Exam Anxiety: ಪರೀಕ್ಷೆ ಸಮಯದಲ್ಲಿ ಮಕ್ಕಳ ಆತಂಕ ದೂರ ಮಾಡುವುದು ಹೇಗೆ? ಪೋಷಕರಿಗೆ ತಿಳಿದಿರಲೇಬೇಕಾದ ವಿಷಯಗಳಿವು
Mar 25, 2024 07:15 AM IST
ಪರೀಕ್ಷಾ ಸಮಯದಲ್ಲಿ ಮಕ್ಕಳ ಆತಂಕವನ್ನು ಹೇಗೆ ದೂರ ಮಾಡುವುದು ಎಂಬುದರ ಬಗ್ಗೆ ಹಿರಿಯ ಉಪನ್ಯಾಸಕಿ ರೇಣುಾ ಎಸ್ ಅವರು ಪೋಷಕಳಾಗಿ ಪೋಷಕರಿಗೆ ಕಿವಿ ಮಾತು ಹೇಳಿದ್ದಾರೆ.
- Parenting Tips: ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಕ್ಕಳಲ್ಲಿ ಭಯ, ಆತಂಕ ಶುರುವಾಗೋದು ಸಾಮಾನ್ಯ. ಇಂಥ ಸಂದರ್ಭದಲ್ಲಿ ಪೋಷಕರಾದವರು ಏನು ಮಾಡಬೇಕು ಎಂಬುದರ ಬಗ್ಗೆ ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕಿ ರೇಣುಕಾ ಎಸ್ ಸಲಹೆ ನೀಡಿದ್ದಾರೆ.
ಮಾರ್ಚ್ ತಿಂಗಳು ಎಂದರೆ ಅದು ಪರೀಕ್ಷೆಯ ಮಾಸ. ಮಕ್ಕಳು, ಪೋಷಕರು ಹಾಗೂ ಶಿಕ್ಷಕರುಗಳ ಮನದಲ್ಲಿ ಎಲ್ಲಿಲ್ಲದ ಆತಂಕ ಮನೆಮಾಡಿರುತ್ತದೆ. ಅದರಲ್ಲೂ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಇದೊಂದು ಅಗ್ನಿಪರೀಕ್ಷೆ. ಒಂದರಿಂದ ಒಂಬತ್ತರವರೆಗೆ ಶಾಲಾ ಹಂತದ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳದೇ ತೇರ್ಗಡೆ ಹೊಂದಿ ಈಗ ಪರೀಕ್ಷಾ ಮಂಡಳಿ ನಡೆಸುವ ಬೋರ್ಡ್ ಪರೀಕ್ಷೆಯನ್ನು ಎದುರಿಸುವುದು ಮಕ್ಕಳಿಗೆ ಭಯದ ವಿಷಯವೇ ಆಗಿ ಮಾರ್ಪಟ್ಟಿರುತ್ತದೆ. ಪರೀಕ್ಷಾ ಕೇಂದ್ರ, ಕೊಠಡಿ ಮೇಲ್ವಿಚಾರಕರು, ಮೌಲ್ಯಮಾಪಕರುಗಳೆಲ್ಲಾ ತಮ್ಮ ಶಿಕ್ಷಕರುಗಳಾಗಿರದೇ ಬೇರೆಯವರು ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಆತಂಕಗೊಳ್ಳುವುದು ಸಹಜವೇ ಆಗಿದೆ. ಆದರೆ ವಿದ್ಯಾರ್ಥಿಗಳಿಗಿಂತ ಪಾಲಕರು ಹಾಗೂ ಪೋಷಕರ ಆತಂಕ ಹೇಳತೀರದು. ಹಲವು ಪೋಷಕರು ತಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಬದಲಿಗೆ ಅಂಕಗಳ ಗಳಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
"ಪರೀಕ್ಷೆ ಒಂದು ಹಬ್ಬದಂತೆ" ಸಂಭ್ರಮಿಸಬೇಕೇ ಹೊರತು ತಾವು ಆತಂಕಗೊಂಡು ಮಕ್ಕಳನ್ನು ಆತಂಕಕ್ಕೀಡುಮಾಡಬಾರದು. ತಾನು ಕಲಿತ ವಿಚಾರಗಳನ್ನು ಮೂರು ತಾಸಿನಲ್ಲಿ ಸಹಜವಾಗಿ ಸಹನೆಯಿಂದ ಉತ್ತರಿಸಿ ಬರೆಯುವುದಕ್ಕೆ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಅಗತ್ಯತೆ ಮತ್ತು ಅನಿವಾರ್ಯತೆ ಇದೆ.
ಪ್ರೀತಿಯ ಪೋಷಕರೇ ನಾವು ಹೀಗೆ ಮಾಡೋಣ
- ವಿದ್ಯಾರ್ಥಿ ಬರೆಯಲು ಹೋಗುತ್ತಿರುವುದು ಪರೀಕ್ಷೆಗೆ ಹೊರತು ಯುದ್ಧಕ್ಕಲ್ಲ ಎಂಬ ಸತ್ಯ ತಿಳಿಯೋಣ
- ನಮ್ಮ ಮಗುವಿನೊಂದಿಗೆ ಸದಾ ಆತ್ಮೀಯವಾಗಿ ಮಾತನಾಡುತ್ತಾ ಆತ್ಮವಿಶ್ವಾಸವನ್ನು ತುಂಬೋಣ
- ಪ್ರತಿಯೊಂದು ಮಗು ವಿಶೇಷ ಮತ್ತು ಅನನ್ಯ. ನಮ್ಮ ಮಗುವಿನ ಸಾಮರ್ಥ್ಯ ಅರಿಯದೇ ಮತ್ತೊಂದು ಮಗುವಿನೊಂದಿಗೆ ಹೋಲಿಸದಿರೋಣ
- ಪ್ರತಿ ದಿನ ಮಗುವಿಗೆ ಶುದ್ಧ ಆಹಾರ ನೀಡುತ್ತಾ ಸುಖವಾಗಿ ನಿದ್ರಿಸಲು ಬಿಡೋಣ
- ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಮಕ್ಕಳು ತಾವೇ ಪೂರ್ವತಯಾರಿ ಮಾಡಿಕೊಳ್ಳುವಂತೆ ಅವಕಾಶ ನೀಡಿ ಉದಾ: ಹಾಲ್ ಟಿಕೆಟ್, ಪೆನ್, ಜ್ಯಾಮಿಟ್ರಿ ಬಾಕ್ಸ್, ಇತ್ಯಾದಿ. ನಾವೇ ಪ್ರತಿಬಾರಿ ಹೆಚ್ಚು ಕಾಳಜಿಮಾಡಿದಲ್ಲಿ ಮಕ್ಕಳು ಸ್ವತ್ಯಂತ್ರವಾಗಿ ಯೋಚಿಸುವುದನ್ನು ಕಲಿಯುವುದಿಲ್ಲ. ಅಂದರೆ ಅತಿಯಾಗಿ ಸ್ಪೂನ್ ಫೀಡ್ ಮಾಡುವುದನ್ನು ನಿಲ್ಲಿಸಲು ಪ್ರಯತ್ನಿಸೋಣ
- ಪರೀಕ್ಷೆ ಮುಗಿದ ನಂತರ ನಂತರ ಹೇಗಾಯಿತು? ಎಂಬುದಷ್ಟೇ ನಮ್ಮ ಪ್ರಶ್ನೆಯಾಗಿರಲಿ. ಬದಲಿಗೆ ಎಷ್ಟು ಅಂಕ ಬರುತ್ತೆ? ಯಾವುದು ಬರೆಯಲಿಲ್ಲಾ? ಸಮಯ ಸಾಕಾಯಿತಾ? ಹೀಗೆ ಹತ್ತಾರು ಪ್ರಶ್ನೆಗಳ ಸರಮಾಲೆಯಿಂದ ಮಗು ಮತ್ತಷ್ಟು ಮನಸ್ಸಿಗೆ ಘಾಸಿಯಾಗುವುದನ್ನು ತಪ್ಪಿಸಿ. ಇದು ಮುಂದಿನ ಪತ್ರಿಕೆಯ ಮೇಲೆ ಖಂಡಿತ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
- ಪರೀಕ್ಷೆ ಮುಗಿದು ಫಲಿತಾಂಶ ಬಂದಾಗ ಮಕ್ಕಳ ಸಾಧನೆಗೆ ಪ್ರಶಂಶಿಸಿ, ಧನಾತ್ಮಕ ಹಿಮ್ಮಾಹಿತಿ ಇರಲಿ. ಬದಲಿಗೆ ನೆರೆ-ಹೊರೆ ಮಕ್ಕಳ, ಅವನ/ಅವಳ ಸ್ನೇಹಿತರೊಂದಿಗೆ, ಬಂಧುಗಳ ಮಕ್ಕಳೊಂದಿಗೆ ಹೋಲಿಸಿ (ನೋಡು ಅವಳು/ ಅವನು ಎಷ್ಟು ಅಂಕ ಪಡೆದಿದ್ದಾನೆ? ನೀನು ಇನ್ನು ಮೂರು ಅಂಕ ಜಾಸ್ತಿ ಪಡೆದಿದ್ದರೆ ಶಾಲೆಗೆ ನೀನೇ ಟಾಪರ್ ಅಗುತ್ತಿದ್ದೆ. ಇತ್ಯಾದಿ) ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಕುಗ್ಗದಂತೆ ನೋಡಿಕೊಳ್ಳೊಣ.
- ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದರೆ ಸಾಲದು ಜೀವನದಲ್ಲಿ ಫೇಲ್ ಆಗದಿರುವಂತೆ ನೋಡಿಕೊಳ್ಳೊಣ. ಏಕೆಂದರೆ ಸಮಾಜದಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳು ರ‍್ಯಾಂಕ್ ಪಡದವರಿಲ್ಲ ಹಾಗು ಸ್ಟಾರ‍್ಸ್ ಕೂಡ ಅಲ್ಲ ಉದಾ: ಸಚಿನ್ ತೆಂಡೂಲ್ಕರ್ ಉತ್ತಮ ಅಂಕಪಡೆದ ವಿದ್ಯಾರ್ಥಿಯಲ್ಲವೆಂಬ ಸತ್ಯ ನಮಗೆ ತಿಳಿಯದಿರುವ ವಿಷಯವೇನಲ್ಲ.
ಪರೀಕ್ಷೆ ಅನಿವಾರ್ಯ. ಶೈಕ್ಷಣಿಕ ವರ್ಷದಲ್ಲಿ ಮಗು ಕಲಿತಿರುವುದನ್ನು ಖಾತ್ರಿಪಡಿಸಿಕೊಂಡು, ದೃಢೀಕರಿಸಿ ಮಗುವನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸುವುದು ಸಹಜ ಕ್ರಮ. ಆದರೆ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸುವುದೇ ಸಾಧನೆ ಆಗಲಾರದೆಂದು ನನ್ನ ಅಭಿಪ್ರಾಯ. ಕಲಿತ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧನೆಗೈದು ಸಮಾಜದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳುವುದು ಮುಖ್ಯ.
ಈಗಿನ ಪರೀಕ್ಷಾ ಪದ್ಧತಿಯಲ್ಲಿ ಜ್ಞಾನಾಧಾರಿತ, ಅನ್ವಯಿಕ ಹೀಗೆ ಹತ್ತು ಹಲವು ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷಾ ದಿನ ಮೂರು ಗಂಟೆಯಲ್ಲಿ ಪ್ರಶ್ನೆಗಳನ್ನು ಅರ್ಥೈಸಿಕೊಂಡು, ಯಾವ ಪ್ರಶ್ನೆಗೆ ಯಾವ ಉತ್ತರ ಬರೆಯಬೇಕು ಹಾಗೂ ಎಷ್ಟು ಉತ್ತರ ಬರೆಯಬೇಕೆಂಬುದರ ಅರಿವು ಇರದಿದ್ದಾಗ, ಉತ್ತರ ಗೊತ್ತಿದ್ದರೂ ಅವಸರದಲ್ಲಿ ತಪ್ಪು ಉತ್ತರಿಸಿದ ಅದೆಷ್ಟೋ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಿಂದ ನಿರ್ಗಮಿಸಿದ ನಂತರ ಪರಿತಪಿಸುವುದನ್ನು ನೋಡಿದ್ದೇವೆ.ಇಂತಹ ಸನ್ನಿವೇಶದಲ್ಲಿ ನಾವು ಬೇಸರವಾಗದೆ ಮುಂದಿನ ಪತ್ರಿಕೆಗೆ ಇನ್ನು ಚೆನ್ನಾಗಿ ಸಿದ್ಧತೆ ಮಾಡಿಕೊ ಎಂದರೆ ಉತ್ತಮವಾದೀತು.
ಮಕ್ಕಳ ಮೇಲೆ ಸಾಕಷ್ಟು ಭರವಸೆಗಳನ್ನು, ಕನಸುಗಳನ್ನು ಕಾಣಬಯಸುವುದು ಸಹಜ
ಪ್ರೀತಿಯ ಪೋಷಕರೇ, ನಿಮ್ಮ ಮಗುವಿನ ಮೇಲೆ ಸಾಕಷ್ಟು ಭರವಸೆಗಳನ್ನು, ಕನಸುಗಳನ್ನು ಕಾಣಬಯಸುವುದು ಸಹಜ. ಪ್ರತಿ ಮಗುವಿನ ಮನಸ್ಥಿತಿ, ಆಸಕ್ತಿ, ಅಭಿರುಚಿ, ಜಾಣ್ಮೆ, ಶಕ್ತಿ, ಹಾಗೂ ಸಾಮರ್ಥ್ಯಗಳು ವಿಭಿನ್ನ ಹಾಗೂ ವಿಶೇಷ. ನಿಮ್ಮ ಮಗುವಿನ ಮೇಲೆ ವಿಶ್ವಾಸವಿಡಿ, ಪ್ರೀತಿ ನೀಡಿ, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಸದಾ ತುಂಬಿ ಇ¯್ಲವಾದಲ್ಲಿ ಅದೆಷ್ಟೋ ಮೊಗ್ಗುಗಳು ಅರಳುವ ಮುನ್ನವೇ ಬಾಡಿಹೋಗುತ್ತವೆ. ಹೀಗಾಗದಂತೆ ಎಚ್ಚರವಹಿಸೋಣ. ಎಲ್ಲೊ ಓದಿದ ಸಾಲುಗಳು ನೆನಪಾಗುತ್ತಿವೆ. “ಎಲ್ಲ ನಾಳಿನ ಎಲ್ಲಾ ಹೂಗಳು ಇಂದಿನ ಬೀಜಗಳಲ್ಲಿವೆ, ನಾಳಿನ ಎಲ್ಲಾ ಮಾನವೀಯತೆಯ ಭವಿಷ್ಯ ಇಂದಿನ ಮಕ್ಕಳಲ್ಲಿದೆ ” (ಬರಹ: ರೇಣುಕಾ ಎಸ್ ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಹಿರಿಯ ಉಪನ್ಯಾಸಕಿ)