logo
ಕನ್ನಡ ಸುದ್ದಿ  /  ಜೀವನಶೈಲಿ  /  ಮನದ ಮಾತು: ಕೆಲಸ ಬೋರ್ ಹೊಡೀತಿದೆ, ಬಿಡೋಣ ಅಂದ್ರೆ ಸಂಸಾರದ ಅಡ್ಡಿ, ಮಾಡೋ ಕೆಲಸನಾ ಇಷ್ಟಪಟ್ಟು ಮಾಡೋದು ಹೇಗೆ?

ಮನದ ಮಾತು: ಕೆಲಸ ಬೋರ್ ಹೊಡೀತಿದೆ, ಬಿಡೋಣ ಅಂದ್ರೆ ಸಂಸಾರದ ಅಡ್ಡಿ, ಮಾಡೋ ಕೆಲಸನಾ ಇಷ್ಟಪಟ್ಟು ಮಾಡೋದು ಹೇಗೆ?

HT Kannada Desk HT Kannada

Aug 10, 2023 11:30 AM IST

google News

ವೃತ್ತಿ ಬದುಕಿನ ಸಮಸ್ಯೆಗಳಿಗೆ ಟಿಪ್ಸ್

    • Career Guidance: ಬದುಕಿನ ಪ್ರತಿ ಹಂತದಲ್ಲಿಯೂ ಒಂದಲ್ಲ ಒಂದು ಪ್ರಶ್ನೆ ಕಾಡುತ್ತಲೇ ಇರುತ್ತದೆ. ಕೆಲವರು ಹೇಳಿಕೊಂಡು ಹಗುರಾಗುತ್ತಾರೆ, ಕೆಲವರು ಮನಸ್ಸಿನಲ್ಲಿ ಇಟ್ಟುಕೊಂಡು ಸಪ್ಪಗಾಗುತ್ತಾರೆ. ಮನದ ಮಾತು ಹಂಚಿಕೊಳ್ಳಲು ಇದು ವೇದಿಕೆ. ವೃತ್ತಿ ಬದುಕಿನಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗೆ ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಈ ಸಂಚಿಕೆಯಲ್ಲಿ ಉತ್ತರಿಸಿದ್ದಾರೆ.
ವೃತ್ತಿ ಬದುಕಿನ ಸಮಸ್ಯೆಗಳಿಗೆ ಟಿಪ್ಸ್
ವೃತ್ತಿ ಬದುಕಿನ ಸಮಸ್ಯೆಗಳಿಗೆ ಟಿಪ್ಸ್

ಪ್ರಶ್ನೆ: 1) ಒಂದೇ ಕಡೆ ಕೆಲಸ ಮಾಡಿ ಜೀವನ ನಿಂತ ನೀರಾಗಿದೆ ಮೇಡಂ. ನೆಮ್ಮದಿಯೇ ಇಲ್ಲ. ಕೆಲಸ ಬಿಟ್ಟುಬಿಡೋಣ ಅಂದ್ರೆ ಧೈರ್ಯ ಸಾಕಾಗಲ್ಲ, ಮದುವೆ ಆಗಿದೆ ಏನು ಮಾಡಲಿ? -ಶ್ರೀನಿವಾಸ, ಹೊಸಕೆರೆಹಳ್ಳಿ, ಬೆಂಗಳೂರು

ಉತ್ತರ: ಒಂದೇ ಕಡೆ ಹೆಚ್ಚು ಕಾಲ ಉದ್ಯೋಗ ಮಾಡಿದಾಗ ಬೇಸರವಾಗುವುದು ಸಹಜ. ದಿನನಿತ್ಯ ಅದೇ ಕೆಲಸ, ಅದೇ ಜನ ಮತ್ತು ಅದೇ ವಾತಾವರಣ ಇದ್ದಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ನಿರಾಸಕ್ತಿ ಮತ್ತು ಬೇಸರ ಮೂಡುತ್ತದೆ. ಏನಾದರೊಂದು ಬದಲಾವಣೆ, ಹೊಸತನ, ವೈವಿಧ್ಯಮಯ ವಾತಾವರಣ ಬೇಕೆನಿಸುತ್ತದೆ. ಕೆಲಸದ ಒತ್ತಡ, ಸವಾಲುಗಳ ಎದುರಿಸುವ ಜೊತೆಗೆ ಮನಸ್ಸಿಗೆ ಮುದ ನೀಡುವ ಮನೋರಂಜನೆ , ಉತ್ಸಾಹ , ಉತ್ತೇಜನ ಬೇಕೆನಿಸುತ್ತದೆ. ಇಲ್ಲವಾದಲ್ಲಿ ಬದುಕು ನಿಂತ ನೀರು ಎನಿಸುತ್ತದೆ. ಆದರೆ ಬದುಕಲ್ಲಿ ಕೆಲವೊಮ್ಮೆ ಅನಿವಾರ್ಯ ಪರಿಸ್ಥಿತಿಯಿಂದಾಗಿ ಕೆಲಸ ಬದಲು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಪರಿಸ್ಥಿಯನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು. ಇರುವ ಅನಿವಾರ್ಯತೆಯನ್ನು ಸಂತೋಷದಿಂದ ಅನುಭವಿಸುವ ಪ್ರಯತ್ನ ಮಾಡಿದರೆ ಮನಸ್ಸು ಹಗುರವಾಗುತ್ತದೆ.

ಒಂದೇ ಕೆಲಸ ಮಾಡಿ ಬೇಸರವಾಗಿದ್ದರೆ ಹೀಗೆ ಮಾಡಿ, ನಿಮ್ಮ ಈಗಿನ ಸಮಸ್ಯೆಯಿಂದ ಹೊರಗೆ ಬರಲು ಈ ತಂತ್ರಗಳು ನೆರವಾಗಬಹುದು.

1) ಕ್ರಿಯಾಶೀಲತೆ: ನಿಮ್ಮ ಕ್ರಿಯಾಶೀಲತೆಯನ್ನು ಬಳಕೆ ಮಾಡಿಕೊಂಡು ವಿಭಿನ್ನವಾಗಿ ಮತ್ತು ವೈವಿಧ್ಯಮಯವಾಗಿ ಏನಾದರೂ ಮಾಡಲು ಯತ್ನಿಸಿ

2) ಪುಟ್ಟ ವಿರಾಮ (ಶಾರ್ಟ್‌ ಬ್ರೇಕ್): ಪದೆೇಪದೇ ಅದೇ ಕೆಲಸ ಮಾಡಬೇಕೆಂಬ ಅನಿವಾರ್ಯತೆ ಇದ್ದಾಗ ಬೆಳಿಗ್ಗೆ ಮತ್ತು ಮಧ್ಯಾಹ್ನದ ಮಧ್ಯೆ ಒಂದು ಪುಟ್ಟ ವಿರಾಮ ತೆಗೆದುಕೊಳ್ಳಿ. ಸಹೋದ್ಯೋಗಿಗಳ ಜೊತೆ ಸ್ವಲ್ಪ ಸಮಯ ಕಳೆದು ಪುನಃ ಕೆಲಸ ಪ್ರಾರಂಭ ಮಾಡಿ. ಹೀಗೆ ಮಾಡುವುದರಿಂದ ಕೆಲಸದ ಮೇಲೆ ಮತ್ತೆ ಆಸಕ್ತಿಯೂ ಮೂಡುತ್ತದೆ ಮತ್ತು ಉತ್ತೇಜನವು ಸಿಗುತ್ತದೆ.

3) ನಿಮ್ಮ ಕೆಲಸದ ಸಕಾರಾತ್ಮಕ ಅಂಶಗಳನ್ನು ಅಂದರೆ ಅದರಿಂದಾಗುತ್ತಿರುವ ಪ್ರಯೋಜನಗಳನ್ನು ಗುರುತಿಸಿ ಕೃತಜ್ಞತೆ ವ್ಯಕ್ತಪಡಿಸಿ.

4) ಸಾಮಾಜಿಕ ಸಂಪರ್ಕ: ಸಾಮಾಜಿಕವಾಗಿ ಬೆರೆಯಿರಿ. ನಿಮ್ಮ ಸಹೋದ್ಯೋಗಿಗಳ ಜೊತೆ ಸಾಮಾಜಿಕವಾಗಿ ಬರೆಯಿರಿ. ಪರಸ್ಪರ ಕಷ್ಟ ಸುಖ ಹಂಚಿಕೊಳ್ಳಿ. ನಿಮ್ಮ ಸಹೋದ್ಯೋಗಿಗಳೇ ನಿಮ್ಮ ಆಪ್ತರೂ ಆದಾಗ ಕೆಲಸದಲ್ಲಿ ಖುಷಿ ಹೆಚ್ಚುತ್ತದೆ.

5) ಹಾಸ್ಯ, ಮನರಂಜನೆ: ನಾವು ಯಂತ್ರಗಳಲ್ಲ. ನಗುನಗುತ್ತಾ ಕೆಲಸ ಮಾಡಿದರೆ ಸಂಬಂಧಗಳೂ ಬೆರೆಯುತ್ತವೆ, ಒತ್ತಡಗಳೂ ಕಡಿಮೆಯಾಗುತ್ತವೆ. ಆರೋಗ್ಯವೂ ಸುಧಾರಿಸುತ್ತದೆ.

6) ಮೆಚ್ಚುಗೆ, ಪ್ರಶಂಸೆ: ಸಹೋದ್ಯೋಗಿಗಳ ಕಾರ್ಯನಿರ್ವಹಣೆ ಅಥವಾ ಕೊಡುಗೆಯ ಕುರಿತು ಪರಸ್ಪರ ಮೆಚ್ಚುಗೆ ಮತ್ತು ಪ್ರಶಂಸೆ ಮಾಡುವ ಅಭ್ಯಾಸ ಬಹಳ ಮುಖ್ಯ. ಇದರಿಂದ ಕೆಲಸ ಮಾಡಲು ಉತ್ತಮ ಪ್ರೇರಣೆಯೂ ಸಿಗುತ್ತದೆ. ಸಂಬಂಧಗಳು ಬೆಸೆಯುತ್ತವೆ.

(ಎಲ್ಲರ ಹೆಸರು ಮತ್ತು ಊರು ಬದಲಿಸಲಾಗಿದೆ)

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಇನ್ನು ಮುಂದೆ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ