ಟೂರ್ ಎಂಜಾಯ್ ಮಾಡುವ ಆಸೆ ಇರುವವರಿಗೆ ಅರ್ಥ ಮಾಡಿಕೊಳ್ಳಲೇಬೇಕಾದ 10 ಅಂಶಗಳು: ಹೀಗೆ ಮಾಡಿದ್ರೆ ನಿಮಗೂ ಖುಷಿ, ಜೊತೆಗೆ ಬಂದವರಿಗೂ ನೆಮ್ಮದಿ
May 16, 2024 02:21 PM IST
ಭವ್ಯಾ ವಿಶ್ವನಾಥ್ ಅವರ ಅಂಕಣ ಮನದ ಮಾತು
- ಫ್ರೆಂಡ್ಸ್ ಅಥವಾ ಫ್ಯಾಮಿಲಿ ಜೊತೆ ಖುಷಿಯಾಗಿ ಕಾಲ ಕಳೆಯಬೇಕು ಅಂತ ಹಲವರು ಟೂರ್ ಹೊರಡುತ್ತಾರೆ. ಆದರೆ ಅಲ್ಲಿಯೂ ಒಮ್ಮೊಮ್ಮೆ ಮನಸ್ತಾಪಗಳಾಗಿ ಯಾಕಾದ್ರೂ ಟೂರ್‌ಗೆ ಬಂದೆವೋ ಎಂದು ಪರಿತಪಿಸುತ್ತಾರೆ. ಪ್ರವಾಸದ ಮೋಜು ಉಳಿಯಲು, ನೆಮ್ಮದಿ ಕಾಪಾಡಿಕೊಳ್ಳಲು ನೀವು ಅನುಸರಿಸಬಹುದಾದ 10 ಟಿಪ್ಸ್ ಇಲ್ಲಿದೆ.
ಪ್ರಶ್ನೆ: ಬೇಸಿಗೆ ರಜೆಯಲ್ಲಿ ಕುಟುಂಬ ಸಮೇತ ಮಕ್ಕಳೊಡನೆ ಪ್ರವಾಸಕ್ಕೆ ಹೋಗುವುದು ಮನೆಮಂದಿಗೆಲ್ಲ ಸಂತೋಷ ಮತ್ತು ಉತ್ಸಾಹದ ವಿಚಾರ. ಆದರೆ, ಕೆಲವೊಮ್ಮೆ ಪ್ರವಾಸದಲ್ಲಿ ಎಂಜಾಯ್‌ಮೆಂಟ್ ಬದಲಿಗೆ ಕದನ ಮನಸ್ತಾಪಗಳೇ ಹೆಚ್ಚಾಗುತ್ತವೆ. ವಾಪಸ್ ಬಂದರೆ ಸಾಕಪ್ಪ ಸಾಕು ಅನ್ನಿಸಿಬಿಡುತ್ತದೆ. ಆದರೆ, ಸ್ನೇಹಿತರೊಡನೆ ಪ್ರವಾಸಕ್ಕೆ ಹೋದಾಗ ಹೆಚ್ಚು ಸಂತೋಷ, ಮಜ, ಮೋಜು ಹಾಗೂ ಮನರಂಜನೆ ಎನ್ನಿಸುತ್ತದೆ. ಯಾಕೆ ಹೀಗೆ?
ಉತ್ತರ: ಈ ಪ್ರಶ್ನೆಗೆ ಉತ್ತರ ತಿಳಿಯುವ ಮೊದಲು ಕುಟುಂಬ ಸಮೇತ ಪ್ರವಾಸಕ್ಕೆ ಹೋಗುವ ಮುನ್ನ ಮಾನಸಿಕ ಸಿದ್ಧತೆ ಹೇಗಿರಬೇಕೆಂದು ತಿಳಿಯೋಣ ಬನ್ನಿ.
1) ಗುರಿ ಮತ್ತು ಯೋಜನೆ (planning): ಪ್ರವಾಸವನ್ನು ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಕುಳಿತು ಯೋಜನೆ ರೂಪಿಸಿಕೊಳ್ಳಿ. ನೀವು ಹೊರಟಿರುವ ಪ್ರವಾಸದ ಗುರಿಯ ಕಡೆ ಹೆಚ್ಚು ಗಮನವಿರಲಿ. ತಲುಪುವ ಮೊದಲು ಅಥವಾ ಹಿಂದಿರುಗುವಾಗ ಯಾವುದಾದರು ಸಣ್ಣಪುಟ್ಟ ಎಡವಟ್ಟುಗಳು, ಕಿರಿಕಿರಿ ಎದುರಾದರೆ ತಲೆಕೆಡಿಸಿಕೊಳ್ಳುವುದು, ವಿಪರೀತ ಎನ್ನುವಂತೆ ಪ್ರತಿಕ್ರಿಯಿಸುವುದನ್ನು ಕಡಿಮೆ ಮಾಡಿ. ಇದರಿಂದ ಇಡೀ ಪ್ರವಾಸದ ಮಜವೇ ವ್ಯರ್ಥವಾಗುತ್ತದೆ.
2) ನೀರಸ (boring) ಕ್ಷಣಗಳಿಗೆ ಸಿದ್ಧರಾಗಿ: ಪ್ರವಾಸವು ಮನಸ್ಸಿಗೆ ಎಷ್ಟು ಉಲ್ಲಾಸ ತಂದುಕೊಡುತ್ತದೆಯೋ, ಕೆಲವೊಮ್ಮೆ ನೀರಸವನ್ನೂ ಉಂಟುಮಾಡುತ್ತದೆ. ವಿಮಾನ, ಕಾರು, ರೈಲು ಅಥವಾ ಬಸ್ಸಿನಲ್ಲಿ ಮಾಡುವ ಪ್ರಯಾಣಗಳು ಕೆಲವೊಮ್ಮೆ ನೀರಸವಾಗುತ್ತವೆ. ಪ್ರವಾಸಿ ತಂಗುದಾಣಗಳಲ್ಲೂ ಕೂಡ ಸಹ ಕೆಲವೊಮ್ಮೆ ಬೋರ್ ಆಗಬಹುದು. ಈ ಕ್ಷಣಗಳಿಗೆ ಮುಂಚಿತವಾಗಿಯೇ ಮಾನಸಿಕ ಸಿದ್ಧತೆ ಮಾಡಿಕೊಳ್ಳಿ. ಆಗ ಕಿರಿಕಿರಿ ಅಥವಾ ಮೂಡ್ ಆಫ್ ಆಗುವುದಿಲ್ಲ. ಪುಸ್ತಕ, ಕಾರ್ಡ್ಸ್, ಅಂತ್ಯಾಕ್ಷರಿ ಥರದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
3) ಮೊಬೈಲ್, ಟ್ಯಾಬ್, ಟಿವಿ: ಪ್ರವಾಸದ ಸಂದರ್ಭದಲ್ಲಿ ಸ್ಕ್ರೀನ್ ಸಮಯ ಕಡಿಮೆ ಆದಷ್ಚು ಒಳ್ಳೆಯದು. ವಿರಾಮದ ಸಮಯವನ್ನು ಸಾಧ್ಯವಾದಷ್ಟೂ ಪ್ರಕೃತಿಯೊಡನೆ, ಮಕ್ಕಳು, ಸಂಗಾತಿ ಮತ್ತು ಪೋಷಕರೊಡನೆ ಕಳೆಯಿರಿ. ಇದರಿಂದ ಸಂಬಧಗಳು ಬೆಸೆಯುತ್ತವೆ. ಸಹಿ ನೆನಪುಗಳಾಗಿ ಉಳಿಯುತ್ತವೆ.
4) ಉದ್ಯೋಗ ಅಥವಾ ಕೌಟುಂಬಿಕ ಸಮಸ್ಯೆ: ಪ್ರವಾಸದ ವೇಳೆಯಲ್ಲಿ ಕೌಟುಂಬಿಕ ಅಥವಾ ಉದ್ಯೋಗದ ಸಮಸ್ಯೆಗಳನ್ನು ಕುರಿತು ಹೆಚ್ಚು ಆಲೋಚನೆ ಮಾಡದಿರಿ. ಕೆಲವು ಕುಟುಂಬದಲ್ಲಿ ಗಂಡ ಹೆಂಡತಿಯ ಮಧ್ಯೆ ಸಮಸ್ಯೆಯ ಬಗ್ಗೆ ಪ್ರವಾಸದ ಸಂದರ್ಭದಲ್ಲಿ ಚರ್ಚೆಗಳಾಗಿ ಅಲ್ಲಿಯೇ ಜಗಳಗಳೂ ಆಗುವುದುಂಟು. ಇದರಿಂದ ಮಕ್ಕಳಿಗೆ ಹಾಗೂ ಉಳಿದ ಸದಸ್ಯರಿಗೂ ಬೇಸರವಾಗಿ ಪ್ರವಾಸವನ್ನು ಎಂಜಾಯ್ ಮಾಡಲು ಸಾಧ್ಯವಾಗುವುದಿಲ್ಲ. ಮನೆಗೆ ಹಿಂದಿರುಗಿದ ಮೇಲೆ ಪ್ರವಾಸದ ಕಹಿ ನೆನಪುಗಳು ಶಾಶ್ವತವಾಗಿ ಉಳಿಯುತ್ತವೆ. ಮತ್ತೊಮ್ಮೆ ಒಟ್ಟಿಗೆ ಪ್ರವಾಸಕ್ಕೆ ಹೋಗಲು ಮನೆಯ ಸದಸ್ಯರಿಗೆ ಇಷ್ಟವಾಗದಿರಬಹುದು.
5) ಸ್ವಯಂ ಕೇಂದ್ರಿಕೃತ: ಟ್ರಿಪ್‌ಗಳಿಗೆ ಹೋದಾಗ ಯಾರಾದರೂ ಒಬ್ಬರು ಅತಿಯಾಗಿ ತನ್ನ ಮೇಲೆಯೇ ಕೇಂದ್ರಿಕೃತವಾಗಿ ಯೋಚಿಸಲು ಆರಂಭಿಸಿದರೆ ಮುಜುಗರ ಅಥವಾ ಬೇಸರವಾಗಬಹುದು. ಉದಾ: ನನಗೆ ಮೊದಲ ಆದ್ಯತೆ ನೀಡಬೇಕು. ನನಗೆ ಇಷ್ಟವಾದ ಸ್ಥಳಕ್ಕೆ ಮೊದಲು ಹೋಗಬೇಕು. ನಾನು ಹೇಳಿವುದನ್ನೇ ಎಲ್ಲರೂ ಪಾಲಿಸಬೇಕು... ಇತ್ಯಾದಿ. ಈ ಥರದ ವರ್ತನೆಗಳು ತಪ್ಪು.
6) ಅತಿಯಾದ ನಿರೀಕ್ಷೆ: ಕೆಲವರಿಗೆ ಪ್ರಯಾಣಕ್ಕೆ ಹೋದಾಗ ಅತಿಯಾದ ನಿರೀಕ್ಷೆಗಳಿರುತ್ತವೆ. ಹೊಂದಿಕೊಂಡು ಹೋಗುವ ಮನಸ್ಥಿತಿಯಿದ್ದರೆ (adjustment) ಹಿತಕರವಾದ ವಾತಾವರಣ ರೂಪುಗೊಳ್ಳುತ್ತದೆ. ಸಣ್ಣಪುಟ್ಟ ವಿಚಾರಗಳು ಅಂದುಕೊಂಡಂತೆ ಆಗದಿದ್ದರೆ ಸದ್ಯದಲ್ಲಿ ಏನಿದೆಯೋ ಅದಕ್ಕೆ ಹೊಂದಿಕೊಂಡು ಹೋಗಬೇಕು. ಆಗ ಮನಸ್ಸು ಸಹ ನೆಮ್ಮದಿಯಾಗಿರುತ್ತದೆ.
7) ನಿಂದನೆ ಮತ್ತು ಅತಿ ವ್ಯಂಗ್ಯ: ಬೇರೆಯವರಲ್ಲಿ ಸಣ್ಣಪುಟ್ಟ ತಪ್ಪು ಕಂಡುಹಿಡಿದು ನಿಂದಿಸುವುದು ಮತ್ತು ಹೀಯಾಳಿಸುವುದು ಮನಸ್ತಾಪಗಳನ್ನು ಉಂಟು ಮಾಡಬಹುದು. ಪೋಷಕರು ಮಕ್ಕಳನ್ನು ನಿಂದಿಸುವುದು ಅಥವಾ ಗಂಡ ಮತ್ತು ಹೆಂಡತಿಯ ನಡುವೆ ನಿಂದನೆ, ಹೀಯಾಳಿಕೆಯ ಮಾತುಗಳನ್ನು ತಡೆಯುವುದು ಉತ್ತಮ. ಹಾಗೆಯೇ, ಕೆಲವರಿಗೆ ಜೊತೆಯಲ್ಲಿದ್ದವರನ್ನು ಅತಿಯಾಗಿ 'ಕಾಲು ಎಳೆಯುವ' (ವ್ಯಂಗ್ಯವಾಡುವ) ಅಭ್ಯಾಸವಿರುತ್ತದೆ. ಸಲಿಗೆ, ಹಾಸ್ಯದ ಸಲುವಾಗಿ ಮಾಡಿದರೂ ಒಮ್ಮೊಮ್ಮೆ ಅತಿಯಾಗಿ ಇಡೀ ವಾತಾವರಣವೇ ಕಲುಷಿತಗೊಳ್ಳುತ್ತದೆ. ಹಾಸ್ಯದ ವಿಚಾರದಲ್ಲಿ ಎಚ್ಚರಿಕೆ ಎಲ್ಲರಿಗೂ ಇರಬೇಕು.
9) ಕೋಪ (Temperament): ಹೆಚ್ಚು ಕೋಪ / ಸಿಟ್ಟು ಬರುವವರು ಆದಷ್ಟು ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಎಲ್ಲರಿಗೂ ಹಿತ. ಇಲ್ಲದಿದ್ದರೆ ಕೋಪವೇ ಒಂದು ವಿಷಯವಾಗಿ ಎಲ್ಲರೂ ಕಷ್ಟಪಡಬೇಕಾಗುತ್ತದೆ.
10) ಸ್ವಚ್ಚತೆ: ಕೆಲವರು ಅತಿಯಾದ ಶುದ್ಧತೆ, ಸ್ವಚ್ಚತೆಯನ್ನು ಪಾಲಿಸುತ್ತಾರೆ, ಇಂಥವರಿಗೆ ಪಯಣ ಮತ್ತು ಪ್ರವಾಸ ಸ್ಥಳಗಳಲ್ಲಿ ಸ್ವಚ್ಛತೆಯಿಲ್ಲದಿದ್ದಲ್ಲಿ ಕಿರಿಕಿರಿಯಾಗುತ್ತದೆ. ಇಂಥ ಸಂದರ್ಭದಲ್ಲಿ ಜೊತೆಯಲ್ಲಿದ್ದವರ ಮೇಲೆಯೂ ಸಿಡಿಮಿಡಿಗೊಳ್ಳುತ್ತಾರೆ. ಆದ್ದರಿಂದ ಪ್ರವಾಸಕ್ಕೆ ಮೊದಲೆೇ ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳುವುದು ಎಲ್ಲರಿಗೂ ಒಳ್ಳೆಯದು.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.