logo
ಕನ್ನಡ ಸುದ್ದಿ  /  ಜೀವನಶೈಲಿ  /  Fathers Day: ಅಪ್ಪನೊಂದಿಗಿರಲಿ ಆತ್ಮೀಯತೆ; ತಂದೆಯೊಂದಿಗಿನ ಬಾಂಧವ್ಯ ವೃದ್ಧಿಗೆ ಹೀಗಿರಲಿ ನಿಮ್ಮಿಬ್ಬರ ಅನುಬಂಧ

Fathers Day: ಅಪ್ಪನೊಂದಿಗಿರಲಿ ಆತ್ಮೀಯತೆ; ತಂದೆಯೊಂದಿಗಿನ ಬಾಂಧವ್ಯ ವೃದ್ಧಿಗೆ ಹೀಗಿರಲಿ ನಿಮ್ಮಿಬ್ಬರ ಅನುಬಂಧ

Reshma HT Kannada

Jun 16, 2023 01:26 PM IST

google News

ಅಪ್ಪನೊಂದಿಗಿರಲಿ ಆತ್ಮೀಯತೆ

    • Bonding with Father: ಅಪ್ಪನ‌ ಮೇಲೆ ಅಗಾಧ ಪ್ರೀತಿ ಇದ್ದರೂ ಅದನ್ನು ವ್ಯಕ್ತ ಪಡಿಸಲು ಹಲವರು ಹಿಂಜರಿಯುತ್ತಾರೆ. ಅಪ್ಪನು ಕೂಡ ಮಕ್ಕಳ ಮೇಲೆ ಪ್ರೀತಿ ತೋರುವುದಕ್ಕಿಂತ ಹೆಚ್ಚು ಜವಾಬ್ದಾರಿ ನಿಭಾಯಿಸುವತ್ತಲೇ ಗಮನ ಹರಿಸುತ್ತಾರೆ. ಆ ಕಾರಣಕ್ಕೆ ಹಲವು ಅಪ್ಪ-ಮಕ್ಕಳ ನಡುವೆ ಬಾಂಧವ್ಯ ಕಡಿಮೆ ಇರುತ್ತದೆ. ಹಾಗಾದರೆ ಅಪ್ಪನೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುವುದು ಹೇಗೆ? 
ಅಪ್ಪನೊಂದಿಗಿರಲಿ ಆತ್ಮೀಯತೆ
ಅಪ್ಪನೊಂದಿಗಿರಲಿ ಆತ್ಮೀಯತೆ (freepik )

ಮಕ್ಕಳು ತಾಯಿಯೊಂದಿಗೆ ಹೊಂದಿರುವಂತಹ ಭಾವನೆಯನ್ನು ತಂದೆಯೊಂದಿಗೆ ಹೊಂದಿರುವುದಿಲ್ಲ. ಅಲ್ಲದೆ ತಂದೆಯೊಂದಿಗೆ ಭಾವನಾತ್ಮಕವಾಗಿ ಬೆಸೆಯಲು ಹಲವರಿಗೆ ಸಾಧ್ಯವಾಗಿರುವುದಿಲ್ಲ. ಸಾಮಾನ್ಯವಾಗಿ ಮಕ್ಕಳು ಭಾವನಾತ್ಮಕ ಅಗತ್ಯಗಳಿಗಾಗಿ ತಮ್ಮ ತಾಯಂದಿರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಹಾಗಂತ ತಂದೆಯನ್ನು ಪ್ರೀತಿಸುವುದಿಲ್ಲ ಎಂದರ್ಥವಲ್ಲ. ನಮ್ಮ ಸಮಾಜ ಹಿಂದಿನಿಂದಲೂ ನಡೆದುಕೊಂಡ ಬಂದ ರೀತಿಯೇ ಹಾಗಿದೆ. ಹೆಣ್ಣುಮಕ್ಕಳು ತಂದೆಗೆ ಕೊಂಚ ಹತ್ತಿರವಾಗಿರುತ್ತಾರೆ. ಆದರೂ ಭಾಂಧವ್ಯದ ವಿಚಾರದಲ್ಲಿ ಇದು ಭಿನ್ನವಾಗಿಯೇ ಇರುತ್ತದೆ.

ಹಾಗಂತ ತಂದೆಯೊಂದಿಗೆ ಬಾಂಧವ್ಯ ಸಾಧ್ಯವೇ ಇಲ್ಲ ಎಂದರ್ಥವಲ್ಲ. ಖಂಡಿತ ಬಾಂಧವ್ಯ ವೃದ್ಧಿಸಿಕೊಳ್ಳುವ ಮಾರ್ಗವಿದೆ. ಅದನ್ನು ಕಂಡುಕೊಳ್ಳುವ ಮನಸ್ಸು ನಮಗಿರಬೇಕು. ಅಪ್ಪನೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳಲು ಈ ಅಪ್ಪಂದಿರ ದಿನ (Fathers Day) ವೇ ಅಡಿಪಾಯ ಎಂದುಕೊಳ್ಳಿ. ಅಪ್ಪನೊಂದಿಗೆ ಪ್ರೀತಿ, ಅನುಬಂಧ ಹೆಚ್ಚಿಸಿಕೊಳ್ಳಿ. ಅಪ್ಪನ ಜೊತೆ ಬಾಂಧವ್ಯ ವೃದ್ಧಿಗೆ ನೆರವಾಗುವ ಕೆಲವು ಸಲಹೆಗಳು ಇಲ್ಲಿವೆ.

ಇಬ್ಬರಿಗೂ ಇಷ್ಟವಾಗುವ ಚಟುವಟಿಕೆಯಲ್ಲಿ ತೊಡಗಿ

ತಂದೆಯೊಂದಿಗೆ ಬಾಂಧವ್ಯ ವೃದ್ಧಿಯಾಗಲು ಅವರೊಂದಿಗೆ ಸಮಯ ಕಳೆಯುವುದು ಬಹಳ ಮುಖ್ಯವಾಗುತ್ತದೆ. ಗಾರ್ಡನಿಂಗ್‌ ಮಾಡುವುದು, ಕ್ರೀಡಾ ಚಟುವಟಿಕೆ, ಸಿನಿಮಾಕ್ಕೆ ಹೋಗುವುದು, ಪುಸ್ತಕ ಓದುವುದು, ಅಡುಗೆ ಮಾಡುವುದು ಹೀಗೆ ಇಬ್ಬರಿಗೂ ಇಷ್ಟವಾಗುವ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಇಬ್ಬರ ಸಮಾನ ಆಸಕ್ತಿಗಳನ್ನು ಹಂಚಿಕೊಳ್ಳುವ ಮೂಲಕ ಅಪ್ಪನಿಗೆ ಹತ್ತಿರವಾಗಬಹುದು.

ಅಪ್ಪನ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳಿ

ಅಪ್ಪನೊಂದಿಗೆ ಬಾಂಧವ್ಯ ವೃದ್ಧಿಯಾಗಲು ಅವರ ಜೀವನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರಬೇಕು, ಅವರ ಜೀವನ, ಅವರು ನಡೆದು ಬಂದಂತಹ ಹಾದಿಯ ಬಗ್ಗೆ ಪ್ರಶ್ನೆಗಳನ್ನು ಕೇಳಿ. ಅವರ ಬಾಲ್ಯ, ಶಾಲಾದಿನಗಳು, ಸ್ನೇಹಿತರು, ಅವರ ಕನಸು, ಅವರ ಗುರಿ ಹೀಗೆ ಅವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ. ಇದು ಖಂಡಿತ ನಿಮ್ಮ ತಂದೆಯನ್ನು ನಿಮಗೆ ಹತ್ತಿರವಾಗುವಂತೆ ಮಾಡುತ್ತದೆ.

ಜೀವನದ ಪ್ರಮುಖ ನಿರ್ಧಾರಗಳನ್ನು ಅವರೊಂದಿಗೆ ಚರ್ಚಿಸಿ

ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ತಂದೆಯ ಅವರೊಂದಿಗೆ ಚರ್ಚಿಸಿ. ನಿಮ್ಮ ಸಮಸ್ಯೆಗಳಿಗೆ ತಂದೆಗಿಂತ ಉತ್ತಮ ಪರಿಹಾರ ನೀಡುವವರು ಬೇರಿಲ್ಲ. ಅಂತಹ ಸಮಯದಲ್ಲಿ ತಂದೆಯ ಸಹಾಯ ಪಡೆಯಲು ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ. ಇದರಿಂದ ತಂದೆಗೆ ನೀವು ಕೊಡುವ ಗೌರವ ಹೆಚ್ಚಿದಂತಾಗುತ್ತದೆ, ಅಲ್ಲದೆ ಅವರಿಗೆ ನಿಮ್ಮ ಮೇಲಿನ ಪ್ರೀತಿಯೂ ಹೆಚ್ಚುತ್ತದೆ.

ಭಿನ್ನಾಭಿಪ್ರಾಯಗಳನ್ನು ಪರಿಹರಿಸಿ

ಸಂಬಂಧವೆಂದ ಮೇಲೆ ಭಿನ್ನಾಭಿಪ್ರಾಯಗಳು ಉಂಟಾಗುವುದು ಸಹಜ. ಹಾಗಂತ ಭಿನ್ನಾಭಿಪ್ರಾಯವನ್ನು ಮುಂದುವರಿಸುವುದು ಸರಿಯಲ್ಲ. ಕಾರಣ ತಿಳಿದು ಅದನ್ನು ಪರಿಹರಿಸುವುದು ಮುಖ್ಯವಾಗುತ್ತದೆ. ಇದರಿಂದ ಬಾಂಧವ್ಯ ವೃದ್ಧಿಯಾಗುತ್ತದೆ.

ತಂದೆಗೆ ಸಹಾಯ ಮಾಡಿ

ನೀವು ತಂದೆಯೊಂದಿಗೆ ವಾಸಿಸುತ್ತಿರಬಹುದು ಅಥವಾ ಬೇರೆ ಬೇರೆ ಪಟ್ಟಣ, ರಾಜ್ಯ, ದೇಶಗಳಲ್ಲಿ ವಾಸಿಸುತ್ತಿರಬಹುದು. ನಿಮ್ಮ ತಂದೆ ಯಾವುದೊ ಸಮಸ್ಯೆಯಲ್ಲಿ ಸಿಲುಕಿದ್ದಾರೆ ಎನ್ನಿಸಿದಾಗ ಅವರ ಸಹಾಯಕ್ಕೆ ನಿಲ್ಲಿ. ಅವರ ಅಗತ್ಯಗಳಿಗೆ ಜೊತೆಯಾಗಿ. ಮೊಬೈಲ್‌ ರಿಚಾರ್ಜ್‌ ಮಾಡುವುದು, ಟಿವಿ ಕೇಬಲ್‌ ರಿಜಾರ್ಜ್‌ ಮಾಡುವುದು, ಆನ್‌ಲೈನ್‌ ಮೂಲಕ ಅವರ ಬೇಡಿಕೆ ವಸ್ತಗಳನ್ನು ತರಿಸಿಕೊಡುವುದು, ಔಷಧಿ ಮಾತ್ರೆಗಳನ್ನು ತಂದುಕೊಡುವುದು ಈ ಮೂಲಕ ಅವರಿಗೆ ಇನ್ನಷ್ಟು ಹತ್ತಿರವಾಗಬಹುದು. ಇದು ನಿಮ್ಮ ಕರ್ತವ್ಯವೂ ಹೌದು.

ತಂದೆಯೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳಿ

ನಿಮ್ಮ ತಂದೆಯೊಂದಿಗೆ ಕುಳಿತು ಅವರೊಂದಿಗೆ ಕಳೆದ ಉತ್ತಮ ಹಾಗೂ ಖುಷಿಯ ಕ್ಷಣಗಳನ್ನು ಮೆಲುಕು ಹಾಕಿ. ತಂದೆಯೊಂದಿಗೆ ಬಾಲ್ಯದಲ್ಲಿ ಮಾಡಿದ ಟ್ರಿಪ್‌, ಅಪ್ಪ ನಿಮಗಾಗಿ ಅಡುಗೆ ಮಾಡಿ ಕೊಟ್ಟಿದ್ದು, ಒಟ್ಟಿಗೆ ಕುಳಿತು ಕಾರ್ಟೂನ್‌ ಚಾನೆಲ್‌ ನೋಡಿದ್ದು ಇಂತಹ ಮನಸ್ಸಿದಾಳದಲ್ಲಿ ಹುದುಗಿರುವ ಸುಂದರ ನೆನಪುಗಳಿಗೆ ಕನ್ನಡಿ ಹಿಡಿಯಿರಿ. ನಿಮ್ಮ ತಂದೆಗೂ ನಿಮ್ಮೊಂದಿಗೆ ಕಳೆದ ಸುಂದರ ಕ್ಷಣಗಳ ಬಗ್ಗೆ ನೆನಪು ಮಾಡಿಕೊಳ್ಳಲು ತಿಳಿಸಿ.

ಈ ಮಾರ್ಗಗಳನ್ನು ಅನುಸರಿಸುವ ಮೂಲಕ ತಂದೆಯೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುವುದು ಮಾತ್ರವಲ್ಲ, ಅವರ ಮೇಲಿನ ಪ್ರೀತಿಯನ್ನೂ ಹೆಚ್ಚಿಸಿಕೊಳ್ಳಲು ಸಾಧ್ಯ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ