ಶೇವಿಂಗ್ ಮತ್ತು ವ್ಯಾಕ್ಸಿಂಗ್: ಎರಡರಲ್ಲಿ ಯಾವುದು ಉತ್ತಮ, ತಜ್ಞರು ಏನಂತಾರೆ?
Sep 19, 2023 07:00 AM IST
ಶೇವಿಂಗ್ ಅಥವಾ ವ್ಯಾಕ್ಸಿಂಗ್ ಯಾವುದು ಉತ್ತಮ
- Shaving and Waxing: ಮುಖ ಮತ್ತು ದೇಹದ ಅನಗತ್ಯ ಕೂದಲುಗಳನ್ನು ತೆಗೆಯಲು ಪುರುಷರು ಅಥವಾ ಮಹಿಳೆಯರು ಸಾಮಾನ್ಯವಾಗಿ ಶೇವಿಂಗ್ ಅಥವಾ ವ್ಯಾಕ್ಸಿಂಗ್ ಮೊರೆ ಹೋಗುತ್ತಾರೆ. ಈ ಎರಡರಲ್ಲಿ ಯಾವುದು ಸುರಕ್ಷಿತ ಮತ್ತು ಉತ್ತಮ ವಿಧಾನ ಎಂಬುದನ್ನು ಇಲ್ಲಿ ತಿಳಿಯಿರಿ.
ಪುರುಷರಿರಲಿ ಮಹಿಳೆಯರಿರಲಿ. ಸೌಂದರ್ಯ ಪ್ರಜ್ಞೆ ಎಲ್ಲರಿಗೂ ಇರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ತಾನು ಚೆನ್ನಾಗಿ ಕಾಣಿಸಬೇಕು ಎಂದು ಪ್ರತಿಯೊಬ್ಬ ಮನುಷ್ಯನೂ ಬಯಸುತ್ತಾನೆ. ಕನ್ನಡಿ ಮುಂದೆ ನಿಂತಾಗ, ಪ್ರತಿಯೊಬ್ಬರಿಗೂ ಕನ್ನಡಿಯೊಳಗಿನ ಪ್ರತಿರೂಪವು ಪ್ರಪಂಚದ ಎಲ್ಲರಿಗಿಂತ ಸ್ಮಾರ್ಟ್. ನಮ್ಮನ್ನು ನಾವೇ ಸ್ಮಾರ್ಟ್ ಎಂದುಕೊಂಡು ಈ ಟ್ರೆಂಡೀ ಬದುಕಿನಲ್ಲಿ ಜೀವಿಸಬೇಕು. ಇದರೊಂದಿಗೆ ಕಾಲಕ್ಕೆ ತಕ್ಕನಾಗಿ ಆಧುನಿಕ ಶೈಲಿಯಂತೆ ಫ್ಯಾಶನ್ ಅಳವಡಿಸಿಕೊಳ್ಳಬೇಕು.
ಒಂದು ಕಾಲಕ್ಕೆ ಮಹಿಳೆಯರಿಗಷ್ಟೇ ಸೀಮಿತವಾಗಿದ್ದ ಸೌಂದರ್ಯ ಪ್ರಜ್ಞೆ, ಕೆಲವು ವರ್ಷಗಳ ಹಿಂದೆಯೇ ಪುರುಷ ಪ್ರಪಂಚಕ್ಕೂ ಕಾಲಿಟ್ಟಿದೆ. ಪ್ರತಿ ಹಳ್ಳಿಗಳಲ್ಲೂ ಸೌಂದರ್ಯದ ಬಗೆಗೆ ಅತೀವವ ಕಾಳಜಿ ಹೊಂದಿರುವವರನ್ನು ಈಗೀಗ ಕಾಣಬಹುದು. ಸ್ಮಾರ್ಟ್ ಹಾಗೂ ಹ್ಯಾಂಡ್‌ಸಮ್ ಆಗಿ ಕಾಣಿಸಬೇಕೆಂದು ಹೆಚ್ಚಿನ ಪುರುಷರು ಮುಖದ ಸೌಂದರ್ಯದ ಕುರಿತಾಗಿ ವಿಶೇಷ ಕಾಳಜಿ ವಹಿಸುತ್ತಾರೆ. ಇದಕ್ಕಾಗಿ ಬಗೆಬಗೆಯ ಗ್ರೂಮಿಂಗ್ ತಂತ್ರ ಅನುಸರಿಸುತ್ತಾರೆ. ಫೇಸ್ ವಾಶ್, ಟ್ರಿಮ್ಮಿಂಗ್, ಐಬ್ರೂ ಗ್ರೂಮಿಂಗ್, ಬಿಯರ್ಡ್ ಟ್ರಿಮ್ಮಿಂಗ್ ಇವೆಲ್ಲಾ ಈಗೀಗ ಸಾಮಾನ್ಯವಾಗಿ ಪ್ರತಿ ಪುರುಷರು ಮಾಡಿಸಿಕೊಳ್ಳುತ್ತಾರೆ.
ಶೇವಿಂಗ್ ಅಥವಾ ವ್ಯಾಕ್ಸಿಂಗ್
ಮುಖ ಮತ್ತು ದೇಹದ ಅನಗತ್ಯ ಕೂದಲುಗಳನ್ನು ತೆಗೆದುಹಾಕಲು ಹೆಚ್ಚಿನವರು ಶೇವಿಂಗ್ ಅಥವಾ ವ್ಯಾಕ್ಸಿಂಗ್ ಮೊರೆ ಹೋಗುತ್ತಾರೆ. ಆದರೆ, ವ್ಯಾಕ್ಸಿಂಗ್ ವಿಧಾನಕ್ಕಿಂತ ಶೇವಿಂಗ್ ಮಾಡುವುದು ಸುರಕ್ಷಿತ, ಅನುಕೂಲಕರ ಮತ್ತು ಆರೋಗ್ಯಕರ ವಿಧಾನವೆಂದು ಕೆಲವು ಸಂಶೋಧನೆಗಳು ತಿಳಿಸಿವೆ. ಈ ಕುರಿತು ಚರ್ಮರೋಗ ತಜ್ಞರು ನಡೆಸಿದ ಸಮೀಕ್ಷೆ ಕೂಡಾ ಬಹಿರಂಗಪಡಿಸಿದೆ. ಮಹಿಳಾ ರೇಜರ್ ಬ್ರ್ಯಾಂಡ್ ಜಿಲೆಟ್ ವೀನಸ್ ನಡೆಸಿದ ಅಧ್ಯಯನವು ಈ ಮಾಹಿತಿ ನೀಡಿದೆ. ಮಾರ್ಕೆಟ್ ಎಕ್ಸ್ಸೆಲ್ ಡೇಟಾ ಮ್ಯಾಟ್ರಿಕ್ಸ್ ಪ್ರೈವೇಟ್ ಲಿಮಿಟೆಡ್ ಆಗಸ್ಟ್ 2016ರಲ್ಲಿ ಭಾರತದಾದ್ಯಂತ 300 ಚರ್ಮರೋಗ ವೈದ್ಯರಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ.
70 ಶೇಕಡದಷ್ಟು ಚರ್ಮರೋಗ ವೈದ್ಯರು, ಶೇವಿಂಗ್ ಅತ್ಯುತ್ತಮ ವಿಧಾನವೆಂದು ಪ್ರತಿಪಾದಿಸಿದ್ದಾರೆ. ಸುರಕ್ಷತೆ, ಅನುಕೂಲತೆ ಮತ್ತು ನೈರ್ಮಲ್ಯವು ವಿಶೇಷವಾಗಿ ಮಹಿಳೆಯರು ತಮ್ಮ ದೇಹದ ಕೂದಲು ತೆಗೆಯುವಾಗ ಪರಿಗಣಿಸುವ ಉನ್ನತ ಅಂಶಗಳಾಗಿವೆ ಎಂದು ಅವರು ಹೇಳಿದ್ದಾರೆ.
ವ್ಯಾಕ್ಸಿಂಗ್‌ಗೆ ಸಮಯ ಹೆಚ್ಚು
ವ್ಯಾಕ್ಸಿಂಗ್‌ಗಿಂತ ಶೇವಿಂಗ್ ಬೇಗನೆ ಮಾಡಬಹುದಾದ ಮತ್ತು ಸುಲಭವಾಗಿ ಎಲ್ಲರೂ ಮಾಡಬಹುದಾದ ಪ್ರಕ್ರಿಯೆ. ಶೇವಿಂಗ್ ಅನ್ನು ಸ್ನಾನದ ವೇಳೆ ತ್ವರಿತವಾಗಿ ಮಾಡಬಹುದು. ಆದರೆ ವ್ಯಾಕ್ಸಿಂಗ್‌ಗೆ ಹಾಗಲ್ಲ. ಇದಕ್ಕೆ ಹೆಚ್ಚಿನ ತಯಾರಿ ಬೇಕಾಗುತ್ತದೆ. ಅಲ್ಲದೆ ಸಂಪೂರ್ಣ ವ್ಯಾಕ್ಸಿಂಗ್ ಪ್ರಕ್ರಿಯೆ ಮುಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಸಹಿಸಲಾಗದ ನೋವು
ಶೇವಿಂಗ್ ಚರ್ಮದ ಮೇಲೆ ಹೆಚ್ಚು ಒತ್ತಡ ಹಾಕುವುದಿಲ್ಲ. ಜೊತೆಗೆ, ಚರ್ಮಕ್ಕೆ ಕಡಿಮೆ ಅಲ್ಲ. ಶೇವಿಂಗ್‌ನ ಮತ್ತೊಂದು ಪ್ರಯೋಜನವೆಂದರೆ, ಈ ಪ್ರಕ್ರಿಯೆಯಲ್ಲಿ ದೇಹಕ್ಕೆ ನೋವಾಗುವುದಿಲ್ಲ. ಆದರೆ, ಕೂದಲನ್ನು ಮೂಲದಿಂದಲೇ ಕೀಳುವ ವ್ಯಾಕ್ಸಿಂಗ್ ಮಾಡಿಸುವಾಗ ಸಹಿಸಲಾಗದಷ್ಟು ನೋವಾಗುತ್ತದೆ. ವಿಶೇಷವಾಗಿ ದೇಹದ ಖಾಸಗಿ ಮತ್ತು ಕಂಕುಳಿನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಭಾರಿ ನೋವಿರುತ್ತದೆ.
ನೆರವು ಅಗತ್ಯ
ಉತ್ತಮ ರೇಜರ್ ಮತ್ತು ಸರಿಯಾದ ತಂತ್ರದೊಂದಿಗೆ ತಮ್ಮ ಶೇವಿಂಗ್ ಅನ್ನು ತಾವೇ ಮಾಡಬಹುದು. ಆದರೆ ವ್ಯಾಕ್ಸಿಂಗ್ ಮಾಡಲು ಬೇರೊಬ್ಬರ ಸಹಾಯ ಬೇಕು.
ಶೇವಿಂಗ್ ಅನ್ನು ಕಡಿಮೆ ಖರ್ಚಿನಲ್ಲಿ ಮುಗಿಸಬಹುದು. ಕೈಗೆಟಕುವ ಬೆಲೆಯಲ್ಲಿ ಉತ್ತಮ ರೇಜರ್ ಮತ್ತು ಶೇವಿಂಗ್ ಕ್ರೀಮ್ ಲಭ್ಯವಿದೆ. ಆದರೆ, ವ್ಯಾಕ್ಸಿಂಗ್ ಪರಿಕರಗಳ ಖರ್ಚು ಹೆಚ್ಚು. ಸಾಮಾನ್ಯ ವ್ಯಾಕ್ಸಿಂಗ್ ವೆಚ್ಚಕ್ಕಿಂತ ಶೇವಿಂಗ್ ವೆಚ್ಚವು ತುಂಬಾ ಕಡಿಮೆ.
ವ್ಯಾಕ್ಸಿಂಗ್ ಪ್ರಕ್ರಿಯೆಯು ಪರಿಣಾಮಕಾರಿಯಾಗಲು ನಿರ್ದಿಷ್ಟ ಪ್ರಮಾಣದ ಕೂದಲು ಬೆಳವಣಿಗೆಯ ಅಗತ್ಯವಿರುತ್ತದೆ. ಅಂದರೆ ಪ್ರತಿ ವ್ಯಾಕ್ಸಿಂಗ್ ಪ್ರಕ್ರಿಯೆಗೂ ಮುನ್ನ ಹಲವಾರು ವಾರಗಳಿಗೂ ಮುನ್ನ ಕೂದಲನ್ನು ಬೆಳೆಯಲು ಬಿಡಬೇಕಾಗುತ್ತದೆ. ಅತ್ತ, ಶೇವಿಂಗ್ ಅನ್ನು ಆಗಾಗ್ಗೆ ಮಾಡಬಹುದು.