logo
ಕನ್ನಡ ಸುದ್ದಿ  /  ಜೀವನಶೈಲಿ  /  Adolescence: ಹುಡುಗಾಟಿಕೆ; ಮನೆಯವರೇ ತಾನೆ ಮೊದಲ ಸ್ನೇಹಿತರು; ಅವರೊಂದಿಗೆ ಅಂತರವೇಕೆ

Adolescence: ಹುಡುಗಾಟಿಕೆ; ಮನೆಯವರೇ ತಾನೆ ಮೊದಲ ಸ್ನೇಹಿತರು; ಅವರೊಂದಿಗೆ ಅಂತರವೇಕೆ

Jayaraj HT Kannada

Jul 23, 2023 07:30 AM IST

google News

ಹುಡುಗಾಟಿಕೆ ಅಂಕಣ

    • Young Mind: ಇದು ಎಚ್‌ಟಿ ಕನ್ನಡ (Hindustan Times Kannada) ವೆಬ್‌ಸೈಟ್‌ನಲ್ಲಿ ಪ್ರತಿ ಭಾನುವಾರ ಪ್ರಕಟವಾಗುವ ಅಂಕಣ 'ಹುಡುಗಾಟಿಕೆ'. ಒಳಗಿನ ಸೂಕ್ಷ್ಮ ಮನಸು ಜಾಗೃತವಾಗುವ, ಒಂದಷ್ಟು ಗೊಂದಲಗಳ ನಡುವೆ ಚಂಚಲ ಮನಸಿಗೆ ಬೇಲಿ ಹಾಕುವ ಪ್ರಯತ್ನದಲ್ಲಿರುವರನ್ನೇ ಗಮನದಲ್ಲಿರಿಸಿಕೊಂಡು ರೂಪಿಸಿದ ಅಂಕಣ ಇದು.
ಹುಡುಗಾಟಿಕೆ ಅಂಕಣ
ಹುಡುಗಾಟಿಕೆ ಅಂಕಣ

ನಾನೆಷ್ಟೋ ಮಂದಿಯನ್ನು ನೋಡಿದ್ದೇನೆ. ಅವರು ಸಮಾಜದೊಂದಿಗೆ ಬೆರೆಯುವ ರೀತಿಗೂ ಮನೆಯವರೊಂದಿಗೆ ಬೆರೆಯುವುದಕ್ಕೂ ಅಜಗಾಂತರವಿದೆ. ನನ್ನ ಆತ್ಮೀಯರ ಬಳಗದಲ್ಲಿಯೂ ಇಂಥ ವ್ಯತ್ಯಾಸವನ್ನು ಕಂಡು ಅಚ್ಚರಿಪಟ್ಟಿದ್ದಿದೆ. ಅದರಲ್ಲೂ ಮುಖ್ಯವಾಗಿ ಪುರುಷರಲ್ಲಿ ಈ ಥರದ ನಡವಳಿಕೆ ಹೆಚ್ಚು. ಇಲ್ಲಿ ಹೊರ ಸಮಾಜದೊಂದಿಗೆ ನಡೆನುಡಿಯಲ್ಲಿ ಅಂತರ ಕಾಪಾಡಿಕೊಂಡು, ಮನೆಯ ವಾತಾವರಣದಲ್ಲಿ ಮುಕ್ತವಾಗಿದ್ದರೆ ಎನೂ ಅನಿಸದು. ಆದರೆ ಹೆತ್ತವರು, ಒಡಹುಟ್ಟಿದವರು ಸೇರಿದಂತೆ ಮನೆಯವರ ಮುಂದೆ ಅಂತರ ಕಾಯ್ದುಕೊಳ್ಳುವುದು ನನಗೆ ತೀರಾ ವಿಚಿತ್ರವಾಗಿ ಕಾಣುತ್ತದೆ.

ಸ್ನೇಹಿತರು, ನೆರೆಹೊರೆಯವರು, ಕುಟುಂಬದ ಇತರ ಸದಸ್ಯರು, ಹೊಸದಾಗಿ‌ ಪರಿಚಯವಾಗುವ ಹಾಗೂ ಮನೆಯ ಹೊರಗಿನವರೊಂದಿಗೆ ಇನ್ನಿತರ ವ್ಯವಹಾರದ ಸಮಯದಲ್ಲಿ ಮುಕ್ತವಾಗಿರಲು ಸಾಧ್ಯಯವಾದಾಗ; ಮನೆಯವರೊಂದಿಗೆ ಹಾಗೆಯೇ ಬೆರೆಯಲು ಅಸಧ್ಯವೇನೋ ನಾಕಾಣೆ. ಗುರುತು ಪರಿಚಯವಿಲ್ಲದ ಅಂದ ಚೆಂದದ ಹೊಸ ಹುಡುಗಿಯನ್ನು ಕಂಡಾಗ ಕೆದಕಿ ಮಾತನಾಡಲು ಒಂಟಿ ಕಾಲಲ್ಲಿ ನಿಲ್ಲುವ ಅದೆಷ್ಟೋ ಯುವಕರು, ಮನೆಯವರು ತಲೆ ಮೇಲೆ ಬಡಿದು ಮಾತನಾಡಿಸಿದ್ರೂ ತುಟಿ ಪಿಟಕ್ ಅನ್ನುವುದಿಲ್ಲ. ತಂದೆಯೇ ತಾಯಿಯೋ ಬಂದು ಮಾರುದ್ದ ಪ್ರಶ್ನೆ ಕೇಳಿದರೂ, ಈಗಿನ ಯುವ ಮನಸುಗಳಿಗೆ ಬಾಯಿಂದ ಮುತ್ತೇ ಉದುರಿತೇನೋ ಎಂಬ ಭೀತಿ. ಒಂದು ಪದದಲ್ಲಿಯೇ ಉತ್ತರ ಮುಕ್ತಾಯ.

ಅಲ್ಲಾ, ಹುಟ್ಟಿದಾಗಿನಿಂದ ಜೊತೆಗಿದ್ದು ಪ್ರತಿನಿತ್ಯ ಮೋರೆ ನೋಡುತ್ತಾ ಬೆಳೆದವರೊಂದಿಗೆ ಅದೇನು ಡಿಸ್ಟೆನ್ಸ್ ಮೇಂಟೇನ್ ಮಾಡುತ್ತಾರೋ ಗೊತ್ತಿಲ್ಲ. ನನಗಂತೂ ಇಂಥ ನಡವಳಿಕೆ ಹಲವು ಅಚ್ಚರಿ ಹಾಗೂ ವಿಚಿತ್ರ ಎಂದೇ ಭಾಸವಾಗುತ್ತದೆ. ವಿರಳ ಮಾತಿನೊಂದಿಗೆ ಮನೆಯವರೊಂದಿಗೆ ಹೊರಗಿನವರಂತೆ ವರ್ತಿಸುವ ನಡವಳಿಕೆ ಹದಿಹರೆಯದ ವಯಸ್ಸಿನಲ್ಲೇ ರೂಢಿಸಿಕೊಳ್ಳುವುದು ಸರಿಯಲ್ಲ. ಕೆಲವೊಮ್ಮೆ ಅರಿವಿಲ್ಲದೆ ಇಂತಹ ಸ್ವಭಾವ ಮೈಗಂಟಿರಬಹುದು. ಅದನ್ನು ಬದಲಾಯಿಸಲು ಈ ವಯಸ್ಸು ಸೂಕ್ತ.

ದಿನಹೋದಂತೆ ಹೊಸ ಹೊಸ ಟ್ರೆಂಡ್ ಮತ್ತು ತಂತ್ರಜ್ಞಾನದ ಕಡೆ ಯುವ ಜಗತ್ತು ಬೇಗನೆ ಒಗ್ಗಿಕೊಳ್ಳುವುದು ಕಾಲದ ಮಹಿಮೆ. ಹೊಸ ಟ್ರೆಂಡ್‌ನತ್ತ ಹದಿಹರೆಯರು ಬೇಗನೆ ಆಕರ್ಷಿತರಾಗುತ್ತಾರೆ. ಇದು ಕಾಲಕ್ಕೆ ತಕ್ಕಂತೆ ಬದಲಾವಣೆ ಕಾಣುವ ಸಹಜ ಬೆಳವಣಿಗೆ. ತಂತ್ರಜ್ಞಾನ ಅಥವಾ ಟ್ರೆಂಡ್‌ನತ್ತ ಒಗ್ಗಿಕೊಳ್ಳದಿದ್ದರೆ ಜನರೇಷನ್ ಗ್ಯಾಪ್ ಹೆಚ್ಚುತ್ತದೆ ಎಂಬುದು ಯುವಕರ ವಾದ. ಇದನ್ನು ಒಪ್ಪಿಕೊಳ್ಳೋಣ. ಹಾಗಂತ ಭಾವನೆಗಳನ್ನು ನಡವಳಿಕೆಗೆ ಅಂಟಿಸಿಕೊಂಡು ಅದರಲ್ಲೂ ಬದಲಾವಣೆ ತರುವುದು ತುಂಬಾ ಭಿನ್ನ ವಾದ.

ಯೋಚನಾ ಲಹರಿ, ನಡವಳಿಕೆ, ಸಂವಹನ ಶೈಲಿ ಇವೆಲ್ಲವೂ ಜೀವನದ ಪ್ರತಿಹಂತದಲ್ಲೂ ಅಚ್ಚುಕಟ್ಟಾಗಿ ರೂಪಿಸಿ ಅಳವಡಿಸಿಕೊಳ್ಳಬೇಕಾದ ಪ್ರಮುಖ ಅಂಶಗಳು. ವಾತಾವರಣ ಹಾಗೂ ನಾವು ಬೆರೆಯುವ ಜನರು ಪ್ರತಿಯೊಬ್ಬರ ನಡವಳಿಕೆ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿ ನಮ್ಮ ನಡೆ ನುಡಿಗಳು ಸರಿಯಾದ ಕ್ರಮದಲ್ಲಿ‌ ಇಲ್ಲ‌ ಎಂಬುದನ್ನು ತಿದ್ದಿಕೊಳ್ಳಲು ಹದಿಹರೆಯ ತಕ್ಕನಾದ ವಯಸ್ಸು. ಮನೆಯವರ ಬಗೆಗಿನ ನಮ್ಮ ಅಭಿಪ್ರಾಯ, ಅವರೊಂದಿಗೆ ಡಿಗ್ನಿಟಿ (ಘಟನೆ) ಎಂಬ ಭಾವನೆಯೊಂದಿಗೆ ಕಾಯ್ದುಕೊಂಡು ಬಂದಿರುವ ಅಂತರವನ್ನು ಕಡಿಮೆ ಮಾಡಲು ಇದು ಸರಿಯಾದ ಸಮಯ.

ಆಧುನಿಕ ಕೃತಕ ಬುದ್ಧಿಮತ್ತೆಯ ಬದುಕಿನಲ್ಲಿ ತಂತ್ರಜ್ಞಾನಗಳು ಮನೆಮನಗಳನ್ನು ಹೊಕ್ಕಾಗಿದೆ. ಇದರ ನಡುವೆ ಭಾವನೆಗಳು ಕೂಡಾ ಕೃತಕವಾದಂತಿದೆ. ಮನೆಯ ಹೊರಗೆ ನೂರಾರು ಸ್ಮೇಹಿತರನ್ನು ಸಂಪಾದಿಸಿ ಅವರೊಂದಿಗೆ ಆತ್ಮೀಯವಾಗಿ ಬೆರೆಯುತ್ತೇವೆ. ಆದರೆ, ಮನೆಗೆ ಬಂದರೆ ಸ್ವಭಾವವೇ ಬದಲು. ಮನುಷ್ಯನಿಗೇನೂ ಗೋಸುಂಬೆಯಂತೆ ಬಣ್ಣ ಬದಲಿಸುವ ಸಾಮರ್ಥ್ಯವಿದ್ದದರೆ ಅದು ಬೇರೆ ವಿಚಾರ. ಆದರೆ, ಚಿಗುರೋ ವಯಸ್ಸಲ್ಲೇ ಮನೆಯವರೇ ಪರಕೀಯರಂತಾದರೆ ನಮ್ಮವರು ಯಾರು ಎಂಬುವುದೇ ಮುಂದೆ ತಿಳಿಯದಾಗಬಹುದು.

ಹುಟ್ಟುತ್ತಲೇ ಜೊತೆಗಿರುವ ಅಪ್ಪ ಅಮ್ಮನೇ ಪ್ರತಿಯೊಬ್ಬರ ಮೊದಲ ಸ್ನೇಹಿತರು. ಒಡಹುಟ್ಟಿದವರೇ ಆತ್ಮೀಯರು. ಮನೆಯವರೇ ಎಲ್ಲದಕ್ಕೂ ಮೊದಲಿಗರು. ಮನೆಯ ಎಲ್ಲಾ ಸದಸ್ಯರೊಂದಿಗೆ ಮುಕ್ತವಾಗಿರುವುದು ಪ್ರಾಥಮಿಕ ಅಗತ್ಯ. ಮನೆಯ ಹೊರಗೆ ಎಷ್ಟೇ ಸ್ನೇಹಿತರಿದ್ದರೂ ಅವರು ಯಾರೂ ಮನೆ ಮಂದಿಗೆ ಸಮನಲ್ಲ. ಹೀಗಾಗಿ ಮನೆಯವರು ನಮ್ಮವರು, ಅವರೇ ನಮ್ಮ ಮೊದಲ ಸ್ನೇಹಿತರು. ಅಮ್ಮ ಊಟ ಬಡಿಸಿ ಕೋಣೆಗೆ ಬಂದು ಕರೆದರಷ್ಟೇ ಹೋಗಿ ಊಟ ಮಾಡುವುದು, ತಿಂದ ತಟ್ಟೆಯನ್ನು ಅಲ್ಲೇ ಬಿಟ್ಟು ಕೈ ತೊಳೆಯುವುದು, ಅಮ್ಮನಿಗೆ ಕೆಲಸಕ್ಕೆ ಆರ್ಡರ್ ಮಾಡುವುದು, ಅಕ್ಕ ತಂಗಿಯರ ನಡುವೆ ಅಂತರ ಕಾಪಾಡಿಕೊಂಡು ಲೆಕ್ಕದ ಮಾತುಗಳನ್ನಾಡುವುದು, ಗಡಸು ಧ್ವನಿಯಲ್ಲಿ ಒಂದೆರಡು ಪದಗಳಲ್ಲಿ ಉತ್ತರಿಸುವುದು... ಇಂತಹ ನಡವಳಿಕೆ ಆತ್ಮೀಯ ವಾತಾವರಣಕ್ಕೆ ತದ್ವಿರುದ್ಧ. ಇದನ್ನು ಹದಿಹರೆಯದಲ್ಲೇ ತಿದ್ದಿಕೊಳ್ಳಿ.

ಮೊಬೈಲ್ ಸೇರಿದಂತೆ ಸ್ಕ್ರೀನಿಂಗ್‌ನಲ್ಲಿ ಮೈಮರೆಯುವುದು, ಸ್ನೇಹಿತರೊಂದಿಗೆ ಹೆಚ್ಚು ಬೆರೆಯುವುದು, ಡಿಜಿಟಲ್ ಸ್ನೇಹಿತರಿಗೆ ಮನೆಯವರಿಗಿಂತ ಹೆಚ್ಚು ಪ್ರಾಧಾನ್ಯತೆ ನೀಡುವುದನ್ನು ಕಡಿಮೆ ಮಾಡುವುದು ಅವಶ್ಯ. ಪ್ರತಿಯೊಬ್ಬ ವ್ಯಕ್ತಿಯನ್ನು ಅವರ ಹೆತ್ತವರು ತಿಳಿದಿರುವಷ್ಟು, ಅರ್ಥ ಮಾಡಿಕೊಂಡಿರುವಷ್ಟು ಬೇರೆಯವರು ಅಧ್ಯಯನ ಮಾಡುವುದು ಅಸಂಭವ. ಅವರೊಂದಿಗೆ ಮುಕ್ತವಾಗಿದ್ದಷ್ಟು ಅವರ ನೆಮ್ಮದಿಯೊಂದಿಗೆ ನಿಮ್ಮ ಖುಷಿಯೂ ಹೆಚ್ಚುತ್ತದೆ. ಸ್ನೇಹಿತರೊಂದಿಗೆ ಹರಟೆ ಹೊಡೆದಂತೆಯೇ ಮನೆಯವರ ಜೊತೆಯೂ ಹರಟೆ ಹೊಡೆಯಬೇಕು, ಖುಷಿಯ ಕ್ಷಣಗಳನ್ನು ಹಂಚಿಕೊಳ್ಳಬೇಕು. ಜೊತೆಗೆ ಕುಳಿತು ಮಾತನಾಡುವುದು, ಸಿನಿಮಾ ಹೋಗುವುದು, ಪ್ರವಾಸ ಮಾಡುವುದು ಇವೆಲ್ಲಾ ಮನೆಯವರೊಂದಿಗೂ ಆಗಬೇಕು.

ಮಕ್ಕಳು ಎಷ್ಟೇ ದೊಡ್ಡವರಾದರೂ ಅಪ್ಪ ಅಮ್ಮನ ಪಾಲಿಗೆ, ಸಹೋದರರ ಪಾಲಿಗೆ ಪುಟ್ಟ ಮಕ್ಕಳೇ. ಮಕ್ಕಳೊಂದಿಗೆ ವಾತ್ಸಲ್ಯದಿಂದ ಮಾತನಾಡಬೇಕು, ಬೆರೆಯಬೇಕು, ಅವರೊಂದಿಗೆ ಸಮಯ ಕಳೆಯಬೇಕೆಂಬುದು ಪ್ರತಿಯೊಂದು ಮನೆಯವರ ಆಸೆ. ಅದಕ್ಕೆ ಮಕ್ಕಳು ಅವಕಾಶ ಕೊಡಬೇಕು. ಹೊರಗೆ ಸಾವಿರ ಸ್ನೇಹಿತರು ಸಿಗಬಹುದು. ಆದರೆ, ಮನೆಯವರಿಗೆ ಸಮನಾಗಲು ಯಾರಿಂದಲೂ ಸಾಧ್ಯವಿಲ್ಲ. ಮನೆಯವರೊಂದಿಗೆ ಅಂತರ ಕಾಯ್ದುಕೊಂಡು ಸಾಧಿಸಬೇಕಾಗಿದ್ದೇನು? ಇಂತಹ ನಡವಳಿಕೆಯನ್ನು ಈಗಿನಿಂದಲೇ ತಿದ್ದಿಕೊಳ್ಳಿ. ಹೀಗಾಗಿ ಮನೆಯವರೇ ಮೊದಲ ಸ್ನೇಹಿತರು ಎಂಬುದು ಮನದಲ್ಲಿರಲಿ. ಮತ್ತೊಂದು ಹೊಸ ವಿಷಯದೊಂದಿಗೆ ಮುಂದಿನ ವಾರ ಮತ್ತೆ ಬರುತ್ತೇನೆ.

ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ jayaraj@htdigital.in ಅಥವಾ ht.kannada@htdigital.in ಗೆ ಈಮೇಲ್​ ಮಾಡಿ. ಹದಿಹರೆಯರ ಸಮಸ್ಯೆಗಳ ಕುರಿತು ಈ ಅಂಕಣಕ್ಕೆ ಸೂಕ್ತ ವಿಷಯಗಳನ್ನು ಸಲಹೆ ನೀಡಿ.

ಇಂತಹ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ