Stock Trading Scams: ಮಿತಿಮೀರಿದೆ ಷೇರು ಹೂಡಿಕೆ ವಂಚನೆ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಕುರಿತು ಎಚ್ಚರ; ಪಿಐಬಿಯಿಂದ ವಾರ್ನಿಂಗ್
Sep 30, 2024 03:04 PM IST
ಭಾರತದಲ್ಲಿ ನಕಲಿ ಸ್ಟಾಕ್ ಟ್ರೇಡಿಂಗ್ ಆಪ್‌ಗಳು ಮತ್ತು ವೆಬ್‌ಸೈಟ್‌ಗಳ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ.
Stock Trading Scams: ಷೇರು ವಹಿವಾಟು ಆಪ್‌ಗಳ ಮೂಲಕ ವಂಚನೆ ಹೆಚ್ಚಾಗುತ್ತಿರುವ ಕಾರಣ ಭಾರತ ಸರಕಾರವು ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ. ನಕಲಿ ಪ್ರೊಫೈಲ್‌ಗಳ ಮೂಲಕ ಸೈಬರ್ ಅಪರಾಧಿಗಳು ವಂಚನೆ ನಡೆಸುವ ಕುರಿತು ಹೂಡಿಕೆದಾರರು ಎಚ್ಚರಿಕೆಯಿಂದ ಇರಬೇಕು, ಹಣ ಗಳಿಕೆ ವಿಚಾರದಲ್ಲಿ ಮೈಮರೆತು ಬಲಿಪಶುವಾಗಬಾರದು ಎಂದು ಎಚ್ಚರಿಕೆ ನೀಡಿದೆ.
ಬೆಂಗಳೂರು: ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಷೇರು ಟ್ರೇಡಿಂಗ್ ಆಪ್‌ಗಳ ಹಾವಳಿ ಹೆಚ್ಚಾಗಿರುವುದನ್ನು ಬಹುತೇಕರು ಗಮನಿಸಿರಬಹುದು. ಸಾಕಷ್ಟು ಜನರು ಅಲ್ಲಿ ಗ್ರಾಫ್‌ಗಳ ಏರಿಕೆಯನ್ನು ನೋಡಿ ನಮ್ಮ ಹಣವೂ ಹಲವು ಪಟ್ಟು ಹೆಚ್ಚಾಗುವ ಕನಸು ಕಾಣುತ್ತಿದ್ದಾರೆ. ಇದೇ ಸಮಯದಲ್ಲಿ ಸಾಕಷ್ಟು ನಕಲಿ ಪ್ರೊಫೈಲ್‌ಗಳ ಮೂಲಕವೂ ಹೂಡಿಕೆದಾರರನ್ನು ಕೆಲವು ಸೈಬರ್ ವಂಚಕರು ಸೆಳೆಯುತ್ತಿದ್ದಾರೆ. ಜನಪ್ರಿಯ ಹೂಡಿಕೆದಾರರ ಹೆಸರನ್ನು ಹೋಲುವ ಪ್ರೊಫೈಲ್‌ಗಳನ್ನು ರಚಿಸಿ ವಂಚನೆ ಮಾಡುತ್ತಾರೆ. ಒಟ್ಟಾರೆ, ಆನ್‌ಲೈನ್‌ನಲ್ಲಿ ಷೇರು ಟ್ರೇಡಿಂಗ್ ಹೆಸರಿನಲ್ಲಿ ವಂಚನೆ ಮಿತಿಮೀರಿದೆ.
ಈ ಸಮಯದಲ್ಲಿ ಸರಕಾರವು ಹೂಡಿಕೆದಾರರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ನಕಲಿ ಸ್ಟಾಕ್ ಟ್ರೇಡಿಂಗ್ ಆಪ್‌ಗಳು ಮತ್ತು ವೆಬ್‌ಸೈಟ್‌ಗಳ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಹೂಡಿಕೆದಾರರು ಸದಾ ಅಲರ್ಟ್ ಆಗಿರಿ ಎಂದಿದೆ. ಈ ಕುರಿತಂತೆ ಪ್ರೆಸ್ ಇನ್‌ಫಾರ್ಮೆಷನ್ ಬ್ಯೂರೋ (ಪಿಐಬಿ) ಫ್ಯಾಕ್ಟ್ ಚೆಕ್ ತಂಡವು ಅಮೂಲ್ಯ ಮಾಹಿತಿಗಳನ್ನು ಹಂಚಿಕೊಂಡಿದೆ. ಪಿಐಬಿ ತಂಡವು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ. ಷೇರು ವಹಿವಾಟು ಗುಂಪುಗಳಲ್ಲಿ ಜನರನ್ನು ಸೇರಿಸಿ ಫೇಕ್ ಪ್ರೊಫೈಲ್‌ಗಳ ಮೂಲಕ ವಂಚನೆ ನಡೆಸುತ್ತಿರುವುದು ಹೆಚ್ಚಾಗಿದೆ ಎಂದು ಪಿಐಬಿ ತಿಳಿಸಿದೆ.
ವಂಚನೆಯ ಆರಂಭ ಹೇಗೆ?
ಸಾಮಾನ್ಯವಾಗಿ ವಾಟ್ಸಪ್ ಗ್ರೂಪ್‌ಗೆ ಸೇರುವಂತೆ ಬಲಿಪಶುಗಳನ್ನು ಆಹ್ವಾನಿಸಲಾಗುತ್ತದೆ. ಜನರು ಇಂತಹ ಲಿಂಕ್‌ಗಳ ಮೂಲಕ ವಾಟ್ಸಪ್ ಗ್ರೂಪ್‌ಗೆ ಸೇರುತ್ತಾರೆ. ಅಲ್ಲಿಂದ ವಂಚನೆ ಆರಂಬವಾಗುತ್ತದೆ. ಅಲ್ಲಿ ಜನರನ್ನು ಮೋಸಗೊಳಿಸಲು ಪ್ರಯತ್ನಿಸಲಾಗುತ್ತದೆ. ನಿರ್ದಿಷ್ಟ ಆಪ್‌ಗೆ ಸೇರುವಂತೆ ಹೇಳಲಾಗುತ್ತದೆ. ಆ ಮೋಸದ ಆಪ್ ಅಥವಾ ಅಪ್ಲಿಕೇಷನ್‌ಗಳು ಜನಪ್ರಿಯ ಬ್ರೋಕರೇಜ್ ಪ್ಲಾಟ್‌ಫಾರ್ಮ್‌ಗಳಂತೆ ಇರುತ್ತದೆ. ಅಲ್ಲಿ ಬಳಕೆದಾರರಿಗೆ ಆರಂಭದಲ್ಲಿ ಅಲ್ಪ ಲಾಭವಾಗುತ್ತದೆ. ಲಾಭವಾಗುತ್ತದೆ ಎಂಬ ನಂಬಿಕೆ ಬಂದ ತಕ್ಷಣ ಹೆಚ್ಚಿನ ಹಣ ಹೂಡಿಕೆ ಮಾಡುತ್ತಾರೆ. ಬಳಿಕ ಇವರ ಹಣ ಕಳೆದುಕೊಳ್ಳುವ ಪ್ರಕ್ರಿಯೆ ಆರಂಭವಾಗುತ್ತೆ.
ಇತ್ತೀಚಿನ ತಿಂಗಳಲ್ಲಿ ದೇಶಾದ್ಯಂತ ಸಾಕಷ್ಟು ಜನರು ಹಲವು ಲಕ್ಷ ರೂಪಾಯಿಗಳನ್ನು ಇಂತಹ ಆಪ್‌ಗಳಿಂದ ಕಳೆದುಕೊಂಡಿದ್ದಾರೆ. ಆನ್‌ಲೈನ್ ಟ್ರೇಡಿಂಗ್ ಕುರಿತು ಜನರು ಎಚ್ಚರಿಕೆಯಿಂದ ಇರುವಂತೆ ಪಿಐಬಿ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಪಿಐಬಿಯ ಎಚ್ಚರಿಕೆ
"ಹೊಸ ಸ್ಕ್ಯಾಮ್ ಅಲರ್ಟ್. ಸೈಬರ್ ಕ್ರಿಮಿನಲ್‌ಗಳು ನಕಲಿ ಪ್ರೊಫೈಲ್‌ಗಳ ಮೂಲಕ ಷೇರು ಟ್ರೇಡಿಂಗ್ ಗ್ರೂಪ್‌ಗೆ ಬಲಿಪಶುಗಳನ್ನು ಸೇರಿಸಿಕೊಳ್ಳುತ್ತಾರೆ" ಎಂದು ಪಿಐಬಿ ಟ್ವೀಟ್ ಮಾಡಿದೆ. ಗುರುತುಪರಿಚಯ ಇಲ್ಲದ ವ್ಯಕ್ತಿಗಳ ಜತೆ ವಹಿವಾಟು ನಡೆಸಬಾರದು, ಅವರ ಬ್ಯಾಕ್‌ಗ್ರೌಂಡ್ ದೃಢೀಕರಣ ಅಗತ್ಯವೆಂದು ಪಿಐಬಿ ತಿಳಿಸಿದೆ.
ಹೂಡಿಕೆದಾರರಿಗೆ ಸುರಕ್ಷತೆಯ ಸಲಹೆಗಳು
ಆನ್‌ಲೈನ್ ಟ್ರೇಡಿಂಗ್ ವಂಚನೆಯಿಂದ ಪಾರಾಗಲು ಹೂಡಿಕೆದಾರರು ಈ ಸಲಹೆಗಳನ್ನು ಪಾಲಿಸಿ.
- ಖಚಿತ ರಿಟರ್ನ್ ಭರವಸೆ ಕುರಿತು ಪ್ರಶ್ನಿಸಿ: ನಿಮಗೆ ಇಂತಿಷ್ಟು ಲಾಭ ಬರೋದು ಗ್ಯಾರಂಟಿ ಎಂದು ಕ್ಲೇಮ್ ಮಾಡುವವರನ್ನು ಪ್ರಶ್ನಿಸಿ. ಯಾವುದೇ ಹೂಡಿಕೆಯಲ್ಲೂ ರಿಸ್ಕ್ ಇಲ್ಲದೆ ಇಲ್ಲ. ಗ್ಯಾರಂಟಿ ಲಾಭ ಅನ್ನೋದನ್ನು ನಂಬಬೇಡಿ.
- ಅತ್ಯಧಿಕ ಒತ್ತಡದ ತಂತ್ರಗಳಿಗೆ ಮಣಿಯದಿರಿ: ತಕ್ಷಣ ಹೂಡಿಕೆ ಮಾಡಿ, ಈಗಲೇ ಮಾಡಿದ್ರೆ ಲಾಭ, ಇವತ್ತು ಸಂಜೆಯೊಳಗೆ ಹಣ ಹೂಡಿಕೆ ಮಾಡಿ ಎಂದೆಲ್ಲ ಅವಸರ ಮಾಡುವ ಜನರನ್ನು ನಂಬಬೇಡಿ.
- ಬ್ರೋಕರ್ ನೋಂದಣಿ ದೃಢೀಕರಿಸಿ: ನಿರ್ದಿಷ್ಟ ನಿಯಂತ್ರಣ ಪ್ರಾಧಿಕಾರ, ಅಂಗಸಂಸ್ಥೆಗಳಲ್ಲಿ ಬ್ರೋಕರೇಜ್ ಸಂಸ್ಥೆ ನೋಂದಣಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.
- ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ಕುರಿತು ಎಚ್ಚರದಿಂದ ಇರಿ: ಕೆಲವು ಇನ್‌ಫ್ಲೂಯೆರ್‌ಗಳು ವಂಚಕ ಹೂಡಿಕೆ ಸಂಸ್ಥೆಗಳನ್ನು ಪ್ರಮೋಟ್ ಮಾಡುತ್ತ ಇರುತ್ತಾರೆ. ಜನಪ್ರಿಯ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಹೇಳಿದ್ದರೆಂದು ಕಣ್ಣು ಮುಚ್ಚಿ ಹೂಡಿಕೆ ಮಾಡಬೇಡಿ.
- ಪ್ರತಿಷ್ಠಿತ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿ: ಈಗಾಗಲೇ ಜನಪ್ರಿಯತೆ ಪಡೆದಿರುವ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ ಮಾಡಿ.
- ಸಾಫ್ಟ್‌ವೇರ್ ಅಪ್‌ಡೇಟ್: ಕಂಪ್ಯೂಟರ್ ಅಥವಾ ಮೊಬೈಲ್ ಸಾಫ್ಟ್‌ವೇರ್‌ಗಳನ್ನು ನಿಯಮಿತವಾಗಿ ಅಪ್‌ಡೇಟ್ ಮಾಡುತ್ತ ಇರಿ.
ಇಂತಹ ಎಚ್ಚರಿಕೆಗಳನ್ನು ಪಾಲಿಸುತ್ತ ಆನ್‌ಲೈನ್ ಟ್ರೇಡಿಂಗ್ ವಂಚಕರಿಗೆ ಬಲಿಪಶುವಾಗುವುದನ್ನು ತಪ್ಪಿಸಿ.