Personal Finance: ತರಕಾರಿ ಗ್ರೋಸರಿ ದುಬಾರಿ ಕಾಲದಲ್ಲಿ ಹಣ ಉಳಿತಾಯ ಮಾಡುವುದು ಹೇಗೆ? ಅಡುಗೆ ಮನೆಯಲ್ಲಿ ಹಣ ಉಳಿತಾಯಕ್ಕೆ ಇಲ್ಲಿದೆ ಸಲಹೆ
Jun 28, 2023 05:52 PM IST
Personal Finance: ತರಕಾರಿ ಗ್ರೋಸರಿ ದುಬಾರಿ ಕಾಲದಲ್ಲಿ ಹಣ ಉಳಿತಾಯ ಮಾಡುವುದು ಹೇಗೆ? ಇದು ಅಡುಗೆ ಮನೆಯಲ್ಲಿ ಹಣ ಉಳಿತಾಯಕ್ಕೆ ಸಲಹೆ
- Vegetables Price Hike: ಟೊಮೆಟೊ ದರ (Tometo rate) ಗಗನಕ್ಕೆ ನೆಗೆದಿದೆ. ತರಕಾರಿ ದಿನಸಿ ಬೆಲೆ ಹೆಚ್ಚಾಗಿರುವುದರಿಂದ ಕಿಸೆಗೆ ಹೊರೆಯಾಗಿದೆ. ದಿನಸಿ ದರವೂ (Grocery price) ದುಬಾರಿಯಾಗಿ ಪರಿಣಮಿಸಿದೆ. ಇಂತಹ ಸಮಯದಲ್ಲಿ ಹಣ ಉಳಿತಾಯ ಮಾಡಲು ಬಯಸುವವರಿಗೆ ಸಲಹೆ ಇಲ್ಲಿದೆ.
ಟೊಮೆಟೊ ದರ ಗಗನಕ್ಕೆ ನೆಗೆದಿದೆ. ತರಕಾರಿ ದಿನಸಿ ಬೆಲೆ ಹೆಚ್ಚಾಗಿರುವುದರಿಂದ ಕಿಸೆಗೆ ಹೊರೆಯಾಗಿದೆ. ಬೀನ್ಸ್, ಮೆನಸಿನ ಕಾಯಿ ದರ ನೂರರ ಗಡಿ ದಾಟಿದೆ. ಕ್ಯಾರೆಟ್ ಖರೀದಿಸಲು ಕೈ ಹಿಂಜರಿಯುತ್ತಿದೆ. ಅಕ್ಕಿ, ತೊಗರಿಬೇಳೆ, ಉದ್ದಿನಬೇಳೆ, ಜೀರಿಗೆಯೂ ದುಬಾರಿಯಾಗಿದೆ. ಬ್ಯಾಡಗಿ ದರ ಕೇಳಿ ಬ್ಯಾಡಗಿ ಸದ್ಯ ಬೇಡ ಎನ್ನುತ್ತಿರಬಹುದು. ಹೀಗೆ ದಿನಸಿ ಮತ್ತು ತರಕಾರಿಗಳಲ್ಲಿ ಯಾವುದೆಲ್ಲ ಎಷ್ಟು ದುಬಾರಿಯಾಗಿದೆ ಎಂಬ ಮಾಹಿತಿ ನಿಮಗೆ ತಿಳಿದಿರಬಹುದು. ಉಳಿತಾಯ ಮಾಡಬೇಕೆಂದುಕೊಂಡ ಹಣ ಉಳಿಸಲಾಗುತ್ತಿಲ್ಲ ಎಂಬ ಚಿಂತೆಯಲ್ಲಿ ಬಹುತೇಕರು ಇರಬಹುದು. ದರ ಏರಿಕೆ ಕಾಲದಲ್ಲಿ ಹೊಟ್ಟೆಗೆ ಕಮ್ಮಿ ಮಾಡೋದು ಬೇಡ, ಕಿಸೆಗೆ ಹೊರೆಯಾಗೋದು ಬೇಡ ಎನ್ನುವುದು ಬಹುತೇಕರ ಸಿದ್ಧಾಂತವಾಗಿರಬಹುದು. ಇಂದಿನ ಪರ್ಸನಲ್ ಪೈನಾನ್ಸ್ ಲೇಖನದಲ್ಲಿ ತರಕಾರಿ ದಿನಸಿ ದುಬಾರಿ ಸಮಯದಲ್ಲಿ ಹಣ ಉಳಿತಾಯ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ತಾಜಾ ತರಕಾರಿ ಬದಲು ಪ್ಯಾಕೇಟ್ ಆಹಾರ
ಹತ್ತು ಟೊಮೆಟೊ ಕತ್ತರಿಸಿ ಟೊಮೆಟೊ ರೈಸ್ ಮಾಡುವ ಬದಲು ಟೊಮೆಟೊ ರೈಸ್‌ನ ಪೌಡರ್ ಪ್ಯಾಕೇಟ್ ತಂದು ಟೊಮೆಟೊ ರೈಸ್ ಮಾಡಿ. ಟೊಮೆಟೊ ರೈಸ್ ಪೌಡರ್ ಇಷ್ಟವಾಗದಿದ್ದರೆ ಪುಳಿಯೊಗರೆ ಪೌಡರ್‌ನಲ್ಲಿ ಅಡುಗೆ ಮಾಡಿ. ಈ ರೀತಿ ಪ್ಯಾಕೆಟ್ ಆಹಾರ ಖರೀದಿಸುವಾಗ ನಿಮಗೆ ನಂಬಿಕಸ್ತ ಎನಿಸುವಂತಹ ಬ್ರಾಂಡ್‌ಗಳ ಉತ್ಪನ್ನಗಳನ್ನು ಬಳಸಿ. ನಿಮಗೆ ಐಯ್ಯಂಗಾರ್ ಪುಳಿಯೋಗರೆ ಇಷ್ಟವಾದರೆ ಅದನ್ನೇ ಬಳಸಿ, ಎಂಟಿಆರ್ ಇಷ್ಟವಾದರೆ ಅದನ್ನು ಖರೀದಿಸಿ. ಒಟ್ಟಾರೆ, ಟೊಮೆಟೊ ಖರೀದಿ ಕಡಿಮೆ ಮಾಡಿ.
ಕಡಿಮೆ ತರಕಾರಿ ಬಳಕೆ
ತರಕಾರಿ ದರ ಕಡಿಮೆಯಾಗಿದ್ದಾಗ ಬೇಕಾಬಿಟ್ಟಿಯಾಗಿ ತರಕಾರಿ ಅಡುಗೆ ಮಾಡುವುದು ನಿಮ್ಮ ಅಭ್ಯಾಸವಾಗಿರಬಹುದು. ಬೆಲೆ ಏರಿಕೆ ಕಾಲದಲ್ಲಿ ಮಿತವಾಗಿ ತರಕಾರಿ ಬಳಸಿ. ನಾಲ್ಕು ಟೊಮೆಟೊ ಬಳಸುವ ಸಾಂಬಾರ್‌ಗೆ ಎರಡು ಟೊಮೆಟೊ ಬಳಸಿ. ಅಥವಾ ಟೊಮೆಟೊ ಬದಲು ಹುಣಸೆ ಹಣ್ಣು ಮಾತ್ರ ಬಳಸಿ.
ಸ್ವಲ್ಪ ಬಜೆಟ್ ಹೆಚ್ಚಿಸಿ
ನಿಮ್ಮ ಇತರೆ ಖರ್ಚುಗಳಿಗೆ ಕಡಿವಾಣ ಹಾಕಿ. ಅದರ ಬದಲು ಅಗತ್ಯವಾದ ತರಕಾರಿ, ಹಣ್ಣು ಹಂಪಲು ಖರೀದಿಸಿ. ವಾರಾಂತ್ಯದಲ್ಲಿ ಸಿನಿಮಾ, ಸುತ್ತಾಟಕ್ಕೆ ಪ್ಲಾನ್ ಮಾಡಿದ್ದರೆ ಕೆಲವು ದಿನ, ತರಕಾರಿ, ದಿನಸಿ ದರ ಕಡಿಮೆಯಾಗುವ ತನಕ ಅಂತಹ ಇತರೆ ಖರ್ಚುಗಳಿಗೆ ಕಡಿವಾಣ ಹಾಕಿ. ಈ ಮೂಲಕ ಹಣ ಉಳಿತಾಯ ಮುಂದುವರೆಸಬಹುದು.
ಎಷ್ಟು ಬೇಕೋ ಅಷ್ಟೇ ಖರೀದಿಸಿ
ತರಕಾರಿ ಬೆಲೆ ಕಡಿಮೆ ಇದ್ದಾಗ ಕೊಳೆತು ಹೋಗುವ ತರಕಾರಿ, ಹಣ್ಣುಗಳ ಬಗ್ಗೆ ನೀವು ಕ್ಯಾರೇ ಮಾಡುತ್ತ ಇರದೆ ಇರಬಹುದು. ಆದರೆ, ಕೊಳೆಯುವಂತಹ ಟೊಮೆಟೊ ಇತ್ಯಾದಿಗಳನ್ನು ಹೆಚ್ಚು ತರಬೇಡಿ. ಮೂರು ನಾಲ್ಕು ದಿನಗಳಿಗೆ ಸಾಕಾಗುವಷ್ಟು ತನ್ನಿ.
ಸಂತೆಗೆ ಹೋಗಿ ಬನ್ನಿ
ಮನೆಯ ಸಮೀಪದ ಅಂಗಡಿಯಲ್ಲಿ ತರಕಾರಿ ದುಬಾರಿಯಾಗಿರಬಹುದು. ನಿಮ್ಮೂರಿನಲ್ಲಿ ವಾರದ ಸಂತೆ ನಡೆಯುತ್ತಿದ್ದರೆ ಅಲ್ಲಿಂದಲೇ ವಾರಕ್ಕೆ ಬೇಕಾಗುವಷ್ಟು ತರಕಾರಿ ಖರೀದಿಸಿ. ಅಲ್ಲಿ ದರ ಪರಿಶೀಲನೆ, ದರ ಹೋಲಿಕೆ ಮಾಡುವ ಅವಕಾಶವೂ ಹೆಚ್ಚಿರುತ್ತದೆ.
ಹೊರಗೆ ತಿನ್ನೋದು ಕಡಿಮೆ ಮಾಡಿ
ತರಕಾರಿ ದರ ಹೆಚ್ಚಳದ ಸಮಯದಲ್ಲಿ ಹೋಟೇಲ್‌ಗಳಲ್ಲಿ ಆಹಾರ ದರ ಏರಿಕೆಯಾಗುತ್ತದೆ. ಆಮೇಲೆ ತರಕಾರಿ ದರ ಇಳಿದರೂ ಹೋಟೇಲ್‌ನಲ್ಲಿ ದರ ಇಳಿಕೆಯಾಗುವುದಿಲ್ಲ ಎನ್ನುವುದು ಬೇರೆ ವಿಚಾರ. ಹೊರಗೆ ಹೋಗುವ ಮೊದಲು ಮನೆಯಲ್ಲಿಯೇ ಹೊಟ್ಟೆ ತುಂಬಾ ಆಹಾರ ಸೇವಿಸಿ ಹೋಗಿ. ಈ ರೀತಿ ಮಾಡಿದಾಗ ಹೊರಗೆ ಏನೂ ಬೇಕೆನಿಸುವುದಿಲ್ಲ.
ನೀವೇ ಅಡುಗೆ ಮಾಡಿ
ಮನೆಯಲ್ಲಿ ಅಡುಗೆಯವರು ಇದ್ದರೆ ತರಕಾರಿ ಹೆಚ್ಚು ವ್ಯರ್ಥವಾಗಬಹುದು. ಇಂತಹ ಸಮಯದಲ್ಲಿ ನೀವೇ ಅಡುಗೆ ಮಾಡುವುದು ಒಳ್ಳೆಯದು.
ನೀವೇ ತರಕಾರಿ ಬೆಳೆಸಿ
ಬಾಯಾರಿಕೆಯಾದಗ ಬಾವಿ ತೋಡುವಂತೆ ಅನಿಸಬಹುದು. ನಿಮ್ಮ ಮನೆಯಲ್ಲಿ ಸ್ಥಳಾವಕಾಶವಿದ್ದರೆ ಸೊಪ್ಪು ಇತ್ಯಾದಿ ತರಕಾರಿ ಬೆಳೆಸಿ. ಭವಿಷ್ಯದಲ್ಲಿ ಖಂಡಿತಾ ನಿಮಗೆ ತರಕಾರಿಗೆ ಖರ್ಚು ಮಾಡುವ ಹಣವನ್ನು ಇದು ಉಳಿಸಲಿದೆ. ಇದರಿಂದ ನಿಮಗೂ ಟೈಂಪಾಸ್ ಆಗಬಹುದು.
ಹೀಗೆ ಅಡುಗೆ ಮನೆಯಲ್ಲಿ ಹಣ ಉಳಿತಾಯ ಮಾಡಲು ಇಂತಹ ಹಲವು ಐಡಿಯಾಗಳನ್ನು ಬಳಸಿ. ಇನ್ನೂ ಏನಾದರೂ ಐಡಿಯಾಗಳಿದ್ದರೆ ನಮಗೂ ತಿಳಿಸಿ.