logo
ಕನ್ನಡ ಸುದ್ದಿ  /  ಜೀವನಶೈಲಿ  /  ಸಾವರಿನ್‌ ಗೋಲ್ಡ್‌ ಬಾಂಡ್‌ 4ನೇ ಕಂತು ಆರಂಭ; ಚಿನ್ನದ ಮೇಲೆ ಹೂಡಿಕೆ ಮಾಡುವವರು ಫೆ 16ರೊಳಗೆ ಅರ್ಜಿ ಸಲ್ಲಿಸಿ

ಸಾವರಿನ್‌ ಗೋಲ್ಡ್‌ ಬಾಂಡ್‌ 4ನೇ ಕಂತು ಆರಂಭ; ಚಿನ್ನದ ಮೇಲೆ ಹೂಡಿಕೆ ಮಾಡುವವರು ಫೆ 16ರೊಳಗೆ ಅರ್ಜಿ ಸಲ್ಲಿಸಿ

Reshma HT Kannada

Feb 13, 2024 03:36 PM IST

google News

ಸಾವರಿನ್‌ ಗೋಲ್ಡ್‌ ಬಾಂಡ್‌ಗೆ ಅರ್ಜಿ ಸಲ್ಲಿಸುವವರಿಗೆ ಫೆ 16ರವರೆಗೆ ಅವಕಾಶ

    • ಸಾವರಿನ್‌ ಗೋಲ್ಡ್‌ ಬಾಂಡ್‌ನಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಇಲ್ಲಿದೆ ಮತ್ತೊಂದು ಅವಕಾಶ. ಎಸ್‌ಜಿಬಿಯ 4ನೇ ಕಂತು ಆರಂಭವಾಗಿದ್ದು, ಫೆಬ್ರುವರಿ 12ರಿಂದ ಚಂದಾದಾರಿಕೆ ಆರಂಭವಾಗಿದೆ. ಪ್ರತಿ ಗ್ರಾಂಗೆ 6,263 ರೂ ನಿಗದಿ ಮಾಡಲಾಗಿದೆ. ಈ ಕುರಿತ ವಿವರ ಇಲ್ಲಿದೆ
ಸಾವರಿನ್‌ ಗೋಲ್ಡ್‌ ಬಾಂಡ್‌ಗೆ ಅರ್ಜಿ ಸಲ್ಲಿಸುವವರಿಗೆ ಫೆ 16ರವರೆಗೆ ಅವಕಾಶ
ಸಾವರಿನ್‌ ಗೋಲ್ಡ್‌ ಬಾಂಡ್‌ಗೆ ಅರ್ಜಿ ಸಲ್ಲಿಸುವವರಿಗೆ ಫೆ 16ರವರೆಗೆ ಅವಕಾಶ

ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವವರು ಸಾವರಿನ್‌ ಗೋಲ್ಡ್‌ ಬಾಂಡ್‌ನ ಚಂದಾದಾರಿಕೆ ಪಡೆಯಲು ಬಯಸುತ್ತಾರೆ. ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಈ ಸಾವರಿನ್‌ ಗೋಲ್ಡ್‌ನ ಚಂದಾದಾರಿಕೆ ಪಡೆಯಬಹುದು. ಇದೀಗ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ)ಸಾವರಿನ್‌ ಗೋಲ್ಡ್‌ ಬಾಂಡ್‌ನ ಮುಂದಿನ ಕಂತಿನ ಚಂದಾದಾರಿಕೆ ಪಡೆಯಲು ನಿನ್ನೆಯಿಂದ (ಫೆ. 12) ಸ್ಲಾಟ್‌ ತೆರದಿದೆ. ಪ್ರತಿಗ್ರಾಂಗೆ 6,236 ರೂ ನಿಗದಿ ಮಾಡಲಾಗಿದು, ಫೆಬ್ರುವರಿ 16ರವರೆಗೆ ಚಂದಾದಾರಿಕೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 2023-24ನೇ ಸಾಲಿನ ನಾಲ್ಕನೇ ಸರಣಿಯ ಸ್ಕೀಮ್‌ ಇದಾಗಿದ್ದು ಫೆಬ್ರುವರಿ 12 ರಿಂದ 16ರವರೆಗೆ ಚಂದಾದಾರಿಕೆ ಪಡೆಯಲು ಮುಕ್ತ ಅವಕಾಶವಿರುತ್ತದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರಿಗೆ ವಿಶೇಷ ಆಫರ್‌

ಈ ಸ್ಕೀಮ್‌ಗೆ ಅರ್ಜಿ ಸಲ್ಲಿಸಲು ಬಯಸುವವರು ಡಿಜಿಟಲ್‌ ಮೋಡ್‌ ಮೂಲಕ ಪಾವತಿ ಮಾಡುವ ಹೂಡಿಕೆದಾರರು ಪ್ರತಿ ಗಾಂಗೆ 50 ರೂ ಗಳಷ್ಟು ರಿಯಾಯಿತಿ ಪಡೆಯುತ್ತಾರೆ. ಆನ್‌ಲೈನ್‌ ಪೇಮೆಂಟ್‌ ಮಾಡುವವರಿಗೆ ಸಾವರಿನ್‌ ಗೋಲ್ಡ್‌ ಬಾಂಡ್‌ ಪ್ರತಿಗ್ರಾಂಗೆ 6,213 ರೂ. ಗೆ ಸಿಗುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಸಾವರಿನ್‌ ಗೋಲ್ಡ್‌ ಬಾಂಡ್‌ಗಳನ್ನು ನಿಗದಿತ ವಾಣಿಜ್ಯ ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಹಾಗೂ ಸ್ಟಾಕ್‌ ಎಕ್ಸ್‌ಚೇಂಜ್‌ಗಳು ಸೇರಿದಂತೆ ವಿವಿಧ ಚಾನೆಲ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಸಾವರಿನ್‌ ಗೋಲ್ಡ್‌ ಬಾಂಡ್‌ಗಳ ತೆರಿಗೆ ವಿವರ

ಸಾವರಿನ್‌ ಗೋಲ್ಡ್‌ ಬಾಂಡ್‌ಗಳು ಎಂಟು ವರ್ಷದ ಅವಧಿಯನ್ನು ಹೊಂದಿರುತ್ತವೆ. ಇದರಲ್ಲಿ ಹೂಡಿಕೆ ಮಾಡಿದ 5 ವರ್ಷಗಳ ನಂತರ ಹೂಡಿಕೆದಾರರು ಇದನ್ನು ನಗದಾಗಿ ಪರಿವರ್ತಿಸುವ ಅವಕಾಶವನ್ನು ಪಡೆಯುತ್ತಾರೆ. ಇದರಿಂದ ಗಳಿಸುವ ಲಾಭದ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಅಂದರೆ ಎಂಟು ವರ್ಷದ ನಂತರ ಮೆಚ್ಯೂವರಿ ಅವಧಿ ಪೂರ್ಣಗೊಂಡ ಬಳಿಕ ಪಡೆಯುವ ಮೊತ್ತಕ್ಕೆ ಯಾವುದೇ ತೆರಿಗೆ ನೀಡುವಂತಿಲ್ಲ. ವರ್ಷಕ್ಕೆ ಶೇ 2.50 ಸ್ಥಿರ ದರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ. ಬಡ್ಡಿದರವು ತೆರಿಗೆಗೆ ಒಳಪಟ್ಟಿರುತ್ತದೆ. ಹಾಗಾಗಿ 8 ವರ್ಷಗಳು ಪೂರ್ಣಗೊಂಡ ಬಳಿಕ ಇದನ್ನು ಪಡೆಯುವುದು ಉತ್ತಮ ಎಂದು ಲೈವ್‌ ಮಿಂಟ್‌ಗೆ ತಿಳಿಸಿದ್ದಾರೆ ಮುಂಬೈ ಮೂಲದ ತೆರಿಗ ಮತ್ತು ಹೂಡಿಕೆ ತಜ್ಞ ಬಲ್ವಂತ್‌ ಜೈನ್‌

ನೀವು ಸಾವರಿನ್‌ ಗೋಲ್ಡ್‌ ಬಾಂಡ್‌ ಅನ್ನು ಮೂಲ ಚಂದಾದಾರಾಗಿ ಪಡೆದುಕೊಡರು ಅಥವಾ ದ್ವಿತೀಯ ಮಾರುಕಟ್ಟೆಯಿಂದ ಖರೀದಿಸಿದರೂ ವಿನಾಯಿತಿ ಲಭ್ಯವಾಗುತ್ತದೆ.

ಬಾಂಡ್ಗಳನ್ನು ವರ್ಗಾಯಿಸಿದರೆ ಅಥವಾ ಮಾರಾಟ ಮಾಡಿದರೆ, ಈ ಬಾಂಡ್ಗಳ ಮಾರಾಟದಿಂದ ಗಳಿಸಿದ ಲಾಭವು ಹಿಡುವಳಿ ಅವಧಿಯನ್ನು ಅವಲಂಬಿಸಿ ದೀರ್ಘಾವಧಿ ಅಥವಾ ಅಲ್ಪಾವಧಿಯಾಗಿ ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ.

ಸಾವರಿನ್‌ ಗೋಲ್ಡ್‌ ಯೋಜನೆಯು ತಮ್ಮ ಪೋರ್ಟ್‌ಫೋಲಿಯೊಗಳಿಗೆ ಚಿನ್ನವನ್ನು ಸೇರಿಸಲು ಬಯಸುವ ಭಾರತೀಯ ನಿವಾಸಿಗಳಿಗಾಗಿ ಇರುವ ಒಂದು ಆಕರ್ಷಕ ಯೋಜನೆಯಾಗಿದೆ. ಪ್ರಸ್ತುತ ತೆರೆದಿರುವ ಇತ್ತೀಚಿನ ಕಂತುಗಳೊಂದಿಗೆ, ಈ ಬಾಂಡ್‌ಗಳು ಸ್ಪಷ್ಟ ರೂಪದಲ್ಲಿ ಚಿನ್ನವನ್ನು ಹೊಂದಲು ಅಸಾಧಾರಣ ಅವಕಾಶವನ್ನು ಒದಗಿಸುತ್ತವೆ.

ಭೌತಿಕ ಚಿನ್ನಕ್ಕೆ ಹೋಲಿಸಿದರೆ ಪೋರ್ಟ್‌ಫೋಲಿಯೊ ವೈವಿಧ್ಯೀಕರಣ, ಬಂಡವಾಳ ಮೌಲ್ಯವರ್ಧನೆ ಸಾಧ್ಯತೆಗಳು ಹಾಗೂ ತೆರಿಗೆ ವಿನಾಯತಿ ಬಯಸುವವರಿಗೆ ಸಾವರಿನ್‌ ಗೋಲ್ಡ್‌ ಬಾಂಡ್‌ ಮೇಲೆ ಹೂಡಿಕೆ ಮಾಡುವುದು ಸೂಕ್ತ ಎಂದು ಅಕ್ಯೂಬ್ ವೆಂಚರ್ಸ್ನ ನಿರ್ದೇಶಕ ಆಶಿಶ್ ಅಗರ್ವಾಲ್ ಹೇಳುತ್ತಾರೆ.

ಹಿಂದಿನ ಸಾವರಿನ್‌ ಗೋಲ್ಡ್‌ ಬಾಂಡ್‌ ವಿತರಣೆಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಯಶಸ್ವಿಯಾಗಿ ನಿರ್ವಹಿಸಿದೆ ಮತ್ತು ಆಸ್ತಿ ವರ್ಗವಾಗಿ ಚಿನ್ನದ ಸ್ಥಿರತೆಯು ಹೂಡಿಕೆದಾರರಲ್ಲಿ ವಿಶ್ವಾಸವನ್ನು ಮೂಡಿಸಬೇಕು. ಮಾರುಕಟ್ಟೆ ಅನಿಶ್ಚಿತತೆಯ ವಿರುದ್ಧ ರಕ್ಷಣೆಯಾಗಿ ಚಿನ್ನದ ದೀರ್ಘಕಾಲೀನ ಪಾತ್ರವನ್ನು ಗಮನಿಸಿದರೆ, ಪ್ರಸ್ತುತ ಜಾಗತಿಕ ಹಣಕಾಸು ವಾತಾವರಣವು ಲೋಹದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

(ಗಮನಿಸಿ: ಈ ಮೇಲಿನ ಅಭಿಪ್ರಾಯಗಳು ಮತ್ತು ಶಿಫಾರಸುಗಳು ವೈಯಕ್ತಿಕ ವಿಶ್ಲೇಷಕರದ್ದು, ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ್ದಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಪ್ರಮಾಣೀಕೃತ ತಜ್ಞರೊಂದಿಗೆ ಪರಿಶೀಲಿಸಲು ನಾವು ಹೂಡಿಕೆದಾರರಿಗೆ ಸಲಹೆ ನೀಡುತ್ತೇವೆ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ