Personal Finance: ಮಕ್ಕಳ ಭವಿಷ್ಯದ ಸುರಕ್ಷತೆಗೆ ಹಣದ ಉಳಿತಾಯ ಹೇಗೆ, ಹೆತ್ತವರು ಈ 6 ಹೂಡಿಕೆ ಕಾರ್ಯತಂತ್ರಗಳನ್ನು ಗಮನಿಸಿ
Aug 08, 2023 05:00 PM IST
Personal Finance: ಮಕ್ಕಳ ಭವಿಷ್ಯದ ಸುರಕ್ಷತೆಗೆ ಹಣದ ಉಳಿತಾಯ ಹೇಗೆ
Money Savings Tips: ಭವಿಷ್ಯದ ಶಿಕ್ಷಣದ ಖರ್ಚು ಸೇರಿದಂತೆ ತಮ್ಮ ಮಕ್ಕಳ ಭವಿಷ್ಯದ ಉದ್ದೇಶಗಳಿಗಾಗಿ ಹಣ ಉಳಿತಾಯ ಮಾಡಲು ಬಯಸುವವರು ಈ ಆರು ಹೂಡಿಕೆ ಕಾರ್ಯತಂತ್ರಗಳನ್ನು ಗಮನದಲ್ಲಿರಿಸಿಕೊಳ್ಳಿ.
ಮಕ್ಕಳ ಭವಿಷ್ಯದ ಅವಶ್ಯಕತೆ ಪೂರೈಸಲು ಆರಂಭದಿಂದಲೇ ಹಣ ಹೂಡಿಕೆ ಮಾಡುವುದು ಉತ್ತಮ. ಈಗಾಗಲೇ ಭಾರತದ ಹೆತ್ತವರು, ಪೋಷಕರು ತಮ್ಮ ಮಕ್ಕಳ ಉನ್ನತ ಶಿಕ್ಷಣ, ಮದುವೆ, ಭವಿಷ್ಯದ ಹಲವು ಉದ್ದೇಶಗಳಿಗಾಗಿ ಹಲವು ಹೂಡಿಕೆಗಳನ್ನು ಮಾಡುತ್ತಾರೆ. ತಮ್ಮ ನಂತರ ಮಕ್ಕಳಿಗೆ ಕಷ್ಟವಾಗಬಾರದು ಎನ್ನುವ ಕಾರಣಕ್ಕೂ ವಿವಿಧ ಹಣಕಾಸು ಹೂಡಿಕೆಗಳನ್ನು ಮಕ್ಕಳ ಹೆಸರಲ್ಲಿ ಮಾಡಲು ಹೆತ್ತವರು ಆದ್ಯತೆ ನೀಡುತ್ತಾರೆ. ಆದರೆ, ಹೆಚ್ಚಿನ ಪೋಷಕರಿಗೆ ಹಣಕಾಸು ಯೋಜನೆಗಳ ಕುರಿತು ಸರಿಯಾದ ಅರಿವು ಇರುವುದಿಲ್ಲ. ತಮ್ಮ ಹಣಕಾಸು ಪ್ಲ್ಯಾನಿಂಗ್ ಅನು ಮರುಮೌಲ್ಯಮಾಪನ ಮಾಡಲು ಇದು ಸಕಾಲ.
ವಿಮಾ ಪಾಲಿಸಿಗಳ ಮೌಲ್ಯಮಾಪನ
ಅಸ್ತಿತ್ವದಲ್ಲಿರುವ ವಿಮಾಪಾಲಿಸಿಗಳನ್ನು ಪರಿಶೀಲಿಸಿ. ಇದು ಯಶಸ್ವಿ ಹಣಕಾಸು ಯೋಜನೆಯ ಮೊದಲ ಹೆಜ್ಜೆಯಾಗಿದೆ. ಹಲವು ಹೆಲ್ತ್ ಇನ್ಸೂರೆನ್ಸ್ಗಳು ಮಾತೃತ್ವ ವೆಚ್ಚಗಳನ್ನು ಮಾತ್ರವಲ್ಲದೆ ನವಜಾತ ಶಿಶುವಿನ ಮೊದಲ ದಿನದಿಂದ ಆರಂಭಿಕ ವ್ಯಾಕ್ಸಿನೇಷನ್ ಮತ್ತು ನಂತರದ ಆರೈಕೆಯನ್ನೂ ಒಳಗೊಂಡಿರುತ್ತದೆ. ನವಜಾತ ಶಿಶುಗಳಿಗೆ 90 ದಿನಗಳ ನಂತರ ಮಾತ್ರ ರಕ್ಷಣೆ ನೀಡುವ ಕೆಲವು ವಿಮಾ ಪೂರೈಕೆದಾರರು ಮೊದಲ 90 ದಿನಗಳನ್ನು ಅಪಾಯಕಾರಿ ಎಂದು ಪರಿಗಣಿಸುತ್ತಾರೆ. ಹೀಗಾಗಿ, ಹೆಲ್ತ್ ಇನ್ಸೂರೆನ್ಸ್ ಖರೀದಿಸುವಾಗ ಇಂತಹ ಷರತ್ತುಗಳ ಕುರಿತು ತಿಳಿದುಕೊಳ್ಳಿ. ನಿಮ್ಮ ಮಕ್ಕಳ ಭವಿಷ್ಯಕ್ಕೆ ಪೂರಕವಾದ ವಿಮೆಗಳನ್ನು ಹೊಂದಿರಿ.
ಸ್ಪಷ್ಟ ಹಣಕಾಸು ಗುರಿ ನಿಗದಿಪಡಿಸಿ
ದೀರ್ಘಕಾಲ ಮತ್ತು ಅಲ್ಪಕಾಲದಲ್ಲಿ ನಿಮ್ಮ ಹಣವನ್ನು ಹೇಗೆ ಬಳಸುವುದು ಎಂದು ಯೋಜನೆ ಮಾಡಿ. ನಿಮ್ಮ ಈಗಿನ ಹಣಕಾಸು ಸ್ಥಿತಿ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಖರ್ಚು, ವೆಚ್ಚ. ಉಳಿತಾಯ, ಜೀವನದ ಗುರಿಗಳನ್ನು ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳಿ. ಈ ಗುರಿಗಳನ್ನು ಸಾಧಿಸಲು ಬೇಕಾದ ಹಣದ ಕುರಿತು ಸ್ಪಷ್ಟತೆ ಇರಲಿ. ಈಗಿನ ಹೆತ್ತವರಿಗೆ ಮಕ್ಕಳ ಶಿಕ್ಷಣ ಪ್ರಮುಖ ಆದ್ಯತೆಯಾಗಿದೆ. ಉನ್ನತ ಶಿಕ್ಷಣಕ್ಕೆ ಹಲವು ಲಕ್ಷ ರೂಪಾಯಿ ಬೇಕಿರುವುದರಿಂದ ಹಣ ಹೊಂದಿಸುವುದು ಅಗತ್ಯ. ಈಗ ಎಲ್ಕೆಜಿಯಿಂದಲೇ ಹಲವು ಲಕ್ಷ ರೂಪಾಯಿ ಶುಲ್ಕ ಇರುತ್ತದೆ. ಇಂತಹ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಅಲ್ಪಾವಧಿ ಮತ್ತು ದೀರ್ಘಾವಧಿಯ ಹಣ ಹೂಡಿಕೆ ಮಾಡಿ.
ಆರಂಭದಲ್ಲಿಯೇ ಹೂಡಿಕೆ ಮಾಡಲು ಆರಂಭಿಸಿ
ನಿಮ್ಮ ಸಣ್ಣ ವಯಸ್ಸಿನಲ್ಲಿಯೇ ಹಣ ಹೂಡಿಕೆ ಮಾಡಿದರೆ ದೊಡ್ಡ ಮೊತ್ತ ಸಂಗ್ರಹವಾಗುತ್ತದೆ. ಹಣ ಹೂಡಿಕೆಯನ್ನು ಯುವ ಜನತೆ ತಮ್ಮ ಆರಂಭಿಕ ಉದ್ಯೋಗದ ಸಮಯದಲ್ಲಿಯೇ ಆರಂಭಿಸಲು ಆದ್ಯತೆ ನೀಡಬೇಕು. ಉದಾಹರಣೆಗೆ ಎ ಮತ್ತು ಬಿ ಎಂಬ ಇಬ್ಬರು ತಮ್ಮ ಮಗುವಿನ ಉನ್ನತ ಶಿಕ್ಷಣಕ್ಕಾಗಿ ಹಣ ಹೂಡಿಕೆ ಮಾಡಲು ಆರಂಭಿಸುತ್ತಾರೆ. ಅವರಿಗೆ ಮಗುವಿಗೆ 18 ವರ್ಷವಾದಾಗ 75 ಲಕ್ಷ ರೂಪಾಯಿ ಬೇಕು ಎಂದಿರುತ್ತದೆ. ಪ್ರತಿತಿಂಗಳು ಇವರಿಬ್ಬರು 10 ಸಾವಿರ ರೂಪಾಯಿ ಹೂಡಿಕೆ ಮಾಡುತ್ತಾರೆ. ಇವರಲ್ಲಿ ಬಿ 5 ವರ್ಷ ತಡವಾಗಿ ಹೂಡಿಕೆ ಆರಂಭಿಸುತ್ತಾರೆ. ಇಲ್ಲಿ ಎ ಖಂಡಿತವಾಗಿಯೂ ತನ್ನ ಗುರಿಯನ್ನು ಸಾಧಿಸುತ್ತಾರೆ. ಬಿ ಪೂರ್ಣ ಪ್ರಮಾಣದಲ್ಲಿ ತಾನು ಅಂದುಕೊಂಡಷ್ಟು ಮೊತ್ತವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರು ಆ ಗುರಿ ತಲುಪಲು ಇನ್ನೂ ಐದು ವರ್ಷ ಕಾಯಬೇಕು.
ಅಪಾಯ ಮತ್ತು ವೈವಿಧ್ಯತೆ
ವಿವಿಧ ಹೂಡಿಕೆಗಳು ಅದರದ್ದೇ ಆದ ಅಪಾಯಗಳನ್ನು ಹೊಂದಿರುತ್ತವೆ. ಎಲ್ಲಾ ಮೊಟ್ಟೆಗಳನ್ನು ಒಂದೇ ಬಾಸ್ಕೆಟ್ನಲ್ಲಿ ಹಾಕಬಾರದು. ನೀವು ಯಾವುದಾದರೂ ಒಂದೇ ವಿಭಾಗದಲ್ಲಿ ಹೂಡಿಕೆ ಮಾಡಬೇಡಿ. ಹೂಡಿಕೆ ವೈವಿಧ್ಯಮಯ ಹೂಡಿಕೆ ನಿಮ್ಮದಾಗಿರಲಿ.
ಸ್ಮಾರ್ಟ್ ಸ್ಪೆಂಡಿಂಗ್- ವೆಚ್ಚದ ಮೇಲೆ ನಿಗಾ
ಈಗ ಕೆಲವರು ಹೆಚ್ಚು ವೆಚ್ಚ ಮಾಡುತ್ತಾರೆ. ಆದರೆ, ಕೆಲವು ಹೆತ್ತವರು ತಮ್ಮ ಖರ್ಚುವೆಚ್ಚಗಳ ಮೇಲೆ ನಿಗಾ ಇಡುತ್ತಾರೆ. ಪ್ರತಿನಿತ್ಯದ ಖರ್ಚುವೆಚ್ಚಗಳ ಮೇಲೆ ನಿಗಾ ಇರಿಸಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ನೀವು ಏನು ಉಳಿಸುವಿರೋ ಅದು ನಿಮ್ಮ ಗಳಿಕೆಯಾಗಿರುತ್ತದೆ.
ವಿಲ್ ಅಥವಾ ನಾಮಿನಿ ಅಪ್ಡೇಟ್ ಮಾಡಿ
ಈಗಿನ ಕಾಲದಲ್ಲಿ ಯಾರಿಗೆ ಯಾವಾಗ ಏನಾಗುತ್ತದೆ ಎಂದು ಹೇಳಲಾಗದು. ನಿಮ್ಮ ಹೂಡಿಕೆಯಲ್ಲಿ ನಾಮಿನಿ ಹೆಸರು ಬರೆಯಲು ಮರೆಯಬೇಡಿ. ನಿಮ್ಮ ಮಕ್ಕಳ ಹೆಸರಲ್ಲಿ ಹೂಡಿಕೆ ಮಾಡಿ ಅವರ ಭವಿಷ್ಯ ಭದ್ರತೆ ಮಾಡಿರಿ.