logo
ಕನ್ನಡ ಸುದ್ದಿ  /  ಜೀವನಶೈಲಿ  /  Explainer: ಮೆಟ್ರೊದಲ್ಲಿ ಲೈಂಗಿಕ ಕಿರುಕುಳ; ಗುಡ್‌ ಟಚ್‌ ಬ್ಯಾಡ್‌ ಟಚ್‌ ಅರಿತುಕೊಳ್ಳಲು ಸಕಾಲ, ಇದನ್ನು ಮಕ್ಕಳಿಗೆ ಅರ್ಥ ಮಾಡಿಸೋದು ಹೇಗೆ?

Explainer: ಮೆಟ್ರೊದಲ್ಲಿ ಲೈಂಗಿಕ ಕಿರುಕುಳ; ಗುಡ್‌ ಟಚ್‌ ಬ್ಯಾಡ್‌ ಟಚ್‌ ಅರಿತುಕೊಳ್ಳಲು ಸಕಾಲ, ಇದನ್ನು ಮಕ್ಕಳಿಗೆ ಅರ್ಥ ಮಾಡಿಸೋದು ಹೇಗೆ?

Praveen Chandra B HT Kannada

Nov 22, 2023 05:30 PM IST

google News

Explainer: ಮೆಟ್ರೋದಲ್ಲಿ ಲೈಂಗಿಕ ಕಿರುಕುಳ, ಗುಡ್‌ ಟಚ್‌ ಬ್ಯಾಡ್‌ ಟಚ್‌ ತಿಳಿಯಲು ಸಕಾಲ

    • Good touch bad touch Explained: ಬೆಂಗಳೂರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವತಿಯೊಬ್ಬರಿಗೆ ಬ್ಯಾಡ್‌ ಟಚ್‌ ಲೈಂಗಿಕ ದೌರ್ಜನ್ಯದ ಅನುಭವವಾಗಿದೆ. ಬಸ್‌ಗಳಲ್ಲಿ, ಮೆಟ್ರೋಗಳಲ್ಲಿ ಎಲ್ಲಿ ಬೇಕಾದರೂ ಇಂತಹ ಘಟನೆಗಳು ಜರುಗಬಹುದು. ಗುಡ್‌ ಟಚ್‌ ಎಂದರೇನು? ಬ್ಯಾಡ್‌ ಟಚ್‌ ಎಂದರೇನು? ಎಂದು ಮಕ್ಕಳಿಗೆ ತಿಳಿಸುವುದು ಅಗತ್ಯವಾಗಿದೆ.
Explainer: ಮೆಟ್ರೋದಲ್ಲಿ ಲೈಂಗಿಕ ಕಿರುಕುಳ, ಗುಡ್‌ ಟಚ್‌ ಬ್ಯಾಡ್‌ ಟಚ್‌ ತಿಳಿಯಲು ಸಕಾಲ
Explainer: ಮೆಟ್ರೋದಲ್ಲಿ ಲೈಂಗಿಕ ಕಿರುಕುಳ, ಗುಡ್‌ ಟಚ್‌ ಬ್ಯಾಡ್‌ ಟಚ್‌ ತಿಳಿಯಲು ಸಕಾಲ

ಇತ್ತೀಚೆಗೆ ಬೆಂಗಳೂರು ಮೆಟ್ರೋ ರೈಲಿನಲ್ಲಿ ಯುವತಿಯೊರ್ವರಿಗೆ ಬ್ಯಾಡ್‌ ಟಚ್‌ ಲೈಂಗಿಕ ದೌರ್ಜನ್ಯವಾಗಿದೆ. ಬೆಳಗ್ಗೆ 8.30 ಗಂಟೆಯ ವೇಳೆ ಜನಜುಂಗುಳಿಯ ಮೆಜೆಸ್ಟಿಕ್‌ ಮೆಟ್ರೋದಲ್ಲಿ ಕಾಲೇಜು ಯುವತಿಗೆ ಇಂತಹ ಕೆಟ್ಟ ಅನುಭವವಾಗಿದೆ. ವರದಿಗಳ ಪ್ರಕಾರ ಮೆಟ್ರೋ ರೈಲಿನೊಳಗೆ ಕೆಂಪು ಅಂಗಿ ಧರಿಸಿದ ವ್ಯಕ್ತಿಯೊಬ್ಬ ಈ ವಿದ್ಯಾರ್ಥಿನಿಯನ್ನು ಹಿಂದಿನಿಂದ ಸ್ಪರ್ಶಿಸಿದ್ದಾನೆ. ಮೊದಲಿಗೆ ಇದು ಜನಜಂಗುಳಿಯ ಸಾಮಾನ್ಯ ಘಟನೆ ಎಂದುಕೊಂಡರೂ ಬಳಿಕ ಈಕೆಗೆ ಇದು ಬ್ಯಾಡ್‌ ಟಚ್‌ ಎಂದು ಅರಿವಾಗಿದೆ. ಜತೆಗೆ, ಆತ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಇದೇ ರೀತಿ ಇದಕ್ಕೂ ಮೊದಲು ಇಂತಹ ಘಟನೆಗಳೂ ನಡೆದಿದ್ದವು. ಸೆಪ್ಟೆಂಬರ್‌ ತಿಂಗಳಿನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಕಬ್ಬನ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ಗೆ ದೂರು ನೀಡಿದ್ದಳು. ಮೆಟ್ರೋ ರೈಲಿನಲ್ಲಿ ನಿಂತಿರುವಾಗ ಹಿಂದಿನಿಂದ ವ್ಯಕ್ತಿಯೊಬ್ಬ ಖಾಸಗಿ ಭಾಗ ತಾಗಿಸಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ದೂರು ದಾಖಲಿಸಲಾಗಿತ್ತು.

ಇದು ಮೆಟ್ರೋಗೆ ಸೀಮಿತವಾದ ಕಥೆಯಲ್ಲ. ಜನದಟ್ಟಣೆ ಇರುವ ಬಸ್‌ಗಳಲ್ಲಿಯೂ ಇಂತಹ ಘಟನೆ ನಡೆಯಬಹುದು. ಜನಜಂಗುಲಿ ಇರುವ ಪ್ರದೇಶಗಳಲ್ಲಿ ನಡೆಯಬಹುದು. ಮನೆಯೊಳಗೆ, ಶಾಲೆ ಕಾಲೇಜುಗಳಲ್ಲಿ ನಡೆಯಬಹುದು. ಎಲ್ಲಿ ಬೇಕಾದರೂ ಈ ರೀತಿ ದೌರ್ಜನ್ಯ, ಬ್ಯಾಡ್‌ ಟಚ್‌ ಘಟನೆಗಳು ನಡೆಯಬಹುದು. ಕೆಲವೊಂದು ಹೆಣ್ಣು ಮಕ್ಕಳು ಇಂತಹ ಘಟನೆಗಳು ನಡೆದಾಗ ಇದು ಬ್ಯಾಡ್‌ ಟಚ್‌ ಎಂದು ತಿಳಿದುಕೊಂಡು ತಕ್ಷಣ ದೂರು ದಾಖಲಿಸುತ್ತಾರೆ ಅಥವಾ ಸಂಬಂಧಪಟ್ಟವರಿಗೆ ತಿಳಿಸುತ್ತಾರೆ. ಆದರೆ, ಕೆಲವರು ಮರ್ಯಾದೆಗೆ ಅಂಜಿ ಇಂತಹ ದೌರ್ಜನ್ಯಗಳನ್ನು ಸಹಿಸಿಕೊಳ್ಳುತ್ತಾರೆ. ಇಂತಹ ಸಹಿಸುವ ವರ್ತನೆಯೇ ಇಂತಹ ದುರ್ವರ್ತನೆ ತೋರುವವರಿಗೆ ವರವಾಗುತ್ತಿದೆ.

ಬ್ಯಾಡ್‌ ಟಚ್‌ ಎನ್ನುವುದು ಕೇವಲ ಇಂತಹ ಘಟನೆಗೆ ಸೀಮಿತವಾಗಿಲ್ಲ. ಪುಟಾಣಿ ಮಕ್ಕಳ ಮೇಲೆ ಇಂತಹ ದೌರ್ಜನ್ಯ ನಡೆಯಬಹುದು. ಹೆಣ್ಣು ಮಕ್ಕಳು ಮಾತ್ರವಲ್ಲದೆ ಗಂಡು ಮಕ್ಕಳ ಮೇಲೂ ಇಂತಹ ದೌರ್ಜನ್ಯ ನಡೆಯಬಹುದು. ಇದೇ ಕಾರಣಕ್ಕೆ ಮಕ್ಕಳಿಗೆ ಯಾವುದು ಗುಡ್‌ ಟಚ್‌ ಮತ್ತು ಯಾವುದು ಬ್ಯಾಡ್‌ ಟಚ್‌ ಎಂದು ಕಲಿಸಲು ಎಲ್ಲರೂ ಆದ್ಯತೆ ನೀಡುತ್ತಾರೆ. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಮಕ್ಕಳ ಫೋಟೊ ಹಂಚಿಕೊಳ್ಳುವಿರಾ, ಗುರುತಿನ ದುರುಪಯೋಗದ ಆತಂಕ

ಒಳ್ಳೆಯ ಸ್ಪರ್ಶ- ಕೆಟ್ಟ ಸ್ಪರ್ಶದ ಕುರಿತು ಅರಿವು

ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳಿಂದಾಗಿ ಈಗ ಪರಿಚಿತ ಹೆಣ್ಣು ಮಕ್ಕಳನ್ನು ಮುಟ್ಟಲು ಭಯವಾಗುತ್ತದೆ ಎಂದು ಕೆಲವರು ಹೇಳಬಹುದು. ಪುಟ್ಟ ಹೆಣ್ಣು ಮಗುವಿಗೆ ಪ್ರೀತಿಯಿಂದ ಒಂದು ಮುತ್ತು ನೀಡಲು ಭಯ ಪಡಬಹುದು. ಗುಡ್‌ ಟಚ್‌ ಮತ್ತು ಬ್ಯಾಡ್‌ ಟಚ್‌ ಕುರಿತು ತಿಳಿದುಕೊಂಡಾಗ ಇಂತಹ ಭಯ ಪಡುವ ಅಗತ್ಯವಿರುವುದಿಲ್ಲ. ಜತೆಗೆ ಹೆಚ್ಚು ಆತ್ಮೀಯರಲ್ಲದ ಮಕ್ಕಳನ್ನು ಸ್ಪರ್ಶಿಸುವುದು ಒಳ್ಳೆಯದಲ್ಲ. ವಯಸ್ಸಾದ ಹಿರಿಯರು ಕೂಡ ಇಂತಹ ಬ್ಯಾಡ್‌ ಟಚ್‌ ಆರೋಪಿಗಳಾಗಿ ಸಿಕ್ಕಿಬಿದ್ದ ಘಟನೆಗಳು ನಡೆದಿವೆ. ಮಕ್ಕಳಿಗೆ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಕುರಿತು ತಿಳಿಸಿಕೊಡುವುದು ಇಂದಿನ ಅಗತ್ಯವಾಗಿದೆ.

ಗುಡ್‌ ಟಚ್‌ ಎಂದರೇನು?

ನಿಮ್ಮ ಮಕ್ಕಳಿಗೆ ವಿವಿಧ ಬಗೆಯ ಟಚ್‌ಗಳ ಕುರಿತು ತಿಳಿಸಿ. ನಿಮ್ಮನ್ನು ಯಾರಾರೂ ಮುಟ್ಟಿದರೆ ಯಾವುದು ಗುಡ್‌ ಟಚ್‌, ಯಾವುದು ಬ್ಯಾಡ್‌ ಟಚ್‌ ಎಂದು ತಿಳಿದುಕೊಳ್ಳಲು ತಿಳಿಸಿ. ಮಗುವಿಗೆ ಯಾವುದೇ ಕಿರಿಕಿರಿ ಅನಿಸದೆ ಇರುವ ಸ್ಪರ್ಶವನ್ನು ಗುಡ್‌ ಟಚ್‌ ಎನ್ನಬಹುದು. ಆತ್ಮೀಯ ಕಾಳಜಿ, ಪ್ರೀತಿ ಇರುವ ಸ್ಪರ್ಶವನ್ನು ಗುಡ್‌ ಟಚ್‌ ಎನ್ನಲಾಗುತ್ತದೆ. ಇದು ಮಕ್ಕಳಿಗೆ ಸುರಕ್ಷತೆ ಮತ್ತು ಭದ್ರತೆಯ ಭಾವ ನೀಡುತ್ತದೆ. ಆತ್ಮೀಯರು ಅಪ್ಪಿಕೊಂಡರೆ, ಮುದ್ದು ಮಾಡಿದರೆ ಮಕ್ಕಳಿಗೆ ಗುಡ್‌ ಟಚ್‌ ಫೀಲ್‌ ನೀಡುತ್ತದೆ. ದೇಹದ ಯಾವ ಭಾಗ ಮುಟ್ಟಿದರೆ ಅದು ಗುಡ್‌ ಟಚ್‌ ಎಂದು ಮಕ್ಕಳಿಗೆ ತಿಳಿಸಿ. ಯಾವ ಭಾಗವನ್ನು ಉದ್ದೇಶಪೂರ್ವಕವಾಗಿ ಮುಟ್ಟಬಾರದು ಎನ್ನುವುದನ್ನೂ ಮಕ್ಕಳಿಗೆ ತಿಳಿಸಿ. ನಿಮಗೆ ಯಾರಾದರೂ ನಿಮ್ಮ ದೇಹದ ಕೆಲವು ಭಾಗ ಮುಟ್ಟಿದಾಗ ಕಿರಿಕಿರಿಯಾದರೆ ತಕ್ಷಣ ತಿಳಿಸಿ ಎಂದು ಅವರಿಗೆ ಹೇಳಿರಿ.

ಬ್ಯಾಡ್‌ ಟಚ್‌ ಎಂದರೇನು?

ನಮ್ಮ ಮಗು ಇನ್ನೂ ಚಿಕ್ಕದು ಈಗಲೇ ಇದೆಲ್ಲ ಹೇಳಿಕೊಡಬೇಕ ಎಂದುಕೊಳ್ಳಬೇಡಿ. ನಾಲ್ಕೈದು ವರ್ಷದ ಮಕ್ಕಳು ಕೂಡ ಇದನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮ ದೇಹದ ಈ ಭಾಗವನ್ನು ಯಾರಾದರೂ ಮುಟ್ಟಬಾರದು ಎಂದು ಮಕ್ಕಳಿಗೆ ತಿಳಿಸಿ. ಜನನಾಂಗ, ಪೃಷ್ಠದ ಭಾಗಗಳನ್ನು ಬೇರೆಯವರು ಮುಟ್ಟಬಾರದು ಎಂದು ತಿಳಿಸಿ. ಇದೇ ರೀತಿ, ಎದೆ ಭಾಗ, ತುಟಿ ಇತ್ಯಾದಿ ಭಾಗಗಳನ್ನು ಬೇಕೆಂದೇ, ಕೆಟ್ಟದಾಗಿ ಮುಟ್ಟಬಾರದು. ಈ ರೀತಿ ನಿಮಗೆ ಕಿರಿಕಿರಿಯಾಗುವಂತೆ ಮುಟ್ಟಿದರೆ ತಕ್ಷಣ ಪ್ರತಿಕ್ರಿಯೆ ನೀಡಿ ಎಂದು ಮಕ್ಕಳಿಗೆ ಅರ್ಥವಾಗುವಂತೆ ಅವರ ಭಾಷೆಯಲ್ಲಿಯೇ ತಿಳಿಸಿ.

ಈ ರೀತಿ ಯಾರಾದರೂ ಬ್ಯಾಡ್‌ ಟಚ್‌ ಮಾಡಿದಾಗ ತಕ್ಷಣ ಪಾರಾಗಲು ಪ್ರಯತ್ನಿಸಬೇಕು ಎಂದು ತಿಳಿಸಿ. ಶಾಲೆಯಲ್ಲಿ ಇಂತಹ ಅನುಭವ ಆದಾಗ ಶಿಕ್ಷಕ/ಶಿಕ್ಷಕಿಯರಿಗೆ ತಿಳಿಸಬಹುದು. ಇಂತಹ ಘಟನೆಗಳು ನಡೆದರೆ ಮನೆಯಲ್ಲಿ ಬಂದು ವಿಷಯ ತಿಳಿಸಬೇಕೆಂದು ತಿಳಿಸಿ. ಕೆಲವೊಮ್ಮೆ ಮಕ್ಕಳು ಎಲ್ಲವನ್ನೂ ಹೇಳಿಕೊಳ್ಳುವುದಿಲ್ಲ. ಮಕ್ಕಳ ವರ್ತನೆ ಬೇರೆ ರೀತಿ ಇದ್ದಾಗ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಏನು ಸಮಸ್ಯೆಯಿದೆ ಎಂದು ತಿಳಿದುಕೊಳ್ಳಿ.

ಈಜುಡುಗೆ ನಿಯಮಗಳ ಕುರಿತು ತಿಳಿಸಿ

ಸಣ್ಣ ಮಕ್ಕಳಿಗೆ ಈಜು ಕಲಿಸುವ ಸಂದರ್ಭದಲ್ಲೂ ಗುಡ್‌ ಮತ್ತು ಬ್ಯಾಡ್‌ ಟಚ್‌ಗಳ ಅರಿವಿರಬೇಕು. ಈಜುಡುಗೆಯಲ್ಲಿ ಅಥವಾ ಒಳಉಡುಪಿನಲ್ಲಿ ಕವರ್‌ ಆಗುವಂತಹ ಭಾಗಗಳು ಖಾಸಗಿ ಭಾಗಗಳಾಗಿದ್ದು, ಇದನ್ನು ಇತರರು ಬಲವಂತವಾಗಿ ನೋಡುವುದು, ಮುಟ್ಟುವುದು ಮಾಡಬಾರದು, ಈ ರೀತಿ ಮಾಡಿದರೆ ತಕ್ಷಣ ಅದನ್ನು ಬ್ಯಾಡ್‌ ಟಚ್‌ ಎಂದು ತಿಳಿಯಬೇಕು ಎಂದು ಮಕ್ಕಳಿಗೆ ತಿಳಿಸಿಹೇಳಿ. ಕೆಲವೊಮ್ಮೆ ಲೈಂಗಿಕ ದೌರ್ಜನ್ಯ ಇತ್ಯಾದಿ ಘಟನೆಗಳಾದಗ ಸಂಬಂಧಪಟ್ಟವರಿಗೆ ತಿಳಿಸಲು ಯಾವುದೇ ನಾಚಿಕೆ ಪಡಬಾರದು ಎಂದು ತಿಳಿಸಿ. ಮಕ್ಕಳಿಗೆ ತಮ್ಮ ದೇಹದ ಮಹತ್ವವನ್ನು ತಿಳಿಸಬೇಕು. ಯಾರಾದರೂ ಟಚ್‌ ಮಾಡಿದರೆ ಗಟ್ಟಿ ಧ್ವನಿಯಲ್ಲಿ ನೋ ಎಂದು ಹೇಳಲು ತಿಳಿಸಿ. ಬ್ಯಾಡ್‌ಟಚ್‌ ಆದಾಗ ಪಾರಾಗಲು, ಮರು ದಾಳಿ ನಡೆಸಲು ಮಕ್ಕಳಿಗೆ ತಿಳಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ