Adolescence: ಹುಡುಗಾಟಿಕೆ; ಎಲ್ಲರಿಗೂ ಹೀರೋ ಆಗುವ ಅಪ್ಪ ನನಗ್ಯಾಕೆ ವಿಲನ್‌ನಂತೆ ಕಂಡರು
Jun 18, 2023 07:30 AM IST
ಹುಡುಗಾಟಿಕೆ ಅಂಕಣ
- Fathers day 2023: ಇದು ಎಚ್‌ಟಿ ಕನ್ನಡ (Hindustan Times Kannada) ವೆಬ್‌ಸೈಟ್‌ನಲ್ಲಿ ಪ್ರತಿ ಭಾನುವಾರ ಪ್ರಕಟವಾಗುವ ಅಂಕಣ 'ಹುಡುಗಾಟಿಕೆ'. ಒಳಗಿನ ಸೂಕ್ಷ್ಮ ಮನಸು ಜಾಗೃತವಾಗುವ, ಒಂದಷ್ಟು ಗೊಂದಲಗಳ ನಡುವೆ ಚಂಚಲ ಮನಸಿಗೆ ಬೇಲಿ ಹಾಕುವ ಪ್ರಯತ್ನದಲ್ಲಿರುವರನ್ನೇ ಗಮನದಲ್ಲಿರಿಸಿಕೊಂಡು ರೂಪಿಸಿದ ಅಂಕಣ ಇದು. ಇಂದು ಅಪ್ಪಂದಿರ ದಿನದ ವಿಶೇಷ ಬರಹ.
ಅಪ್ಪ ಅಂದ್ರೆ ಆಸರೆ, ಆಪ್ಪ ಅಂದ್ರೆ ಭದ್ರತೆ... ಅಪ್ಪನ ದಿನದಂದು ತೀರಾ ಸಾಮಾನ್ಯವೆಂಬಂತೆ ಕೇಳುವ ಮಾತುಗಳು. ತಾಯಿಯಾದವಳು ಹಸುಗೂಸೊಂದಕ್ಕೆ ಜನ್ಮವಿತ್ತಾಗ ನೋವಿನಲ್ಲೂ ನಗುತ್ತಾಳೆ. ಉಸಿರುಗಟ್ಟಿದಂತೆ ಅಳುವ ಮಗುವಿನ ಧ್ವನಿ ಆಕೆಗೆ ನವಿರಾದ ಸಂಗೀತದಂತೆ ಕೇಳುತ್ತದೆ. ಅತ್ತ ಅಪ್ಪನಾದವನಿಗೆ ಒಳಗೊಳಗೆ ಖುಷಿ, ಸಾರ್ಥಕ ಭಾವ. ಮಗು ಹುಟ್ಟಿದಾಗಲೇ ಅದರ ಭವಿಷ್ಯದ ಕನಸು ಕಾಣುವ ಅಪ್ಪನ ಹೆಗಲಿಗೆ ಜವಾಬ್ದಾರಿಯ ಜೋಳಿಗೆ ಕೂಡಾ ಏರಿರುತ್ತದೆ. ಅಂದು ಮಗುವಿನ ಮುಖ ಕಾಣುವ ಅಪ್ಪನಿಗೆ, ಆ ಕ್ಷಣದಲ್ಲಿ ತನ್ನ ಅಪ್ಪನ ಸ್ಥಾನ, ಜವಾಬ್ದಾರಿ ಹಾಗೂ ಭಾವಗಳು ಅರ್ಥವಾಗುತ್ತವೆ.
ಅಪ್ಪನ ಬಗೆಗೆ ಮಕ್ಕಳ ಅಭಿಪ್ರಾಯ ಅವರ ವಯಸ್ಸಿಗನುಸಾರವಾಗಿ ಬದಲಾಗುತ್ತವೆ. ಬಾಲ್ಯದಲ್ಲಿ ಅಪ್ಪ ಅಂದ್ರೆ ಭದ್ರತೆ ಎನ್ನುವ ಮಕ್ಕಳು, ಹರೆಯಕ್ಕೆ ಬರುತ್ತಿದ್ದಂತೆಯೇ ತಮ್ಮ ಇಚ್ಛೆಗೆ ವಿರುದ್ಧವಾಗಿ ನಿಲ್ಲುವ ಶತ್ರುವಿನಂತೆ ಕಾಣುತ್ತಾನೆ. ಅಲ್ಲಿಂದ ಮುಂದಿನ ಹಂತಕ್ಕೆ ಹೋದಂತೆ ಜವಾಬ್ದಾರಿಯ ಅರ್ಥ ತಿಳಿಸುವ ಅಪ್ಪ, ಬರುಬರುತ್ತಾ ಗೆಳೆಯನಾಗುತ್ತಾನೆ. ಆದರೆ, ಹುಟ್ಟಿನಿಂದ ಸಾವಿನವರೆಗೂ ಮೊದಲ ಗೆಳೆಯನಾಗಿ ಕೊನೆಯವರೆಗೂ ಜೊತೆಗಿರುವ ಜೊತೆಗಾರ ಅಪ್ಪ ಎಂಬುದನ್ನು ಅರ್ಥ ಮಾಡಿಕೊಳ್ಳುವವರು ಬೆರಳೆಣಿಕೆಯವರು.
ಹರೆಯಕ್ಕೆ ಕಾಲಿಡುತ್ತಿದ್ದ ಮಕ್ಕಳಿಗೆ ಕಾಲೇಜು ಮೆಟ್ಟಿಲು ಹತ್ತುವ ಖುಷಿ ಒಂದೆಡೆಯಾದರೆ, ದೇಹದಲ್ಲಾಗುವ ಬದಲಾವಣೆಗಳ ಬಗೆಗಿನ ದುಗುಡ ಇನ್ನೊಂದೆಡೆ. ಹುಟುಗಾಟಿಕೆಯ ಮನಸು ಜಾಗೃತವಾಗುವ ಹಂತದಲ್ಲಿ ಮನಸ್ಸನ್ನು ಹತೋಟಿಗೆ ತರಲು ಒದ್ದಾಟ ನಡೆಯುತ್ತಿರುತ್ತದೆ. ಒಡನಾಡಿಯ ಹುಡಾಕಾಟಕ್ಕೆ ಹಾತೊರೆಯುವ ಮನಸು, ಹೊಸ ಜೊತೆಗಾರನ ಹುಡುಕ ಬಯಸುತ್ತದೆ. ಹೀಗಾಗಿ ಅಪ್ಪನಿಗೆ ಮಕ್ಕಳ ಹರೆಯಕ್ಕೆ ಕಾವಲು ಕಾಯುವುದೇ ಉನ್ನತ ಜವಾಬ್ದಾರಿ. ಬಾಹ್ಯ ಆಕರ್ಷಣೆಯತ್ತ ಬಾಗುವ ಮನಸು ಬೇಲಿ ಹಾರುವುದೋ ಎಂಬ ಭೀತಿ ಹೆತ್ತಪ್ಪನಿಗೆ. ಹೆಣ್ಣು ಮಗಳಾದರೆ ತಂದೆಯ ಕಾಳಜಿ ದುಪ್ಪಟ್ಟು. ಮನೆಯಿಂದ ಹೊರಹೋದ ಮನೆಮಗಳ ಗೆಜ್ಜೆ ಸದ್ದು ಮತ್ತೆ ಕರ್ಣಗಳಿಗೆ ಬಡಿಯುವವರೆಗೂ ಕಣ್ಣುಗಳು ಮನೆದಾರಿ ನೋಡುತ್ತಾ ಕಾಯುತ್ತಿರುತ್ತವೆ. ಅಪ್ಪನ ಅತಿಯಾದ ಕಾಳಜಿ, ಹರೆಯದ ಮಕ್ಕಳಿಗೆ ಲಕ್ಷ್ಮಣ ರೇಖೆಯಂತೆ ಭಾಸವಾಗುತ್ತದೆ.
ಹೀರೋ ಆಗುವ ಅಪ್ಪನೇ ಹರೆಯರಿಗೆ ವಿಲನ್
ನನ್ನಪ್ಪ ಹೀರೋ ಎನ್ನುವ ಬಹುತೇಕ ಮಕ್ಕಳಿಗೆ ಒಂದು ಹಂತದಲ್ಲಿ ಅಪ್ಪ ವಿಲನ್‌ನಂತೆ ಭಾಸವಾಗುತ್ತಾರೆ. ಆದರೆ, ಅದು ಅಪ್ಪನ ಅಕ್ಕರೆಯ ಆಚೆಗಿನ ಕಾಳಜಿ ಎಂದು ಅರ್ಥವಾಗುವಲ್ಲಿ ಸಮಯ ಮಿಂಚಿರುತ್ತದೆ. ಹೆತ್ತ ಮಕ್ಕಳ ಹರೆಯ ಒಂದು ಬಾರಿ ಮುಗಿದು ಬಿಡಲಿ ಎಂದು ಕಾಯುವ ಅಪ್ಪ, ಕಣ್ಣಿಗೆ ಎಣ್ಣೆ ಬಿಟ್ಟು ಮಕ್ಕಳ ಹಿಂದೆ ಬೀಳುತ್ತಾನೆ. ಅತ್ತ ಹರೆಯದ ಯುವಕನ ಯೋಚನಾ ಲಹರಿಯೇ ವಿಭಿನ್ನ. ಪ್ರಬುದ್ಧ ಮನಸ್ಸು ಜಾಗೃತವಾಗುವ ಹಂತದಲ್ಲಿ ಸ್ವಂತ ನಿರ್ಧಾರಗಳಿಗೆ ಮನಸ್ಸು ಹಾತೊರೆಯುತ್ತದೆ. ಮಗನ ದಾರಿಯ ಗಮ್ಯ ಸರಿಯಿಲ್ಲ ಎಂದು ಮೊದಲೇ ಅರಿಯುವ ಅಪ್ಪ, ಮಗನ ಸುತ್ತ ಬೇಲಿ ಹಾಕುವ ಪ್ರಯತ್ನ ಮಾಡುತ್ತಾನೆ. ಅಷ್ಟರಲ್ಲಿ ಮಗನ ಆಸೆಗೆ ಅಪ್ಪನೇ ಶತ್ರುವಿನಂತೆ ಕಾಣುತ್ತಾನೆ.
ಅಪ್ಪ ಮಾಡಿದ ತಪ್ಪೇನು?
ಪ್ರತಿಯೊಬ್ಬನ ಬದುಕಿನ ನಾವಿಕ ಹಾಗೂ ನಾಯಕಾಗಿರುವ ಅಪ್ಪ, ಕೊನೆಯವರೆಗೂ ಅರ್ಥವಾಗದ ಭಾವವಾಗಿ ಉಳಿಯುತ್ತಾನೆ. ಅಸಲಿಗೆ ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗುವ ಅವಕಾಶವನ್ನು ಅಪ್ಪ ಕೊಡುವುದೇ ಇಲ್ಲ. ಹೆಣ್ಣು ಗಂಡೆನ್ನದೆ ಹರೆಯದ ಜೀವಕ್ಕೆ ಮೊದಲ ಗೆಳೆಯನೇ ಅಪ್ಪ. ಪ್ರತಿ ಮಕ್ಕಳ ಗೆಳೆತನವನ್ನು ಸದಾ ಹಾತೊರೆಯುವ ಜೀವ ಅಪ್ಪ. ಸಾಧನೆಗೆ ಚಪ್ಪಾಳೆ ತಟ್ಟುವ, ತಪ್ಪನ್ನು ತಿದ್ದಿ ಬುದ್ಧಿ ಹೇಳುವ ಮೊದಲ ವ್ಯಕ್ತಿ ಅಪ್ಪನೇ ಹೊರತೂ ಬೇರಾರೂ ಅಲ್ಲ. ಮಕ್ಕಳ ಭವಿಷ್ಯಕ್ಕೆ ಮುನ್ನುಡಿ ಬರೆಯುವ, ಬದುಕಿಗೆ ಅರ್ಥ ಕಲ್ಪಿಸುವ ಸೂತ್ರದಾರ ಅವನೇ. ಇದರಲ್ಲಿ ಅಪ್ಪ ಮಾಡಿದ ತಪ್ಪೇನಿದೆ.
ಅಪ್ಪ ಬಯಸುವುದು ಬೇರೇನೂ ಅಲ್ಲ
ಗೆಳೆತನವನ್ನು ಬಯಸುವ ಜೀವ ತನ್ನ ಗೆಳೆಯನಿಂದ ನಿರೀಕ್ಷಿಸುವುದು ಭಾವನೆಯನ್ನು ಅರ್ಥ ಮಾಡಿಕೊಳ್ಳುವ ಮನಸ್ಸನ್ನು. ಪ್ರತಿಯೊಬ್ಬ ವ್ಯಕ್ತಿಯ ಮೊದಲ ಗೆಳೆಯನೇ ತಂದೆ. ಹೀಗಾಗಿ ಗೆಳೆಯನನ್ನು ಗೆಳೆಯನಾಗಿ ಕಾಣುವ ಗೆಳೆಯನಿಗಾಗಿ ತಂದೆಯ ಮನಸು ಹಾತೊರೆಯುತ್ತದೆ. ಹೀಗಾಗಿ ಅಪ್ಪನೊಂದಿಗೆ ಗೆಳೆಯನಂತೆ ಇರಿ. ಅಪ್ಪನ ಸ್ಥಾನ ಪಡೆದ ಬಳಿಕ ಅವರ ಆಸೆ, ಕನಸು ಎಲ್ಲವೂ ಮಕ್ಕಳಿಗಾಗಿ. ಹೀಗಾಗಿ ತಂದೆಯ ಸ್ಥಾನದಲ್ಲಿದ್ದು ಮಕ್ಕಳನ್ನು ಉನ್ನತ ವ್ಯಕ್ತಿಯಾಗಿ ಬೆಳೆಸುವ ಜವಾಬ್ದಾರಿ ಅವರಲ್ಲಿರುತ್ತದೆ. ಅದು ಕಾಳಜಿಯ ರೂಪದಲ್ಲಿ ಬಿತ್ತರವಾದಾಗ, ಮಕ್ಕಳ ಅನಗತ್ಯ ಆಸೆಗಳಿಗೆ ಬೇಲಿ ಹಾಕಬೇಕಾಗುತ್ತದೆ. ಹೀಗಾಗಿ ಅಪ್ಪನನ್ನು ಅಪ್ಪನ ಸ್ಥಾನದಲ್ಲಿದ್ದು ಅರ್ಥ ಮಾಡಬೇಕಿರುವುದು ಹರೆಯರ ಜವಾಬ್ದಾರಿ.
ಅಪ್ಪನಿಗೆ ಮೊದಲು ಸ್ನೇಹಿತನಾಗಿ. ಅಪ್ಪನ ಭಾವನೆಯನ್ನು ಅರ್ಥ ಮಾಡಿಕೊಂಡು, ಅವರ ಮಾತುಗಳನ್ನು ಆಲಿಸಿ. ಹರೆಯದ ಮನಸಿನ ಆಸೆ, ಗೊಂದಲ, ಭಾವನೆಗಳು ಅಪ್ಪನಿಗೆ ಹೊಸದೇನಲ್ಲ. ಎಲ್ಲವನ್ನೂ ಹೆತ್ತಪ್ಪನೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ಅವರ ಹರೆಯದ ಹುಟುಗಾಟಿಕೆಗಳನ್ನು ಮೆಲುಕು ಹಾಕುವಂತೆ ಮಾಡಿ. ಡಿಜಿಟಲ್ ಜಗತ್ತಿನ ವಿಸ್ಮಯಗಳ ಬಗ್ಗೆ ಅವರಿಗೂ ಹೇಳಿಕೊಡಿ. ಪ್ರತಿನಿತ್ಯ ಅಪ್ಪ ಎನ್ನುವ ಗೆಳೆಯನೊಂದಿಗೆ ಹರಟೆ ಹೊಡೆಯಲು ಕನಿಷ್ಠ ಇಂತಿಷ್ಟು ಅವಧಿಯನ್ನು ಮೀಸಲಿಡಿ. ಈಗಿನ ಟ್ರೆಂಡ್‌ಗೆ ತಕ್ಕಂತೆ ಅಪ್ಪನಿಗೂ ಆಧುನಿಕ ಜೀವನಶೈಲಿ ಇಷ್ಟವಾದರೆ, ಅದಕ್ಕೆ ನೀವು ಅಡ್ಡಿಯಾಗಬೇಡಿ. ಅವರಿಗೆ ಇಷ್ಟವಾಗುವ ಜೀವನಶೈಲಿಯನ್ನು ಆರಿಸಿಕೊಳ್ಳುವ ಅವಕಾಶ ನೀಡಿ. ಅವರ ಕೆಲಸ, ಒತ್ತಡ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡು ಅದರಲ್ಲಿ ಪಾಲುದಾರರಾಗಿ. ಸಾಧ್ಯವಾದರೆ ಅವರ ನೋವು-ನಲಿವುಗಳನ್ನು ಹಂಚಿಕೊಳ್ಳಿ. ಅಪ್ಪ ಕೊಡುವ ಹಣ ಮರದಲ್ಲಿ ಬೆಳೆದಿದ್ದಲ್ಲ. ಅವರ ಬೆವರ ಹನಿಯ ಪ್ರತಿರೂಪ ಎಂಬುದನ್ನು ಮನದಲ್ಲಿಟ್ಟು ಖರ್ಚು ಮಾಡಿ.
ಹುಡುಗಾಟದ ವಯಸ್ಸಲ್ಲಿ ಹರೆಯರಿಗಿರುವ ಗೊಂದಲದ ನೂರು ಪಟ್ಟು ಜವಾಬ್ದಾರಿ ಹಾಗೂ ಕಾಳಜಿ ಅಪ್ಪನಲ್ಲಿರುತ್ತದೆ. ಅವರ ಕಾಳಜಿಯನ್ನು ಅನ್ಯಥಾ ಭಾವಿಸದಿರಿ. ಅಪ್ಪ ವಿಲನ್ ಅಥವಾ ಹೀರೋ ಎಂಬ ಪ್ರಶ್ನೆಗೆ ಈಗ ನೀವೇ ಉತ್ತರ ಹೇಳಿ.
-ಜಯರಾಜ್ ಅಮಿನ್
ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ jayaraj@htdigital.in ಅಥವಾ ht.kannada@htdigital.in ಗೆ ಈಮೇಲ್ ಮಾಡಿ.
ಇಂತಹ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.