ಮಕರ ಸಂಕ್ರಾಂತಿಯಂದು ಯಾವ ಬಣ್ಣದ ಡ್ರೆಸ್ ಹಾಕೋದು ಬೆಸ್ಟ್; ಈ ಸೆಲೆಬ್ರಿಟಿಗಳು ಕೊಡ್ತಾರೆ ನೋಡಿ ಐಡಿಯಾ
Jan 14, 2024 08:00 AM IST
ಮಕರ ಸಂಕ್ರಾಂತಿ ಫ್ಯಾಷನ್
- ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿದೆ. ಹಬ್ಬದ ದಿನಗಳು ಬಂದಾಗ ಯಾವ ಡ್ರೆಸ್ ಹಾಕೋದು, ಯಾವ ಬಣ್ಣ ಇರ್ಲಿ ಅಂತೆಲ್ಲಾ ಗೊಂದಲ ಶುರುವಾಗೋದು ಖಂಡಿತ. ನಿಮ್ಮ ಗೊಂದಲ ನಿವಾರಿಸೋಕೆ ಈ ಬಾರಿ ಸೆಲೆಬ್ರಿಟಿಗಳೇ ಐಡಿಯಾ ಕೊಡ್ತಾರೆ ನೋಡಿ.
ಭಾರತದಲ್ಲಿ ಸಂಕ್ರಾಂತಿ ಬಹಳ ದೊಡ್ಡ ಹಬ್ಬ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಕಾಲಿಡುವ ಸಮಯ. ಅಲ್ಲದೆ ಇದು ಚಳಿಗಾಲದ ಅಂತ್ಯವನ್ನು ಸೂಚಿಸುವ ಹಬ್ಬವೂ ಹೌದು. ಇದನ್ನು ಸುಗ್ಗಿ ಅಂತಲೂ ಕರೆಯುತ್ತಾರೆ. ಮಕರ ಸಂಕ್ರಾಂತಿಯ ನಂತರ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಕರ ಸಂಕ್ರಾಂತಿಯನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರಿನಲ್ಲಿ ಕರೆಯುತ್ತಾರೆ. ಕೆಲವು ಕಡೆ ಸಂಪ್ರದಾಯ, ಆಚರಣೆಗಳೂ ಕೂಡ ಬದಲಿರುತ್ತವೆ. ಆದರೆ ಅದೇನೇ ಇದ್ದರೂ ಹಬ್ಬ ಎಂದಾಗ ಚೆಂದದ ಉಡುಪು ಧರಿಸುವುದು ಇದ್ದಿದ್ದೆ.
ಹಿಂದೂ ಧರ್ಮದಲ್ಲಿ ಬಣ್ಣಗಳಲ್ಲಿ ಬಣ್ಣ ಬಣ್ಣ ಬಟ್ಟೆ ಧರಿಸುವುದು ವಿಶೇಷ. ಬಣ್ಣವು ಸಂಭ್ರಮ, ಸಡಗರವನ್ನು ಸೂಚಿಸುತ್ತದೆ. ಅಲ್ಲದೆ ವಿವಿಧ ಬಣ್ಣದ ಬಟ್ಟೆಗಳು ಮಂಗಳಕರ ಎಂದು ಶಾಸ್ತ್ರಗಳು ಹೇಳುತ್ತವೆ. ಮಕರ ಸಂಕ್ರಾಂತಿಯಂದು ಈ ಬಣ್ಣಗಳ ಬಟ್ಟೆಯನ್ನು ಧರಿಸುವುದರಿಂದ ಶನಿದೇವ ಸೇರಿದಂತೆ ಎಲ್ಲಾ ದೇವರು ಹಾಗೂ ದೇವತೆಗಳಿಂದ ಆಶೀರ್ವಾದ ಪಡೆಯಬಹುದು. ನಿಮಗೆ ಮಕರ ಸಂಕ್ರಾಂತಿ ಯಾವ ಬಟ್ಟೆ ಧರಿಸುವುದು ಎಂಬ ಗೊಂದಲ ಇದ್ರೆ ಈ ಸೆಲೆಬ್ರಿಟಿಗಳು ಐಡಿಯಾ ಕೊಡ್ತಾರೆ ನೋಡಿ.
ಕೆಂಪು
ಹಿಂದೂ ಧರ್ಮದಲ್ಲಿ ಕೆಂಪು ಬಣ್ಣವು ಅದೃಷ್ಟದ ಸಂಕೇತವಾಗಿದೆ. ಲಕ್ಷ್ಮೀ ದೇವತೆಯು ಕೆಂಪು ಧರಿಸಿದವರಿಗೆ ಒಲಿಯುತ್ತಾಳೆ ಎಂಬ ನಂಬಿಕೆ ಇದೆ. ಕೃತಿ ಸನೋನ್ ನಿಮಗೆ ಕೆಂಪು ಬಣ್ಣದ ಬಟ್ಟೆಯ ಧರಿಸಲು ಐಡಿಯಾ ಕೊಡ್ತಾರೆ ನೋಡಿ. ಬಿಳಿ ಹಾಗೂ ಕೆಂಬಣ್ಣದ ಚಿತ್ತಾರವಿರುವ ಸೀರೆಯಲ್ಲಿ ಸರಳವಾಗಿ ಕಾಣಿಸಿರುವ ಕೃತಿಯಂತೆ ನೀವು ಡ್ರೆಸ್ ಮಾಡಿಕೊಳ್ಳಬಹುದು. ಸೀರೆಗೊಪ್ಪುವ ಬ್ಲೌಸ್, ಸಾಂಪ್ರದಾಯಿಕ ಆಭರಣಗಳನ್ನು ತೊಡುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು.
ಹಳದಿ
ವಿಷ್ಣು ಹಾಗೂ ದೇವಗುರು ಬೃಹಸ್ಪತಿ ಇವರಿಬ್ಬರ ನೆಚ್ಚಿನ ಬಣ್ಣ ಹಳದಿ. ಗುರು ಗ್ರಹವು ಆಧಾತ್ಮ ಹಾಗೂ ಧರ್ಮಕ್ಕೆ ಸಂಬಂಧಿಸಿರುವ ಕಾರಣ ಈ ಹಬ್ಬದಂದು ಹಳದಿ ಬಟ್ಟೆ ಧರಿಸುವುದು ಉತ್ತಮ. ಕತ್ರಿನಾ ಕೈಫ್ ಅವರ ಸೊಗಸಾದ ಹಳದಿ ಸೀರೆಯು ಮಕರ ಸಂಕ್ರಾಂತಿಗೆ ಸೂಕ್ತವಾಗಿದೆ. ಸೀರೆಗೊಪ್ಪುವ ಕಿವಿಯೋಲೆ, ಬಳೆ, ನೆಕ್ಲೆಸ್ ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು.
ಕಿತ್ತಳೆ ಬಣ್ಣ
ಹಿಂದೂ ಧರ್ಮದಲ್ಲಿ ಕಿತ್ತಳೆ ಅಥವಾ ಕೇಸರಿ ಬಣ್ಣಕ್ಕೂ ಬಹಳ ಮಹತ್ವವಿದೆ. ಇದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಇದು ಬೆಂಕಿಯ ಸಂಕೇತವಾಗಿದೆ. ಇದನ್ನು ಧರಿಸುವುದರಿಂದ ಸೂರ್ಯ ದೇವನ ಆಶೀರ್ವಾದ ಸಿಗುತ್ತದೆ. ನಟಿ ಅದಿತಿ ರಾವ್ ಹೈದರಿ ಧರಿಸಿರುವ ಸೀರೆ ನಿಮಗೂ ಇಷ್ಟವಾಗಬಹುದು. ತುಂಬು ತೋಳಿನ ಬ್ಲೌಸ್ ಇರುವ ಈ ಸೀರೆಯಲ್ಲಿ ಆಕೆ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣುತ್ತಿದ್ದು ನೀವು ಅವರ ಸ್ಟೈಲ್ ಅನುಸರಿಸಬಹುದು.
ಗುಲಾಬಿ ಬಣ್ಣ
ಗುಲಾಬಿ ಬಣ್ಣವು ಅದೃಷ್ಣಕ್ಕೆ ಸಂಬಂಧಿಸಿದೆ. ಲಕ್ಷ್ಮೀದೇವತೆಗೆ ಇದು ವಿಶೇಷ ಎಂದು ಪರಿಗಣಿಸಲಾಗಿದೆ. ಈ ಬಣ್ಣವನ್ನು ಪ್ರೀತಿ ಹಾಗೂ ಸಕಾರಾತ್ಮಕ ಸಂಕೇತ ಎಂದೂ ಪರಿಗಣಿಸಲಾಗಿದೆ. ಜಾನ್ವಿ ಕಪೂರ್ ಗುಲಾಬಿ ಬಣ್ಣ ಸೀರೆಯಲ್ಲಿ ಮಿಂಚುತ್ತಿದ್ದು, ನೀವೂ ಇವರ ಸ್ಟೈಲ್ ಅನ್ನು ಫಾಲೋ ಮಾಡಬಹುದು.
ಗ್ರೀನ್
ಗಣಪತಿಗೆ ಹಸಿರು ಬಣ್ಣವು ತುಂಬಾ ಪ್ರಿಯವಾದ ಬಣ್ಣವಾಗಿದೆ. ಮಕರ ಸಂಕ್ರಾಂತಿಯಂದು ಹಸಿರು ಬಣ್ಣದ ಉಡುಪು ಧರಿಸಿ ಪೂಜೆ ಸಲ್ಲಿಸುವುದರಿಂದ ಶಿವನನ್ನು ಮೆಚ್ಚಿಸಬಹುದು. ನಿಮಗೆ ಗ್ರೀನ್ ಸೀರೆ ಕಾಜೋಲ್‌ಗಿಂತ ಉತ್ತಮ ಆಯ್ಕೆ ಯಾರೂ ನೀಡಲು ಸಾಧ್ಯವಿಲ್ಲ.
ಕಪ್ಪು
ಯಾವುದೇ ಹಬ್ಬ ಅಥವಾ ಶುಭ ಸಂದರ್ಭಗಳಲ್ಲಿ ಕಪ್ಪು ಬಣ್ಣ ಧರಿಸುವುದು ಅಶುಭದ ಸಂಕೇತ ಎಂದು ಹೇಳಲಾಗುತ್ತದೆ. ಇದು ದುರದೃಷ್ಟಕರ ಎಂದು ಪರಿಗಣಿಸಲಾಗುತ್ತದೆ. ಆದರೆ ಮಹಾರಾಷ್ಟ್ರದಲ್ಲಿ ಮಾತ್ರ ಮಕರ ಸಂಕ್ರಾಂತಿಯಂದು ಕಪ್ಪು ಬಣ್ಣದ ಉಡುಪು ಧರಿಸುತ್ತಾರೆ. ನೀವು ಕಪ್ಪು ಬಣ್ಣದ ಸಾಂಪ್ರದಾಯಿಕ ಉಡುಪು ಧರಿಸಬೇಕು ಅಂತಿದ್ರೆ ಮಾಧುರಿ ದೀಕ್ಷಿತ್ ನಿಮಗೆ ಬೆಸ್ಟ್ ಆಯ್ಕೆ. ಅವರು ಧರಿಸಿರುವ ಆರ್ಗಾಂಜಾ ಸೀರೆ ನಿಮಗೂ ಒಪ್ಪಬಹುದು.