logo
ಕನ್ನಡ ಸುದ್ದಿ  /  ಜೀವನಶೈಲಿ  /  Bengaluru: ಬೆಂಗಳೂರಿನಿಂದ ಪ್ರವಾಸ ಹೊರಡುವಿರಾ? ಉದ್ಯಾನನಗರಿಯಿಂದ 50 ಕಿಮೀ ವ್ಯಾಪ್ತಿಯೊಳಗಿನ ಸುಂದರ ಪ್ರವಾಸಿ ತಾಣಗಳಿವು

Bengaluru: ಬೆಂಗಳೂರಿನಿಂದ ಪ್ರವಾಸ ಹೊರಡುವಿರಾ? ಉದ್ಯಾನನಗರಿಯಿಂದ 50 ಕಿಮೀ ವ್ಯಾಪ್ತಿಯೊಳಗಿನ ಸುಂದರ ಪ್ರವಾಸಿ ತಾಣಗಳಿವು

Meghana B HT Kannada

Jul 23, 2023 11:00 AM IST

google News

ಬೆಂಗಳೂರಿನಿಂದ 50 ಕಿಮೀ ವ್ಯಾಪ್ತಿಯೊಳಗಿನ ಸುಂದರ ಪ್ರವಾಸಿ ತಾಣಗಳು

    • Tourist places near Bengaluru: ಬೆಂಗಳೂರಿನಿಂದ 50 ಕಿಲೋ ಮೀಟರ್​ ವ್ಯಾಪ್ತಿಯೊಳಗಿರುವ ಸುಂದರ ಪ್ರವಾಸಿ ತಾಣಗಳ ಪಟ್ಟಿ ಇಲ್ಲಿದೆ.. ಮತ್ತ್ಯಾಕೆ ತಡ, ವೀಕೆಂಡ್​ನಲ್ಲಿ ಭೇಟಿ ನೀಡಿ.. 
ಬೆಂಗಳೂರಿನಿಂದ 50 ಕಿಮೀ ವ್ಯಾಪ್ತಿಯೊಳಗಿನ ಸುಂದರ ಪ್ರವಾಸಿ ತಾಣಗಳು
ಬೆಂಗಳೂರಿನಿಂದ 50 ಕಿಮೀ ವ್ಯಾಪ್ತಿಯೊಳಗಿನ ಸುಂದರ ಪ್ರವಾಸಿ ತಾಣಗಳು

ಬೆಂಗಳೂರಿನಲ್ಲಿ ವಾಸವಿದ್ದೀರಾ? ವೀಕೆಂಡ್​ನಲ್ಲಿ ಹೊರಗಡೆ ಹೋಗಲು ಪ್ಲಾನ್​ ಮಾಡುತ್ತಿದ್ದೀರಾ? ಹಾಗಿದ್ರೆ ಮತ್ತ್ಯಾಕೆ ತಡ. ಬೆಂಗಳೂರಿನಿಂದ 50 ಕಿಲೋ ಮೀಟರ್​ ವ್ಯಾಪ್ತಿಯೊಳಗೆ ಕೆಲವು ಸುಂದರ ಪ್ರವಾಸಿ ತಾಣಗಳಿವೆ. ವಾರಾಂತ್ಯದಲ್ಲಿ ಭೇಟಿ ನೀಡಿ ಎಂಜಾಯ್​ ಮಾಡಿ..

1. ನೆಲಮಂಗಲ: ಬೆಂಗಳೂರು ನಗರದ ಉತ್ತರ ಭಾಗದಲ್ಲಿರುವ ನೆಲಮಂಗಲ ನಿಮ್ಮ ವೀಕೆಂಡ್​ ರಜೆಯನ್ನು ಕಳೆಯಲು ಸೂಕ್ತ ಸ್ಥಳವಾಗಿದೆ. ಬೆಂಗಳೂರಿನಿಂದ ಸುಮಾರು 30 ಕಿಲೋ ಮೀಟರ್​ ದೂರದಲ್ಲಿರುವ ಈ ಪ್ರದೇಶವು ಆಧ್ಯಾತ್ಮಿಕತೆಯ ಛಾಯೆಯನ್ನು ನೀಡುತ್ತದೆ. ಈ ಅದ್ಭುತವಾದ ವಾಸ್ತುಶಿಲ್ಪ ಹೊಂದಿರುವ ದೇವಾಲಯಗಳನ್ನು ಕಣ್ತುಂಬಿಕೊಳ್ಳುವ ಜೊತೆ ನಿಸರ್ಗ ಸೌಂದರ್ಯವನ್ನು ಸವಿಯಬಹುದು.

2. ನೃತ್ಯಗ್ರಾಮ (Dance Village): ನಾಟ್ಯಕ್ಕೆ ಮೀಸಲಾದ ಈ ಗ್ರಾಮ ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ. ಬೆಂಗಳೂರಿನಿಂದ 38 ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮವು ಪ್ರಸಿದ್ಧ ಒಡಿಶಾ ನೃತ್ಯಗಾರ್ತಿಯಾದ ಪ್ರೊತಿಮಾ ಬೇಡಿಯ ಪರಿಕಲ್ಪನೆಯಾಗಿದೆ. ಆಕೆಯು ನಾಟ್ಯಕ್ಕಾಗಿಯೇ ಮೀಸಲಾದ ಒಂದು ಹಳೆಯ ಗುರುಕುಲ ಮಾದರಿಯ ಗ್ರಾಮವನ್ನು ನಿರ್ಮಿಸಬೇಕು ಎಂಬ ಆಲೋಚನೆಯೆ ಸಾಕಾರವಾಗಿ ಈ ಗ್ರಾಮ ಜನ್ಮ ತಳೆಯಿತು. ಈ ಗ್ರಾಮದ ವಿನ್ಯಾಸವನ್ನು ಸುಪ್ರಸಿದ್ಧ ವಾಸ್ತುಶಿಲ್ಪಿಯಾದ ಗೆರಾರ್ಡ್ ಡ ಕ್ಯುಂಚರವರು ರಚಿಸಿದರು. ಹಸಿರು ಮರಗಳು ಮತ್ತು ಮಣ್ಣಿನ ಮನೆಗಳು ನೃತ್ಯಗ್ರಾಮಕ್ಕೆ ಒಂದು ದೇಸಿ ಕಳೆಯನ್ನು ಒದಗಿಸಿದೆ. ವಸಂತ ಋತುವಿನ ಆಗಮನವನ್ನು ಸ್ವಾಗತಿಸಲು ಇಲ್ಲಿ ಜರುಗುವ ವಸಂತ ಹಬ್ಬ ಉತ್ಸವದ ಸಮಯ ಇಲ್ಲಿಗೆ ಭೇಟಿ ನೀಡಲು ಹೇಳಿ ಮಾಡಿಸಿದಂತಹ ಸಮಯವಾಗಿದೆ. ಆಗ ಇಲ್ಲಿನ ಬಯಲು ರಂಗ ಮಂದಿರದಲ್ಲಿ ವಿಶ್ವದ ನಾನಾ ಮೂಲೆಗಳಿಂದ ಆಗಮಿಸಿದಂತಹ ನೃತ್ಯ ಕಲಾವಿದರು ಈ ಉತ್ಸವದಲ್ಲಿ ಪಾಲ್ಗೊಂಡು ಪ್ರದರ್ಶನ ನೀಡುತ್ತಾರೆ.

3. ರಾಮನಗರ: ಬಾಲಿವುಡ್​​ನ ಐಕಾನಿಕ್ ಸಿನಿಮಾ ಶೋಲೆ ಚಿತ್ರೀಕರಣ ನಡೆದದ್ದು ಇದೇ ರಾಮನಗರದ ದೊಡ್ಡ ಬಂಡೆ ಇರುವ ಜಾಗದಲ್ಲಿ . ಬೆಂಗಳೂರಿನಿಂದ 48 ಕಿಲೋ ಮೀಟರ್​ ದೂರದಲ್ಲಿರುವ ರಾಮನಗರಕ್ಕೆ ವಾರಾಂತ್ಯದಲ್ಲಿ ಬಂದು ನೀವು ಟ್ರೆಕ್ಕಿಂಗ್ ಕೈಗೊಳ್ಳಬಹುದು. ಕ್ಯಾಂಪಿಂಗ್, ರಾಕ್ ಕ್ಲೈಂಬಿಂಗ್​ ಮಾಡಬಹುದು. ಇಲ್ಲಿನ ಸ್ಥಳೀಯರು ಮೈಸೂರು ಸೀರೆಗಳನ್ನು ಮಾರಾಟ ಮಾಡುತ್ತಾರೆ. ಮಹಿಳೆಯರು ಇವುಗಳನ್ನು ಕೊಳ್ಳಬಹುದು.

4.ದೊಡ್ಡ ಆಲದ ಮರ: ಬೆಂಗಳೂರಿನಿಂದ 30 ಕಿಲೋ ಮೀಟರ್​ ದೂರದಲ್ಲಿರುವ ಕೇತೋಹಳ್ಳಿ ಗ್ರಾಮದಲ್ಲಿರುವ ದೊಡ್ಡ ಆಲದ ಮರವನ್ನ ಒಮ್ಮೆಯಾದರೂ ನೋಡಿ. 3 ಎಕರೆ ವಿಸ್ತೀರ್ಣದಲ್ಲಿರುವ ಈ ಆಲದ ಮರ ವಿಶ್ವದ ಅತಿದೊಡ್ಡ ಆಲದ ಮರವಾಗಿದೆ. ಈ ದೈತ್ಯ ಮರವು 400 ವರ್ಷಗಳಿಗಿಂತ ಹಳೆಯದು. ಮರದ ಸುತ್ತಲಿನ ಪ್ರದೇಶವು ಹಚ್ಚ ಹಸಿರಿನಿಂದ ಕೂಡಿದ್ದು ಪಿಕ್ನಿಕ್​ಗೆ ಹೇಳಿ ಮಾಡಿಸಿದ ತಾಣವಾಗಿದೆ.

5. ಗುಹಾಂತರ ರೆಸಾರ್ಟ್: ಗುಹೆಯಂತೆ ನಿರ್ಮಿಸಲಾದ ಈ ರೆಸಾರ್ಟ್​ನಲ್ಲಿ ಕಾಲ ಕಳೆಯುವುದೇ ಒಂದು ಸ್ವರ್ಗ. ಬೆಂಗಳೂರಿನಿಂದ 33 ಕಿಲೋ ಮೀಟರ್​ ದೂರದಲ್ಲಿರುವ ಈ ಗುಹೆಯಂತ ರೆಸಾರ್ಟ್​ನೊಳಗೆ ಅಂಡರ್​ಗ್ರೌಂಡ್, ಬಿದಿರಿನ ಸೇತುವೆ, ಕ್ವಾಡ್ ಬೈಕ್, ಬಂಗೀ ಟ್ರ್ಯಾಂಪೊಲೈನ್, ಡ್ಯಾನ್ಸ್ ಫ್ಲೋರ್‌ ಇದೆ. ನೀವು ಸ್ನೇಹಿತರೊಂದಿಗೆ ಬಂದು ಎಂಜಾಯ್​ ಮಾಡಲು ಬೆಸ್ಟ್ ಪ್ಲೇಸ್​ ಆಗಿದೆ.

6. ಸಾವನದುರ್ಗ ಬೆಟ್ಟ: ಪ್ರಪಂಚದ ಅತಿದೊಡ್ಡ ಏಕಶಿಲಾ ಬೆಟ್ಟ ಇದಾಗಿದೆ. ಇಲ್ಲಿ ಕರಿಗುಡ್ಡ, ಬಿಳಿಗುಡ್ಡ ಎಂಬ ಎರಡು ಗುಡ್ಡಗಳಿವೆ. ಬೆಂಗಳೂರಿನಿಂದ 49 ಕಿಲೋ ಮೀಟರ್ ದೂರದಲ್ಲಿರುವ ಈ ಬೆಟ್ಟ ಟ್ರೆಕ್ಕಿಂಗ್​ಗೆ ಉತ್ತಮ ತಾಣವಾಗಿದೆ. ಈ ಬೆಟ್ಟವು ಸರಾಸರಿ ಸಮುದ್ರ ಮಟ್ಟಕ್ಕಿಂತ 1226 ಮೀಟರ್​ ಎತ್ತರದಲ್ಲಿದೆ.

7.ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ: ಇದು ಬೆಂಗಳೂರಿನಿಂದ 22 ಕಿಲೋ ಮೀಟರ್​ ದೂರದಲ್ಲಿರುವ ವನ್ಯಜೀವಿ ಪ್ರವಾಸಿ ತಾಣ. ಹಚ್ಚ ಹಸಿರಿನ ಕಾಡುಗಳ ನಡುವೆ ಸಫಾರಿ ಮಾಡುತ್ತಾ ಹುಲಿ-ಸಿಂಹಗಳು ಸೇರಿದಂತೆ ವಿವಿಧ ಪ್ರಾಣಿ-ಪಕ್ಷಿಗಳನ್ನು ಕಣ್ತುಂಬಿಕೊಳ್ಳಿ. 1970 ರಲ್ಲಿ ಸ್ಥಾಪಿಸಲಾದ ಬನ್ನೇರುಘಟ್ಟ ಉದ್ಯಾನವನವನ್ನು 1974 ರಲ್ಲಿ ಭಾರತದ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು.

8. ಜಾನಪದ ಲೋಕ: ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಎಚ್.ಎಲ್. ನಾಗೇಗೌಡ ಅವರ ಬಹುದಿನದ ಕಲ್ಪನೆಯ ಕೂಸು ಜನಪದ ಲೋಕ. ಕರ್ನಾಟಕದ ಸ್ಥಳೀಯ ಜಾನಪದ ಸಂಸ್ಕೃತಿನ್ನು ಇದು ಬಿಂಬಿಸುತ್ತದೆ. ಬೆಂಗಳೂರಿನಿಂದ ಸುಮಾರು 50 ಕಿಲೋ ಮೀಟರ್​ ದೂರದಲ್ಲಿರುವ ಜಾನಪದ ಲೋಕದಲ್ಲಿ ಇಡೀ ಗ್ರಾಮೀಣ ಸಂಸ್ಕೃತಿಯ ಹೂರಣವೇ ಅಡಗಿದೆ. ಜಾನಪದ ಕಲೆಗಳು ಮತ್ತು ಕರಕುಶಲತೆಗಳ ವಸ್ತುಸಂಗ್ರಹಾಲಯವಾಗಿದೆ. ಮಹಾದ್ವಾರ, ಚಿತ್ರ ಕುಟೀರ, ಶಿಲ್ಪಮಾಲ, ಲೋಕಮಹಲ್ ಇದರ ವಿಶೇಷತೆಗಳು. ಇಲ್ಲಿ ಛಾಯಾಗ್ರಹಣವನ್ನು ಅನುಮತಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ