Book Lovers Day: ಇಂದು ಪುಸ್ತಕ ಪ್ರೇಮಿಗಳ ದಿನ; ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ
Aug 09, 2023 08:36 AM IST
ಆಗಸ್ಟ್ 9 ಪುಸ್ತಕ ಪ್ರೇಮಿಗಳ ದಿನ
- Book Lovers Day 2023: ಕಲಿಕೆ ಮತ್ತು ಜ್ಞಾನವನ್ನು ಹುಡುಕುವ ಉದ್ದೇಶಕ್ಕಾಗಿ ಪುಸ್ತಕಗಳನ್ನು ಓದುವ ಮತ್ತು ಆನಂದಿಸುವ ಅಭ್ಯಾಸವನ್ನು ಮರಳಿ ತರಲು ಪುಸ್ತಕ ಪ್ರೇಮಿಗಳು ಈ ದಿನವನ್ನು ಆಚರಿಸುತ್ತಾರೆ. ಪ್ರತಿವರ್ಷ ಆಗಸ್ಟ್ 9 ರಂದು ಪುಸ್ತಕ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ.
ಈ ಜಗತ್ತಿನಲ್ಲಿ ಹಲವರು ಪುಸ್ತಕ ಪ್ರೇಮಿಗಳು. ಪುಸ್ತಕ ಓದುತ್ತಾ ಜಗವನ್ನೇ ಮರೆಯುವ ನಾವು, ನಮ್ಮ ಹಲವು ನೋವು, ದುಃಖ, ಬೇಸರವನ್ನು ಮರೆಸುವ ಸಂಗಾತಿಯಾಗಿ ಪುಸ್ತಕವನ್ನು ಪ್ರೀತಿಸುತ್ತೇವೆ. ಪುಸ್ತಕ ಓದುತ್ತಾ ಕುಳಿತು ಬಿಟ್ಟರೆ ಹಗಲು, ರಾತ್ರಿ ಎನ್ನುವುದರ ಅರಿವೂ ಆಗುವುದಿಲ್ಲ. ಅಷ್ಟರ ಮಟ್ಟಿಗೆ ಅದು ನಮ್ಮನ್ನು ಆವರಿಸುತ್ತದೆ. ಮಾತ್ರವಲ್ಲ ಪುಸ್ತಕ ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸುವುದೂ ಸತ್ಯ.
ಪುಸ್ತಕಗಳು ಕಲ್ಪನೆ, ದೃಷ್ಟಿಕೋನ ಮತ್ತು ಆಲೋಚನೆಗಳು ಬದಲಿಸುವ ಶಕ್ತಿಯನ್ನು ಹೊಂದಿವೆ. ಅದೆಲ್ಲಾ ಸರಿ ಪುಸ್ತಕದ ಬಗ್ಗ ಇಷ್ಟೊಂದು ಮಾತುಗಳು ಏಕೆ ಎಂದು ಯೋಚಿಸುತ್ತಿದ್ದೀರಾ, ಅಂದ ಹಾಗೆ ಇಂದು ಪುಸ್ತಕ ಪ್ರೇಮಿಗಳ ದಿನ.
ಕಲಿಕೆಯಲ್ಲಿನ ಸಂತೋಷ, ಓದುವ ಅಪಾರ ಆನಂದ, ಪುಸ್ತಕಗಳ ಮೂಲಕ ಜ್ಞಾನವನ್ನು ಹುಡುಕುವ ಉತ್ಸಾಹವನ್ನು ಆಚರಿಸುವ ಉದ್ದೇಶದಿಂದ ಪ್ರತಿ ವರ್ಷವೂ ಪುಸ್ತಕ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು. ಅವು ನಮಗೆ ಬೆಳೆಯಲು ಮತ್ತು ಕಲಿಯಲು ಸಹಾಯ ಮಾಡುತ್ತವೆ. ಪುಸ್ತಕಗಳಿಗೆ ನಮ್ಮನ್ನು ಬೇರೆಯದ್ದೇ ಪ್ರಪಂಚಕ್ಕೆ ಕರೆದುಕೊಂಡು ಹೋಗುವ ಶಕ್ತಿ ಇದೆ.
ಪುಸ್ತಕ ಪ್ರೇಮಿಗಳ ದಿನದ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.
ದಿನ
ಪ್ರತಿವರ್ಷ ಆಗಸ್ಟ್ 9 ರಂದು ಪುಸ್ತಕ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಎಂದು, ಯಾವ ಕಾರಣಕ್ಕೆ ಹುಟ್ಟಿಕೊಂಡಿತು ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಈ ದಿನವನ್ನು ಪುಸ್ತಕ ಪ್ರೇಮಿಗಳು ಸಂಭ್ರಮದಿಂದ ಆಚರಿಸುತ್ತಾರೆ.
ಇತಿಹಾಸ
1436ರಲ್ಲಿ ಬೈಬಲ್‌ಗಳನ್ನು ಮುದ್ರಿಸುವ ಪ್ರಧಾನ ಉದ್ದೇಶದಿಂದ ಜೋಹಾನ್ಸ್ ಗುಟೆನ್‌ಬರ್ಗ್ ಜರ್ಮನಿಯಲ್ಲಿ ಮುದ್ರಣ ಯಂತ್ರವನ್ನು ಕಂಡುಹಿಡಿಯುತ್ತಾರೆ. ನಂತರ ಶೀಘ್ರದಲ್ಲೇ ಬೈಬಲ್‌ನೊಂದಿಗೆ ಬೇರೆಯದನ್ನು ಮುದ್ರಿಸಲು ಆರಂಭಿಸಲಾಗಿತ್ತು. ಅವುಗಳಲ್ಲಿ ಪುಸ್ತಕಗಳೂ ಒಂದು. ಪ್ರಿಂಟಿಂಗ್ ಪ್ರೆಸ್, ಟೈಪ್ ರೈಟರ್ ಮತ್ತು ಕಂಪ್ಯೂಟರ್, ಇತಿಹಾಸದುದ್ದಕ್ಕೂ, ಪುಸ್ತಕಗಳನ್ನು ಗ್ರಹಿಸುವ, ಮುದ್ರಿಸುವ ಮತ್ತು ಮಾರಾಟ ಮಾಡುವ ವಿಧಾನಕ್ಕೆ ಅಪಾರ ಕೊಡುಗೆ ನೀಡಿದೆ. ಹೀಗೆ ಹುಟ್ಟಿಕೊಂಡ ಪುಸ್ತಕದ ಜೊತೆ ಪುಸ್ತಕ ಪ್ರೇಮಿಗಳೂ ಹುಟ್ಟಿಕೊಂಡರು. ಇಂದು ಕೆಲವರು ಪುಸ್ತಕಗಳನ್ನು ಬರೆಯುತ್ತಾ ಜ್ಞಾನ ಹೆಚ್ಚಿಸಿಕೊಂಡರೆ, ಇನ್ನೂ ಕೆಲವರು ಪುಸ್ತಕಗಳನ್ನು ಓದುತ್ತಾ ಜ್ಞಾನ ಹೆಚ್ಚಿಸಿಕೊಳ್ಳುತ್ತಾರೆ.
ಮಹತ್ವ
ಓದುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಅಥವಾ ದುಷ್ಪರಿಣಾಮಗಳಿಲ್ಲ. ಓದುವುದರಿಂದ ಮನಸ್ಸು ವಿಸ್ತಾರವಾಗುತ್ತದೆ. ಇದು ಹೊಸ ಅನುಭವಗಳಿಗೆ ತೆರೆದುಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಮತ್ತಷ್ಟು ಆಳವಾದ ದೃಷ್ಟಿಕೋನದೊಂದಿಗೆ ಯೋಚಿಸಲು ಇದು ನಮಗೆ ಸಹಾಯ ಮಾಡುತ್ತದೆ. ಇದು ಕಲಿಕೆಯ ಜೊತೆಗೆ ಕೆಲ ಹೊತ್ತು ವಾಸ್ತವದಿಂದ ನಮ್ಮನ್ನು ದೂರ ಇಡಲು ಸಹಾಯ ಮಾಡುತ್ತದೆ. ಕಲಿಕೆ ಮತ್ತು ಜ್ಞಾನವನ್ನು ಹುಡುಕುವ ಉದ್ದೇಶಕ್ಕಾಗಿ ಪುಸ್ತಕಗಳನ್ನು ಓದುವ ಮತ್ತು ಆನಂದಿಸುವ ಅಭ್ಯಾಸವನ್ನು ಮರಳಿ ತರಲು ಪುಸ್ತಕ ಪ್ರೇಮಿಗಳು ಈ ದಿನವನ್ನು ಆಚರಿಸುತ್ತಾರೆ.