Bladder Cancer: ಏನಿದು ಮೂತ್ರಕೋಶದ ಕ್ಯಾನ್ಸರ್, ಈ ರೋಗದ ಲಕ್ಷಣಗಳು ಚಿಕಿತ್ಸಾ ವಿಧಾನ ಹೇಗೆ? ಇಲ್ಲಿದೆ ಮಾಹಿತಿ
Feb 20, 2024 12:00 PM IST
ಏನಿದು ಮೂತ್ರಕೋಶದ ಕ್ಯಾನ್ಸರ್, ಈ ರೋಗದ ಲಕ್ಷಣಗಳು ಚಿಕಿತ್ಸಾ ವಿಧಾನ ಹೇಗೆ? ಇಲ್ಲಿದೆ ಮಾಹಿತಿ
Bladder Cancer: ಇತ್ತೀಚಿನ ದಿನಗಳಲ್ಲಿ ಮೂತ್ರಕೋಶದ ಕ್ಯಾನ್ಸರ್ ಅನೇಕರನ್ನು ಕಾಡುತ್ತಿದೆ. ಮೂತ್ರಕೋಶದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆದ ಪರಿಣಾಮ ಮೂತ್ರಕೋಶದ ಕ್ಯಾನ್ಸರ್ ಉಂಟಾಗುತ್ತದೆ. ಈ ಕಾಯಿಲೆಯ ಲಕ್ಷಣಗಳೇನು..? ಈ ರೋಗದ ಚಿಕಿತ್ಸಾ ವಿಧಾನಗಳೇನು..? ಇಲ್ಲಿದೆ ಮಾಹಿತಿ
ಮೂತ್ರಕೋಶದ ಕ್ಯಾನ್ಸರ್: ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ ಮೂತ್ರಕೋಶದ ಕ್ಯಾನ್ಸರ್‌ಗೆ ಬಲಿಯಾದ ವಿಚಾರ ನಿಮಗೆ ನೆನಪಿದ್ದಿರಬಹುದು. ಇತ್ತೀಚಿನ ದಿನಗಳಲ್ಲಿ ಮೂತ್ರಕೋಶದ ಕ್ಯಾನ್ಸರ್ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಲಕ್ಷಾಂತರು ಜನರು ಮೂತ್ರಕೋಶದ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾದರೆ ಈ ಮೂತ್ರಕೋಶದ ಕಾಯಿಲೆಯ ಲಕ್ಷಣಗಳೇನು..? ಇದು ಹೇಗೆ ಸಂಭವಿಸುತ್ತೆ..? ಇವೆಲ್ಲದರ ಬಗ್ಗೆ ತಿಳಿದುಕೊಳ್ಳೋಣ.
ಮೂತ್ರಕೋಶದ ಕ್ಯಾನ್ಸರ್ ಲಕ್ಷಣ
ಮೂತ್ರಕೋಶದ ಒಳಗೆ ಅಸಹಜ ಕೋಶಗಳು ಬೆಳೆದು ಕ್ರಮೇಣ ಇವುಗಳು ಕ್ಯಾನ್ಸರ್‌ಗಳಾಗಿ ಪರಿವರ್ತನೆಗೊಳ್ಳುತ್ತದೆ. ಮೂತ್ರಕೋಶಗಳಲ್ಲಿ ಗಡ್ಡೆಗಳ ರೀತಿಯಲ್ಲಿ ಕ್ಯಾನ್ಸರ್ ಬೆಳೆಯುತ್ತಾ ಹೋಗುತ್ತದೆ. ಮೂತ್ರಕೋಶದ ಕ್ಯಾನ್ಸರ್‌ಗೆ ಒಳಗಾದ ರೋಗಿಯು ತ್ವರಿತವಾಗಿ ತೂಕ ನಷ್ಟ ಹೊಂದುತ್ತಾ ಹೋಗುತ್ತಾನೆ. ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ವಿಪರೀತ ನೋವು ಉಂಟಾಗುತ್ತದೆ. ಅಲ್ಲದೇ ಸೊಂಟದ ನೋವು ಕೂಡ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳಲು ಆರಂಭಗೊಳ್ಳುತ್ತದೆ.
ಮುಂಜಾಗ್ರತಾ ಕ್ರಮ
ಮೂತ್ರಕೋಶದ ಕ್ಯಾನ್ಸರನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದಲ್ಲಿ ಅಪಾಯದಿಂದ ಪಾರಾಗಲು ಸಾಧ್ಯವಿದೆ. ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ನಿಮಗೆ ಸೊಂಟದ ಭಾಗದಲ್ಲಿ ವಿಪರೀತವಾದ ನೋವು ಕಾಣಿಸಿಕೊಳ್ಳಲು ಆರಂಭಿಸಿದರೆ ನೀವು ಕೂಡಲೇ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.
ಪರೀಕ್ಷಾ ವಿಧಾನ
ಒಬ್ಬ ವ್ಯಕ್ತಿಯು ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೋ, ಇಲ್ಲವೋ ಎಂಬುದನ್ನು ಪತ್ತೆ ಮಾಡಲು ವೈದ್ಯರು ವಿವಿಧ ರೀತಿಯಲ್ಲಿ ಮೂತ್ರದ ತಪಾಸಣೆ ಮಾಡುತ್ತಾರೆ. ಇದರ ಜೊತೆಯಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಹಾಗೂ ಮೂತ್ರಕೋಶದ ಸುತ್ತ ಸಿಟಿ ಅಥವಾ ಎಂಆರ್‌ಐ ಪರೀಕ್ಷೆ ನಡೆಸಲಾಗುತ್ತದೆ. ಸಿಸ್ಟೋಸ್ಕೋಪಿ ಮೂಲಕವೂ ಮೂತ್ರಕೋಶದ ಕ್ಯಾನ್ಸರ್ ಪತ್ತೆ ಮಾಡಲು ಸಾಧ್ಯವಿದೆ. ಈ ಪರೀಕ್ಷೆಯಲ್ಲಿ ಮೂತ್ರಕೋಶದ ಒಳಗೆ ಕ್ಯಾಮರಾ ಹಾಗೂ ತೆಳುವಾದ ಟ್ಯೂಬ್ಸ್ ಬಳಸಿ ಕ್ಯಾನ್ಸರ್ ಗಡ್ಡೆಯನ್ನು ಪತ್ತೆ ಮಾಡುವ ಕಾರ್ಯ ಮಾಡಲಾಗುತ್ತದೆ.
ಚಿಕಿತ್ಸಾ ವಿಧಾನ
ನೀವು ಯಾವ ಹಂತದಲ್ಲಿ ಮೂತ್ರಕೋಶದ ಕ್ಯಾನ್ಸರ್ ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದೀರಿ ಎಂಬುದರ ಮೇಲೆ ವೈದ್ಯರು ನಿಮಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಎಲ್ಲಾ ಇತರೆ ಕ್ಯಾನ್ಸರ್ ಚಿಕಿತ್ಸೆಯಂತೆ ಮೂತ್ರಕೋಶದ ಕ್ಯಾನ್ಸರ್‌ಗೂ ಕಿಮೋಥೆರಪಿ, ವಿಕಿರಣ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯೇ ಪರಿಹಾರವಾಗಿದೆ. ಪ್ರಾಥಮಿಕ ಹಂತದಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲು ಯತ್ನಿಸುತ್ತಾರೆ. ಕ್ಯಾನ್ಸರ್ ಗಡ್ಡೆಗಳನ್ನು ನಾಶ ಮಾಡಲು ಕಿಮೋಥೆರಪಿಯನ್ನು ಬಳಸಲಾಗುತ್ತದೆ. ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲು ವಿಕಿರಣ ಚಿಕಿತ್ಸೆಯನ್ನು ವೈದ್ಯರು ಬಳಸುತ್ತಾರೆ. ಮೂತ್ರಪಿಂಡ ತೀರಾ ದುರ್ಬಲವಾಗಿದ್ದರೆ ವೈದ್ಯರು ಇಮ್ಯುನೋಥೆರಪಿ ಮೊರೆ ಹೋಗುತ್ತಾರೆ.
ಮೂತ್ರಕೋಶದ ಕ್ಯಾನ್ಸರ್‌ನಿಂದ ಪಾರಾಗಲು ತಂಬಾಕು ಸೇವನೆಯನ್ನು ನಿಲ್ಲಿಸಬೇಕು. ತರಕಾರಿ ಹಾಗೂ ಹಣ್ಣುಗಳಿಂದ ಕೂಡಿದ ಆರೋಗ್ಯಕರ ಆಹಾರಗಳನ್ನು ಹೆಚ್ಚೆಚ್ಚು ಸೇವಿಸಬೇಕು. ಹಾಗೂ ಸರಿಯಾಗಿ ನೀರು ಕುಡಿಯಬೇಕು. ಆರೋಗ್ಯಕರ ಜೀವನಶೈಲಿಯೊಂದೇ ಕ್ಯಾನ್ಸರ್‌ನಿಂದ ಪಾರಾಗಲು ಇರುವ ಏಕೈಕ ಮಾರ್ಗವಾಗಿದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.
ವಿಭಾಗ