Education Loan: ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುತ್ತೀರಾ; ಈ ಅಂಶಗಳನ್ನು ಪಾಲಿಸಿದ್ರೆ ನಿಮ್ಮ ಆರ್ಥಿಕ ಹೊರೆ ಕಡಿಮೆಯಾಗಲಿದೆ
Jul 04, 2023 08:00 AM IST
ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಅಂಶಗಳನ್ನು ಪಾಲಿಸಿ
- Education Loan: ಶಿಕ್ಷಣ ಸಾಲ ಅಥವಾ ಎಜುಕೇಶನ್ ಲೋನ್‌ಗೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
ತಮ್ಮ ಇಚ್ಛೆಯ ಕೋರ್ಸ್‌ಗಳನ್ನು ಇಷ್ಟಪಟ್ಟ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಡೆಯಲು ಹೆಚ್ಚಿನ ವಿದ್ಯಾರ್ಥಿಗಳು ಎಜುಕೇಶನ್ ಲೋನ್ (Education loan) ಮೊರೆ ಹೋಗುತ್ತಾರೆ. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಸಾಲವು ಪ್ರಮುಖ ಆಯ್ಕೆಯಾಗಿದೆ. ತಮ್ಮದೇ ಸ್ವಂತ ಬಲದಲ್ಲಿ ಬಯಸಿದ ಕೋರ್ಸ್‌ಗಳನ್ನು ಮುಂದುವರೆಸಲು ಈ ವ್ಯವಸ್ಥೆ ಅನುವು ಮಾಡಿಕೊಡುತ್ತದೆ. ಆದರೆ, ಸಾಲದ ಬಡ್ಡಿ ದರ, ಸಾಲ ಮರುಪಾವತಿಯ ಅವಧಿ ಸೇರಿದಂತೆ ಹಲವಾರು ಅಂಶಗಳು ವಿದ್ಯಾರ್ಥಿಯು ಭರಿಸಬೇಕಾದ ಶಿಕ್ಷಣ ಸಾಲದ ಒಟ್ಟಾರೆ ವೆಚ್ಚದ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ ಅತಿಯಾದ ವೆಚ್ಚವನ್ನು ತಪ್ಪಿಸಲು ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಎಚ್ಚರ ವಹಿಸುವ ಅಗತ್ಯವಿದೆ.
ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ಅಂಶಗಳನ್ನು ಪರಿಗಣಿಸಿ
ಅರ್ಹತೆ (Eligibility)
ಶಿಕ್ಷಣ ಸಾಲಗಳಿಗೆ ವಿವಿಧ ಬ್ಯಾಂಕ್‌ಗಳು ಅಥವಾ ಸಾಲದಾತರು ವಿಭಿನ್ನ ಅರ್ಹತಾ ಮಾನದಂಡಗಳನ್ನು ಅನುಸರಿಸುತ್ತಾರೆ. ಕೆಲವು ಬ್ಯಾಂಕ್‌ಗಳು ವಿದೇಶದಲ್ಲಿ ಅಧ್ಯಯನ ಮಾಡಲು ಮಾತ್ರ ಎಜುಕೇಶನ್ ಲೋನ್ ನೀಡುತ್ತವೆ. ಇನ್ನೂ ಕೆಲವು ಬ್ಯಾಂಕ್‌ಗಳು ದೇಶ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಯನಕ್ಕಾಗಿ ಸಾಲವನ್ನು ನೀಡುತ್ತವೆ. ಇವೆಲ್ಲವನ್ನು ವಿಚಾರಿಸಿಕೊಂಡು ಸಾಲಕ್ಕೆ ಮುಂದುವರೆಯಿರಿ.
ಬಡ್ಡಿ ದರ (Interest rates)
ಯಾವುದೇ ಸಾಲವನ್ನು ಪಡೆಯುವವರು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶ ಬಡ್ಡಿ ದರ. ಬಡ್ಡಿ ದರಗಳು ಮತ್ತು ಸಂಸ್ಕರಣಾ ಶುಲ್ಕಗಳು ವಿದ್ಯಾರ್ಥಿಯು ಭರಿಸಬೇಕಾದ ನೇರ ವೆಚ್ಚಗಳಾಗಿವೆ. ಶಿಕ್ಷಣ ಸಾಲಗಳ ಬಡ್ಡಿದರಗಳು ಪ್ರಾಥಮಿಕವಾಗಿ ವಿದ್ಯಾರ್ಥಿಯ ಕೋರ್ಸ್, ವಿಶ್ವವಿದ್ಯಾನಿಲಯ ಮತ್ತು ಶೈಕ್ಷಣಿಕ ದಾಖಲೆಯನ್ನು ಅವಲಂಬಿಸಿರುತ್ತದೆ. ಅಲ್ಲದೆ, ಕ್ರೆಡಿಟ್ ರೇಟಿಂಗ್, ಮೇಲಾಧಾರ ಇತ್ಯಾದಿ ಅಂಶಗಳು ಬಡ್ಡಿದರಗಳ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ಸಾಧ್ಯವಾದಷ್ಟು ಕಡಿಮೆ ದರವನ್ನು ಪಡೆಯಲು ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಥಿಗಳು ತಮ್ಮ ಕ್ರೆಡಿಟ್ ರೇಟಿಂಗ್ ಅನ್ನು ಸುಧಾರಿಸಬೇಕು. ಅಥವಾ ಬಡ್ಡಿದರ ಕಡಿಮೆ ಇರುವ ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕು.
ಸಾಲ ಮರುಪಾವತಿ
ಸಾಲದ ಮರುಪಾವತಿಯ ನಿಯಮಗಳು ಆಯಾ ಬ್ಯಾಂಕ್‌ಗಳು ಅಥವಾ ಫೈನಾನ್ಸ್ ಸಂಸ್ಥೆ ಮತ್ತು ಸಾಲದ ಪ್ರಕಾರವನ್ನು ಅವಲಂಬಿಸಿ ಭಿನ್ನವಾಗಿರುತ್ತವೆ. ಇಲ್ಲಿ ಸಾಮಾನ್ಯವಾಗಿ ಎರಡು ಆಯ್ಕೆಗಳಿವೆ.
- ಬಡ್ಡಿ ಪಾವತಿ (With interest payment): ಸಾಲದಾರ ವಿದ್ಯಾರ್ಥಿಯು ವಿತರಿಸಿದ ಸಾಲದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು (ಪೂರ್ಣವಾಗಿ ಅಥವಾ ಭಾಗಶಃ) ಪಾವತಿಸಬೇಕಾಗುತ್ತದೆ. ಮೊರಟೋರಿಯಂ ಅವಧಿಯ ನಂತರವೇ ಪ್ರಿನ್ಸಿಪಲ್ ಮರುಪಾವತಿ ಪ್ರಾರಂಭವಾಗುತ್ತದೆ.
- ಬಡ್ಡಿ ಪಾವತಿ ರಹಿತ (Without interest payment): ಇಲ್ಲಿ ವಿದ್ಯಾರ್ಥಿಗಳು ಸಾಲ ಪಡೆದ ತಕ್ಷಣ ಬಡ್ಡಿಯನ್ನು ಪಾವತಿಸುವ ಅಗತ್ಯವಿಲ್ಲ. ಅಧ್ಯಯನದ ಅವಧಿಯಲ್ಲಿನ ಬಡ್ಡಿಯನ್ನು ಸಾಲದ ಮೊತ್ತಕ್ಕೆ ಸೇರಿಸುತ್ತಾ ಬರಲಾಗುತ್ತದೆ. ಇಎಂಐ (ಸಮಾನ ಮಾಸಿಕ ಕಂತು) ಮೊರಟೋರಿಯಂ ಅವಧಿಯ ನಂತರ ಪ್ರಾರಂಭವಾಗುತ್ತದೆ. ಅಂದರೆ ಕೋರ್ಸಿನ ಅವಧಿ ಜೊತೆಗೆ ಹೆಚ್ಚುವರಿ 6 ತಿಂಗಳು ಅಥವಾ 1 ವರ್ಷದ ಬಳಿಕ.
ಸಾಲಕ್ಕೆ ಮೊರಟೋರಿಯಂ (moratorium) ಅವಧಿ ಇಲ್ಲದಿದ್ದಾಗ, EMI ತಕ್ಷಣವೇ ಪ್ರಾರಂಭವಾಗುತ್ತದೆ. ಕೋರ್ಸ್ ಮುಗಿದ ತಕ್ಷಣ ಮರುಪಾವತಿ ಆರಂಭವಾದರೆ, ಅದು ವಿದ್ಯಾರ್ಥಿಗಳಿಗೆ ಹೊರೆಯಾಗಬಹುದು. ಹೀಗಾಗಿ, ಸಾಲವನ್ನು ತೆಗೆದುಕೊಳ್ಳುವ ಮೊದಲು ಮರುಪಾವತಿಯ ನಿಯಮಗಳನ್ನು ತಿಳಿದುಕೊಳ್ಳಬೇಕು.
ಬಡ್ಡಿ ಸಬ್ಸಿಡಿಗಳು ಮತ್ತು ಸರ್ಕಾರದ ಖಾತರಿ ಯೋಜನೆಗಳು
ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ಉತ್ತೇಜಿಸಲು ಸರ್ಕಾರವು ವಿವಿಧ ಯೋಜನೆಗಳ ಮೂಲಕ ಬಡ್ಡಿಗೆ ಸಹಾಯಧನವನ್ನು (interest subsidies) ನೀಡುತ್ತದೆ. ಈ ಸಬ್ಸಿಡಿಗಳಲ್ಲಿ ಕೇಂದ್ರ ವಲಯದ ಬಡ್ಡಿ ಸಬ್ಸಿಡಿ ಯೋಜನೆ, ಪಢಾವೋ ಪರದೇಶ್ ಯೋಜನೆ, ಕೇಂದ್ರ ಸರ್ಕಾರದ ಬಡ್ಡಿ ಸಬ್ಸಿಡಿ ಯೋಜನೆ, ಇತ್ಯಾದಿಗಳು ಪ್ರಮುಖವಾದವು. ಅಲ್ಲದೆ, ಶೈಕ್ಷಣಿಕ ಸಾಲಗಳಿಗೆ ಕ್ರೆಡಿಟ್ ಗ್ಯಾರಂಟಿ ಫಂಡ್ ಯೋಜನೆ (CGFSEL), ಕೌಶಲ್ಯ ಅಭಿವೃದ್ಧಿಗಾಗಿ ಕ್ರೆಡಿಟ್ ಗ್ಯಾರಂಟಿ ಫಂಡ್ ಯೋಜನೆ (CGFSSD) ಯಂತಹ ಯೋಜನೆಗಳಿವೆ. ಕೆಲವು ಯೋಜನೆಗಳು ವಿದೇಶಗಳಲ್ಲಿ ಅಧ್ಯಯನಕ್ಕಾಗಿ ನೆರವು ನೀಡುತ್ತವೆ. ಇಲ್ಲಿ ಪ್ರತಿಯೊಂದು ಯೋಜನೆಗಳಿಗೆ ಅರ್ಹತಾ ಮಾನದಂಡಗಳು ವಿಭಿನ್ನವಾಗಿವೆ. ಶಿಕ್ಷಣ ಸಾಲದ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಲು ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಅಂತಹ ಯಾವುದೇ ಯೋಜನೆ ತಮ್ಮ ಮಾನದಂಡಗಳಡಿ ಲಭ್ಯವಿದೆಯೇ ಎಂಬುದನ್ನು ವಿದ್ಯಾರ್ಥಿಗಳು ಪರಿಶೀಲಿಸಬೇಕು.
ಸಾಲದ ಮೊತ್ತ ಮತ್ತು ಮುಂಚಿನ ಮರುಪಾವತಿ
ಶಿಕ್ಷಣ ಸಾಲಗಳು ಉನ್ನತ ಶಿಕ್ಷಣಕ್ಕೆ ಧನಸಹಾಯದ ಅವಕಾಶವನ್ನು ಒದಗಿಸುತ್ತವೆಯಾದರೂ, ವಿದ್ಯಾರ್ಥಿಗಳು ಸಾಲದ ಮೊತ್ತವನ್ನು ಆದಷ್ಟು ಸಣ್ಣ ಮೊತ್ತಕ್ಕೆ ಸೀಮಿತವಾಗಿಸಬೇಕು. ಕಡಿಮೆ ಮೊತ್ತದ ಸಾಲಗಳನ್ನು ಮುಂಚಿತವಾಗಿ ಮರುಪಾವತಿ ಮಾಡಬಹುದು ಮತ್ತು ಬಡ್ಡಿಯನ್ನು ಉಳಿಸಬಹುದು. ಹೆಚ್ಚಿನ ಸಾಲ ತೆಗೆದುಕೊಳ್ಳುವುದರಿಂದ, ಕೆಲಸ ದೊರೆತ ಬಳಿಕ ವಿದ್ಯಾರ್ಥಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಆದ್ದರಿಂದ, ಅಗತ್ಯವಿರುವ ಮೊತ್ತಕ್ಕೆ ಮಾತ್ರ ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾದಷ್ಟು ಬೇಗ ಶಿಕ್ಷಣ ಸಾಲವನ್ನು ಮರುಪಾವತಿಸುವುದನ್ನು ಪರಿಗಣಿಸಬೇಕು.
ತೆರಿಗೆ ಯೋಜನೆ
1961ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80E ಪ್ರಕಾರ, ಒಬ್ಬ ವ್ಯಕ್ತಿ, ಅವರ ಸಂಗಾತಿ ಅಥವಾ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪಡೆದ ಶಿಕ್ಷಣ ಸಾಲದ ಮೇಲಿನ ಬಡ್ಡಿಯನ್ನು ಕಡಿತಕ್ಕೆ (deduction of interest) ಅವಕಾಶವಿದೆ. ಇದಕ್ಕೆ ಯಾವುದೇ ಮಿತಿಯಿಲ್ಲ. ಹೀಗಾಗಿ ತೆರಿಗೆ ಯೋಜನೆ ಮಾಡಿಕೊಂಡು ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವುದು ಒಳ್ಳೆಯದು.