logo
ಕನ್ನಡ ಸುದ್ದಿ  /  ಜೀವನಶೈಲಿ  /  Self-motivation: ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸ್ವಯಂ ಪ್ರೇರಣೆ ಇರಲಿ, ಈ 10 ಸಲಹೆಗಳು ನಿಮ್ಮ ಯಶಸ್ಸಿಗೆ ಕೀಲಿಕೈ

Self-Motivation: ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸ್ವಯಂ ಪ್ರೇರಣೆ ಇರಲಿ, ಈ 10 ಸಲಹೆಗಳು ನಿಮ್ಮ ಯಶಸ್ಸಿಗೆ ಕೀಲಿಕೈ

Praveen Chandra B HT Kannada

Aug 27, 2023 06:45 AM IST

google News

Self-Motivation: ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸ್ವಯಂ ಪ್ರೇರಣೆ ಇರಲಿ

    • Self-Motivation for career success: ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಉದ್ಯೋಗ ಕೌಶಲಗಳ ಜತೆಗೆ ನಮ್ಮಲ್ಲಿರುವ ಸೆಲ್ಫ್‌ ಮೋಟಿವೇಷನ್‌ ನೆರವಾಗುತ್ತದೆ. ಸ್ವಯಂಪ್ರೇರಣೆ ಉತ್ತಮಪಡಿಸಿಕೊಳ್ಳಲು ಬಯಸುವವರು ಈ ಮುಂದಿನ 10 ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
Self-Motivation: ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸ್ವಯಂ ಪ್ರೇರಣೆ ಇರಲಿ
Self-Motivation: ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸ್ವಯಂ ಪ್ರೇರಣೆ ಇರಲಿ

ಉದ್ಯೋಗ ಕ್ಷೇತ್ರದಲ್ಲಿ ನಿಂತ ನೀರಾಗಿರಲು ಯಾರೂ ಇಷ್ಟಪಡುವುದಿಲ್ಲ. ಆದರೆ, ಕೆಲವೊಂದು ಕಾರಣಗಳಿಂದ ಹಲವು ವರ್ಷಗಳಿಂದ ಉದ್ಯೋಗದಲ್ಲಿ ಒಂದೇ ಸ್ಥಿತಿಯಲ್ಲಿ ಬಹುತೇಕರು ಇರುತ್ತಾರೆ. ಕರಿಯರ್‌ನಲ್ಲಿ ಪ್ರಗತಿಯಾಗದೆ ಇರುವುದಕ್ಕೆ ಹಲವು ಕಾರಣಗಳು ಇರಬಹುದು. ಕಂಪನಿಯ ಸ್ಥಿತಿ ಕಾರಣ ಇರಬಹುದು, ಕಂಪನಿಯೊಳಗಿನ ಪೈಪೋಟಿ ಕಾರಣ ಇರಬಹುದು. ಆದರೆ, ಕರಿಯರ್‌ ಯಶಸ್ಸಿಗೆ ನಾವು ಕೂಡ ಕಾರಣ. ನಮ್ಮೊಳಗಿನ ಕೆಲವೊಂದು ತೊಂದರೆಗಳು ನಮ್ಮ ಯಶಸ್ಸಿಗೆ ಅಡ್ಡಿಯಾಗುತ್ತದೆ.

ಉತ್ತಮವಾದ ಹಾಗೂ ಪ್ರಗತಿಶೀಲ ಜೀವನ ನನ್ನದಾಗಬೇಕೆಂಬುದು ಪ್ರತಿಯೊಬ್ಬರ ಆಸೆ. ಹೀಗಾಗಿ ಮಹತ್ವಾಕಾಂಕ್ಷೆಯ ಹಂಬಲವಿರುವುದು ಮಾನವಸಹಜ ಗುಣ. ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಇನ್ನಷ್ಟು ಬೆಳೆಯಬೇಕು ಎನ್ನುವುದು ಬಹುತೇಕರ ಆಸೆ. ನಮ್ಮನ್ನು ನಾವು ಸುಧಾರಿಸಿಕೊಳ್ಳುವ ಮೂಲಕ ನಿರೀಕ್ಷಿತ ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ.

ಕಲಿಕೆ ನಿರಂತರವಾಗಿರಲಿ

ಸ್ವಯಂ ಬೆಳವಣಿಗೆಯ ಪಯಣ ಎಂದಿಗೂ ಮುಗಿಯಲಾರದ್ದು. ಕಲಿಯುವುದು ಸಾಕಷ್ಟಿರುತ್ತದೆ. ನಮ್ಮನ್ನು ನಾವು ಸುಧಾರಿಸುವ ಅವಕಾಶವೂ ಇರುತ್ತದೆ. ಹ್ಯೂಮನ್‌ ಪೊಟೆನ್ಷಿಯಲ್‌ಗೆ ಮಿತಿ ಎಂಬುದೇ ಇಲ್ಲ. ನಾವು ಉತ್ತಮರು ಎಂದು ಯೋಚಿಸುವಾಗಲೆಲ್ಲ, ನಾವಿನ್ನೂ ಚೆನ್ನಾಗಿರಲು ಸಾಧ್ಯವಿದೆ ಎಂಬುದನ್ನೂ ಅರಿಯಬೇಕು.

ಪ್ರತಿ ದಿನವೂ ಪುಸ್ತಕ ಓದಿ

ಪುಸ್ತಕಗಳು ಬುದ್ಧಿಮತ್ತೆಯನ್ನು ಹೆಚ್ಚಿಸುವ ಮೂಲಗಳಾಗಿವೆ. ಹೆಚ್ಚೆಚ್ಚು ಪುಸ್ತಕಗಳನ್ನು ಓದಿದಂತೆಲ್ಲ ಹೆಚ್ಚು ಬುದ್ಧಿವಂತರಾಗುತ್ತೀರಿ. ನಿಮ್ಮನ್ನು ನೀವು ಜ್ಞಾನಸಮೃದ್ಧಗೊಳಿಸಿಕೊಳ್ಳಲು ಪುಸ್ತಕಗಳನ್ನು ಓದಲು ಪ್ರಾರಂಭಿಸಿ. ಪ್ರಾರಂಭದಲ್ಲಿ ಪುಸ್ತಕ ಓದುವುದಕ್ಕೆ ಆಸಕ್ತಿ ಇರುವುದಿಲ್ಲ, ಓದಲು ಆರಂಭಿಸಿದೊಡನೇ ಬೋರ್‌ ಆಗಿ ಅದನ್ನು ಮುಚ್ಚಿಡಬೇಕೆನ್ನಿಸುತ್ತದೆ. ಆದರೂ ಪುಸ್ತಕ ಓದುವುದನ್ನು ನಿಲ್ಲಿಸಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಹೊಸ ಭಾಷೆ ಕಲಿಯಿರಿ

ನಿಮ್ಮ ಮಾತೃಭಾಷೆ ಹಾಗೂ ಇಂಗ್ಲಿಷ್‌ ಗೊತ್ತಿದ್ದರೆ ಮಾತ್ರ ಸಾಕು ಎಂದುಕೊಳ್ಳಬೇಡಿ. ಹೇಗಾದರೂ ಸರಿ, ಬೇರೆ ಭಾಷೆಗಳನ್ನು ಕಲಿಯಿರಿ. ಸಾಧ್ಯವಾದರೆ ಭಾಷಾ ಕೋರ್ಸ್‌ಗಳ ಮೂಲಕ, ಒಂದಾದರೂ ವಿದೇಶಿ ಭಾಷೆಯನ್ನು ಕಲಿಯುವುದು ಉತ್ತಮ. ಅನ್ಯ ಭಾಷೆಯನ್ನು ಕಲಿಯುವುದರಿಂದ ಹೊಸ ಕೌಶಲ ಬೆಳೆಸಿಕೊಂಡಂತಾಗುತ್ತದೆ ಜೊತೆಗೆ ಅಲ್ಲಿನ ಸಂಸ್ಕೃತಿಯ ಪರಿಚಯವೂ ಆಗುತ್ತದೆ.

ಹೊಸ ಕೋರ್ಸ್‌ಗೆ ಸೇರಿಕೊಳ್ಳಿ

ನೀವು ಸೇರಬಹುದಾದ ಹೊಸ ಕೋರ್ಸ್‌ ಏನಾದರೂ ಇದೆಯೇ ಎಂಬುದನ್ನು ಪರಿಶೀಲಿಸಿ. ಹೊಸ ಜ್ಞಾನ ಮತ್ತು ಕೌಶಲಗಳನ್ನು ಗಳಿಸಲು ಕೋರ್ಸ್‌ಗಳು ಉಪಯುಕ್ತ. ಇದಕ್ಕಾಗಿ ದೀರ್ಘಾವಧಿಯ ಸೆಮಿನಾರ್‌- ವರ್ಕ್‌ಷಾಪ್‌ಗಳ ಅಗತ್ಯವಿಲ್ಲ. ಒಂದೆರಡು ವರ್ಕ್‌ಷಾಪ್‌ಗಳಿಂದಲೇ ಹೊಸ ಒಳದೃಷ್ಟಿಕೋನವನ್ನು ಪಡೆಯಬಹುದಾಗಿದೆ.

ಸ್ಪೂರ್ತಿದಾಯಕ ಪರಿಸರ

ನಿಮ್ಮ ಸುತ್ತಮುತ್ತಲಿನ ಪರಿಸರವೂ ನಿಮಗೊಂದು ಒಳ್ಳೆಯ ಮೂಡ್‌ ತಂದುಕೊಡಬಲ್ಲದು. ನೀವು ವಾಸಿಸುವ ಮನೆ/ ಕೋಣೆ/ ಕಚೇರಿಯಲ್ಲಿನ ಸ್ಥಳವು ಸ್ಪೂರ್ತಿದಾಯಕ ಪರಿಸರದಲ್ಲಿದ್ದರೆ ಅದುವೇ ನಿಮಗೆ ಪ್ರತಿದಿನವೂ ಪ್ರೇರಣೆ ನೀಡಬಲ್ಲದು.

ಹೊಸ ಹವ್ಯಾಸ ಬೆಳೆಸಿಕೊಳ್ಳಿ

ನಿಮಗಿಷ್ಟವಾದ ಕೆಲವು ಹವ್ಯಾಸಗಳಿರಬಹುದು. ಅದಲ್ಲದೇ ನೀವು ಕಲಿಯಬೇಕಿರುವ ಯಾವುದಾದರೂ ಆಟ ಇದೆಯೆ?. ಗಾಲ್‌ಧಿ, ಚಾರಣ/ ಬೆಟ್ಟ ಹತ್ತುವುದು, ಡ್ಯಾನ್ಸ್‌ ಇತ್ಯಾದಿಗಳಿಗೆ ಪ್ರಯತ್ನಿಸಿ ನೋಡಬಾರದೇಕೆ?. ಏನಾದರೂ ಹೊಸತನ್ನು ಕಲಿಯುವುದರಿಂದ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕ ಯಾವುದಾದರೂ ವಿಭಿನ್ನ ದೃಷ್ಟಿಕೋನಗಳಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ.

ಹೆದರಿಕೆಗಳಿಂದ ಹೊರಬನ್ನಿ

ಹೆದರಿಕೆ ಎನ್ನುವುದು ಎಲ್ಲರಲ್ಲಿಯೂ ಇರುವಂಥಾದ್ದೇ. ಅನಿಶ್ಚಿತತೆಯ ಭೀತಿ, ಸಾರ್ವಜನಿಕವಾಗಿ ಮಾತನಾಡಲು ಅಂಜಿಕೆ, ರಿಸ್ಕ್‌ ತೆಗೆದುಕೊಳ್ಳುವಾಗಿನ ಗಾಬರಿ- ಇವು ನಮ್ಮನ್ನು, ನಾವಿರುವ ಸ್ಥಾನಕ್ಕೇ ಸೀಮಿತಗೊಳಿಸಿಬಿಡುತ್ತವೆ. ನಮ್ಮ ಬೆಳವಣಿಗೆಗೆ ಇವು ಅಡ್ಡಿಯಾಗಿಬಿಡುತ್ತವೆ. ಯಾವ ಕ್ಷೇತ್ರದಲ್ಲಿ ಬೆಳೆಯಬೇಕು ಎಂದುಕೊಳ್ಳುವಿರೋ ಅದರ ಮೇಲೆ ‘ಹೆದರಿಕೆ’ಯ ಛಾಯೆ ಬೀಳದಂತೆ ನೋಡಿಕೊಳ್ಳಿ.

ಲೈಫ್‌ ಹ್ಯಾಂಡ್‌ಬುಕ್‌ ಇರಲಿ

ನಿಮ್ಮ ಜೀವನ ಹೇಗಿರಬೇಕು - ಅಂದರೆ ಉದ್ದೇಶ, ಮೌಲ್ಯಗಳು ಮತ್ತು ಗುರಿಗಳಂತಹ ಅವಶ್ಯಕತೆಗಳನ್ನು ಬರೆದಿರುವಂತಹ ಒಂದು ಚಿಕ್ಕ ಪುಸ್ತಕ ಸದಾ ನಿಮ್ಮ ಜೊತೆಗಿರಲಿ. ಆಗಾಗ್ಗೆ ಅದನ್ನು ನೋಡುವುದರಿಂದಲೇ ನಿಮಗೆ ದಿನವೂ ಪ್ರೇರಣೆ ಸಿಗುತ್ತದೆ.

ಬೆಳಗ್ಗೆ ಬೇಗ ಎದ್ದೇಳಿ

ಮುಂಜಾನೆ ಬೇಗ ಎದ್ದು, ಒಂದಿಷ್ಟು ನಡೆಯಿರಿ. ಬೆಳಗಿನ ಐದರಿಂದ ಆರು ಗಂಟೆಯ ಅವಧಿ ಉತ್ತಮವಾದದ್ದು. ಇದರಿಂದ ನಿಮ್ಮ ಉತ್ಪಾದಕತೆ ಜೊತೆಗೆ ಜೀವನದ ಗುಣಮಟ್ಟವೂ ಹೆಚ್ಚುವುದು ಖಂಡಿತ. ದಿನವಿಡೀ ನೀವು ಚಟುವಟಿಕೆ ಮತ್ತು ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.

ದೈಹಿಕ ಕಸರತ್ತು ಮಾಡಿ

ವಾರಕ್ಕೆ ಕನಿಷ್ಠ ಮೂರು ಸಲ, ಪ್ರತಿ ಬಾರಿಯೂ ಕನಿಷ್ಠ 30 ನಿಮಿಷಗಳವರೆಗೆ, ದೈಹಿಕ ವ್ಯಾಯಾಮ ಮಾಡುವುದು ಒಳ್ಳೆಯದು. ಜಾಗಿಂಗ್‌, ಜಿಮ್‌ ಹಾಗೂ ಈಜು ಇವುಗಳನ್ನು ಮಿಕ್ಸ್‌ ಮಾಡಿದ ಕಸರತ್ತನ್ನು ಕೈಗೊಳ್ಳಿ. ಪ್ರತಿದಿನವೂ ಸ್ವಯಂಪ್ರೇರಣೆಗೆ ಸಮಯ ನೀಡಿ. ಇದು ನಿಮ್ಮ ಜೀವನದ ಯಶಸ್ಸಿಗೆ, ಕರಿಯರ್‌ ಯಶಸ್ಸಿಗೆ ಕಾರಣವಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ