logo
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಶಿಕ್ಷಕಿ ತಪ್ಪಾಗಿ ಪಾಠ ಹೇಳಿಕೊಟ್ರೂ ಅದೇ ಸರಿ ಎಂದು ವಾದಿಸೋ ಮಗನಿಗೆ ಸರಿ-ತಪ್ಪು ಅರ್ಥ ಮಾಡಿಸುವುದು ಹೇಗೆ? -ಇಲ್ಲಿದೆ ಉತ್ತರ

Parenting Tips: ಶಿಕ್ಷಕಿ ತಪ್ಪಾಗಿ ಪಾಠ ಹೇಳಿಕೊಟ್ರೂ ಅದೇ ಸರಿ ಎಂದು ವಾದಿಸೋ ಮಗನಿಗೆ ಸರಿ-ತಪ್ಪು ಅರ್ಥ ಮಾಡಿಸುವುದು ಹೇಗೆ? -ಇಲ್ಲಿದೆ ಉತ್ತರ

D M Ghanashyam HT Kannada

Feb 22, 2024 06:58 AM IST

google News

ಮಗನಿಗೆ ಸರಿ-ತಪ್ಪು ಅರ್ಥ ಮಾಡಿಸುವುದು ಹೇಗೆ? -ಭವ್ಯಾ ವಿಶ್ವನಾಥ್ ಕೊಟ್ಟ ಉತ್ತರ ಇಲ್ಲಿದೆ

    • ಮಕ್ಕಳ ಮನಸು: ಮಕ್ಕಳ ಪಾಲಿಗೆ ಟೀಚರ್ ಹೇಳಿದ್ದೇ ಫೈನಲ್. ಅವರು ಹೇಳಿದರೂ ಸರಿ ಎಂದೇ ವಾದಿಸುವುದು ಸಾಮಾನ್ಯ. ಒಮ್ಮೊಮ್ಮೆ ಇದು ಮನೆಗಳಲ್ಲಿ ಅಪ್ಪ-ಅಮ್ಮನಿಗೆ ಇರಿಸುಮುರಿಸು ಉಂಟು ಮಾಡುತ್ತದೆ. ಇಂಥ ಸಂದರ್ಭಗಳನ್ನು ಹೇಗೆ ನಿಭಾಯಿಸುವುದು? ಈ ವಾರದ ಅಂಕಣದಲ್ಲಿ ಉತ್ತರಿಸಿದ್ದಾರೆ ಬೆಂಗಳೂರಿನ ಆಪ್ತಸಮಾಲೋಚಕಿ ಮತ್ತು ಮನಃಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್. 
ಮಗನಿಗೆ ಸರಿ-ತಪ್ಪು ಅರ್ಥ ಮಾಡಿಸುವುದು ಹೇಗೆ? -ಭವ್ಯಾ ವಿಶ್ವನಾಥ್ ಕೊಟ್ಟ ಉತ್ತರ ಇಲ್ಲಿದೆ
ಮಗನಿಗೆ ಸರಿ-ತಪ್ಪು ಅರ್ಥ ಮಾಡಿಸುವುದು ಹೇಗೆ? -ಭವ್ಯಾ ವಿಶ್ವನಾಥ್ ಕೊಟ್ಟ ಉತ್ತರ ಇಲ್ಲಿದೆ

ಪ್ರಶ್ನೆ: ನನ್ನ ಮಗ ಈಗ 3ನೇ ತರಗತಿ. ಅವನು ತನ್ನ ಶಿಕ್ಷಕಿಯನ್ನು ತುಂಬಾ ನಂಬ್ತಾನೆ. ಕೆಲವೊಮ್ಮೆ ಅವರು ತಪ್ಪಾಗಿ ಪಾಠದ ಅರ್ಥ ಹೇಳಿದ್ದರೂ ಅವರು ಹೇಳಿದ್ದೆ ಸರಿ ಎಂದು ವಾದಿಸ್ತಾನೆ. ಅವರು ತಪ್ಪು ಸ್ಪೆಲಿಂಗ್ ಬರೆದಿದ್ದಾಗ, ನಾವು ಅದನ್ನು ತಿದ್ದಿ ಇದು ಸರಿಯಾದ ಸ್ಪೆಲಿಂಗ್ ತಿಳಿಹೇಳಿದರೂ ಕೇಳುವುದಿಲ್ಲ. ಇವನಿಗೆ ಅಪ್ಪ-ಅಮ್ಮನಿಗಿಂತ ಶಿಕ್ಷಕಿಯೇ ಹೆಚ್ಚು ಮುಖ್ಯ ಆಗಿಬಿಟ್ಟಿದ್ದಾರೆ. ಎಲ್ಲ ಮಕ್ಕಳು ಹೀಗೆಯೇ ಇರ್ತಾರಾ? ಇವನು ಮಾತ್ರ ಹೀಗಾ? - ರಜನಿ, ದೊಮ್ಮಲೂರು, ಬೆಂಗಳೂರು

ಉತ್ತರ: ನಿಮ್ಮ ಮಗನ ನಡವಳಿಕೆಯಿಂದ ನಿಮಗೆ ಆಗಿರುವ ಬೇಸರ ಮತ್ತು ನಿರಾಸೆ ಸಹಜ. ಹುಟ್ಚಿನಿಂದ ಎತ್ತಿ ಆಡಿಸಿ ಜೋಪಾನ ಮಾಡಿದ ಮಗ, ವಿದ್ಯಾರ್ಥಿಯಾಗಿ ಶಿಕ್ಷಕರಿಗೆ ಹೆಚ್ಚಿನ ಆದ್ಯತೆ ಮತ್ತು ವಿಶ್ವಾಸ ತೋರಿಸುವಾಗ ಹೆತ್ತವರಿಗೆ ಸಂಕಟವಾಗುತ್ತದೆ. ಅದರಲ್ಲೂ ಶಿಕ್ಷಕರು ತಪ್ಪು ಮಾಡಿದ್ದನ್ನು ನೀವು ತಿದ್ದಿದರೆ, ಅದನ್ನು ಒಪ್ಪಿಕೊಳ್ಳದೆ ವಾದಿಸಿದಾಗ, ನೀವು ನೊಂದು ಬಹುಶಃ ಬಹಳ ಕೋಪಗೊಂಡಿರಲೂ ಬಹುದು. ಆದರೆ ನಿಮ್ಮ ಮಗ ಯಾವ ಕಾರಣಕ್ಕೆ ಹೀಗೆ ನಡೆದುಕೊಳ್ಳುತ್ತಿರಬಹುದು? ಒಮ್ಮೆ ಸಮಾಧಾನದಿಂದ ನಿಧಾನವಾಗಿ ಯೋಚಿಸಿ ನೋಡಿ.

ಒಂದು ಮಗು, ಮೊದಲು ಮನೆಯಲ್ಲಿ ಪೋಷಕರ ಪ್ರೀತಿ, ಪೋಷಣೆ ಗಳಿಸಿದ ನಂತರ ಸಾಮಾಜಿಕವಾಗಿ ಶಾಲೆಯಲ್ಲಿ ಶಿಕ್ಷಕರ ಪೋಷಣೆ ಆರೈಕೆ ಪ್ರೀತಿಗೆ ಪಾತ್ರವಾಗುತ್ತದೆ. ಕ್ರಮಬದ್ಧ ಪದ್ದತಿ, ಶಿಸ್ತು, ಕಲಿಕೆ ಎಲ್ಲವನ್ನು ತನ್ನ ವಯಸ್ಸಿನ ಅನೇಕ ಮಕ್ಕಳೊಂದಿಗೆ ಶಿಕ್ಷಕರಿಂದ ಒಟ್ಟಿಗೆ ಕಲಿತಾಗ, ಮಗು ಶಿಕ್ಷಕರ ಪ್ರಭಾವಕ್ಕೆ ಒಳಗಾಗುತ್ತದೆ. ಕ್ರಮೇಣ ಮಕ್ಕಳು ಮತ್ತು ಶಿಕ್ಷಕರ ನಡುವೆ ವಿಶೇಷವಾದ ಮಾನಸಿಕ ಬಾಂಧವ್ಯ ಬೆಳೆಯುತ್ತದೆ. ಇದರ ಫಲಿತಾಂಶವಾಗಿಯೇ ಮಕ್ಕಳು ಶಿಕ್ಷಕರ ಮೇಲೆ ಪ್ರೀತಿ, ವಿಶ್ವಾಸ, ಭಯ ಮತ್ತು ಗೌರವ ಎಲ್ಲವನ್ನೂ ತಮಗೆ ಗೊತ್ತಿಲ್ಲದ ಹಾಗೆ ಬೆಳೆಸಿಕೊಂಡು ಬಿಡುತ್ತಾರೆ. ಅನುಕರಣೆ ಮತ್ತು ಅನುಸರಿಸುವುದು ಇಲ್ಲಿಂದಲೇ ಆರಂಭವಾಗುತ್ತದೆ.

ಶಿಕ್ಷಕರ ಪ್ರಶಂಸೆ, ಪ್ರೋತ್ಸಾಹ, ಬೆಂಬಲಗಳೆಲ್ಲವೂ ಮಕ್ಕಳ ಕಲಿಕೆ, ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಆಧಾರ ಸ್ತಂಭವಾಗುತ್ತವೆ. ಶಾಲೆಗೂ ಸಹ ಇಂಥ ಮಕ್ಕಳು ಆಸಕ್ತಿಯಿಂದ ಸಂತೋಷದಿಂದ ಹೋಗುತ್ತಾರೆ. ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಕರ ಸರಿಯಾದ ಬೆಂಬಲ ಪ್ರೋತ್ಸಾಹದ ಕೊರತೆಯಿದ್ದು ಅವರ ಶಿಕ್ಷಣವೇ ಕುಂಠಿತವಾಗುತ್ತಿದೆ.

ಹಾಗಾದರೆ, ವಿದ್ಯಾಭ್ಯಾಸದ ವಿಚಾರದಲ್ಲಿ ಮಕ್ಕಳ ಪೋಷಕರ ಪಾತ್ರವೇನು? ಮಕ್ಕಳಿಗೆ ಪೋಷಕರ ಅಗತ್ಯವೇ ಇಲ್ಲವೇ? ಅಪ್ಪ ಅಮ್ಮನಿಗಿಂತ ಶಿಕ್ಷಕರೇ ಮಕ್ಕಳಿಗೆ ಹೆಚ್ಚೆೇ ಎಂದು ನಿಮ್ಮಲ್ಲಿ ಪ್ರಶ್ನೆಗಳು ಕಾಡಬಹುದು. ಇದನ್ನು ಓದಿದ ಮೇಲೆ ಈ ಪ್ರಶ್ನೆಗಳು ನಿಮ್ಮನ್ನು ಕಾಡಲಾರವು ಎಂಬ ಆಶ್ವಾಸನೆ ನೀಡುತ್ತೇನೆ.

1) ಪೋಷಕರ ಸ್ಥಾನ ಮುಖ್ಯ: ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಬದುಕಿನ ಅತ್ಯಂತ ಮಹತ್ವದ ಮತ್ತು ನಿರಂತರವಾಗಿ ಇರುವ ಸಂಬಂಧ. ಶಿಕ್ಷಕರಿಗಿಂತ ಪೋಷಕರು ಮಕ್ಕಳ ಪ್ರೀತಿ, ವಿಶ್ವಾಸ ಮತ್ತು ಗೌರವಕ್ಕೆ ಅರ್ಹರು. ಪೋಷಕರ ಸ್ಥಾನವನ್ನು ಬೇರೆ ಯಾವ ಸಂಬಂಧಗಳು ಭರ್ತಿ ಮಾಡಲು ಸಾಧ್ಯವಿಲ್ಲ. ಇದು ಪೋಷಕರಿಗೇ ಮೀಸಲು. ಇದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು.

2) ಇತರರ ಒಡನಾಟ ಅತ್ಯಗತ್ಯ: ಆದರೆ ಮಕ್ಕಳ ಬದುಕಿನ ಹಲವು ಹಂತಗಳ ಬೆಳವಣಿಗೆಯ ಅನುಸಾರವಾಗಿ ಬೇರೆ ಬೇರೆ ಸಂಬಂಧಗಳು ಸಹ ಮಕ್ಕಳ ಜೊತೆ ಬೆರೆಯುತ್ತವೆ ಮತ್ತು ಸಮಯ ಕಳೆದಂತೆ ಕೆಲ ಸಂಬಂಧಗಳು ಬೇರೆಯೂ ಆಗುತ್ತದೆ. ಪೋಷಕರು ಇದನ್ನು ಅರಿತು ಮಕ್ಕಳ ಜೊತೆ ಸಹಕರಿಸಬೇಕು.

3) ಶಿಕ್ಷಕರ ಮೇಲಿನ ನಂಬಿಕೆ ಒಳ್ಳೆಯದು: ನಿಮ್ಮ ಮಗನ ವಿಚಾರದಲ್ಲಿ, ಅವನು ಶಾಲೆಯ ಶಿಕ್ಷಕಿಯನ್ನು ನಂಬುತ್ತಾನೆ ಎಂದರೆ ಶಿಕ್ಷಕಿಯ ಮೇಲೆ ಗೌರವ ಮತ್ತು ವಿಶ್ವಾಸವೆರಡೂ ಇದೆ ಎಂದು ಅರ್ಥ. ಇದು ಒಳ್ಳೆಯದೇ ಅಲ್ಲವೇ? ಒಂದು ಪಕ್ಷ ಅವನ ಶಿಕ್ಷಕಿ ತಪ್ಪು ಸ್ಪೆಲಿಂಗ್ ಬರೆದಾಗ ಅಥವಾ ತಪ್ಪಾಗಿ ಪಾಠದ ಅರ್ಥ ಹೇಳಿದರೆ ನೀವು ಅದನ್ನು ಖಂಡಿತವಾಗಿಯೂ ತಿದ್ದಬೇಕು. ಆದರೆ, ತಿದ್ದುವಾಗ ಮಗನ ಶಿಕ್ಷಕಿಯನ್ನು ದೂರುವುದು, ಹಾಸ್ಯ ಅಥವಾ ವ್ಯಂಗ್ಯ ಮಾಡುವುದನ್ನು ತಡೆಯಿರಿ ಇಲ್ಲವಾದಲ್ಲಿ ನಿಮ್ಮ ಮಗನಿಗೆ ಇದು ನೋವು ಮತ್ತು ಕೋಪವನ್ನು ಉಂಟುಮಾಡುತ್ತದೆ. ನಾನು ನಂಬಿದ ಟೀಚರ್ ಸರಿ, ನನ್ನ ಅಪ್ಪ-ಅಮ್ಮ ಅವರನ್ನು ದೂರುಬಿಟ್ಟರಲ್ಲ ಎಂದು ಬೇಸರಿಸಿಕೊಳ್ಳಬಹುದು, ಟೀಚರ್ ಪರವಾಗಿ ವಾದಕ್ಕೆ ಇಳಿಯಬಹುದು.

4) ಚಿಂತನೆ ಆರಂಭವಾಗುತ್ತೆ: ಮಗುವು ಆ ಕ್ಷಣದಲ್ಲಿ ನಿಮ್ಮ ಮುಂದೆ ಒಪ್ಪಿಕೊಳ್ಳದಿದ್ದರೂ, ಖಂಡಿತವಾಗಿಯೂ ಒಳಗಿನೊಳಗೆ 'ನಿಜವಾಗಿಯೂ ನನ್ನ ಟೀಚರ್ ತಪ್ಪು ಮಾಡಿದ್ದಾರಾ' ಎಂದು ಚಿಂತನೆ ಮಾಡುತ್ತಿರುತ್ತದೆ. ಆದ ಕಾರಣ, ತಪ್ಪು ತಿದ್ದಿದ ತಕ್ಷಣವೇ ಮಗು ಒಪ್ಪಿಕೆೊಳ್ಳಬೇಕೆಂದು ಬಲವಂತ ಮಾಡಬೇಡಿ. 'ನಾಳೆ ಸಾಧ್ಯವಾದರೆ, ನಾವು ತಿದ್ದಿದ್ದನ್ನು ನಿನ್ನ ಟೀಚರ್ ಬಳಿ ಒಂದು ಸಲ ವಿಚಾರಿಸು, ಅವರ ಗಮನಕ್ಕೆ ತಂದ ನಂತರ ಸರಿಮಾಡಿಕೊಳ್ಳುವುದಕ್ಕೆ ಪ್ರಯತ್ನಿಸು' ಎಂದು ಹೇಳಿ ಮಾತುಕತೆಯನ್ನು ಶಾಂತವಾಗಿ ಮುಗಿಸಿ.

5) ಪುರಾವೆ ಮುಂದಿಡಿ: ಶಿಕ್ಷಕರು ಹೇಳಿಕೊಟ್ಟಿದ್ದರಲ್ಲಿ ತಪ್ಪು ಇದೆ ಎಂದಾಗ ಸಾಕ್ಷಿ / ಪುರಾವೆ (ನಿಘಂಟು/ ವ್ಯಾಕರಣ ಪುಸ್ತಕ ಇತ್ಯಾದಿಗಳು) ತೋರಿಸಿಯೇ ತಿದ್ದಿ. ಇದರಿಂದ ಮಗನಿಗೆ ಸರಿಯಾದ ವಿಚಾರಗಳು ಮನದಟ್ಟುವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

6) ತಪ್ಪು ಸಹಜ ಅಂತ ತಿಳಿಸಿ: ಒಂದು ಸರಿ ಮಗನಿಗೆ ಹೀಗೆ ಹೇಳಿ 'ನಿನ್ನ ಟೀಚರ್, ಅಪ್ಪ, ಅಮ್ಮ.. ಎಲ್ಲರೂ ಮನುಷ್ಯರೇ. ಮನುಷ್ಯರಾದ ಮೇಲೆ ಕೆಲವೊಮ್ಮೆ ಕೆಲಸ ಕಾರ್ಯಗಳಲ್ಲಿ ತಪ್ಪಾಗಬಹುದು. ತಪ್ಪು ಮಾಡಬಾರದು ಅಥವಾ ತಪ್ಪು ಇಂತಹವರಿಂದ ಸಾಧ್ಯವೇ ಇಲ್ಲ ಎಂದು ಭಾವಿಸದರೆ ಅದು ವ್ಯರ್ಥ. ತಪ್ಪು ಎಂದು ಅರಿವಾದ ಮೇಲೆ ತಿದ್ದುವುದು ಅಥವಾ ತಿದ್ದಿಕೊಳ್ಳುವುದು ಮನುಷ್ಯನ ಕತ೯ವ್ಯ.

7) ತಾಳ್ಮೆ ಇರಲಿ: ಎಲ್ಲಕ್ಕಿಂತ ಮುಖ್ಯವಾಗಿ ನೀವು ಎಂದಿಗೂ ತಾಳ್ಮೆಗೆಡಬೇಡಿ. ಮಗನು ಇನ್ನು ಚಿಕ್ಕವನಾದರಿಂದ, ತಪ್ಪನ್ನು ತಿದ್ದಿ ಸ್ವಲ್ಪ ಸಮಯ ನೀಡುವುದು ಉತ್ತಮ. ಒಳ್ಳೆಯದಾಗಲಿ.

---

ಗಮನಿಸಿ: ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ