logo
ಕನ್ನಡ ಸುದ್ದಿ  /  ಜೀವನಶೈಲಿ  /  Hindu Mythology: ಪುರಾಣ ಪ್ರಸಿದ್ಧ ತಂದೆ-ಮಕ್ಕಳ ಸಂಬಂಧ; ಸದಾ ಸ್ಮರಣೀಯರಾಗಿ ಉಳಿದ ಭಾರತೀಯ ಮಹಾಕಾವ್ಯಗಳಲ್ಲಿನ ಅಪ್ಪ-ಮಕ್ಕಳಿವರು

Hindu Mythology: ಪುರಾಣ ಪ್ರಸಿದ್ಧ ತಂದೆ-ಮಕ್ಕಳ ಸಂಬಂಧ; ಸದಾ ಸ್ಮರಣೀಯರಾಗಿ ಉಳಿದ ಭಾರತೀಯ ಮಹಾಕಾವ್ಯಗಳಲ್ಲಿನ ಅಪ್ಪ-ಮಕ್ಕಳಿವರು

HT Kannada Desk HT Kannada

Jun 18, 2023 02:34 PM IST

google News

ದಶರಥನ ತೊಡೆಯ ಮೇಲೆ ಶ್ರೀರಾಮ (ಎಡಚಿತ್ರ), ಜಮಗ್ನಿಯ ಎದುರು ನಿಂತಿರುವ ಪರಶುರಾಮ (ಬಲಚಿತ್ರ)

    • Fathers Day 2023: ತಂದೆ, ಮಕ್ಕಳ ಪ್ರೀತಿಯನ್ನು ವಿವರಿಸುವಾಗ ಮಹಾಕಾವ್ಯಗಳಾದ ರಾಮಾಯಣ- ಮಹಾಭಾರತದ ಪಾತ್ರಗಳನ್ನು ಉದಾಹರಣೆನ್ನಾಗಿ ನೀಡಿ, ತಂದೆ- ಮಕ್ಕಳ ಬಾಂಧವ್ಯವನ್ನು ವಿವರಿಸುವ ಪರಿಪಾಠ ನಡೆದುಕೊಂಡು ಬಂದಿದೆ. ಪತ್ರಕರ್ತ ಶ್ರೀನಿವಾಸ ಎಂ., ಅವರು ಅಂಥ ಐದು ಅಪ್ಪ-ಮಕ್ಕಳ ಜೋಡಿಯನ್ನು ಈ ಬರಹದಲ್ಲಿ ನೆನಪಿಸಿಕೊಂಡಿದ್ದಾರೆ.
ದಶರಥನ ತೊಡೆಯ ಮೇಲೆ ಶ್ರೀರಾಮ (ಎಡಚಿತ್ರ), ಜಮಗ್ನಿಯ ಎದುರು ನಿಂತಿರುವ ಪರಶುರಾಮ (ಬಲಚಿತ್ರ)
ದಶರಥನ ತೊಡೆಯ ಮೇಲೆ ಶ್ರೀರಾಮ (ಎಡಚಿತ್ರ), ಜಮಗ್ನಿಯ ಎದುರು ನಿಂತಿರುವ ಪರಶುರಾಮ (ಬಲಚಿತ್ರ)

ಇಂದು 'ವಿಶ್ವ ಅಪ್ಪಂದಿರ ದಿನ'. ನಮ್ಮ ಮಾತು- ವ್ಯವಹಾರದಲ್ಲಿ ತಂದೆ, ಮಕ್ಕಳ ಪ್ರೀತಿಯನ್ನು ವಿವರಿಸುವಾಗ ಮಹಾಕಾವ್ಯಗಳಾದ ರಾಮಾಯಣ- ಮಹಾಭಾರತದ ಪಾತ್ರಗಳನ್ನು ಉದಾಹರಣೆನ್ನಾಗಿ ನೀಡಿ, ತಂದೆ- ಮಕ್ಕಳ ಬಾಂಧವ್ಯವನ್ನು ವಿವರಿಸುವ ಪರಿಪಾಠ ನಡೆದುಕೊಂಡು ಬಂದಿದೆ. ಈ ಲೇಖನದಲ್ಲಿಯೂ ಅಂಥ ಪಾತ್ರಗಳ ಪೈಕಿ ಐದು ತಂದೆ- ಮಕ್ಕಳ ಜೋಡಿಯನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಈ ಪಾತ್ರಗಳು ನಿಮಗೂ ಪರಿಚಿತವೇ. ಆದರೂ ಮತ್ತೆ ನೆನಪಿಸಿಕೊಳ್ಳೋಣ.

1) ಧೃತರಾಷ್ಟ್ರ- ದುರ್ಯೋಧನ

ಅಂಧನಾದ ಧೃತರಾಷ್ಟ್ರ ತನ್ನ ಮಗನ ಸಲುವಾಗಿ ಅಂತರಂಗದ ಕಣ್ಣುಗಳನ್ನು ಸಹ ಮುಚ್ಚಿಬಿಟ್ಟಿರುತ್ತಾನೆ. ತನ್ನ ಸುತ್ತ ಭೀಷ್ಮ, ದ್ರೋಣ, ವಿದುರರಂಥ ಜ್ಞಾನಿಗಳೇ ಇದ್ದರೂ ಅವರು ತನ್ನ ಮಗನ ತಪ್ಪುಗಳ ಬಗ್ಗೆ ತಿಳಿಹೇಳುತ್ತಿದ್ದರೂ ಮಗ ದುರ್ಯೋಧನನ ಇಚ್ಛೆಗೆ ನಡೆಯುವಂಥ ತಂದೆಯಾಗಿಯೇ ಧೃತರಾಷ್ಟ್ರ ಪಾತ್ರ ನಮ್ಮ ಮಧ್ಯೆ ನೆನಪಿನಲ್ಲಿ ಉಳಿದಿದೆ. ಇವತ್ತಿಗೂ ಯಾರಾದರೂ ತಮ್ಮ ಮಕ್ಕಳು ಏನು ಮಾಡಿದರೂ ಸರಿ ಎಂದು ತಪ್ಪು ಕೆಲಸಗಳು ಅಥವಾ ಧರ್ಮಕ್ಕೆ ವಿರುದ್ಧವಾದದ್ದನ್ನು ಸಹ ವಹಿಸಿಕೊಂಡು ಬರುತ್ತಾರೋ ಅಂಥವರದು 'ಧೃತರಾಷ್ಟ್ರ ಪುತ್ರ ಪ್ತೇಮ' ಎನ್ನುವುದುಂಟು. ಹೋಲಿಕೆಯ ದೃಷ್ಟಿಯಿಂದ ಇದು ನೆಗೆಟಿವ್ ವಿಚಾರವನ್ನು ಪ್ರತಿಪಾದಿಸುತ್ತದೆ. ಆದರೂ ಮಗನಲ್ಲಿ ವಿಪರೀತ ಪ್ರೇಮ ಇರಿಸಿಕೊಂಡಿದ್ದ ತಂದೆಯನ್ನು ಸಹ ಇದು ಪ್ರತಿನಿಧಿಸುತ್ತದೆ.

ಅಷ್ಟೇ ಅಲ್ಲ, ಮಹಾಭಾರತ ಯುದ್ಧ ಮುಗಿದ ನಂತರ ಪಾಂಡವರು ಧೃತರಾಷ್ಟ್ರನ ಭೇಟಿಗೆ ಬರುತ್ತಾರೆ. ತನ್ನ ಸೋದರನ ಮಕ್ಕಳೇ ಆದವರನ್ನು ಒಬ್ಬೊಬ್ಬರನ್ನಾಗಿ ಆಲಿಂಗನ ಮಾಡುತ್ತಾನೆ ಧೃತರಾಷ್ಟ್ರ. ಹಾಗೆ ಮಾಡುತ್ತಾ ಬರುವಾಗ ಭೀಮನ ಸರದಿ ಬರುತ್ತದೆ. ಆಗ ಕೃಷ್ಣನು ಭೀಮನ ಉಕ್ಕಿನ ಮೂರ್ತಿಯನ್ನು ಮುಂದೆ ಮಾಡುತ್ತಾನೆ. ಆಗ ಅದನ್ನು ಭೀಮನೆಂದುಕೊಂಡು ಧೃತರಾಷ್ಟ್ರ ಆಲಂಗಿಸುತ್ತಾನೆ. ಆ ಉಕ್ಕಿನ ಪ್ರತಿಮೆ ಪುಡಿಪುಡಿ ಆಗಿಬಿಡುತ್ತದೆ. ಅಂದರೆ, ತನ್ನ ಮಕ್ಕಳನ್ನು ಕೊಂದ ಭೀಮನ ಬಗ್ಗೆ ಧೃತರಾಷ್ಟ್ರನಿಗೆ ಅಂಥ ಸಿಟ್ಟಿರುತ್ತದೆ. ಈಗಲೂ ಯಾರ ಜತೆಗಿನ ಸಖ್ಯದಿಂದ ಒಬ್ಬರ ಬದುಕು ಸರ್ವನಾಶ ಆಗಿಬಿಡುತ್ತದೋ ಅಂಥವರ ಸಖ್ಯವನ್ನು “ಧೃತರಾಷ್ಟ್ರ ಆಲಿಂಗನ” ಎನ್ನುವುದುಂಟು.

2) ದಶರಥ- ಶ್ರೀರಾಮ

ಶ್ರೀರಾಮನನ್ನು ದಾಶರಥಿ ಅಂತಲೂ ಕರೆಯುವುದು ಉಂಟು. ಅಂದರೆ ದಶರಥನ ಮಗ ಎಂಬುದರ ಅರ್ಥ ಇದು. ಲಕ್ಷ್ಣಣ, ಭರತ, ಶತ್ರುಘ್ನರೂ ದಶರಥನ ಮಕ್ಕಳೇ ಆದರೂ ರಾಮನಿಗೆ ಹಾಗೆ ಕರೆಯಲಾಗುತ್ತದೆ. ರಾಮನಿಗೆ ಪಟ್ಟಾಭಿಷೇಕ ಮಾಡುವುದಕ್ಕೆ ಮುಹೂರ್ತವನ್ನೂ ನಿಗದಿ ಮಾಡಿದ ನಂತರ ತನ್ನ ಪ್ರೀತಿಯ ರಾಣಿ ಕೈಕೇಯಿಗೆ ಒಂದು ಸಂದರ್ಭದಲ್ಲಿ ನೀಡಿದ ಮಾತಿನ ಅನ್ವಯ ನಡೆದುಕೊಳ್ಳಬೇಕಾಗುತ್ತದೆ ದಶರಥ. ಆಕೆಯ ಇಚ್ಛೆಯಂತೆ ರಾಮನನ್ನು ವನವಾಸಕ್ಕೆ ಕಳುಹಿಸಬೇಕಾಗುತ್ತದೆ ಹಾಗೂ ಭರತನಿಗೆ ಪಟ್ಟಾಭಿಷೇಕ ಮಾಡಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ತಂದೆಯು ಹೇಳಿದ ಮಾತಿನಂತೆಯೇ ರಾಮ ನಡೆದುಕೊಳ್ಳುತ್ತಾನೆ.

ಅಪ್ಪನ ಆಣತಿಯಂತೆ ನಡೆದುಕೊಳ್ಳುವ ವ್ಯಕ್ತಿಯನ್ನು ಪಿತೃವಾಕ್ಯ ಪರಿಪಾಲಕ ಎನ್ನಲಾಗುತ್ತದೆ. ತನ್ನ ತಂದೆಯು ನೀಡಿದ ಮಾತನ್ನು ನಡೆಸಿಕೊಡುತ್ತಾನೆ ಶ್ರೀರಾಮ. ಈಗಲೂ ತನ್ನ ತಂದೆಯ ಮಾತಿಗೆ ಎದುರಾಡದ ಹಾಗೂ ತಂದೆಯು ಹೇಳಿದಂತೆ ನಡೆದುಕೊಳ್ಳುವ ವ್ಯಕ್ತಿಯನ್ನು ಶ್ರೀರಾಮನಿಗೆ ಹೋಲಿಸಲಾಗುತ್ತದೆ.

3) ದ್ರೋಣ- ಅಶ್ವತ್ಥಾಮ

ದ್ರೋಣಾಚಾರ್ಯರಿಗೆ ಅಶ್ವತ್ಥಾಮ ಒಬ್ಬನೇ ಮಗ. ಶಿವನ ತಪಸ್ಸನ್ನು ಮಾಡಿ, ವರ ಪಡೆದಂಥ ಮಗನಾಗಿರುತ್ತಾನೆ. ಅಶ್ವತ್ಥಾಮನ ಹಣೆಯಲ್ಲಿ ಒಂದು ಮಣಿ ಇರುತ್ತದೆ. ಅದು ಇರುವುದರಿಂದ ಹಸಿವು, ನೀರಡಿಕೆ ಹಾಗೂ ಆಲಸ್ಯದಿಂದ ರಕ್ಷಣೆ ನೀಡುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಭೀಮನು ಅಶ್ವತ್ಥಾಮ ಎಂಬ ಅನೆಯೊಂದನ್ನು ಕೊಲ್ಲುತ್ತಾನೆ. ಆ ಆನೆ ಮೃತಪಟ್ಟಿದೆ ಎಂಬುದನ್ನು ಕುರುಕ್ಷೇತ್ರದಲ್ಲಿ ಯುಧಿಷ್ಠಿರನಿಂದ ದ್ರೋಣಾಚಾರ್ಯರ ಮಗ ಅಶ್ವತ್ಥಾಮ ಸಾವನ್ನಪ್ಪಿದ್ದಾನೆ ಎಂಬರ್ಥ ಬರುವ ರೀತಿಯಲ್ಲಿ ಹೇಳಿಸಲಾಗುತ್ತದೆ. ಎಂದೂ ಸುಳ್ಳು ಹೇಳದ ಯುಧಿಷ್ಠಿರನ ಮಾತನ್ನು ಕೇಳಿ, ಯುದ್ಧ ಭೂಮಿಯಲ್ಲಿ ಶಸ್ತ್ರ ತ್ಯಜಿಸಿ, ತಮ್ಮ ಮಗನ ಆತ್ಮ ಎಲ್ಲಿದೆ ಎಂದು ತಿಳಿಯುವುದಕ್ಕೆ ದ್ರೋಣಾಚಾರ್ಯರು ಧ್ಯಾನಮಗ್ನರಾಗುತ್ತಾರೆ. ಆ ಸಂದರ್ಭದಲ್ಲಿ ದ್ರುಪದ ರಾಜನ ಮಗ ದೃಷ್ಟದ್ಯುಮ್ನ ತನ್ನ ತಂದೆಗೆ ಆಗಿದ್ದ ಅವಮಾನದ ಸೇಡನ್ನು ತೀರಿಸಿಕೊಳ್ಳಲು ದ್ರೋಣರ ತಲೆಯನ್ನು ತೆಗೆದುಬಿಡುತ್ತಾನೆ.

ಒಬ್ಬ ತಂದೆಗೆ ತನ್ನ ಮಗನ ಮೇಲೆ ಎಂಥ ಅಪರಿಮಿತವಾದ ಪ್ರೀತಿ ಇರುತ್ತದೆ, ಒಂದು ವೇಳೆ ಆತನ ಸಾವಾಗಿದೆ ಎಂದು ಕಿವಿಗೆ ವಿಷಯ ಬಿದ್ದರೆ ಆತ ಎಂಥ ಸನ್ನಿವೇಶದಲ್ಲಿಯೇ ಇದ್ದರೂ ಹೇಗೆ ಪ್ರತಿಕ್ರಿಯೆ ನೀಡುತ್ತಾನೆ ಎಂಬುದನ್ನು ದ್ರೋಣಾಚಾರ್ಯರು ತೋರಿಸಿಕೊಟ್ಟಿದ್ದಾರೆ. ಇನ್ನು ಅಶ್ವತ್ಥಾಮ ಸಹ ಸಿಟ್ಟಿನಲ್ಲಿ ಉಪ ಪಾಂಡವರನ್ನು ಹತ ಮಾಡುತ್ತಾನೆ.

4) ಜಮದಗ್ನಿ- ಪರಶುರಾಮ

ತಂದೆಯ ಮಾತನ್ನು ಪಾಲಿಸುವುದಕ್ಕಾಗಿ ತಾಯಿಯನ್ನು ಹತ್ಯೆ ಮಾಡಿದ ಪಾತಕವನ್ನು ಹೊತ್ತುಕೊಂಡ ಪಾತ್ರ ಪರಶುರಾಮನದು. ಆ ನಂತರ ತಂದೆಯ ಕೋಪ ತಮಣಿಯಾದ ಮೇಲೆ ತಾಯಿ ಹಾಗೂ ಸೋದರರನ್ನು ಮತ್ತೆ ಬದುಕಿಸಿಕೊಳ್ಳುತ್ತಾನೆ ಪರಶುರಾಮ. ಮಹಾಭಾರತದಲ್ಲಿ ಬರುವಂಥ ವನಪರ್ವದ ಪ್ರಕಾರ, ಒಂದು ದಿನ ಜಮದಗ್ನಿ ಋಷಿಯ ಹೆಂಂಡತಿಯಾದ ರೇಣುಕಾ ನದೀಸ್ನಾನಕ್ಕಾಗಿ ಹೋಗುತ್ತಾಳೆ. ಅಲ್ಲಿ ಚಿತ್ರರಥನೆಂಬ ಗಂಧರ್ವನು ಜಲಕ್ರೀಡೆ ಆಡುತ್ತಿದ್ದುದನ್ನು ನೋಡಿ ಮೋಹವಶಳಾಗುತ್ತಾಳೆ. ಚಿತ್ರರಥ ತನ್ನ ಪ್ರೇಯಸಿಯರ ಜತೆಗೆ ಜಲಕ್ರೀಡೆ ಆಡುತ್ತ ರಮಿಸುತ್ತಿದ್ದ ಎಂದೂ ಪಾಠಾಂತರವಿದೆ. ಇದರಿಂದ ಆಕೆ ಹಿಂದಿರುಗುವುದು ತಡವಾಗುತ್ತದೆ. ಜಮದಗ್ನಿ ಸಂಶಯಗೊಂಡು ಪತ್ನಿಯ ಶಿರಚ್ಛೇದನ ಮಾಡಲು ತನ್ನ ಮೊದಲ ನಾಲ್ವರು ಮಕ್ಕಳಿಗೆ ಅಜ್ಞಾಪಿಸುತ್ತಾನೆ. ಅದಕ್ಕೆ ಅವರಾರೂ ಒಪ್ಪುವುದಿಲ್ಲ. ಕಡೆಯ ಮಗ ಪರಶುರಾಮ ಮರುಮಾತಾಡದೆ, ಹಿಂದು ಮುಂದು ನೋಡದೆ ತನ್ನ ಕೊಡಲಿಯಿಂದ ತಾಯಿಯ ತಲೆಯನ್ನು ಕತ್ತರಿಸಿಬಿಡುತ್ತಾನೆ. ಮಗನ ಪಿತೃವಾಕ್ಯಪರಿಪಾಲನಾ ಬುದ್ಧಿಯನ್ನು ಕಂಡು ಸಂತೃಪ್ತನಾದ ಜಮದಗ್ನಿ ವರವೊಂದನ್ನು ಕೇಳಿಕೊಳ್ಳಲು ಹೇಳತ್ತಾನೆ. ಆಗ ಪರಶುರಾಮ, ತನ್ನ ತಾಯಿಯನ್ನು ಮತ್ತೆ ಬದುಕಿಸಬೇಕೆಂದೂ ಇನ್ನು ಮುಂದೆ ಇಂಥ ಉಗ್ರಕೋಪ ಪ್ರದರ್ಶನವನ್ನು ಬಿಟ್ಟುಬಿಡಬೇಕೆಂದೂ ಬೇಡಿಕೊಳ್ಳುತ್ತಾನೆ. ರೇಣುಕಾ ಮಾತೆ ಬದುಕುತ್ತಾಳೆ.

5) ಶಂತನು- ಭೀಷ್ಮ

ತನ್ನ ತಂದೆಯು ಮದುವೆ ಆಗುವುದಕ್ಕೆ ಬಯಸಿದ ಮಹಿಳೆಯಾದ ಯೋಜನಾಗಂಧಿ ಹಾಕಿದ ಷರತ್ತಿಗೆ ಬದ್ಧನಾಗಿ, ವಿವಾಹ ಆಗದೆ, ಸಿಂಹಾಸವನ್ನು ಏರದೆ ಉಳಿದುಹೋಗುವಂಥ ಪಾತ್ರ ಭೀಷ್ಮರದು. ಆದರೆ ವರಸೆಯಲ್ಲಿ ತನ್ನ ಸೋದರರಾದ ಚಿತ್ರವೀರ್ಯ- ವಿಚಿತ್ರವೀರ್ಯರ ಮಕ್ಕಳಿಗೆ ರಾಜ್ಯವನ್ನು ಆಳುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ. ಗಂಗೆಯ ಮಗನಾದ ಭೀಷ್ಮರನ್ನು ಗಾಂಗೇಯ ಅಂತಲೂ ಕರೆಯಲಾಗುತ್ತದೆ. ಭೀಷ್ಮಾಚಾರ್ಯರ ಕಾಲಾವಧಿ ಬಹಳ ದೀರ್ಘವಾಗಿ ಬರುತ್ತದೆ. ಇಚ್ಛಾಮರಣಿ (ತಾನು ಸಾವು ಬಯಸಿದಾಗ ಸಾಯುವಂಥವರು) ಆಗಿದ್ದ ಅವರು, ಮರಣ ಶಯ್ಯೆಯಲ್ಲೂ ಪಾಂಡವರಿಗೆ ರಾಜಧರ್ಮವನ್ನು ಬೋಧಿಸುತ್ತಾರೆ. ಆದರೆ ಭೀಷ್ಮರನ್ನು ನೆನಪಿಸಿಕೊಳ್ಳುವುದು ತನ್ನ ತಂದೆಗೆ ಕೊಟ್ಟ ಮಾತಿನಂತೆಯೇ ಬದುಕು ನಡೆಸಿದ ಕಾರಣಕ್ಕಾಗಿ.

ಮಹಾಭಾರತ, ಭಾಗವತ, ರಾಮಾಯಣ ಇತ್ಯಾದಿಗಳಲ್ಲಿ ತಂದೆ- ತಾಯಿಯ ಸೇವೆ ಮಾಡುವುದನ್ನೇ ತಪಸ್ಸಿನಂತೆ ಮಾಡಿಕೊಂಡು ಬಂದಂಥ ಪಾತ್ರಗಳು ಹಲವಾರು ಬರುತ್ತವೆ. ಶ್ರವಣ ಕುಮಾರನ ಕಥೆ, ಧರ್ಮವ್ಯಾಧನ ಕಥೆ ಇವು ಸಹ ಅಂಥವೇ. ದಿನ ನಿತ್ಯದ ವಹಿವಾಟು, ಉಭಯ ಕುಶಲೋಪರಿಯಲ್ಲಿ ಹಾಸು ಹೊಕ್ಕಾಗಿರುವ ಈ ಮಹಾಕಾವ್ಯಗಳಲ್ಲಿನ ಪಾತ್ರಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದಕ್ಕೆ “ವಿಶ್ವ ಅಪ್ಪಂದಿರ ದಿನ” ನೆಪವಾಗಿದೆ.

ಬರಹ: ಶ್ರೀನಿವಾಸ ಎಂ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ