Cyber Crime: ಈ ಸಂಖ್ಯೆಗಳಿಂದ ಬರುವ ಕರೆಗಳನ್ನು ಅಪ್ಪಿತಪ್ಪಿಯೂ ಸ್ವೀಕರಿಸಬೇಡಿ: ಸರ್ಕಾರದಿಂದ ಎಚ್ಚರಿಕೆ!
Dec 09, 2024 05:29 PM IST
ನಿರ್ದಿಷ್ಟ ಸಂಖ್ಯೆಗಳಿಂದ ಬರುವ ಕರೆಗಳಿಗೆ ಉತ್ತರಿಸದಂತೆ ಮೊಬೈಲ್ ಬಳಕೆದಾರರಿಗೆ ಸರ್ಕಾರ ನಿರ್ದೇಶನ ನೀಡಿದೆ
Cyber Crime: ನಿರ್ದಿಷ್ಟ ಸಂಖ್ಯೆಗಳಿಂದ ಬರುವ ಕರೆಗಳಿಗೆ ಉತ್ತರಿಸದಂತೆ ಎಲ್ಲಾ ಮೊಬೈಲ್ ಬಳಕೆದಾರರಿಗೆ ಸರ್ಕಾರ ನಿರ್ದೇಶನ ನೀಡಿದೆ. ಇದಲ್ಲದೆ, ಈ ಸಂಖ್ಯೆಗಳಿಂದ ಬರುವ ಕರೆಗಳನ್ನು ದೂರಸಂಪರ್ಕ ಇಲಾಖೆಯ ಚಕ್ಷು ಪೋರ್ಟಲ್‌ನಲ್ಲಿ ವರದಿ ಮಾಡುವಂತೆಯೂ ಸೂಚಿಸಿದೆ. (ವರದಿ: ವಿನಯ್ ಭಟ್)
ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ವಂಚನೆಗಳ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ದಿನದಿಂದ ದಿನಕ್ಕೆ ಜನರು ಹಲವಾರು ರೀತಿಯ ವಂಚನೆಗಳಿಗೆ ಒಳಗಾಗುತ್ತಿದ್ದಾರೆ. ಇವುಗಳಲ್ಲಿ ಫಿಶಿಂಗ್, ಮೊಬೈಲ್ ಹ್ಯಾಕಿಂಗ್, ಎಸ್‌ಎಂಎಸ್ ಮೂಲಕ ವಂಚನೆ, ಡಿಜಿಟಲ್ ಬಂಧನ ಇತ್ಯಾದಿ ವಿವಿಧ ವಿಧಾನಗಳು ಸೇರಿವೆ. ಅದೇ ಧಾಟಿಯಲ್ಲಿ, ಡಿಜಿಟಲ್ ಬಂಧನದಿಂದ ಉಂಟಾಗುವ ನಷ್ಟದಿಂದ ರಕ್ಷಿಸಿಕೊಳ್ಳಲು ಸರ್ಕಾರವು ಎಚ್ಚರಿಕೆಗಳನ್ನು ನೀಡಿದೆ.
ಸರ್ಕಾರದ ಆದೇಶಗಳು
ದೇಶದಲ್ಲಿ 120 ಕೋಟಿಗೂ ಹೆಚ್ಚು ಮೊಬೈಲ್ ಬಳಕೆದಾರರಿದ್ದಾರೆ. ಇದೀಗ ನಿರ್ದಿಷ್ಟ ಸಂಖ್ಯೆಗಳಿಂದ ಬರುವ ಕರೆಗಳಿಗೆ ಉತ್ತರಿಸದಂತೆ ಎಲ್ಲಾ ಮೊಬೈಲ್ ಬಳಕೆದಾರರಿಗೆ ಸರ್ಕಾರ ನಿರ್ದೇಶನ ನೀಡಿದೆ. ಇದಲ್ಲದೆ, ಈ ಸಂಖ್ಯೆಗಳಿಂದ ಬರುವ ಕರೆಗಳನ್ನು ದೂರಸಂಪರ್ಕ ಇಲಾಖೆಯ ಚಕ್ಷು ಪೋರ್ಟಲ್‌ನಲ್ಲಿ ವರದಿ ಮಾಡುವಂತೆಯೂ ಸೂಚಿಸಿದೆ. DoT ತನ್ನ ಅಧಿಕೃತ X (ಹಿಂದೆ Twitter) ಖಾತೆಯಲ್ಲಿ ಈ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅಂತಾರಾಷ್ಟ್ರೀಯ ಕೋಡ್ ಕುರಿತು ಮಾಹಿತಿಯನ್ನು ಶೇರ್ ಮಾಡಿಕೊಂಡಿದೆ. ಇಲಾಖೆಯು ತನ್ನ ಪೋಸ್ಟ್‌ನಲ್ಲಿ, "ಈ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸುವ ಮೊದಲು ಎಚ್ಚರದಿಂದಿರಿ" ಎಂದು ಹೇಳಿದೆ.
ಈ ಕೋಡ್‌ನೊಂದಿಗೆ ಬರುವ ಕರೆಗಳನ್ನು ನಿರ್ಲಕ್ಷಿಸಿ
+77
+89
+85
+86
+84
ಈ ಸಂಖ್ಯೆಯಿಂದ DoT ಅಥವಾ TRAI ಎಂದಿಗೂ ಕರೆ ಮಾಡುವುದಿಲ್ಲ ಎಂದು ಇಲಾಖೆ ಹೇಳಿದೆ. ಈ ಸಂಖ್ಯೆಗಳಿಂದ ನೀವು ಕರೆಗಳನ್ನು ಸ್ವೀಕರಿಸಿದರೆ, ಯಾವುದೇ ಸಂದರ್ಭದಲ್ಲಿ ಕರೆಗಳನ್ನು ಸ್ವೀಕರಿಸದಂತೆ ಸಲಹೆ ನೀಡಲಾಗಿದೆ. ಒಂದು ವೇಳೆ ನಿಮಗೆ ಕರೆ ಬಂದರೆ ಸಂಚಾರ ಸಾಥಿ ಅಧಿಕೃತ ವೆಬ್‌ಸೈಟ್‌ನಲ್ಲಿ ಚಕ್ಷುವಿನ ಸಹಾಯದಿಂದ ವರದಿ ಮಾಡಿ. ಅಂತಹ ಸಂಖ್ಯೆಗಳನ್ನು ನಿರ್ಬಂಧಿಸಲು, ಇತರರನ್ನು ಸುರಕ್ಷಿತವಾಗಿರಿಸಲು DoT ನ ಸಹಾಯವನ್ನು ತೆಗೆದುಕೊಳ್ಳಿ ಎಂದು ಹೇಳಿದೆ.
ಚಕ್ಷು ಪೋರ್ಟಲ್ ಎಂದರೇನು?
ಸರ್ಕಾರವು ಕೆಲವು ತಿಂಗಳ ಹಿಂದೆ ಚಕ್ಷು ಪೋರ್ಟಲ್ ಅನ್ನು ಪ್ರಾರಂಭಿಸಿತು. ಇದರ ಸಹಾಯದಿಂದ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ನಕಲಿ ಕರೆಗಳನ್ನು ವರದಿ ಮಾಡಬಹುದು. ಪೋರ್ಟಲ್‌ನಲ್ಲಿ ಸಂಖ್ಯೆಯನ್ನು ವರದಿ ಮಾಡಿದ ನಂತರ, ಸರ್ಕಾರವು ಅದನ್ನು ಬ್ಲಾಕ್ ಲಿಸ್ಟ್ಗೆ ಸೇರಿಸುತ್ತದೆ. ಮೇಲಿನ ಸಂಖ್ಯೆಯಿಂದ ಯಾರಾದರೂ ತಮ್ಮ ಮೊಬೈಲ್‌ಗೆ ಕರೆ ಸ್ವೀಕರಿಸಿದರೆ, ತಕ್ಷಣ ಅದನ್ನು ಪೋರ್ಟಲ್‌ನಲ್ಲಿ ವರದಿ ಮಾಡಿ.
ಸೈಬರ್ ಕ್ರೈಮ್ ತಡೆಗಟ್ಟಲು ಸರ್ಕಾರ ಕೆಲವು ಹೊಸ ನಿಯಮಗಳನ್ನು ಪರಿಚಯಿಸಿದೆ. ಅಕ್ಟೋಬರ್ 1 ರಿಂದ ವಂಚನೆಯ ಕರೆಗಳಿಗಾಗಿ ಡಿಎಲ್‌ಟಿ (ಡಿಸ್ಟ್ರಿಬ್ಯೂಟೆಡ್ ಲೀಡರ್‌ಶಿಪ್ ಟ್ರ್ಯಾಕಿಂಗ್) ವ್ಯವಸ್ಥೆಯನ್ನು ಜಾರಿಗೆ ತರಲು ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿತ್ತು. ಡಿಸೆಂಬರ್ 11 ರಿಂದ, SMS ಟ್ರೇಸಬಿಲಿಟಿ ನಿಯಮವೂ ಜಾರಿಗೆ ಬರಲಿದೆ, ಇದು ಮೋಸದ ಮೆಸೇಜ್ಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡುತ್ತದೆ. ಇದರ ಜೊತೆಗೆ ರೈಟ್ ಆಫ್ ವೇ (RoW) ನಿಯಮ ಜನವರಿ 1, 2025 ರಿಂದ ಜಾರಿಗೆ ಬರಲಿದೆ.
ವರದಿ: ವಿನಯ್ ಭಟ್