logo
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಶಾಲೆ ಆರಂಭಕ್ಕೆ ದಿನಗಣನೆ, ಸ್ಕೂಲ್‌ಗೆ ಮರಳಲು ನಿಮ್ಮ ಮಗುವನ್ನು ಹೀಗೆ ಸಿದ್ಧಗೊಳಿಸಿ; ಪೋಷಕರಿಗಿಲ್ಲಿದೆ ಸಲಹೆ

Parenting Tips: ಶಾಲೆ ಆರಂಭಕ್ಕೆ ದಿನಗಣನೆ, ಸ್ಕೂಲ್‌ಗೆ ಮರಳಲು ನಿಮ್ಮ ಮಗುವನ್ನು ಹೀಗೆ ಸಿದ್ಧಗೊಳಿಸಿ; ಪೋಷಕರಿಗಿಲ್ಲಿದೆ ಸಲಹೆ

Reshma HT Kannada

May 23, 2024 11:47 AM IST

google News

ಶಾಲೆ ಆರಂಭಕ್ಕೆ ದಿನಗಣನೆ, ಸ್ಕೂಲ್‌ಗೆ ಮರಳಲು ನಿಮ್ಮ ಮಗುವನ್ನು ಹೀಗೆ ಸಿದ್ಧಗೊಳಿಸಿ

    • ಬರೋಬ್ಬರಿ ಎರಡು ತಿಂಗಳುಗಳ ಬೇಸಿಗೆ ರಜೆ ಮುಗಿದು ಶಾಲೆ ಶುರುವಾಗಲು ದಿನಗಣನೆ ಆರಂಭವಾಗಿದೆ. ಮಕ್ಕಳು ಇನ್ನೂ ರಜೆಯ ಮೂಡ್‌ನಲ್ಲೇ ಇದ್ದಾರೆ. ಆದರೂ ಮಕ್ಕಳನ್ನು ಶಾಲೆಗೆ ಸಿದ್ಧ ಮಾಡಬೇಕಿರುವುದು ಪೋಷಕರ ಜವಾಬ್ದಾರಿ. ಮರಳಿ ಶಾಲೆಗೆ ಹೋಗುವ ಸಮಯದಲ್ಲಿ ಮಕ್ಕಳು ಹಾಗೂ ಪೋಷಕರು ತಪ್ಪದೇ ಪಾಲಿಸಬೇಕಾದ ನಿಯಮಗಳಿವು.
ಶಾಲೆ ಆರಂಭಕ್ಕೆ ದಿನಗಣನೆ, ಸ್ಕೂಲ್‌ಗೆ ಮರಳಲು ನಿಮ್ಮ ಮಗುವನ್ನು ಹೀಗೆ ಸಿದ್ಧಗೊಳಿಸಿ
ಶಾಲೆ ಆರಂಭಕ್ಕೆ ದಿನಗಣನೆ, ಸ್ಕೂಲ್‌ಗೆ ಮರಳಲು ನಿಮ್ಮ ಮಗುವನ್ನು ಹೀಗೆ ಸಿದ್ಧಗೊಳಿಸಿ

ಮಳೆಗಾಲ ಅಥವಾ ಜೂನ್‌ ತಿಂಗಳು ಬಂತು ಎಂದರೆ ಶಾಲೆ ಆರಂಭವಾಗುವ ಕಾಲ ಹತ್ತಿರ ಬಂತು ಎಂದೇ ಅರ್ಥ. ಎರಡು ತಿಂಗಳ ಬೇಸಿಗೆ ರಜೆ ಮುಗಿದು, ಮರಳಿ ಶಾಲೆಯ ಬಾಗಿಲು ತೆರೆಯುವ ಸಮಯವಿದು. ಆದರೆ ಮಕ್ಕಳು ಒಂದಿಷ್ಟು ದಿನಗಳಿಂದ ರಜೆಯ ಮಜ ಅನುಭವಿಸಿರುವುದರಿಂದ ಇನ್ನೂ ಅದೇ ಮೂಡ್‌ನಲ್ಲಿ ಇರುತ್ತಾರೆ. ಹಾಗಂತ ಪೋಷಕರು ಮಕ್ಕಳನ್ನು ಶಾಲೆಗೆ ಹೋಗುವ ಮನಸ್ಥಿತಿ ಸಿದ್ಧ ಮಾಡದೇ ಇದ್ದರೆ ತೊಂದರೆ ಅನುಭವಿಸಬೇಕಾಗಬಹುದು. ಮರಳಿ ಶಾಲೆಗೆ ಹೋಗುವ ಮಗು ಹಾಗೂ ಪೋಷಕರಿಗಾಗಿ ಇಲ್ಲಿದೆ ಒಂದಿಷ್ಟು ಅಗತ್ಯ ಸಲಹೆಗಳು.

ಶಾಲೆಯ ವೇಳಾಪಟ್ಟಿಗೆ ಮಕ್ಕಳನ್ನು ಸಿದ್ಧ ಮಾಡಿ

ಮನೆಯಲ್ಲಿ ಇರುವುದಕ್ಕೂ ಶಾಲೆಗೆ ಹೋಗುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಶಾಲೆ ಆರಂಭವಾಗುವ ಒಂದು ವಾರ ಇರುವಾಗಲೇ ಶಾಲೆಯ ವೇಳಾಪಟ್ಟಿಗೆ ಹೊಂದುವಂತೆ ಮಕ್ಕಳ ದಿನಚರಿಯನ್ನು ರೂಢಿಸಬೇಕು. ಬೆಳಿಗ್ಗೆ ಬೇಗ ಏಳುವುದು, ಸ್ನಾನ ಮಾಡುವುದು, ತಿಂಡಿ ತಿನ್ನುವ ಸಮಯ, ಊಟ ಸಮಯ, ಹೀಗೆ ಎಲ್ಲವೂ ಶಾಲೆಯ ವೇಳಾಪಟ್ಟಿಗೆ ಸರಿಯಾಗಿ ಇರುವುದು ಬಹಳ ಮುಖ್ಯವಾಗುತ್ತದೆ.

ನಿಗದಿತ ಮಲಗುವ ಸಮಯ

ಶಾಲೆ ಆರಂಭಕ್ಕೂ ಮುನ್ನ ಮಗುವಿನ ಮಲಗುವ ದಿನಚರಿಯನ್ನು ಬದಲಿಸಬೇಕು. ಯಾಕೆಂದರೆ ರಜಾದಿನಗಳಲ್ಲಿ ಮಕ್ಕಳು ತಡವಾಗಿ ಮಲಗಿ, ತಡವಾಗಿ ಏಳುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದರಿಂದ ಶಾಲೆಯ ದಿನಗಳು ಆರಂಭವಾದಾಗ ಮಕ್ಕಳು ತೊಂದರೆ ಅನುಭವಿಸಬಹುದು. ತಡವಾಗಿ ಏಳುವುದನ್ನೇ ಅಭ್ಯಾಸ ಮಾಡಿಕೊಂಡು ಶಾಲೆ ಶುರುವಾದಾಗ ಬೇಗ ಎದ್ದೇಳಲು ಹಟ ಮಾಡಬಹುದು. ಕೆಲವು ಮಕ್ಕಳು ಬೇಗ ಎದ್ದೇಳಬೇಕು ಎಂದುಕೊಂಡು ಶಾಲೆ ತಪ್ಪಿಸುವ ಅಭ್ಯಾಸವನ್ನೂ ಮಾಡುತ್ತಾರೆ. ಹಾಗಾಗಿ ಒಂದು ವಾರ ಇರುವಾಗಲೇ ಬೇಗ ಮಲಗಿ ಬೇಗ ಏಳುವ ಅಭ್ಯಾಸ ರೂಢಿಸಿ ಇರಬೇಕು.

ಮಕ್ಕಳ ಟಿಫಿನ್‌ ಬಾಕ್ಸ್‌ಗೆ ಪ್ಲಾನ್‌ ಮಾಡಿ

ಮಕ್ಕಳು ಶಾಲೆಗೆ ಹೋಗುವ ವಿಚಾರಕ್ಕೆ ಬಂದಾಗ ಮೊದಲು ನೆನಪಾಗುವುದು ಟಿಫಿನ್‌ ಬಾಕ್ಸ್‌. ಮಕ್ಕಳಿಗೆ ಸ್ನ್ಯಾಕ್ಸ್‌, ಟಿಫಿನ್‌, ಊಟ ಎಂದು ಬಾಕ್ಸ್‌ಗೆ ಸಿದ್ಧ ಮಾಡುವುದೇ ಪೋಷಕರಿಗೆ ದೊಡ್ಡ ಸವಾಲಾಗಿರುತ್ತದೆ. ಮಕ್ಕಳಿಗೆ ಎಲ್ಲಾ ರೀತಿಯ ತಿಂಡಿ ಇಷ್ಟವಾಗುವುದಿಲ್ಲ. ಇದರೊಂದಿಗೆ ಪೌಷ್ಟಿಕ ಆಹಾರ ನೀಡುವುದು ಬಹಳ ಮುಖ್ಯವಾಗುತ್ತದೆ. ಅಲ್ಲದೇ ಒಂದೇ ರೀತಿಯ ತಿಂಡಿಗಳನ್ನು ಮಕ್ಕಳು ಇಷ್ಟಪಡುವುದಿಲ್ಲ. ಹಾಗಾಗಿ ಒಂದು ಲಿಸ್ಟ್‌ ಸಿದ್ಧಪಡಿಸಿಕೊಂಡು ಅದಕ್ಕೆ ತಕ್ಕ ಹಾಗೆ ದಿನಕ್ಕೊಂದು ತಿಂಡಿಗಳನ್ನು ಪ್ಲಾನ್‌ ಮಾಡಿ.

ಮೊದಲೇ ಶಾಪಿಂಗ್‌ ಮಾಡಿರಿ

ಶಾಲೆ ಹೋಗುವುದು ಎಂದಾಕ್ಷಣ ಸುಮ್ಮನೆ ಹೋಗಲು ಸಾಧ್ಯವಿಲ್ಲ. ಮಕ್ಕಳಿಗೆ ಸ್ಕೂಲ್‌ ಬ್ಯಾಗ್‌, ಬುಕ್ಸ್‌, ಶೂ, ಛತ್ರಿ ಹೀಗೆ ಎಲ್ಲಾ ಪರಿಕರಗಳು ಅವಶ್ಯ. ಅದನ್ನೆಲ್ಲಾ ಸ್ವಲ್ಪ ಮೊದಲೇ ಶಾಪಿಂಗ್‌ ಮಾಡಿಟ್ಟುಕೊಂಡಿರಿ. ಕೊನೇ ಕ್ಷಣದಲ್ಲಿ ಶಾಪಿಂಗ್‌ ಮಾಡುವುದರಿಂದ ಮಳಿಗೆಗಳು ರಶ್‌ ಆಗಬಹುದು. ಅಲ್ಲದೇ ಗಡಿಬಿಡಿಯಲ್ಲಿ ನೀವು ಖರೀದಿಸಿದ ಸಾಮಗ್ರಿಗಳು ಮಕ್ಕಳಿಗೆ ಹೊಂದಿಕೆಯಾಗದೇ ಪರದಾಡುವಂತಾಗಬಹುದು. ಹಾಗಾಗಿ ಮೊದಲೇ ಖರೀದಿಸಿ ಇಟ್ಟುಕೊಳ್ಳಿ.

ಸ್ಕೂಲ್‌ ಟೂರ್‌

ನಿಮ್ಮ ಮಗು ಹೋಗುವ ಶಾಲೆಯ ಬಗ್ಗೆ ನಿಮಗೆ ನಿಮ್ಮ ಮನೆಯವರೆಲ್ಲರಿಗೂ ತಿಳಿದಿರಬೇಕು. ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕರಿಗೂ ನಿಮ್ಮ ಮನೆಯವರ ಪರಿಚಯ ಇರಬೇಕು. ಹಾಗಾಗಿ ಸ್ಕೂಲ್‌ ಟೂರ್‌ ಮಾಡುವುದು ಬಹಳ ಅವಶ್ಯ. ಸ್ಕೂಲ್‌ ಟೂರ್‌ನಿಂದ ಮಕ್ಕಳು ಕೂಡ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಇಷ್ಟಪಡುತ್ತಾರೆ.

ಮಕ್ಕಳಿಗೆ ಶಾಲೆಯಲ್ಲಿ ಸುರಕ್ಷತೆಯ ಬಗ್ಗೆ ಪಾಠ ಮಾಡಿ

ಮಕ್ಕಳಿಗೆ ಶಾಲೆ ಶುರುವಾಗುವ ಕೆಲವು ದಿನ ಇರುವಾಗಲೇ ಸುರಕ್ಷತೆಯ ಪಾಠ ಮಾಡಿ. ಶಾಲೆಗೆ ಹೋಗುವಾಗ ಬರುವಾಗ ವಾಹನದಲ್ಲಿ ಹೇಗಿರಬೇಕು, ಇತರ ಮಕ್ಕಳ ಜೊತೆ ಹೇಗಿರಬೇಕು, ಓಡಾಡುವಾಗ ಹೇಗಿರಬೇಕು, ಗುಡ್‌ ಟಚ್‌, ಬ್ಯಾಡ್‌ ಟಚ್‌, ಮಳೆಗಾಲದ ಸುರಕ್ಷತೆ ಈ ಎಲ್ಲದರ ಬಗ್ಗೆ ಪಾಠ ಮಾಡುವುದು ಬಹಳ ಮುಖ್ಯವಾಗುತ್ತದೆ.

ಹೋಮ್‌ವರ್ಕ್‌ಗೆ ಸಿದ್ಧ ಮಾಡಿ

ಶಾಲೆ ಆರಂಭವಾದ ಕೂಡಲೇ ಹೋಮ್‌ವರ್ಕ್‌ ನೀಡುತ್ತಾರೆ. ಆದರೆ ಮಕ್ಕಳು ಅದಕ್ಕೆ ಸಿದ್ಧವಾಗಿರುವುದಿಲ್ಲ. ಹಾಗಾಗಿ ಮನೆಯಲ್ಲೇ ಕೆಲವು ದಿನಗಳ ಕಾಲ ಹೋಮ್‌ ವರ್ಕ್‌ ಕೊಡಿ. ಚಿಕ್ಕ ಚಿಕ್ಕ ಗಣಿತ, ವಿಜ್ಞಾನಕ್ಕೆ ಸಂಬಂಧಿಸಿ ಹೋಮ್‌ವರ್ಕ್‌ ನೀಡಿ ಮಕ್ಕಳನ್ನು ಶಾಲೆ ಆರಂಭಕ್ಕೆ ಸಿದ್ಧಗೊಳಿಸಿ.

ಹೊಸ ಶಿಕ್ಷಕರನ್ನು ಪರಿಚಯಿಸಿ

ಶಾಲೆಗೆ ಹೊಸ ಶಿಕ್ಷಕರು ಬಂದಿದ್ದರೆ ಮೊದಲೇ ಶಾಲೆಗೆ ಕರೆದುಕೊಂಡು ಹೋಗಿ ಮಗುವನ್ನು ಪರಿಚಯಿಸಿ. ಅವರೊಂದಿಗೆ ಆತ್ಮೀಯತೆ ಬೆಳೆಯುವಂತೆ ಮಾಡಿ. ಇಲ್ಲದೇ ಇದ್ದರೆ ಒಂದೇ ಬಾರಿಗೆ ಮಗು ಹೊಸ ಶಿಕ್ಷಕರಿಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದು.

ಪುಸ್ತಕಗಳಿಗೆ ಬೈಂಡ್‌, ಲೇಬಲ್‌ ಅಂಟಿಸುವುದು ಮಾಡಿ

ಶಾಲೆ ಆರಂಭವಾಗಲು ವಾರ ಇರುವಾಗಲೇ ಬ್ಯಾಗ್‌ ಹಾಗೂ ಪುಸ್ತಕಗಳನ್ನು ಖರೀದಿಸಿ ತನ್ನಿ. ಮಾತ್ರವಲ್ಲ ಬೈಂಡ್‌ ಹಾಕುವುದು, ಲೇಬಲ್‌ ಅಂಟಿಸುವುದು ಇಂತಹ ಕೆಲಸಗಳನ್ನು ಮೊದಲೇ ಮಾಡಿ. ಇದರಿಂದ ಮಕ್ಕಳೂ ನೀವು ಅನುಸರಿಸುವ ಶಿಸ್ತನ್ನು ರೂಢಿಸಿಕೊಳ್ಳುತ್ತಾರೆ. ಇದು ಕೊನೆ ಕ್ಷಣದ ಗಡಿಬಿಡಿಯಿಂದ ನಿಮ್ಮನ್ನು ಪಾರು ಮಾಡುತ್ತದೆ.

ಮಳೆಗಾಲಕ್ಕಿರಲಿ ತಯಾರಿ 

ಮಳೆಗಾಲದಲ್ಲಿ ಶಾಲೆಗೆ ಹೋಗುವ ಮಕ್ಕಳು ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಹಾಗಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಮಳೆಗಾಲಕ್ಕೆ ಹೊಂದುವ ಬ್ಯಾಗ್‌, ಬಟ್ಟೆ ಕೊಡಿಸಬೇಕು. ಶೋ, ನೀರಿನ ಬಾಟಲಿ ಕೂಡ ಜೊತೆಯಾಗಲಿ. ಚಿಕ್ಕ ಮಕ್ಕಳಿಗೆ ಛತ್ರಿಗಿಂತ ರೈನ್‌ಕೋಟ್‌ ಬೆಸ್ಟ್‌. ಪುಸ್ತಕಗಳು ಒದ್ದೆಯಾಗದಂತೆ ನೋಡಿಕೊಳ್ಳಲು ವಾಟರ್‌ ಫ್ರೂಪ್‌ ಬ್ಯಾಗ್‌ ಕೊಡಿಸುವುದು ಅವಶ್ಯ. 

ನಿಮ್ಮ ಮಗು ಮರಳಿ ಶಾಲೆಗೆ ಹೋಗಲು ಸಿದ್ಧವಾಗುತ್ತಿದೆ ಎಂದರೆ ಪೋಷಕರು ಈ ಎಲ್ಲಾ ಸಲಹೆಗಳನ್ನು ಪಾಲಿಸಬೇಕು. ಆಗ ಮಾತ್ರ ಮಗು ಮುಂದಿನ ಶೈಕ್ಷಣಿಕ ವರ್ಷದ ಆರಂಭಕ್ಕೆ ಯಶಸ್ವಿಯಾಗಿ ಹೆಜ್ಜೆ ಇಡಲು ಸಾಧ್ಯ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ