Chanakya Neethi: ಆದಾಯಕ್ಕೆ ಅನುಗುಣವಾಗಿ ಮನೆಯ ನಿರ್ವಹಣೆ, ಹಣ ಉಳಿಸುವ ಗುಣ; ಮನೆಯ ಯಜಮಾನನಿಗೆ ಇರಬೇಕಾದ ಇನ್ನಿತರ ಜವಾಬ್ದಾರಿಗಳಿವು
Jan 09, 2024 10:32 AM IST
ಮನೆಯ ಯಜಮಾನನಾದವನಿಗೆ ಇರಬೇಕಾದ ಗುಣಗಳಿವು
Chanakya Neethi: ಮನೆಯ ಯಜಮಾನನ ಪಾತ್ರ ಕುಟುಂಬ ನಿರ್ವಹಣೆಯಲ್ಲಿ ಅತ್ಯಂತ ಮುಖ್ಯವಾಗಿರುತ್ತದೆ. ಆತ ಸರಿಯಿದ್ದಾಗ ಮಾತ್ರ ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿ ನೆಲೆಸಲು ಸಾಧ್ಯವಿದೆ. ಆಚಾರ್ಯ ಚಾಣಕ್ಯರು ಮನೆಯ ಯಜಮಾನನಾದವನಿಗೆ ಯಾವೆಲ್ಲ ಗುಣಗಳು ಕಡ್ಡಾಯವಾಗಿ ಇರಬೇಕು ಎಂಬುದನ್ನು ತಿಳಿಸಿದ್ದಾರೆ.
Chakanya Neethi: ಮನೆಯ ಯಜಮಾನ ಸರಿಯಿದ್ದಾಗ ಮಾತ್ರ ಕುಟುಂಬ ಕೂಡ ಚೆನ್ನಾಗಿ ಇರುತ್ತದೆ ಎನ್ನುವುದು ಚಾಣಕ್ಯನ ನಂಬಿಕೆ. ಮನೆಯ ಯಜಮಾನ ತೆಗೆದುಕೊಳ್ಳುವ ನಿರ್ಧಾರಗಳು ಕುಟುಂಬದ ಭವಿಷ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಮನೆಯ ಮುಖ್ಯಸ್ಥ ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ ಇಡೀ ಕುಟುಂಬವೇ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಹಣದ ವ್ಯವಹಾರಗಳಿಂದ ಹಿಡಿದು ಅವರ ಮೌಲ್ಯಗಳವರೆಗೂ ಮನೆಯ ಯಜಮಾನನ ಪಾತ್ರ ತುಂಬಾ ಮುಖ್ಯವಾಗಿರುತ್ತದೆ.
ಭಾರತದ ಶ್ರೇಷ್ಠ ವಿದ್ವಾಂಸ ಹಾಗೂ ಚಾಣಾಕ್ಷ ಎನಿಸಿಕೊಂಡಿರುವ ಚಾಣಕ್ಯರು ಕೌಟುಂಬಿಕ ಮೌಲ್ಯಗಳ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಚಾಣಕ್ಯನ ತತ್ವಗಳನ್ನು ಅನುಸರಿಸಿ ಯಾರು ಜೀವನ ಸಾಗಿಸುತ್ತಾರೋ ಅವರಿಗೆ ಜಯ ಕಟ್ಟಿಟ್ಟ ಬುತ್ತಿ. ಚಾಣಕ್ಯನ ನೀತಿಗಳು ಇಂದಿನ ಪೀಳಿಗೆಗೂ ಸಹ ಬಹಳ ಮುಖ್ಯವಾಗಿದೆ. ಚಾಣಕ್ಯ ಹೇಳುವ ಪ್ರಕಾರ, ಒಂದು ಕುಟುಂಬದ ಭವಿಷ್ಯ ಹಾಗೂ ಪ್ರಗತಿ ಆ ಮನೆಯ ಯಜಮಾನನ ಮೇಲೆ ಅವಲಂಬಿತವಾಗಿ ಇರುತ್ತದೆ. ಮನೆಯ ಮಾಲೀಕ ಬುದ್ಧಿವಂತನಾಗಿದ್ದು ಎಂಥಹ ಸಂದರ್ಭಗಳನ್ನೂ ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಮಾತ್ರ ಕುಟುಂಬದ ನಿರ್ವಹಣೆ ಸಾಧ್ಯವಿದೆ. ಚಾಣಕ್ಯ ಹೇಳುವ ಪ್ರಕಾರ ಕುಟುಂಬ ನಡೆಸಿಕೊಂಡು ಹೋಗುವ ಯಜಮಾನನಲ್ಲಿ ಯಾವೆಲ್ಲ ಗುಣಗಳು ಇರಬೇಕು ಎಂಬುದನ್ನು ತಿಳಿಯೋಣ.
- ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಮನೆಯ ಯಜಮಾನನಲ್ಲಿ ಹಣ ಉಳಿಸುವ ಗುಣ ಇರಬೇಕು. ಆಗ ಮನೆಯಲ್ಲಿ ಹಣದ ಕೊರತೆ ಉಂಟಾಗುವುದಿಲ್ಲ. ಈಗ ಹಣ ಉಳಿತಾಯ ಮಾಡಿದಲ್ಲಿ ಮಾತ್ರ ಭವಿಷ್ಯದ ಸಂಕಷ್ಟಗಳನ್ನು ಎದುರಿಸುವುದು ಸುಲಭವಾಗುತ್ತದೆ. ಇಲ್ಲವಾದಲ್ಲಿ ಸಾಲದ ಭಾದೆಗೆ ಸಿಲುಕಬೇಕಾದ ಸಂದರ್ಭ ಎದುರಾಗಬಹುದು. ಹೀಗಾಗಿ ಯಾರೊಂದಿಗೂ ಕೈಚಾಚದಂತೆ ಹಣ ಉಳಿಸುವುದು ಕುಟುಂಬದ ಮುಖ್ಯಸ್ಥನಿಗೆ ಇರಬೇಕಾದ ಮುಖ್ಯ ಗುಣವಾಗಿದೆ. ನಿಮಗೆ ಏನೇ ಕೊಂಡುಕೊಳ್ಳಬೇಕು ಎಂದೆನಿಸಿದರೂ ಸಹ ಅದಕ್ಕೆ ಹಣ ಎಷ್ಟು ಖರ್ಚಾಗುತ್ತದೆ ಎಂದು ಯೋಚಿಸಿ ಬಳಿಕ ಹಣ ವಿನಿಯೋಗಿಸಬೇಕು. ನೀರಿನಂತೆ ಹಣ ಖರ್ಚು ಮಾಡುವಂತಿಲ್ಲ.
- ಮನೆಯ ಯಜಮಾನ ತಾನು ತೆಗೆದುಕೊಂಡ ನಿರ್ಧಾರಗಳಿಗೆ ಮೊದಲು ತಾನು ಬದ್ಧವಾಗಿರಬೇಕು. ಮನೆಯಲ್ಲಿ ಒಳ್ಳೆಯ ವಾತಾವರಣ ಇರಬೇಕು ಎಂದರೆ ಮನೆಯ ಮಾಲೀಕ ತನ್ನ ನಿರ್ಧಾರಗಳಿಗೆ ಅಚಲವಾಗಿ ಇದ್ದಾಗ ಮಾತ್ರ ಸಾಧ್ಯ . ಆಗ ಮಾತ್ರ ಕುಟುಂಬದ ಇತರೆ ಸದಸ್ಯರಿಗೂ ಸಹ ಒಳಿತಾಗಲಿದೆ. ಮನೆಯ ಮುಖ್ಯಸ್ಥರೇ ನಿರ್ಣಯಗಳನ್ನು ಪಾಲಿಸದೇ ಹೋದರೆ ಮನೆಯ ಸದಸ್ಯರೂ ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ನಿಮ್ಮ ಕಠಿಣ ನಿರ್ಧಾರಗಳನ್ನು ಮೊದಲು ನೀವು ಪಾಲಿಸಬೇಕು.
- ಸೂಕ್ತ ಸಾಕ್ಷ್ಯಗಳಿಲ್ಲದೇ ಮನೆಯ ಮಾಲೀಕರು ಯಾವುದನ್ನೂ ನಂಬಬಾರದು. ಯಾವುದೇ ಸುದ್ಧಿಯನ್ನು ನಂಬುವ ಮೊದಲು ಆ ಸುದ್ದಿ ಸತ್ಯಕ್ಕೆ ಹತ್ತಿರವಾಗಿದೆಯೇ ಎಂಬುದನ್ನು ಮನೆಯ ಯಜಮಾನನಾದವನು ಪರಿಶೀಲಿಸಬೇಕು. ಮನೆಯಲ್ಲಿ ಯಾವುದಾದರೂ ಕಾರಣಕ್ಕೆ ಜಗಳವಾದರೆ ಎರಡೂ ಕಡೆಯವರ ಮಾತನ್ನು ಕೇಳಬೇಕು. ಅಲ್ಲದೇ ಇಬ್ಬರ ನಡುವೆ ಮನಸ್ತಾಪ ಮುಂದುವರಿಯದಂತ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಕುಟುಂಬ ಸದಸ್ಯರ ನಡುವೆ ಮನಸ್ತಾಪ ಹೆಚ್ಚಾಗುವ ಸಾಧ್ಯತೆ ಇರಲಿದೆ. ಇದಕ್ಕೆ ನೀವು ಆಸ್ಪದ ಮಾಡಿಕೊಡಬಾರದು.
- ಚಾಣಕ್ಯ ಹೇಳುವ ಪ್ರಕಾರ, ಮನೆಯ ಯಜಮಾನ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಕುಟುಂಬದ ಎಲ್ಲಾ ಸದಸ್ಯರನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಯಾರಿಗೂ ತೊಂದರೆ ಉಂಟಾಗದಂತಹ ನಿರ್ಧಾರಗಳನ್ನು ಕೈಗೊಳ್ಳಬೇಕು. ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಕುಟುಂಬ ಸದಸ್ಯರೊಡನೆ ಮಾತನಾಡಬೇಕು. ನೀವು ಮನಸೋ ಇಚ್ಛೆ ನಿರ್ಧಾರಗಳನ್ನು ಕೈಗೊಂಡರೆ ಕುಟುಂಬ ಸದಸ್ಯರಿಗೆ ನಿಮ್ಮ ಮೇಲೆ ಗೌರವ ಕಡಿಮೆಯಾಗಬಹುದು.
- ಚಾಣಕ್ಯ ನೀತಿಶಾಸ್ತ್ರ ಹೇಳುವ ಪ್ರಕಾರ, ಮನೆಯ ಆದಾಯಕ್ಕೆ ಅನುಗುಣವಾಗಿ ಮನೆಯ ನಿರ್ವಹಣೆ ನೋಡಿಕೊಳ್ಳುವುದು ಕುಟುಂಬದ ಮುಖ್ಯಸ್ಥನ ಜವಾಬ್ದಾರಿಯಾಗಿದೆ. ಅನಗತ್ಯ ವೆಚ್ಚಗಳಿಗೆ ಆಸ್ಪದ ನೀಡಬಾರದು. ಇಲ್ಲವಾದಲ್ಲಿ ನೀವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಬೇಕಾಗಿ ಬರಲಿದೆ. ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿರುವವರಂತೂ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅಗತ್ಯಕ್ಕಿಂತ ಹೆಚ್ಚು ಖರ್ಚಿನಿಂದ ಭವಿಷ್ಯದಲ್ಲಿ ಸಮಸ್ಯೆ ಉಂಟಾಗಲಿದೆ.
ಇದನ್ನೂ ಓದಿ: ಚಾಣಕ್ಯರ ಪ್ರಕಾರ ಮನುಷ್ಯರು ಪ್ರಾಣಿಗಳಿಂದ ಕಲಿಯಲೇಬೇಕಾದ ಕೆಲವು ಗುಣಗಳಿವು
ವಿಭಾಗ