ಪರೀಕ್ಷೆಯ ವೇಳೆ ಮಕ್ಕಳೊಂದಿಗೆ ಪೋಷಕರೂ ಸಿದ್ದರಾಗಿ; ಈ ಸಲಹೆಗಳೊಂದಿಗೆ ನಿಮ್ಮ ಮಗುವನ್ನು ಎಕ್ಸಾಮ್ಗೆ ಸಿದ್ಧಪಡಿಸಿ!
Sep 18, 2024 08:00 AM IST
ಪರೀಕ್ಷೆಯ ವೇಳೆ ಪೋಷಕರದ್ದೇ ಪ್ರಮುಖ ಪಾತ್ರ; ಈ ಟಿಪ್ಸ್ನೊಂದಿಗೆ ಮಕ್ಕಳನ್ನು ಎಕ್ಸಾಮ್ಗೆ ಸಿದ್ಧಪಡಿಸಿ
- ಪರೀಕ್ಷೆ ಸಮಯದಲ್ಲಿ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದು ಪೋಷಕರ ಮುಖ್ಯ ಕರ್ತವ್ಯ. ಮಕ್ಕಳನ್ನು ಒತ್ತಡ ಮುಕ್ತವಾಗಿಡಲು ಪೋಷಕರಿಗೆ ಕೆಲವು ಆರೋಗ್ಯಕರ ಮಾರ್ಗಗಳು ಇಲ್ಲಿವೆ.
ಮಕ್ಕಳಿಗೆ ಮಿಡ್ಟರ್ಮ್ ಪರೀಕ್ಷೆಗಳು (ಮಧ್ಯಂತರ ಪರೀಕ್ಷೆ) ಸಮೀಪಿಸುತ್ತಿವೆ. ಹೀಗಾಗಿ ಸಹಜವಾಗೇ ಮಕ್ಕಳಲ್ಲಿ ಒತ್ತಡ, ಆತಂಕ ಹೆಚ್ಚಾಗುವಂತೆ ಮಾಡಿದೆ. ಪೋಷಕರು ಈ ಸಮಯವನ್ನು ಅತ್ಯಂತ ಬುದ್ದಿವಂತಿಕೆಯಿಂದ ನಿಭಾಯಿಸುವುದು ಅಗತ್ಯ. ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕು ಸೇರಿದಂತೆ ಮಕ್ಕಳ ಮೇಲೆ ಒತ್ತಡ ಹೇರದೆ, ಅವರ ಮನಸ್ಸಿನಲ್ಲಿ ಸಕರಾತ್ಮಕ ಭಾವನೆಗಳನ್ನು ತುಂಬಬೇಕು. ಇಲ್ಲಿ ಪೋಷಕರದ್ದೇ ಪ್ರಮುಖ ಪಾತ್ರ ಇರುತ್ತದೆ. ಪರೀಕ್ಷೆಯ ಸಮಯದಲ್ಲಿ ಮಕ್ಕಳನ್ನು ಒತ್ತಡ ಮುಕ್ತವಾಗಿಡಲು ಪೋಷಕರಿಗೆ ಕೆಲವು ಆರೋಗ್ಯಕರ ಮಾರ್ಗಗಳು ಇಲ್ಲಿವೆ.
ಒತ್ತಡ ಮುಕ್ತವಾಗಿರಿ
ಪರೀಕ್ಷೆಗಳು ಮಕ್ಕಳ ಜೊತೆಗೆ ಪೋಷಕರಿಗೂ ಒತ್ತಡ ತರುತ್ತವೆ. ನಮಗೆ ತಿಳಿದಿರುವಂತೆ, ಪೋಷಕರು ಹೇಗೆ ವರ್ತಿಸುತ್ತಾರೆ ಎನ್ನುವುದರ ಮೇಲೆ ಮಕ್ಕಳು ತಮ್ಮ ಓದಿನತ್ತ ಕಾಳಜಿ ವಹಿಸುತ್ತಾರೆ. ಯಾವುದೇ ಬಿಕ್ಕಟ್ಟು, ಘರ್ಷಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮಕ್ಕಳಿಗೆ ತೊಂದರೆ ಉಂಟಾಗದಂತೆ ನಿರ್ವಹಿಸಬೇಕು. ಅಂತಹ ಅವಧಿಯಲ್ಲಿ ಪೋಷಕರು ಮಕ್ಕಳೊಂದಿಗೆ ಶಾಂತವಾಗಿ ಸಂಹವನ ನಡೆಸಬೇಕಿದೆ. ಮಕ್ಕಳನ್ನು ಒತ್ತಡ ಮುಕ್ತರಾಗಿಸಿ ಪರೀಕ್ಷೆಗೆ ಸಿದ್ದಪಡಿಸಬೇಕು.
ಮಕ್ಕಳ ಆತಂಕ ದೂರ ಮಾಡಿ
ನಿಮ್ಮ ಮಗುವಿನ ಆತಂಕವನ್ನು ದೂರ ಮಾಡಬೇಕು. ಸಹಜವಾಗಿ ಮಕ್ಕಳಿಗೆ ಪರೀಕ್ಷೆ ಆತಂಕ ಹೆಚ್ಚುತ್ತದೆ. ಇಂತಹ ವೇಳೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ ಅವರ ಸಮಸ್ಯೆಯನ್ನು ಕಂಡುಕೊಳ್ಳಬೇಕು. ಅವರಿಗೆ ಉತ್ತಮವಾದ ಸಲಹೆಗಳನ್ನು ನೀಡುವ ಮೂಲಕ ಆತಂಕ ಮುಕ್ತರನ್ನಾಗಿಸಬೇಕು. ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಸಹಾಯ ಮಾಡಬೇಕು. ನಕಾರಾತ್ಮಕ ಯೋಚನೆಗಳಿಂದ ಮುಕ್ತರಾಗಬೇಕು.
ಪೌಷ್ಟಿಕ ಆಹಾರವನ್ನೇ ನೀಡಿ
ಮಕ್ಕಳು ಪರೀಕ್ಷೆ ವೇಳೆ ಆರೋಗ್ಯದಿಂದ ಇರಬೇಕು. ಹಾಗಾಗಿ ಅವರಿಗೆ ಪೌಷ್ಠಿಕ ಆಹಾರವನ್ನೇ ನೀಡಬೇಕು. ಇದು ಅವರ ಶಕ್ತಿ ಮತ್ತು ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸುತ್ತದೆ. ಜಂಕ್ ಫುಡ್ನಿಂದ ದೂರ ಉಳಿಯುವಂತೆ ಮಾಡಬೇಕು. ಇದು ಆಯಾಸ ಮತ್ತು ಆಲಸ್ಯಕ್ಕೆ ಕಾರಣವಾಗುತ್ತದೆ. ಆರೋಗ್ಯವನ್ನೂ ಹದಗೆಡುವಂತೆ ಮಾಡುತ್ತದೆ.
ಪ್ರಕ್ರಿಯೆಯ ಮೇಲೆ ಗಮನ ಕೇಂದ್ರೀಕರಿಸಿ
ನೀನು ಉತ್ತಮ ಸ್ಕೋರ್ ಮಾಡಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಫಲಿತಾಂಶಕ್ಕಿಂತ ಅವರ ಕಲಿಕೆಯ ಮೇಲೆ ಕೇಂದ್ರೀಕರಿಸಿ. ಅಧ್ಯಯನಕ್ಕೆ ಬೇಕಾದ ನೆರವು ನೀಡಿ. ನಿಮ್ಮ ಮಗು ಅಪಾರ ಸಾಮರ್ಥ್ಯ ಹೊಂದಿರುತ್ತದೆ. ಹೀಗಾಗಿ ಅಂಕಗಳ ಮಾತೆತ್ತದೆ, ಮಕ್ಕಳ ಪ್ರಕ್ರಿಯೆಯ ಮೇಲೆ ಗಮನ ಹರಿಸುವಂತೆ ನೋಡಿಕೊಳ್ಳಬೇಕು.
ಸಕಾರಾತ್ಮಕ ಮಾತುಗಳ ಮೂಲಕ ಪ್ರೋತ್ಸಾಹಿಸಿ
ಪರೀಕ್ಷೆಯ ಸಮಯವು ಮಕ್ಕಳಲ್ಲಿ ಅಸಮರ್ಪಕತೆಯ ಭಾವನೆಗಳಿಗೆ ಕಾರಣವಾಗುತ್ತದೆ. ಮಕ್ಕಳು ತಮ್ಮನ್ನೇ ತಾವು ಕೀಳಾಗಿ ನೋಡುವ ಸಂದರ್ಭಗಳು ಎದುರಾಗುತ್ತವೆ. ತಮ್ಮನ್ನು ಸಹಪಾಠಿಗಳೊಂದಿಗೆ ಹೋಲಿಸಿಕೊಂಡು ತಮ್ಮನ್ನು ತಾವೇ ಕೆಳಗೆ ಹೋಗುತ್ತಾರೆ. ಹಾಗಾಗಿ ಪೋಷಕರು ಸಕಾರಾತ್ಮಕ ಪ್ರೋತ್ಸಾಹಿಸಬೇಕು. ತನ್ನ ಸಾಮರ್ಥ್ಯ ಏನೆಂಬುದನ್ನು ಮಕ್ಕಳಿಗೆ ನೆನಪಿಸುವುದು ಪ್ರಮುಖವಾಗಿದೆ.
ಹೋಲಿಕೆಯಿಂದ ದೂರವಿರಿ
ಆ ಮಗು ಹಾಗೆ ಓದುತ್ತೆ, ನೀನು ಓದೋದಿಲ್ಲ ಎಂದು ತಮ್ಮ ಮಕ್ಕಳನ್ನು ಇನ್ನೊಂದು ಮಗುವಿನೊಂದಿಗೆ ಯಾವುದೇ ಕಾರಣಕ್ಕೂ ಹೋಲಿಕೆ ಮಾಡಬೇಡಿ. ಇದು ಮಕ್ಕಳನ್ನು ಒತ್ತಡ ಹೆಚ್ಚಿಸುವಂತೆ ಮಾಡುತ್ತದೆ. ಇನ್ನೊಬ್ಬರೊಂದಿಗೆ ಹೋಲಿಸಿದರೆ ತಮ್ಮ ಮಗುವನ್ನು ತಾವೇ ಕುಗ್ಗಿಸಿದಂತಾಗುತ್ತದೆ. ಈ ಒತ್ತಡಕ್ಕೆ ಒಳಗಾಗಿ ಪರೀಕ್ಷೆಗೆ ಸರಿಯಾಗಿ ಸಿದ್ದತೆ ನಡೆಸುವುದಿಲ್ಲ. ಪೋಷಕರು ಎಚ್ಚರಿಕೆಯಿಂದ ಇರಬೇಕು.
ವ್ಯಾಯಾಮ ಹೇಳಿಕೊಡಿ
ಮಕ್ಕಳಿಗೆ ಆತಂಕ ಮತ್ತು ಒತ್ತಡ ದೂರ ಮಾಡಲು ಯೋಗ ಮತ್ತು ಧ್ಯಾನ, ವ್ಯಾಯಾಮ ಹೇಳಿಕೊಡಿ. ಅಲ್ಲದೆ, ಉಸಿರಾಟದ ತಂತ್ರಗಳನ್ನು ಹೇಳಿಕೊಡಬೇಕು. ಇದು ಮಕ್ಕಳ ಆರೋಗ್ಯದ ಜೊತೆಗೆ ಸಕಾರಾತ್ಮಕ ಭಾವನೆಯನ್ನೂ ಉಂಟು ಮಾಡುತ್ತದೆ. ನೆನಪಿನ ಶಕ್ತಿಯನ್ನೂ ಹೆಚ್ಚಿಸುತ್ತದೆ.