logo
ಕನ್ನಡ ಸುದ್ದಿ  /  ಜೀವನಶೈಲಿ  /  ಆರ್‌ಡಿ Vs ಎಫ್‌ಡಿ; ಹಣ ಉಳಿತಾಯಕ್ಕೆ ಈ ಎರಡರಲ್ಲಿ ಯಾವುದು ಉತ್ತಮ ಆಯ್ಕೆ, ಇಲ್ಲಿದೆ ಉತ್ತರ

ಆರ್‌ಡಿ vs ಎಫ್‌ಡಿ; ಹಣ ಉಳಿತಾಯಕ್ಕೆ ಈ ಎರಡರಲ್ಲಿ ಯಾವುದು ಉತ್ತಮ ಆಯ್ಕೆ, ಇಲ್ಲಿದೆ ಉತ್ತರ

Reshma HT Kannada

Nov 24, 2023 07:00 AM IST

google News

ಆರ್‌ಡಿ vs ಎಫ್‌ಡಿ

    • ಹಣ ಉಳಿತಾಯದ ವಿಚಾರಕ್ಕೆ ಬಂದಾಗ ಮೊದಲು ತಲೆಯಲ್ಲಿ ಬರುವುದು ಫಿಕ್ಸೆಡ್‌ ಡೆಪಾಸಿಟ್‌ (ಎಫ್‌ಡಿ) ಹಾಗೂ ರಿಕರಿಂಗ್‌ ಡೆಪಾಸಿಟ್‌ (ಆರ್‌ಡಿ). ಈ ಎರಡೂ ಹಣ ಹೂಡಿಕೆ ಮಾಡಲು ಸುರಕ್ಷಿತ ಮಾರ್ಗವೂ ಹೌದು. ಆದರೆ ಈ ಎರಡಲ್ಲಿ ಯಾವುದು ಉತ್ತಮ ಆಯ್ಕೆ ಎಂಬ ಪ್ರಶ್ನೆ  ಮೂಡುವುದು ಸಹಜ. ಇದಕ್ಕೆ ಉತ್ತರ ಇಲ್ಲಿದೆ. 
ಆರ್‌ಡಿ vs ಎಫ್‌ಡಿ
ಆರ್‌ಡಿ vs ಎಫ್‌ಡಿ

ಹಣ ಉಳಿತಾಯ ಮಾಡಬೇಕು ಎನ್ನುವುದು ಎಲ್ಲರ ಕನಸು. ಭವಿಷ್ಯದ ದೃಷ್ಟಿಯಿಂದ ಹಣವನ್ನು ಉಳಿಸುವುದು ಅವಶ್ಯ ಕೂಡ. ಹಣಕಾಸು ನಿರ್ವಹಣೆ ಅಥವಾ ಉಳಿತಾಯದ ವಿಚಾರಕ್ಕೆ ಬಂದಾಗ ಹಲವಾರು ಹೂಡಿಕೆಯ ಮಾರ್ಗಗಳಿವೆ. ಇವುಗಳಲ್ಲಿ ಪ್ರಮುಖವಾದದ್ದು ಎಫ್‌ಡಿ ಹಾಗೂ ಆರ್‌ಡಿ. ಬಹುತೇಕರು ಹಣ ಉಳಿತಾಯಕ್ಕೆ ರಿಕರಿಂಗ್‌ ಡೆಪಾಸಿಟ್‌ ಹಾಗೂ ಫಿಕ್ಸೆಡ್‌ ಡೆಪಾಸಿಟ್‌ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಎರಡಲ್ಲೂ ಹಣ ಮರಳಿ ಸಿಗುವುದು ಪಕ್ಕಾ, ಜೊತೆಗೆ ಇದರಲ್ಲಿ ರಿಸ್ಕ್‌ ಕೂಡ ಕಡಿಮೆ. ಈ ಎರಡೂ ಮಾರುಕಟ್ಟೆಗೆ ಸಂಪರ್ಕ ಹೊಂದಿಲ್ಲದ ಕಾರಣ ಅವುಗಳನ್ನು ಅತ್ಯಂತ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಇವು ನಿಗದಿತ ದರದ ಲಾಭವನ್ನು ನೀಡುತ್ತವೆ. ಈ ಆರ್‌ಡಿ ಹಾಗೂ ಎಫ್‌ಡಿ ಎರಡೂ ಆಯ್ಕೆಗಳು ಒಂದೇ ರೀತಿ ಕಂಡರೂ ಈ ಎರಡರ ನಡುವೆ ಒಂದಿಷ್ಟು ವ್ಯತ್ಯಾಸಗಳಿವೆ.

ಎಫ್‌ಡಿ ಎಂದರೆ ಒಂದು ಬಾರಿ ಹೂಡಿಕೆ ಮಾಡುವ ಆಯ್ಕೆಯಾದರೆ, ಆರ್‌ಡಿ ಪ್ರತಿ ತಿಂಗಳು ಹೂಡಿಕೆ ಮಾಡುವ ಭಾಗವಾಗಿದೆ. ಇದು ಎಷ್ಟು ತಿಂಗಳ ಯೋಜನೆ ಎನ್ನುವುದನ್ನು ಅವಲಂಬಿಸಿ ಪ್ರತಿ ತಿಂಗಳು ಹೂಡಿಕೆ ಮಾಡಬೇಕಾಗುತ್ತದೆ. ಇದಲ್ಲದೆ ಈ ಎರಡರ ನಡುವೆ ಒಂದಿಷ್ಟು ವ್ಯತ್ಯಾಸಗಳಿವೆ. ಈ ಠೇವಣಿಗಳು ಹೇಗೆ ಭಿನ್ನವಾಗಿರುತ್ತದೆ ಮತ್ತು ಯಾವುದು ಉತ್ತಮ ಎಂಬುದನ್ನು ತಿಳಿಯಲು ಇಲ್ಲಿದೆ ವಿವರ.

ಫಿಕ್ಸೆಡ್‌ ಡೆಪಾಸಿಟ್‌

* ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ಒಂದು ಬಾರಿಗೆ ಸಾಕಷ್ಟು ಹಣವನ್ನು ಹೂಡಿಕೆ ಮಾಡಬಹುದು. ಇದನ್ನು ನಿರ್ದಿಷ್ಟ ಅವಧಿಯವರೆಗೆ ಹೂಡಿಕೆ ಮಾಡಿದರೆ ಅವಧಿ ಮುಗಿದ ಬಳಿಕ ಬಡ್ಡಿ ಸಮೇತ ಅಸಲನ್ನು ಪಡೆಯಬಹುದಾಗಿದೆ.

* ಸೆಕ್ಷನ್‌ 80ಸಿ ಅಡಿಯಲ್ಲಿ 1.5 ಲಕ್ಷದವರೆಗೆ ಎಫ್‌ಡಿ ಹೂಡಿಕೆಯು ತೆರಿಗೆ ಉಳಿತಾಯವನ್ನು ಅನುಮತಿಸುತ್ತದೆ.

* ಇದು ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದ್ದು, ಅದು ಬಡ್ಡಿಯ ರೂಪದಲ್ಲಿ ಖಾತರಿಯ ಲಾಭವನ್ನು ನೀಡುತ್ತದೆ.

* ಹೂಡಿಕೆದಾರರು ದೀರ್ಘಾವಧಿಯವರೆಗೆ ಹಣವನ್ನು ಎಫ್‌ಡಿ ಮಾಡಬಹುದು.

* ಸಾಮಾನ್ಯ ಉಳಿತಾಯ ಖಾತೆಗಳಿಗೆ ಹೋಲಿಸಿದರೆ ಎಫ್‌ಡಿಗಳ ಮೇಲಿನ ಬಡ್ಡಿ ದರಗಳು ಗಣನೀಯವಾಗಿ ಹೆಚ್ಚಿವೆ.

* ಯಾವುದೇ ತುರ್ತು ಅಥವಾ ಹಠಾತ್‌ ಸಂದರ್ಭ ಹಾಗೂ ಅಗತ್ಯಗಳಲ್ಲಿ ಹಣವನ್ನು ಮುಂಚಿತವಾಗಿ ಹಿಂಪಡೆಯಬಹುದು.

ಆರ್‌ಡಿ ಉಪಯೋಗಗಳು

* ತಮ್ಮ ಆರ್ಥಿಕ ಸ್ಥಿತಿ ಮತ್ತು ಗಳಿಕೆಯ ಆಧಾರದ ಮೇಲೆ ಹೂಡಿಕೆದಾರರು ಮಾಸಿಕವಾಗಿ ಇಂತಿಷ್ಟು ಹಣವನ್ನು ಹೂಡಿಕೆ ಮಾಡಲು ಆಯ್ಕೆ ಮಾಡಬಹುದು.

* ಹೂಡಿಕೆದಾರರು ತಮ್ಮ ಉದ್ದೇಶಗಳ ಆಧಾರದ ಮೇಲೆ ಕನಿಷ್ಠ ಆರು ತಿಂಗಳಿಂದ ಗರಿಷ್ಠ 10 ವರ್ಷಗಳವರೆಗೆ ತಮ್ಮ ಹಣವನ್ನು ಉಳಿತಾಯ ಮಾಡಬಹುದು.

* ಸೆಕ್ಷನ್‌ 80 ಸಿ ಅಡಿಯಲ್ಲಿ ಪೋಸ್ಟ್‌ ಆಫೀಸ್‌ಗಳಲ್ಲಿ ಮಾಡಿದ ಆರ್‌ಡಿಗಳು ತೆರಿಗೆ ವಿನಾಯಿತಿ ಪಡೆಯಲಿವೆ.

* ಹೂಡಿಕೆದಾರರು ಆರ್‌ಡಿ ಮೇಲೆ ಲೋನ್‌ ಪಡೆಯುವ ಅವಕಾಶವೂ ಇದೆ.

* ಸಾಮಾನ್ಯ ಉಳಿತಾಯ ಖಾತೆಗಳಿಗೆ ಹೋಲಿಸಿದರೆ ಆರ್‌ಡಿ ಮೇಲಿನ ಬಡ್ಡಿ ದರ ಗಣನೀಯವಾಗಿ ಹೆಚ್ಚಿರುತ್ತದೆ. ಆದರೆ ಎಫ್‌ಡಿಗಿಂತ ಆರ್‌ಡಿ ಬಡ್ಡಿದರ ಕಡಿಮೆ ಇರುತ್ತದೆ.

ಆರ್‌ vs ಎಫ್‌ಡಿ; ಯಾವುದು ಉತ್ತಮ

ಹೆಚ್ಚಿನ ಬಡ್ಡಿದರ ಪಡೆಯುವ ಜೊತೆಗೆ ದೀರ್ಘಾವಧಿವರೆಗೆ ಒಂದು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಲು ಬಯಸುವವರು ಎಫ್‌ಡಿ ಆಯ್ಕೆ ಮಾಡಿಕೊಳ್ಳಬಹುದು. ಪ್ರತಿತಿಂಗಳು ಒಂದಿಷ್ಟು ಹಣವನ್ನು ಮಾತ್ರ ತಮ್ಮಿಂದ ಉಳಿತಾಯ ಮಾಡಲು ಸಾಧ್ಯ ಎನ್ನುವವರು ಆರ್‌ಡಿ ಆಯ್ಕೆ ಮಾಡಿಕೊಳ್ಳಬಹುದು.

ಈ ಎರಡರ ಉಪಯೋಗ ಎಂದರೆ ಆರ್‌ಡಿ ಹಾಗೂ ಎಫ್‌ಡಿ ಎರಡೂ ಕಡಿಮೆ ಅಪಾಯದ ಹೂಡಿಕೆಯ ಆಯ್ಕೆಗಳಾಗಿವೆ. ಈ ಎರಡೂ ಒಂದಿಷ್ಟು ಬಡ್ಡಿದರ ಲಾಭದೊಂದಿಗೆ ಮರಳಿ ನಿಮ್ಮ ಖಾತೆ ಸೇರುವುದಾದರೂ ಕೂಡ ಒಂದೇ ಬಾರಿ ಹೂಡಿಕೆ ಮಾಡುವುದು ಕಷ್ಟ ಎನ್ನುವ ಕಾರಣಕ್ಕೆ ಹಲವರು ಎಫ್‌ಡಿಗಿಂತ ಆರ್‌ಡಿ ಬೆಸ್ಟ್‌ ಎನ್ನುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ