Chanakya Niti: ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಈ ಐದು ರೀತಿಯ ಸ್ನೇಹಿತರಿಂದ ದೂರವಿರಿ; ಚಾಣಕ್ಯ ನೀತಿ
Feb 12, 2024 08:45 AM IST
ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಈ ಐದು ರೀತಿಯ ಸ್ನೇಹಿತರಿಂದ ದೂರವಿರಬೇಕೆಂದು ಚಾಣಕ್ಯರು ಹೇಳುತ್ತಾರೆ.
Chanakya Niti: ರಕ್ತ ಸಂಬಂಧಕ್ಕಿಂತಲೂ ಮಿಗಿಲಾದದ್ದು ಸ್ನೇಹ ಎಂದು ಹೇಳುತ್ತಾರೆ. ಹೀಗಾಗಿ ಒಬ್ಬ ಸ್ನೇಹಿತನನ್ನು ಆಯ್ಕೆ ಮಾಡಿಕೊಳ್ಳುವಾಗ ನಾವು ಬಹಳ ಎಚ್ಚರಿಕೆಯಿಂದ ಇರಬೇಕು. ನಿಜವಾದ ಸ್ನೇಹಿತನಾದವನಲ್ಲಿ ಯಾವೆಲ್ಲ ಗುಣಗಳು ಇರುತ್ತವೆ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ತಿಳಿಸಿದ್ದಾರೆ
Chanakya Niti in Kannada: ಜೀವನದಲ್ಲಿ ಯಶಸ್ವಿಯಾಗಬೇಕು ಎಂಬ ಕನಸು ಎಲ್ಲರಿಗೂ ಇರುತ್ತದೆ. ಆದರೆ ಈ ಕನಸನ್ನು ನನಸು ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಜೀವನದಲ್ಲಿ ಅಂದುಕೊಂಡ ಗುರಿಯನ್ನು ಸಾಧಿಸಲು ಒಬ್ಬ ವ್ಯಕ್ತಿಗೆ ಪರಿಶ್ರಮದ ಜೊತೆಯಲ್ಲಿ ಒಬ್ಬ ಒಳ್ಳೆ ಸ್ನೇಹಿತನ ಮಾರ್ಗದರ್ಶನದ ಅವಶ್ಯಕತೆ ಕೂಡ ಇರುತ್ತದೆ. ಈ ಮಿತ್ರನು ಕಠಿಣ ಪರಿಸ್ಥಿತಿಗಳಲ್ಲಿ ಸೂಕ್ತವಾಗಿ ಮಾರ್ಗದರ್ಶನ ನೀಡುವಂತೆ ಇರಬೇಕು.
ಯಾರಿಗೆ ಅವರ ಜೀವನದಲ್ಲಿ ಇವರು ಒಳ್ಳೆಯ ಮಿತ್ರರು ಅಲ್ಲ ಎನಿಸುತ್ತದೆಯೋ ಅಂಥವರು ಯಾರಲ್ಲಿಯೂ ತಮ್ಮ ಜೀವನದ ರಹಸ್ಯಗಳನ್ನು ಹೇಳಿಕೊಳ್ಳಲು ಹೋಗಲೇಬಾರದು. ಈ ಬಗ್ಗೆ ಆಚಾರ್ಯ ಚಾಣಕ್ಯರು ಸರಿಯಾದ ಮಾರ್ಗದರ್ಶನ ನೀಡಿದ್ದಾರೆ. ಆಚಾರ್ಯ ಚಾಣಕ್ಯರು ನೀತಿ ಶಾಸ್ತ್ರದಲ್ಲಿ ತಿಳಿಸಿರುವಂತೆ ನಾವು ಯಾವ ರೀತಿಯ ಸ್ನೇಹಿತರ ಸಂಘವನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.
ಗುಟ್ಟನ್ನು ರಟ್ಟು ಮಾಡುವವರು: ಯಾರಿಗೆ ಗುಟ್ಟನ್ನು ತಮ್ಮ ಬಳಿ ಇಟ್ಟುಕೊಳ್ಳಲು ಸಾಧ್ಯವಿಲ್ಲವೋ ಅಂಥವರ ಬಳಿ ನಾವು ನಮ್ಮ ಜೀವನದ ರಹಸ್ಯಗಳನ್ನು ಎಂದಿಗೂ ಹೇಳಿಕೊಳ್ಳಬಾರದು ಎಂದು ನೀತಿಶಾಸ್ತ್ರ ಹೇಳುತ್ತದೆ. ಈ ರೀತಿಯ ಗುಣವುಳ್ಳ ಸ್ನೇಹಿತರನ್ನು ಎಂದಿಗೂ ಕಣ್ಮುಚ್ಚಿ ನಂಬಬಾರದು. ಯಾವ ವ್ಯಕ್ತಿಯು ನಿಮ್ಮ ಬಳಿ ಬಂದು ಬೇರೆಯವರ ಗುಟ್ಟನ್ನು ಹೇಳುತ್ತಾರೋ ಅವರು ಇನ್ನೊಂದು ದಿನ ಬೇರೆಯವರ ಬಳಿ ಹೋಗಿ ನಿಮ್ಮ ಗುಟ್ಟನ್ನು ಹೇಳುತ್ತಾರೆ ಎಂದರ್ಥ.
ತಮ್ಮ ಮಾತನ್ನು ಸಮರ್ಥಿಸಿಕೊಳ್ಳುವವರು: ಈ ರೀತಿಯ ಗುಣವುಳ್ಳ ಸ್ನೇಹಿತರಿಂದಲೂ ಅಂತರ ಕಾಯ್ದುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇವರು ತಮ್ಮ ತಪ್ಪಿದ್ದರೂ ವಾದ ಮಾಡುವುದನ್ನು ನಿಲ್ಲಿಸುವುದೇ ಇಲ್ಲ. ಇಂಥವರು ಸಮಯ ಬಂದಾಗ ನಿಮಗೆ ಮೋಸ ಮಾಡಲೂ ಸಹ ಹಿಂಜರಿಯುವುದಿಲ್ಲ.
ನಿಮ್ಮ ಬೆನ್ನಹಿಂದೆ ಮಾತನಾಡುವವರು: ಈ ಗುಣವುಳ್ಳವರು ನಿಮ್ಮ ಬೆನ್ನ ಹಿಂದೆ ಇನ್ನೊಬ್ಬರ ಬಳಿ ಹೋಗಿ ನಿಮ್ಮ ಬಗ್ಗೆಯೇ ಆಡಿಕೊಂಡು ನಗುತ್ತಿರುತ್ತಾರೆ. ಇಂಥವರು ಯಾವುದೇ ಸಂದರ್ಭದಲ್ಲಿಯೂ ನಿಮಗೆ ಒಳ್ಳೆಯನ್ನು ಎಂದೂ ಹಾರೈಸುವುದಿಲ್ಲ.
ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬಾರದವರ: ಈ ರೀತಿಯ ಸ್ನೇಹಿತರು ಬಾಯಲ್ಲಿ ಮಾತ್ರ ನಾನು ಎಂಥದ್ದೇ ಕಠಿಣ ಸಂದರ್ಭದಲ್ಲಿಯೂ ನಿನ್ನೊಡನೆ ನಿಲ್ಲುತ್ತೇನೆ ಎಂದು ಹೇಳುತ್ತಾರೆ ಆದರೆ ಕಷ್ಟ ಕಾಲ ಬಂದಾಗ ಇವರು ನಿಮಗೆ ಸಾಥ್ ನೀಡುವುದಿಲ್ಲ . ಆಚಾರ್ಯ ಚಾಣಕ್ಯರು ಇಂಥಹ ಸ್ನೇಹಿತರಿಂದಲೂ ದೂರವಿರಿ ಎಂದೇ ಹೇಳಿದ್ದಾರೆ. ಈ ರೀತಿಯ ಗುಣವಿರುವವರ ನಡುವೆ ನೀವಿದ್ದರೆ ನಿಮಗೆ ಮುಂದಿನ ದಿನಗಳಲ್ಲಿ ಯಾರ ಮೇಲೆಯೂ ನಂಬಿಕೆ ಬರುವುದಿಲ್ಲ.
ಇದನ್ನೂ ಓದಿ: ಚಾಣಕ್ಯನ ಪ್ರಕಾರ ಮಹಿಳೆಯರಲ್ಲಿರುವ ಅಪಾಯಕಾರಿ ಗುಣಗಳಿವು
ತಮ್ಮ ಲಾಭಕ್ಕಾಗಿ ಮಾತ್ರ ನಿಮ್ಮನ್ನು ಬಳಸಿಕೊಳ್ಳುವುದು: ಕೇವಲ ತಮ್ಮ ಲಾಭಕ್ಕಾಗಿ ಮಾತ್ರ ನಿಮ್ಮನ್ನು ಬಳಕೆ ಮಾಡಿಕೊಳ್ಳುವಂತಹ ಸ್ನೇಹಿತರೂ ಕೂಡ ನಿಮಗೆ ಇದ್ದಿರಬಹುದು. ಆದರೆ ಇಂಥವರ ಸ್ನೇಹದಿಂದ ದೂರ ಇರುವುದರಲ್ಲೇ ನಿಮಗೆ ಲಾಭವಿದೆ. ಇವರು ಕೇವಲ ನಿಮ್ಮ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡುತ್ತಾರೆಯೇ ಹೊರತು ಇಂಥವರಿಂದ ನಿಮಗೆ ಯಾವುದೇ ರೀತಿಯ ಪ್ರಯೋಜನ ಇರುವುದಿಲ್ಲ. (This copy first appeared in Hindustan Times Kannada website. To read more like this please logon to kannada.hindustantime.com).
ವಿಭಾಗ