logo
ಕನ್ನಡ ಸುದ್ದಿ  /  ಜೀವನಶೈಲಿ  /  Adolescence: ಹುಡುಗಾಟಿಕೆ; ಈ ವಯಸ್ಸಿನ ಆಸೆ ಹೀಗಿದ್ದರೆ, ವರ್ತನೆ ಹಾಗಿದ್ದರೆ ಚೆನ್ನ; ದೊಡ್ಡವರೇ ಇವಿಷ್ಟೂ ನಿಮಗೂ ಅರ್ಥವಾಗಬೇಕು

Adolescence: ಹುಡುಗಾಟಿಕೆ; ಈ ವಯಸ್ಸಿನ ಆಸೆ ಹೀಗಿದ್ದರೆ, ವರ್ತನೆ ಹಾಗಿದ್ದರೆ ಚೆನ್ನ; ದೊಡ್ಡವರೇ ಇವಿಷ್ಟೂ ನಿಮಗೂ ಅರ್ಥವಾಗಬೇಕು

Jayaraj HT Kannada

Jun 11, 2023 10:42 AM IST

google News

ಹುಡುಗಾಟಿಕೆ ಅಂಕಣ

    • Young Mind: ಎಚ್‌ಟಿ ಕನ್ನಡ (Hindustan Times Kannada) ವೆಬ್‌ಸೈಟ್‌ನಲ್ಲಿ ಇಂದಿನಿಂದ 'ಹುಡುಗಾಟಿಕೆ' ಎಂಬ ಹೊಸ ಅಂಕಣ ಆರಂಭವಾಗುತ್ತಿದೆ. ಒಳಗಿನ ಸೂಕ್ಷ್ಮ ಮನಸು ಜಾಗೃತವಾಗುವ, ಒಂದಷ್ಟು ಗೊಂದಲಗಳ ನಡುವೆ ಚಂಚಲ ಮನಸಿಗೆ ಬೇಲಿ ಹಾಕುವ, ಹೊಸಹೊಸ ಖುಷಿ ಹುಡುಕು ಪ್ರಯತ್ನದಲ್ಲಿರುವರನ್ನೇ ಗಮನದಲ್ಲಿರಿಸಿಕೊಂಡು ರೂಪಿಸಿದ ಅಂಕಣ ಇದು.
ಹುಡುಗಾಟಿಕೆ ಅಂಕಣ
ಹುಡುಗಾಟಿಕೆ ಅಂಕಣ

ಐದಾರು ತಿಂಗಳುಗಳ ಹಿಂದೆ, ನನಗೊಬ್ಬ ಹೊಸ ವ್ಯಕ್ತಿಯ ಪರಿಚಯ ಆಯ್ತು. ಆತನಿಗೆ ವಯಸ್ಸು ಇನ್ನೂ 20 ವರ್ಷ ಕೂಡಾ ಆಗಿಲ್ಲ. ಆದರೆ, ಆತನ ಪ್ರಬುದ್ಧತೆ ಕಂಡು ನನಗೆ ಅಚ್ಚರಿಯಾಯ್ತು. ಇದುವರೆಗೂ ನಾನು ಅಷ್ಟು ಸಣ್ಣ ವಯಸ್ಸಿನಲ್ಲಿ ಅಷ್ಟೊಂದು ಪ್ರಬುದ್ಧನಾಗಿ ಮಾತನಾಡುವ, ಸಮಾಜದೊಂದಿಗೆ ಬೆರೆಯುವ, ಪ್ರತಿಯೊಂದು ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸುವ ಬೇರೆ ವ್ಯಕ್ತಿಯನ್ನು ಕಂಡಿಲ್ಲ. ಆತನ ನಡೆ-ನುಡಿಯ ಬಗ್ಗೆ ಕುತೂಹಲ ಹೆಚ್ಚಾಗಿ, ಪ್ರತಿಯೊಂದು ನಡವಳಿಕೆಯನ್ನು ಗಮನಿಸುತ್ತಾ ಬಂದೆ. ಅವನಲ್ಲಿ ನಾನು ಕಂಡುಕೊಂಡ ಪ್ರಮುಖ ಅಂಶವೇ, ಪ್ರಬುದ್ಧತೆ ವಯಸ್ಸನ್ನು ಮೀರಿರಬಾರದು ಅನ್ನೋದು.

ಪ್ರಬುದ್ಧತೆ ಎನ್ನುವುದು ಸನ್ನಡವಳಿಕೆ ಮತ್ತು ಭಾವನೆಯನ್ನೊಳಗೊಂಡ ಮಾನಸಿಕ ಜಾಗೃತ ಸ್ಥಿತಿ. ಇಷ್ಟು ಮಾತ್ರವಲ್ಲ ಅದನ್ನೂ ಮೀರಿ, ವೈಯಕ್ತಿಕ ಮತ್ತು ಸಾಮಾಜಿಕ ಬದುಕಿನಲ್ಲಿ ನಾವು ತೋರುವ ವಾಸ್ತವಿಕ ಪ್ರಜ್ಞೆ. ಪ್ರಬುದ್ಧತೆಯನ್ನು ಒಂದೇ ವಾಕ್ಯದಲ್ಲಿ ವ್ಯಾಖ್ಯಾನಿಸುವುದು ನನಗೆ ಕಷ್ಟವಾದೀತು. ಹೀಗಾಗಿ ಇದನ್ನು ಎಲ್ಲವನ್ನೂ ಒಳಗೊಂಡ ಉನ್ನತ ಪ್ರಜ್ಞೆ ಎಂದು ಹೇಳಬಲ್ಲೆ.

ಜೀವನದಲ್ಲಿ ಸಮಯ ಹಾಗೂ ಸಂದರ್ಭಗಳು ಬದಲಾಗುತ್ತಿರುತ್ತವೆ. ಪ್ರತಿಯೊಂದು ಸನ್ನಿವೇಶವನ್ನು ಗ್ರಹಿಸಿ ಅದಕ್ಕೆ ತಕ್ಕನಾಗಿ ಪ್ರತಿಕ್ರಿಯೆ ನೀಡುವುದು ಮುಖ್ಯ. ಸೂಕ್ಷ್ಮ ಸಂದರ್ಭವನ್ನು ನಾಜೂಕಾಗಿ ನಿಭಾಯಿಸುವುದೇ ಪ್ರಬುದ್ಧನ ಲಕ್ಷಣ. ನಾಲ್ಕು ಜನರ ಮುಂದೆ ಸಜ್ಜನರಂತೆ ಮಾತನಾಡಿ ಬೀಗುವುದನ್ನು ಪ್ರಬುದ್ಧತೆ ಎನ್ನಲಾಗದು. ಪ್ರತಿಯೊಂದು ಸೂಕ್ಷ್ಮಗಳನ್ನು, ಸಣ್ಣಸಣ್ಣ ನಡೆ-ನುಡಿಗಳನ್ನು ಬೇಗನೆ ಅರ್ಥ ಮಾಡಿಕೊಳ್ಳುವ, ಸಮಯ-ಸಂದರ್ಭಕ್ಕೆ ತಕ್ಕನಾಗಿ ಪರಿಸ್ಥಿತಿಯನ್ನು ಸರಳವಾಗಿ ನಿಭಾಯಿಸುವವ ಪ್ರಬುದ್ಧ.

ಮನುಷ್ಯ ಜೀವನದಲ್ಲಿ ಹದಿಹರೆಯದ ಹಂತ ಬದುಕಿನ ಅತಿ ಸೂಕ್ಷ್ಮ ಭಾಗ. ಒಂದಷ್ಟು ಕುತೂಹಲ ಹಾಗೂ ಗೊಂದಲಗಳ ನಡುವೆ ಮನಸು ಚಂಚಲವಾಗಿ ಯೋಚಿಸುತ್ತದೆ. ದೇಹವು ದೈಹಿಕ ಬದಲಾವಣಿಯತ್ತ ಒಗ್ಗಿಕೊಳ್ಳಲು ಕಷ್ಟಪಟ್ಟರೆ, ಭಾವನೆಗಳನ್ನು ಹತೋಟಿಗೆ ತರಲು ಮನಸು ಒದ್ದಾಡುತ್ತದೆ. ಮನಸಿನಂಗಳದಲ್ಲಿ ಮೂಡುವ ನೂರಾರು ಗೊಂದಲ ಹಾಗೂ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಪ್ರಬುದ್ಧ ಮನಸು ಜಾಗೃತವಾಗುತ್ತದೆ.

ಪ್ರತಿಯೊಬ್ಬ ವ್ಯಕ್ತಿಯ ಮನಸ್ಥಿತಿ ಮತ್ತು ಆತನೊಳಗಿನ ಜಾಗೃತ ಮನಸ್ಸು; ಆ ವ್ಯಕ್ತಿಯ ಜೀವನಶೈಲಿ, ಓಡಾಡುವ ಸ್ಥಳ, ಒಡನಾಟ ಹೊಂದಿರುವ ಬಳಗ ಇವೆಲ್ಲದರೊಂದಿಗೆ ನೇರ ಹಾಗೂ ಪರೋಕ್ಷ ನಂಟು ಹೊಂದಿರುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಮನೋಧರ್ಮದಲ್ಲೂ ಸಣ್ಣ ವ್ಯತ್ಯಾಸವಾದರೂ ಇದ್ದೇ ಇರುತ್ತದೆ. ಅದೇ ರೀತಿ ವ್ಯಕ್ತಿಯ ಪ್ರಬುದ್ಧ ಮನಸು ಜಾಗೃತವಾಗುವಲ್ಲೂ ಈ ಎಲ್ಲಾ ಅಂಶಗಳು ಪ್ರಭಾವ ಬೀರುತ್ತದೆ.

ಈಗ ನಾನು ಆರಂಭದಲ್ಲಿ ಹೇಳಿದ್ದ ವಿಷಯಕ್ಕೆ ಬರುತ್ತೇನೆ. ಪ್ರಬುದ್ಧತೆ ಎನ್ನುವುದು ಮನುಷ್ಯನಿಗೆ ಒಂದು ಭೂಷಣ. ಹಾಗಂತ ಇದು ತೋರ್ಪಡಿಕೆಯ ವಸ್ತುವಲ್ಲ. ಪ್ರಬುದ್ಧನಾದವನು ತನ್ನತನವನ್ನು ಬಾಹ್ಯ ಪ್ರಪಂಚಕ್ಕೆ ತೋರಿಸಲಾರ. ಅದು ಆತನೊಳಗಿನ ಜಾಗೃತ ಮನಸ್ಸು.

ಹದಿಹರೆಯದ ಹಂತ, ಪ್ರತಿ ವ್ಯಕ್ತಿಯ ಜೀವನದ ಅತ್ಯಮೂಲ್ಯ ಭಾಗ. 13ರಿಂದ 19ರ ನಡುವಿನ ವಯಸ್ಕರನ್ನು ಹದಿಹರೆಯರು ಅಥವಾ Adolescents ಎಂದು ಕರೆಯುತ್ತೇವೆ. ಈ ವಯಸ್ಸು ಮಾತ್ರವಲ್ಲದೆ 20, 21ರ ವಯಸ್ಸು ಕೂಡಾ ಬಹುತೇಕ ಹದಿರಹರೆಯವೇ. ಇದಕ್ಕೆ ಕಾರಣ 21ರವರೆಗೂ ಸಾಧ್ಯವಿರುವ ದೈಹಿಕ ಬೆಳವಣಿಗೆ. ಬಹುತೇಕ ಎಲ್ಲರ ಹದಿಹರೆಯವೂ ವಿದ್ಯಾರ್ಥಿ ರೂಪದಲ್ಲಿಯೇ ಪೂರ್ಣಗೊಳ್ಳುತ್ತದೆ.

ಪ್ರತಿಯೊಂದು ಕ್ಷಣವನ್ನೂ ಸಂಭ್ರಮಿಸಿ

ಈ ಹಂತದಲ್ಲಿ ಪ್ರತಿಯೊಂದು ದಿನವನ್ನೂ ಸಂಭ್ರಮಿಸಬೇಕು. ಪ್ರತಿಕ್ಷಣವೂ ಖುಷಿಯಿಂದ ಸವಿಯಬೇಕು. ಅದು ಬಿಟ್ಟು ದಿನವನ್ನು ಕಷ್ಟಪಟ್ಟು ಕಳೆಯುವ, ಪ್ರತಿಕ್ಷಣವನ್ನೂ ಸವೆಸುವಷ್ಟು ಕೃತಕ ಹೊರೆ ಈ ಹಂತದಲ್ಲೇ ಬರಬಾರದು, ಅರ್ಥಾತ್‌‌ ಮೈಮೇಲೆ ಎಳೆದುಕೊಳ್ಳಬಾರದು. ಅದಕ್ಕೆ ಹೇಳಿದ ವಯಸ್ಸು ಇದಲ್ಲ. ಈ ವಯಸ್ಸು ಏನೇ ಇದ್ದರೂ ಚೆನ್ನಾಗಿ ಓದುವ, ಉತ್ತಮ ಗೆಳೆಯ ಅಥವಾ ಗೆಳತಿಯರನ್ನು ಹುಡುಕುವ, ಉತ್ತಮ ಸಾಂಗತ್ಯ ಬಯಸುವ, ಎಲ್ಲರೊಂದಿಗೆ ಖುಷಿಯಿಂದ ಹರಟೆ ಹೊಡೆಯುವ, ಮನೆಯವರೊಂದಿಗೆ ಸಂತೋಷದಿಂದ ಬೆರೆಯುವ ವಯಸ್ಸಿದು. ಸರಳವಾಗಿ ಹೇಳುವುದಾದರೆ ಹುಡುಗಾಟಿಕೆಯ ವಯಸ್ಸು. ಈ ವಯಸ್ಸಲ್ಲಿ ಹುಡಗಾಟಿಕೆಯ ಮನಸ್ಸೇ ನಿಮ್ಮಲ್ಲಿರಬೇಕು. ಹಾಗಂತ, ಹುಡುಗಾಟಿಕೆ ಮೀರಿದ ದೊಡ್ಡವರಂತೆ ವರ್ತಿಸಬಾರದು. ಇದು ದೊಡ್ಡವರಿಗೂ ಅರ್ಥವಾಗಬೇಕು.

ಸಹಜ ಹುಡುಗಾಟಿಕೆಯ ಎಲ್ಲಾ ಮನಸುಗಳು ಕೂಡಾ ತಮ್ಮದೇ ಮಿತಿಯಲ್ಲಿದ್ದು ಸದಾ ಹುಡುಗಾಟದ ಮತುಗಳನ್ನೇ ಆಡುತ್ತವೆ. ಅದು ಖಂಡಿತಾ ತಪ್ಪಲ್ಲ. ಈ ವಯಸ್ಸೇ ಹಾಗೆ. ಈ ಹಂತದಲ್ಲಿ ಬದುಕಬೇಕಿರುವುದೇ ಹಾಗೇ. ಅದು ಬಿಟ್ಟು‌ ಹುಡುಗಾಟಿಕೆಯ ಮನಸ್ಸಿನ ವಯಸ್ಸಿಗೆ ಪ್ರಬುದ್ಧತೆಯ ಬಣ್ಣ ಮೆತ್ತಿದರೆ, ಅತ್ಯಮೂಲ್ಯ ಬದುಕಿನ ಖುಷಿಯ ದಿನಗಳನ್ನು ನೀವು ಕಳೆದುಕೊಂಡಂತೆ. ಅದಕ್ಕೆ ಅವಕಾಶ ಕೊಡದಿರಿ. ಹದಿಹರೆಯದ ಹಂತ ಕಳೆದ ಬಳಿಕ, ಜವಾಬ್ದಾರಿಗಳು ಬೇಡವೆಂದರೂ ಬರುತ್ತವೆ. ಆ ಬಳಿಕ ಪ್ರಬುದ್ಧನಾಗಿ ಯೋಚಿಸಬೇಕಿರುವುದು ಇದ್ದೇ ಇದೆ. ಆ ಪ್ರಬುದ್ಧತೆಯನ್ನು ಒಲ್ಲದ ಮನಸ್ಸಿಗೆ ಬೇಗನೆ ಅಂಟಿಸದಿರಿ. ಹರೆಯದ ವಯಸ್ಸಿನ ಸವಿಜೀವನವನ್ನು ಕಳೆದುಕೊಳ್ಳದಿರಿ.

ನಾನು ಆರಂಭದಲ್ಲಿ ನಾನು ಭೇಟಿಯಾದ ಒಬ್ಬ ವ್ಯಕ್ತಿ ಬಗ್ಗೆ ಹೇಳಿದ್ದೆ. ಆ ಉದಾಹರಣೆಯನ್ನು ವಿವರಿಸಿ ಈ ಅಂಕಣ ಮುಗಿಸುತ್ತೇನೆ. ಆತ ತನ್ನ ಹದಿಹರೆಯವನ್ನು ಅನುಭವಿಸುವ, ಅರ್ಥಾತ್‌ ಸಂಭ್ರಮಿಸುವ ಅವಕಾಶವನ್ನು ತಾನಾಗಿಯೇ ಕೈಚೆಲ್ಲಿದ್ದಾನೆ. ನಾನು ಕಂಡಂತೆ, ಅದಕ್ಕೆ ಆ ವ್ಯಕ್ತಿಯ ವಯಸ್ಸಿಗೂ ಮೀರಿದ ಪ್ರಬುದ್ಧತೆಯೇ ಕಾರಣ ಎಂದು ಹೇಳಬಲ್ಲೆ.

ಒಂದು ವೇಳೆ ಆತ ಒಬ್ಬ ಪ್ರಬುದ್ಧ ವಯಸ್ಕನಂತೆ ಯೋಚಿಸದೆ, ತನ್ನ ಸಹಜ ವಯಸ್ಸಿನ ಮನಸಿನ ಮಾತು ಕೇಳಿದ್ರೆ ಈಗ ಹೈಸ್ಕೂಲ್ ಅಥವಾ ಕಾಲೇಜು ವ್ಯಾಸಂಗ ಮಾಡ್ಬೇಕಿತ್ತು. ಒಂದಷ್ಟು ಸುತ್ತಾಟ, ಗೆಳೆಯ ಗೆಳತಿಯರೊಂದಿಗೆ ಹರಟೆ, ಮನೆಯವರೊಂದಿಗೆ ಬೆರೆತು ಪ್ರತಿ ದಿನವನ್ನೂ ಖುಷಿಯಿಂದ ಕಳೆಯಬೇಕಿತ್ತು. ಆಧುನಿಕ ಟೀನೇಜರ್ಸ್ ಮಾಡುವಂತೆ ಒಂದಷ್ಟು ಎಕ್ಸ್‌ಪ್ಲೋರ್‌, ಮೊಬೈಲ್‌ ಹಿಡಿದು ರೀಲ್ಸ್‌ ಇವೆಲ್ಲವೂ ಹದಿಹರೆಯದ ವಯಸ್ಸಿನ ಭಾಗವಾಗಬೇಕಿತ್ತು. ಉನ್ನತ ಶಿಕ್ಷಣ ಪಡೆಯುವ ಕನಸು ಕಂಡು, ಭವಿಷ್ಯದ ಬಗ್ಗೆಯೂ ಆಸೆ ಕನಸುಗಳನ್ನು ಇಟ್ಟುಕೊಳ್ಳಬೇಕಿತ್ತು. ಆದರೆ ತನ್ನ ಸ್ವಂತ ನಿರ್ಧಾರ ತೆಗೆದುಕೊಳ್ಳುವಷ್ಟು ಪ್ರಬುದ್ಧ ಮನಸ್ಸು ಆತನಲ್ಲಿ ಜಾಗೃತವಾಗಿ, ಅದು ವಯಸ್ಸಿಗೂ ಮೀರಿದಷ್ಟು ಬದುಕಲ್ಲಿ ಬದಲಾವಣೆ ತಂದಿತು.

ಯಾವುದೋ ಒಂದು ಅನಿರೀಕ್ಷಿತ ಅವಘಡದಿಂದ ಹೈಸ್ಕೂಲ್‌ ಹಂತದಲ್ಲೇ ತಾತ್ಕಾಲಿಕವಾಗಿ ಶಿಕ್ಷಣ ಮೊಟಕುಗೊಳಿಸಬೇಕಾಯ್ತು. ಅದಾದ ಕೆಲ ತಿಂಗಳುಗಳಲ್ಲೇ ಮತ್ತೆ ಕಾಲೇಜು ಮೆಟ್ಟಿಲು ಹತ್ತುವ ಅವಕಾಶವಿದ್ದರೂ, ಅದಕ್ಕೆ ಆತ ಸಿದ್ಧನಿಲ್ಲ. ಈ ಅವಧಿಯಲ್ಲಿ, ಸಂಪಾದನೆಯತ್ತ ಆಕರ್ಷಿತನಾಗಿ ಹಣಗಳಿಕೆಯ ರುಚಿ ಸಿಕ್ಕಿತು. ಈಗ ಶಿಕ್ಷಣ ಮುಂದುವರೆಸುವ ಯೋಚನೆ, ಯೋಜನೆ ಯಾವುದೂ ಆತನಲ್ಲಿಲ್ಲ. ಅದರ ಅಗತ್ಯವೇ ಇಲ್ಲ ಎಂಬ ಹಂತಕ್ಕೆ ಬಂದುಬಿಟ್ಟಿದ್ದಾನೆ. ಹಾಗಂತಾ ಭವಿಷ್ಯದ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದಲ್ಲ. ತಾನು ಹೇಗಾದರೂ ಬದುಕಬಲ್ಲೆ, ತನ್ನ ಕಾಲ ಮೇಲೆ ನಿಲ್ಲಬಲ್ಲೆ ಎಂಬ ಆತ್ಮವಿಶ್ವಾಸ ಅವನಲ್ಲಿದೆ. ಅದಕ್ಕೆ ಬೇಕಾದ ಸ್ಪಷ್ಟ ಯೋಜನೆಯನ್ನೂ ರೂಪಿಸಿಕೊಂಡಿದ್ದಾನೆ. ಸಣ್ಣ ವಯಸ್ಸಿನಲ್ಲೇ ದೀರ್ಘಕಾಲಿಕ ಯೋಚನೆ ಮಾಡುವಷ್ಟು ಪ್ರಬುದ್ಧತೆ ಅವನಲ್ಲಿ ಬೆಳೆದಿದೆ. ಅದನ್ನು ಮಾಡಿಯೇ ತೀರುವ ಆತ್ಮವಿಶ್ವಾಸವೂ ಅವನಲ್ಲಿದೆ. ಆ ಗಾಢವಿಶ್ವಾಸವನ್ನು ನಾನು ಮೆಚ್ಚಿ ಹೊಗಳಿದ್ದೂ ಇದೆ. ಯಾಕೆಂದರೆ, ಆತ ಭವಿಷ್ಯದಲ್ಲಿ ಅಂದುಕೊಂಡದ್ದನ್ನು ಮಾಡಿಯೇ ತೀರುತ್ತಾನೆ ಎಂಬ ನಂಬಿಕೆ ಆತನಿಗಿಂತ ಹೆಚ್ಚು ನನಗಿದೆ. ಆದರೆ, ನನ್ನ ಕಾಳಜಿ ಅದಲ್ಲ...

ಇಷ್ಟೆಲ್ಲಾ ಪ್ರಬುದ್ಧತೆ ಇದ್ದರೂ, ಆತ ತಾನು ಸಂಭ್ರಮಿಸಬೇಕಿದ್ದ ವಯಸ್ಸಿನ ಖುಷಿಯನ್ನು ಕಳೆದುಕೊಂಡಿದ್ದಾನೆ. ನಾನು ಈಗಾಗಲೇ ಹದಿಹರೆಯದ ವಯಸ್ಸಿನಲ್ಲಿ ಮಾತ್ರ ಸಂಭ್ರಮಿಸಲಾಗುವ ಒಂದಷ್ಟು ಅಂಶಗಳ ಬಗ್ಗೆ ಹೇಳಿದ್ದೇನೆ. ಅವೆಲ್ಲವನ್ನೂ ಅನುಭವಿಸುವ ಅವಕಾಶವನ್ನೇ ಕಳೆದುಕೊಂಡರೆ, ನಮ್ಮ ಅಮೂಲ್ಯ ಯವ್ವನವನ್ನು ವ್ಯರ್ಥ ಮಾಡಿದಂತಾಗುತ್ತದೆ. ವಯಸ್ಸಿಗೂ ಮೀರಿದ ಪ್ರಬುದ್ಧತೆಯನ್ನು ಮೈಗಂಟಿಸಿಕೊಂಡ ಕಾರಣದಿಂದ, ಭವಿಷ್ಯವೇನೋ ಬೆಳಗಬಹುದು. ಭಾರಿ ಖುಷಿಯನ್ನೂ ಅನುಭವಿಸಬಹುದು. ಆದರೆ ಹದಿಹರೆಯ ಕಳೆದ ಮೇಲೆ ಭವಿಷ್ಯದಲ್ಲಿ ಯವ್ವನ ಮತ್ತೆ ಬರಲು ಸಾಧ್ಯವೇ? ಹುಡುಗಾಟಿಕೆಯ ವಯಸ್ಸು ಮತ್ತೆ ಸಿಗುತ್ತದೆಯೇ? ಇಲ್ಲ. ಅದನ್ನು ಈಗಲೇ ಅನುಭವಿಸಬೇಕು. ಅನಗತ್ಯ ಜವಾಬ್ದಾರಿ ಹೊತ್ತು ಕೆಲಸ, ಸಂಪಾದನೆಗೆಂದು ಮನೆಯಿಂದ ಹೊರಹೋದರೆ ಹುಡುಗಾಟಿಕೆಗೆ ಸಮಯವೇ ಸಿಗಲಾರದು. ಮನೆಯವರೊಂದಿಗೆ ಮಾತು, ಸ್ನೇಹಿತರೊಂದಿಗೆ ಹರಟೆ, ತಿರುಗಾಟ, ಉತ್ತಮರ ಸಾಂಗತ್ಯದ ತುಡಿತ ಇವೆಲ್ಲದಕ್ಕೂ ಸಮಯವಿಲ್ಲದ ಹದಿಹರೆಯಕ್ಕೇ ಅರ್ಥವೇ ಇಲ್ಲ. ಕೆಲಸ ಮತ್ತು ಸಂಪಾದನೆಯ ನಡುವೆ ದೇಹದೊಂದಿಗೆ ಮನಸಿಗೆ ಅಗತ್ಯವಾಗಿ ಬೇಕಾದ ವಿಶ್ರಾಂತಿ, ಅದು ಕೇಳುವ ನೂರಾರು ಪ್ರಶ್ನೆಗಳಲ್ಲಿ ಕನಿಷ್ಠ ಕೆಲವೊಂದಕ್ಕಾದರೂ ಉತ್ತರ ಕೊಡಲಾಗದ ಪ್ರಬುದ್ಧತೆ ಇದ್ದೇನು ಪ್ರಯೋಜನ.

ಬದುಕಿನ ಪ್ರತಿಯೊಂದಕ್ಕೂ ಒಂದು ಮಿತಿ ಮತ್ತು ಸ್ಥಿರತೆ ಇರಬೇಕು. ಅದು ಪ್ರಬುದ್ಧತೆಗೂ ಅನ್ವಯಿಸುತ್ತದೆ. ಯಾವ ವಯಸ್ಸಿನಲ್ಲಿ ಹೇಗಿರಬೇಕೋ ಹಾಗೆಯೇ ಇದ್ದರೆ ಚೆಂದ. ಅದು ಸಹಜವಾಗಿಯೇ ಇರಬೇಕು. ಪ್ರಕೃತಿಯ ಪಾಠವನ್ನು ಮೀರುವ ಮತ್ತು ಬದುಕಿನ ನೈಸರ್ಗಿಕ ಹಂತಕ್ಕೆ ವಿರುದ್ಧವಾಗಿ ಸಾಗುವುದೇ ತಪ್ಪು. ಇದು ಹದಿಹರೆಯರು ಸೇರಿ ಮನುಷ್ಯಜೀವಿ ಅರ್ಥೈಸಿಕೊಳ್ಳಬೇಕಾದ ಬದುಕಿನ ಆರಂಭಿಕ ಪಾಠ. ಹದಿಹರೆಯ ಕೆಲಸಕ್ಕಲ್ಲ, ಸವಿಯಲು ಎಂಬುದು ಮನದಲ್ಲಿರಲಿ. ಇದನ್ನು ಅರ್ಥಮಾಡಿಕೊಳ್ಳದಷ್ಟು ಪ್ರಬುದ್ಧತೆ ಬೆಳೆದರೆ ಕಷ್ಟ. ವಯಸ್ಸಿಗೆ ತಕ್ಕನಾಗಿ ನಡೆಯುವವರಿಗೆ ಈ ಸರಳ ಮಾತು ಅರ್ಥವಾಗುತ್ತದೆ. ಆದರೆ, ತನ್ನ ನಿರ್ಧಾರಗಳು ತಾನೇ ತೆಗೆದುಕೊಳ್ಳುವವರಿಗೆ ಇದನ್ನು ಅರ್ಥಮಾಡಿಕೊಳ್ಳುವ ವ್ಯವಧಾನವೇ ಇರುವುದಿಲ್ಲ. ಇದಕ್ಕೆ ಮುಖ್ಯ ಕಾರಣ, ವಯಸ್ಸಿಗೆ ಮೀರಿದ ಪ್ರಬುದ್ಧತೆ. ಅದು ಬೇಡವೇ ಬೇಡ.

ಮತ್ತೆ ಹೇಳುತ್ತೇನೆ. ಹದಿಹರೆಯ ಗೊಂದಲದ ಗೂಡಾದರೂ, ಇದು ಸಂಭ್ರಮಿಸುವ ಹಂತ. ಜೀವನದ ಈ ಹಂತದಲ್ಲಿ ನೀವು ಸಂತಸದಿಂದ ಕಳೆಯುವ ಪ್ರತಿ ಕ್ಷಣವೂ, ಮುಂದೊಂದು ದಿನ ಮನೆ, ಮಕ್ಕಳು, ಕುಟುಂಬ ಎಂಬ ಜಾವಾಬ್ದಾರಿಯ ತಲೆ ಮೇಲೆ ಬಂದಾಗ ಆ ನೆನಪುಗಳನ್ನು ಕಣ್ಣ ಪರದೆ ಮುಂದೆ ತಂದು ಮತ್ತೆ ಸಂಭ್ರಮಿಸಬಹುದು. ನಿಮ್ಮ ಕೈ ಮತ್ತು ಮನಸ್ಸಿಗೆ ಸಿಗುವುದು ಆ ನೆನೆಪುಗಳು ಮಾತ್ರ. ಕಳೆದು ಹೋದ ನೆನೆಪುಗಳು ಕೈಗೆ ಸಿಗದಿದ್ದರೂ ಅದನ್ನು ಮೆಲುಕು ಹಾಕುವುದೇ ಸ್ವರ್ಗ. ಆ ನೆನೆಪಿನ ಬುತ್ತಿ ಖಾಲಿ ಇದ್ದರೆ, ನಿಮ್ಮಷ್ಟು ದುರಾದೃಷ್ಟವಂತರು ಯಾರೂ ಇರಲಾರರು. ಈ ಹಂತವನ್ನು ಸಂಭ್ರಮಿಸದಿದ್ದರೆ, ನಿಮ್ಮ ಬದುಕಿನ ಒಂದು ಹಂತವನ್ನು ವ್ಯರ್ಥ ಮಾಡಿದ್ದೀರಿ ಎಂದರ್ಥ. ಹೀಗಾಗಿ ಪ್ರತಿ ಕ್ಷಣವನ್ನು ಖುಷಿಯಿಂದ ಕಳೆಯುವುದು ಮಾತ್ರವಲ್ಲ, ಪ್ರತಿಕ್ಷಣವೂ ಸಂಭ್ರಮಿಸಿ. ನಿಮ್ಮ ಸಂಭ್ರಮದಲ್ಲಿ ಜೊತೆಗಾರನಾಗಲು, ನಿಮ್ಮ ಮನಸ್ಸಿನ ಪ್ರಶ್ನೆಗಳಿಗೆ ಉತ್ತರವಾಗಲು ಮುಂದಿನ ಭಾನುವಾರ ಮತ್ತೆ ಬರುತ್ತೇನೆ. ಕಾಯುತ್ತಿರಿ.

-ಜಯರಾಜ್‌ ಅಮಿನ್‌

ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ jayaraj@htdigital.in ಅಥವಾ ht.kannada@htdigital.in ಗೆ ಈಮೇಲ್​ ಮಾಡಿ.

ಇಂತಹ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ