ರಕರಣಗಳಷ್ಟೆ ಇವೆ. ಆದರೆ ಬಿಬಿಎಂಪಿ ವ್ಯಾಪ್ತಿ ಸೇರಿದಂತೆ 15 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ರಾಜ್ಯದ ಸರಾಸರಿಗಿಂತ ಶೇ 5.8ರಷ್ಟು ಹೆಚ್ಚಾಗಿದೆ. ಇದು ಆರೋಗ್ಯ ಇಲಾಖೆಗೆ ಕಳವಳ ತಂದಿದೆ.
ವಿವಿಧ ಜಿಲ್ಲೆಗಳ ಡೆಂಗಿ ವಿವರ ಹೀಗಿದೆ
ರಾಜ್ಯದ ಒಟ್ಟು ಡೆಂಗಿ ಪ್ರಕರಣಗಳಲ್ಲಿ ಶೇ 36ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ಕಂಡು ಬಂದಿವೆ. 2022ರ ಜೂನ್ ತಿಂಗಳಲ್ಲಿ 388 ಪ್ರಕರಣಗಳು ಕಂಡು ಬಂದಿದ್ದರೆ, 2023ರ ಜೂನ್‌ನಲ್ಲಿ 732 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ಹೊರತುಪಡಿಸಿದರೆ ಮೈಸೂರಿನಲ್ಲಿ 175, ವಿಜಯಪುರದಲ್ಲಿ 113, ಚಿತ್ರದುರ್ಗದಲ್ಲಿ 91 ಮತ್ತು ಬೆಳಗಾವಿ ಜಿಲ್ಲೆಯಲ್ಲಿ 78 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನಲ್ಲಿ ಡೆಂಗಿ ನಿಯಂತ್ರಣಕ್ಕೆ ವಲಯವಾರು ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಪ್ರತಿಯೊಂದು ಪ್ರಕರಣದ ಮೇಲೆ ನಿಗಾ ವಹಿಸಲು ಮೊಬೈಲ್ ಅಪ್ಲಿಕೇಶನ್ ಮತ್ತು ಡೆಂಗಿ ಡ್ಯಾಶ್ ಬೋರ್ಡ್ ಅಭಿವೃದ್ಧಿಪಡಿಸಿದೆ. ಹೆಚ್ಚು ಪ್ರಕರಣಗಳು ಕಂಡು ಬಂದ ವಲಯಗಳಲ್ಲಿ ನಿಗಾ ವಹಿಸಲು ಸಹಾಯಕವಾಗುತ್ತದೆ.
ವರದಿ: ಎಚ್.ಮಾರುತಿ
ಇದನ್ನೂ ಓದಿ: Dengue: ಮಳೆಯ ಕಣ್ಣಮುಚ್ಚಾಲೆಯ ನಡುವೆ ಹೆಚ್ಚುತ್ತಿದೆ ಡೆಂಗಿ ಜ್ವರದ ಲಕ್ಷಣ; ಇರಲಿ ಮುನ್ನೆಚ್ಚರಿಕೆ
ವಿಭಾಗ