logo
ಕನ್ನಡ ಸುದ್ದಿ  /  ಜೀವನಶೈಲಿ  /  Dental Care: ಹಲ್ಲುಗಳ ಆರೋಗ್ಯದ ಬಗ್ಗೆ ಬೇಡ ನಿರ್ಲಕ್ಷ್ಯ; ದಂತ ಕ್ಷಯದಿಂದ ದೂರ ಇರಲು ಈ 7 ಅಂಶಗಳು ನಿಮ್ಮ ಗಮನದಲ್ಲಿರಲಿ

Dental Care: ಹಲ್ಲುಗಳ ಆರೋಗ್ಯದ ಬಗ್ಗೆ ಬೇಡ ನಿರ್ಲಕ್ಷ್ಯ; ದಂತ ಕ್ಷಯದಿಂದ ದೂರ ಇರಲು ಈ 7 ಅಂಶಗಳು ನಿಮ್ಮ ಗಮನದಲ್ಲಿರಲಿ

HT Kannada Desk HT Kannada

Mar 11, 2024 08:30 AM IST

google News

ಹಲ್ಲುಗಳ ಅರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು

  • Oral Health: ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ನೀವು ದಿನನಿತ್ಯ ಈ ಏಳು ನಿಯಮಗಳನ್ನು ಪಾಲಿಸಿದಲ್ಲಿ ಖಂಡಿತವಾಗಿ ನಿಮ್ಮ ಹಲ್ಲು ಹಾಗೂ ಬಾಯಿಯ ಆರೋಗ್ಯ ಚೆನ್ನಾಗಿ ಇರಲಿದೆ. ಹಾಗೇ ಬಾಯಿಯ ದುರ್ವಾಸನೆಯಿಂದ ಮತ್ತೊಬ್ಬರು ಮುಜುಗರವಾದಂತೆ ತಡೆಯಬಹುದು.

ಹಲ್ಲುಗಳ ಅರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು
ಹಲ್ಲುಗಳ ಅರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು

Oral Health: ಕೇವಲ ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಮಾತ್ರ ಸಾಲದು. ಇದರ ಜೊತೆಯಲ್ಲಿ ನಮ್ಮ ಹಲ್ಲುಗಳು ಹಾಗೂ ಬಾಯಿಯ ಆರೋಗ್ಯದ ಬಗ್ಗೆಯೂ ಗಮನ ನೀಡಬೇಕು. ನಮ್ಮ ಬಾಯಿಯಿಂದ ಬರುವ ದುರ್ವಾಸನೆ, ಹಲ್ಲುಗಳಲ್ಲಿ ಏನಾದರೂ ಆಹಾರ ಸಿಲುಕಿಕೊಂಡಿದ್ದರೆ ಇವುಗಳು ನಮ್ಮ ವ್ಯಕ್ತಿತ್ವವನ್ನೇ ಇನ್ನೊಬ್ಬರ ಎದುರು ಹಾಳು ಮಾಡಿಬಿಡಬಹುದು. ಹೀಗಾಗಿ ಬಾಯಿಯ ಆರೋಗ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ಮಾಹಿತಿಯ ಪ್ರಕಾರ, ನಮ್ಮ ಬಾಯಿ, ಹಲ್ಲಿನ ಆರೋಗ್ಯವು ನಮ್ಮ ದೇಹದ ಆರೋಗ್ಯವನ್ನು ಸಂಕೇತಿಸುತ್ತವೆ. ಒಬ್ಬ ವ್ಯಕ್ತಿ ತಿನ್ನುವುದು , ಉಸಿರಾಡುವುದು ಇವೆಲ್ಲದರ ಮೇಲೆಯೂ ಬಾಯಿ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ಹಲ್ಲುಗಳು ಹಾಗೂ ಬಾಯಿಯ ನೈರ್ಮಲ್ಯದ ಕುರಿತಂತೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ.

ಒಟ್ಟಾರೆಯಾಗಿ ಹಲ್ಲುಗಳ ಆರೋಗ್ಯವನ್ನು ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ನಾವು ಏನು ಮಾಡಬೇಕು ಎಂಬುದಕ್ಕೆ ಸರಳವಾದ ಸಲಹೆಗಳು ಇಲ್ಲಿವೆ ನೋಡಿ

1. ದಿನಕ್ಕೆ ಎರಡು ಬಾರಿ ಬ್ರಶ್ ಮಾಡಿ : ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್‌ಗಳನ್ನು ಬಳಕೆ ಮಾಡಿ ದಿನಕ್ಕೆ 2 ಬಾರಿ ನಿಮ್ಮ ಹಲ್ಲುಗಳನ್ನು ಬ್ರಶ್ ಮಾಡಲೇಬೇಕು. ಹಲ್ಲುಜ್ಜುವುದರಿಂದ ಹಲ್ಲುಗಳಿಗೆ ಅಂಟಿರುವ ಆಹಾರ ಪದಾರ್ಥಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ಹಲ್ಲಿನ ಕೊಳೆತ, ವಸಡುಗಳಲ್ಲಿ ನೋವುಂಟಾಗುವಂತಹ ಅಪಾಯಗಳಿಂದ ನೀವು ಪಾರಾಗಲಿದ್ದೀರಿ.

2. ಫ್ಲೋಸ್ಸಿಂಗ್ ಮಾಡುವುದು : ಫ್ಲೋಸ್ಸಿಂಗ್ ಎಂದರೆ ಮತ್ತೆನಲ್ಲ. ದಾರದ ಸಹಾಯದಿಂದ ನಿಮ್ಮ ಹಲ್ಲುಗಳ ನಡುವೆ ಸಿಲುಕಿಹಾಕಿಕೊಂಡಿರುವ ಆಹಾರ ಮತ್ತು ಕೊಳೆಯನ್ನು ತೆಗೆದು ಹಾಕುವುದಾಗಿದೆ. ಇವುಗಳಿಂದ ಹಲ್ಲುಗಳಲ್ಲಿ ಕುಳಿ ಬೀಳುವುದಿಲ್ಲ ಮಾತ್ರವಲ್ಲದೇ ವಸಡಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದಲೂ ನೀವು ಪಾರಾಗಲಿದ್ದೀರಿ.

3. ಮೌತ್ ವಾಶ್‌ಗಳ ಬಳಕೆ : ಮೌತ್‌ವಾಶ್‌ಗಳು ಹಲ್ಲುಗಳಲ್ಲಿ ಪಾಚಿಗಟ್ಟುವುದನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಇದರಿಂದ ಕೂಡ ವಸಡಿಗೆ ಸಂಬಂಧಿಸಿದ ಅನಾರೋಗ್ಯಗಳಿಂದ ಪಾರಾಗಲು ಸಾಧ್ಯವಿದೆ. ಇದರಿಂದ ಬಾಯಿಯಿಂದ ಬರುವ ದುರ್ಗಂಧ ಕೂಡ ಕಡಿಮೆಯಾಗುತ್ತದೆ. ಆದಷ್ಟು ಬ್ಯಾಕ್ಟೀರಿಯಾ ವಿರೋಧಿ ಹಾಗೂ ಫ್ಲೋರೈಡ್‌ಯುಕ್ತ ಮೌತ್ ವಾಷ್‌ಗಳನ್ನು ಬಳಕೆ ಮಾಡಿ.

4. ಸಮತೋಲಿತ ಆಹಾರ: ಖನಿಜಾಂಶಗಳು, ಜೀವಸತ್ವಗಳು ಹಾಗೂ ಕ್ಯಾಲ್ಶಿಯಂನಿಂದ ಸಮೃದ್ಧವಾಗಿರುವ ಆಹಾರಗಳನ್ನೇ ಹೆಚ್ಚು ಸೇವಿಸಬೇಕು. ಇವುಗಳು ಹಲ್ಲುಗಳ ಬಲವನ್ನು ಹೆಚ್ಚಿಸುವುದರ ಜೊತೆಯಲ್ಲಿ ವಸಡುಗಳ ಆರೋಗ್ಯಕ್ಕೂ ಅವಶ್ಯಕವಾಗಿದೆ.

5. ಸಕ್ಕರೆ ಹಾಗೂ ಆಮ್ಲೀಯ ಪದಾರ್ಥಗಳ ಸೇವನೆ ನಿಯಂತ್ರಣದಲ್ಲಿರಲಿ: ಸಕ್ಕರೆಯಂಶಯುಕ್ತ ಹಾಗೂ ಅತಿಯಾದ ಆಮ್ಲೀಯ ಆಹಾರಗಳ ಸೇವನೆಯನ್ನು ತ್ಯಜಿಸುವುದು ಉತ್ತಮ. ಇವುಗಳ ಅತಿಯಾದ ಸೇವನೆಯು ಹಲ್ಲುಗಳಲ್ಲಿ ಹುಳುಕು ಉಂಟಾಗಲು ಕಾರಣವಾಗಬಹುದು.

6. ನಿಯಮಿತವಾಗಿ ದಂತ ವೈದ್ಯರನ್ನು ಭೇಟಿಯಾಗಿ: ಹಲ್ಲಿನ ಆರೋಗ್ಯವನ್ನು ನೀವು ಎಂದಿಗೂ ನಿರ್ಲಕ್ಷಿಸುವಂತಿಲ್ಲ. ಕಾಲ ಕಾಲಕ್ಕೆ ದಂತ ವೈದ್ಯರನ್ನು ಭೇಟಿಯಾಗಿ. ನಿಮ್ಮ ಹಲ್ಲು ಹಾಗೂ ವಸಡುಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

7. ತಂಬಾಕುಯುಕ್ತ ಪದಾರ್ಥಗಳ ಸೇವನೆ ತ್ಯಜಿಸಿ : ಸಿಗರೇಟ್, ಸೇರಿದಂತೆ ತಂಬಾಕಿನ ಅಂಶವುಳ್ಳ ಯಾವುದೇ ಪದಾರ್ಥಗಳ ಸೇವನೆಯನ್ನು ತಪ್ಪಿಸಿ. ಇದರಿಂದ ನಿಮಗೆ ಕ್ಯಾನ್ಸರ್ ಅಪಾಯ ಕೂಡ ಇರುತ್ತದೆ. ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ತಂಬಾಕು ಸೇವನೆ ಸಂಪೂರ್ಣ ತ್ಯಜಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ